ಭಾನುವಾರ, ಮೇ 22, 2022
25 °C
ಕ್ರೀಡಾ ಸಾಧಕರಿಗೆ ಶೈಕ್ಷಣಿಕ ಶುಲ್ಕ ಮರುಪಾವತಿ

ವಿದ್ಯಾರ್ಥಿ ವೇತನ ಕೈಪಿಡಿ: ಶಿಕ್ಷಣ ಶುಲ್ಕ ಮರುಪಾವತಿಗೆ ಇಲ್ಲ ಆದಾಯ ಮಿತಿ

ಬಸವರಾಜ ದಳವಾಯಿ Updated:

ಅಕ್ಷರ ಗಾತ್ರ : | |

Prajavani

ಹಲವು ಸರ್ಕಾರಿ ಸೇವೆಗಳನ್ನು ಪಡೆಯಲು ಇಂತಿಷ್ಟು ಆದಾಯ ಮಿತಿ ಹೊಂದಿರಬೇಕಾದುದು ನಿಯಮ. ಆದರೆ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ(ಶಾಲಾ–ಕಾಲೇಜುಗಳಿಗೆ ಪಾವತಿಸಿದ್ದ ಶುಲ್ಕ) ಮರುಪಾವತಿಗೆ ಇದರ ಅವಶ್ಯಕತೆ ಈಗಿಲ್ಲ. ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ಸಾಮರ್ಥ್ಯ ತೋರುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಇಂತಹದ್ದೊಂದು ಅವಕಾಶವನ್ನು ಮಾಡಿಕೊಟ್ಟಿದೆ. ಆದಾಯ ಮಿತಿಯ ಕಾರಣದಿಂದ ಯೋಜನೆಯ ಫಲಾನುಭವಿ ಆಗುವ ಅವಕಾಶದಿಂದ ವಂಚಿತರಾಗುತ್ತಿದ್ದ ಹಲವು ಪ್ರತಿಭೆಗಳಿಗೆ ಇದರಿಂದ ಅನುಕೂಲವಾಗಬಹುದು.

ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುವಿನ ಒಟ್ಟು ಆದಾಯ ಮಿತಿ ವಾರ್ಷಿಕ ₹ 2.50 ಲಕ್ಷ ಇದ್ದರೆ ಮಾತ್ರ ಶೈಕ್ಷಣಿಕ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತಿತ್ತು. ಅದೂ ಕೂಡ ಗರಿಷ್ಠ ₹ 50 ಸಾವಿರದವರೆಗೆ ಮಾತ್ರ. ಆದರೆ ಈ ಶೈಕ್ಷಣಿಕ ವರ್ಷದಿಂದ ಈ ನಿಯಮದಲ್ಲಿ ಸಂಪೂರ್ಣ ಬದಲಾವಣೆ ಮಾಡಲಾಗಿದೆ. ವಾರ್ಷಿಕವಾಗಿ ಎಷ್ಟೇ ಆದಾಯ ಇದ್ದರೂ ಸಂಪೂರ್ಣ ಶೈಕ್ಷಣಿಕ ಶುಲ್ಕವನ್ನು ಸರ್ಕಾರ ಮರುಪಾವತಿಸಲಿದೆ.

ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರಾದ ಕ್ರೀಡಾಪಟುಗಳು ಶುಲ್ಕ ಮರುಪಾವತಿಯ ಪ್ರಯೋಜನ ಪಡೆಯಬಹುದು. ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮತ್ತು ಪದಕಗಳನ್ನು ಜಯಿಸುವ ವಿದ್ಯಾರ್ಥಿಗಳ ಸಾಧನೆಯನ್ನು ಪರಿಗಣಿಸಲಾಗುತ್ತದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಡೆಸಿದ ಗ್ರಾಮೀಣ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ರಾಜ್ಯ ತಂಡವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದವರೂ ಅರ್ಜಿ ಹಾಕಬಹುದಾಗಿದೆ.

ಅಂಗವಿಕಲ ಕ್ರೀಡಾಪಟುಗಳಿಗೂ ಇದೇ ಮಾನದಂಡಗಳು ಅನ್ವಯವಾಗುತ್ತವೆ. ಆದರೆ ಇವರು ಸರ್ಕಾರಿ ವೈದ್ಯರಿಂದ ನಿಗದಿತ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗುವ ಆಹ್ವಾನಿತ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮತ್ತು ಇಂತಹ ಕೂಟಗಳಲ್ಲಿ ನೇರ ಪ್ರವೇಶ ಪಡೆದ ಕ್ರೀಡಾಪಟುಗಳು ಶುಲ್ಕ ಮರುಪಾವತಿಗೆ ಅರ್ಹರಾಗಿರುವುದಿಲ್ಲ.

ಶುಲ್ಕ ಮರುಪಾವತಿ; 321 ಫಲಾನುಭವಿಗಳು: ಶುಲ್ಕ ಮರುಪಾವತಿಯಂತಹ ಯೋಜನೆಗಳಿಂದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದೆ. 2020–21ರ ಶೈಕ್ಷಣಿಕ ವರ್ಷದಲ್ಲಿ ಕ್ರೀಡೆಯ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ 321 ಮಂದಿ ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್‌ ಗಂಗಾಧರ್ ಟಿ.ಆರ್‌. ಮಾಹಿತಿ ನೀಡಿದರು.

ಬಹಳಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಅರ್ಹತೆ ಇರುವ ಎಲ್ಲರಿಗೂ ಸರ್ಕಾರ ಶುಲ್ಕವನ್ನು ಮರುಪಾವತಿ ಮಾಡುತ್ತಿದೆ. ಕ್ರೀಡೆಯಲ್ಲಿ ಸಾಧನೆ ಮಾಡುವವರಿಗೆ ಪ್ರೋತ್ಸಾಹ ನೀಡಿದರೆ ನಮ್ಮಲ್ಲೂ ಸಾರ್ಥಕ ಭಾವ ಮೂಡುತ್ತದೆ ಎಂದು ರೋಹಿತ್ ಹೇಳುತ್ತಾರೆ.

(ಮುಂದಿನವಾರ: ಕ್ರೀಡಾ ವಿದ್ಯಾರ್ಥಿವೇತನ ಪಡೆದವರ ಪ್ರತಿಕ್ರಿಯೆಗಳು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು