ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸರಿ ಪ್ರವೇಶಕ್ಕಿಲ್ಲ ಏಕರೂಪ ವೇಳಾಪಟ್ಟಿ

Last Updated 29 ನವೆಂಬರ್ 2018, 19:45 IST
ಅಕ್ಷರ ಗಾತ್ರ

ರಾಜಧಾನಿ ಬೆಂಗಳೂರಿನ ಶಾಲೆಗಳಲ್ಲಿ ಪ್ರವೇಶಾತಿ ಪ್ರಕ್ರಿಯೆಗೆ ಏಕರೂಪ ವೇಳಾಪಟ್ಟಿಯೇ ಇಲ್ಲ. ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳು ಪ್ರತ್ಯೇಕ ಪ್ರವೇಶಾತಿ ವೇಳಾಪಟ್ಟಿಯನ್ನು ಪಾಲಿಸುತ್ತಿರುವುದು ನಗರದ ಪೋಷಕ ವರ್ಗವನ್ನು ಗೊಂದಲಕ್ಕೆ ಸಿಲುಕಿಸಿವೆ.

ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವುದು 2019ರ ಜೂನ್‌ನಲ್ಲಿ. ಆದರೆ ನಗರದ ಕೆಲ ಪ್ರಸಿದ್ಧ ಖಾಸಗಿ ಶಾಲೆಗಳಲ್ಲಿ
‘ಪ್ರಿ–ಕೆಜಿ’ಗೆ (ಪೂರ್ವ ಪ್ರಾಥಮಿಕ ಶಾಲೆ) ದಾಖಲಾತಿಗೆ ನೋಂದಣಿ ಪ್ರಕ್ರಿಯೆ ಈಗಾಗಲೇ ಮುಗಿದೇ ಹೋಗಿದೆ! ಇನ್ನೂ ಕೆಲ ಪ್ರಸಿದ್ಧ ಶಾಲೆಗಳಲ್ಲಿ ಅದು ಚಾಲ್ತಿಯಲ್ಲಿದ್ದು ಕೆಲವೇ ದಿನಗಳಲ್ಲಿ ಮುಗಿಯಲಿದೆ.

ಬಹುತೇಕ ಖಾಸಗಿ ಶಾಲೆಗಳು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿ, ನೋಂದಣಿಯ ಪ್ರಕ್ರಿಯೆ ನಡೆಸಿವೆ. ಕೆಲ ಶಾಲೆಗಳು ಆನ್‌ಲೈನ್‌ ಜತೆಗೆ ಆಫ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಲೂ ಅವಕಾಶ ಕಲ್ಪಿಸಿವೆ.

ಖಾಸಗಿ ಶಾಲೆಗಳೇ ಹೆಚ್ಚು: ಬೆಂಗಳೂರಿನಲ್ಲಿ ಒಟ್ಟು 7,195 ಶಾಲೆಗಳಿದ್ದು, ಅವುಗಳಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳ ಸಂಖ್ಯೆಯೇ ಹೆಚ್ಚು. ಒಟ್ಟಾರೆ ಈ ಶಾಲೆಗಳು 5,056 ರಷ್ಟಿದ್ದರೆ, ಅನುದಾನಿತ ಶಾಲೆಗಳ ಸಂಖ್ಯೆ 631 ಹಾಗೂ ಸರ್ಕಾರಿ ಶಾಲೆಗಳ ಸಂಖ್ಯೆ 1,508ರಷ್ಟಿದೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ವಾಡಿಕೆಯಂತೆ ಮೇ ಅಥವಾ ಜೂನ್‌ ತಿಂಗಳಲ್ಲಿ ಆರಂಭವಾಗುತ್ತದೆ. ಕೆಲ ಖಾಸಗಿ ಶಾಲೆಗಳೂ ಇದನ್ನೇ ಅನುಸರಿಸುತ್ತವೆ. ಆದರೆ ಹೆಚ್ಚಿನ ಖಾಸಗಿ ಶಾಲೆಗಳು ತಮಗೆ ಬೇಕಾದಂತೆ ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ನಡೆಸುತ್ತಿವೆ. ಇದು ನಗರದ ಪೋಷಕರ ವರ್ಗದ ಗೊಂದಲಕ್ಕೆ ಕಾರಣ.

ರಾಜ್ಯದಾದ್ಯಂತ ಪಿಯುಸಿ, ಪದವಿ, ಎಂಜಿನಿರಿಂಗ್‌, ವೈದ್ಯಕೀಯ, ಡಿಪ್ಲೊಮಾ, ನರ್ಸಿಂಗ್‌, ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಸಂಬಂಧಿಸಿದ ಪ್ರಾಧಿಕಾರ ಅಥವಾ ಇಲಾಖೆ ಮತ್ತು ವಿಶ್ವವಿದ್ಯಾಲಯಗಳು ಏಕರೂಪ ಪ್ರವೇಶಾತಿ ವೇಳಾಪಟ್ಟಿ ಪ್ರಕಟಿಸುತ್ತವೆ. ಅದನ್ನು ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಲೇಬೇಕು. ಆದರೆ ಶಾಲಾ ಹಂತದಲ್ಲಿ ಈ ರೀತಿಯ ವ್ಯವಸ್ಥೆಯೇ ಏಕಿಲ್ಲ ಎಂಬುದು ಹಲವು ಪೋಷಕರ ಪ್ರಶ್ನೆ.

ಕೆಲ ನಿದರ್ಶನಗಳು ಇಲ್ಲಿವೆ: ನಗರದ ಪ್ರಸಿದ್ಧ ಶಾಲೆಗಳಲ್ಲಿ ಒಂದಾದ ‘ಶ್ರೀ ಕುಮಾರನ್‌ ಚಿಲ್ಡ್ರನ್ಸ್‌ ಹೋಮ್‌’ನಲ್ಲಿ ‘ಪ್ರಿಕೆಜಿ’ಗೆ ಪ್ರವೇಶಾತಿ ಪ್ರಕ್ರಿಯೆ ಆಗಸ್ಟ್‌ 24ರಿಂದಲೇ ಆರಂಭವಾಗಿತ್ತು. ಆನ್‌ಲೈನ್‌ ಮೂಲಕ ಅರ್ಜಿ ಭರ್ತಿ ಮಾಡಿ ‘ಸೇವ್‌’ ಮಾಡಲು ಆಗಸ್ಟ್‌ 31 ಕೊನೆಯ ದಿನವಾಗಿತ್ತು. ಅದನ್ನು ‘ಸಬ್‌ಮಿಟ್‌’ ಮಾಡಲು ಸೆಪ್ಟೆಂಬರ್‌ 2 ಅಂತಿಮ ದಿನವಾಗಿತ್ತು. ರಾಜರಾಜೇಶ್ವರಿ ನಗರದ ನ್ಯಾಷನಲ್‌ ಹಿಲ್‌ವೀವ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ‘ಪ್ಲೇ ಗ್ರೂಪ್‌–1’ಗೆ ಅಕ್ಟೋಬರ್‌ 22 ನವೆಂಬರ್‌ 5ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನಿಗದಿ ಮಾಡಲಾಗಿತ್ತು. ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಈ ತಿಂಗಳಾಂತ್ಯದವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ನಗರದ ವಿವಿಧೆಡೆ ಇರುವ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ಗಳಲ್ಲಿ (ಎನ್‌ಪಿಎಸ್‌) ಅರ್ಜಿ ಸಲ್ಲಿಕೆ ಪ್ರಕ್ರಿಯೆ ನ. 12ರಿಂದ ಆರಂಭವಾಗಿದೆ.

ಉಲ್ಲಾಳದಲ್ಲಿರುವ ವಿದ್ಯಾ ನಿಕೇತನ ಪಬ್ಲಿಕ್‌ ಸ್ಕೂಲ್‌ನಲ್ಲಿ ‘ಪ್ರೀ ನರ್ಸರಿ’ಗೆ ನವೆಂಬರ್‌ 25ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದು, ಕೊನೆಯ ದಿನವಾದ ನ. 28 ಕೂಡ ಮುಗಿದಿದೆ. ಬಂಟರ ಸಂಘದ ಆರ್‌ಎನ್‌ಎಸ್‌ ವಿದ್ಯಾನಿಕೇತನ ಶಾಲೆಯು ‘ಮಾಂಟೆಸರಿ’ಗೆ ನ. 15ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನಿಡಿದ್ದು, ಡಿಸೆಂಬರ್‌ 15 ಕೊನೆಯ ದಿನ. ಬನಶಂಕರಿಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್‌ 19ರಂದು ಅರ್ಧ ದಿನ ಮಾತ್ರ ಅವಕಾಶ ನೀಡಲಾಗಿತ್ತು.

ಇದೇ ರೀತಿ ನಗರದ ಹಲವಾರು ಶಾಲೆಗಳು ತಮ್ಮದೇ ಆದ ಪ್ರವೇಶಾತಿ ವೇಳಾಪಟ್ಟಿ ಹೊಂದಿವೆ. ಅವು ಯಾವಾಗ ಅರ್ಜಿ ಆಹ್ವಾನಿಸುತ್ತವೆ, ಯಾವಾಗ ಪೂರ್ಣಗೊಳಿಸುತ್ತವೆ ಎಂಬುದರ ಮಾಹಿತಿ ಪೋಷಕರಿಗೆ ತಿಳಿಯುವುದು ಕಷ್ಟ. ಸಂಬಂಧಿಸಿದ ಶಾಲೆಯ ವೆಬ್‌ಸೈಟ್‌ ಗಮನಿಸಿದರೆ ಮಾತ್ರ ಅವುಗಳ ಮಾಹಿತಿ ದೊರೆಯುತ್ತದೆ.

ಬಹುತೇಕ ಖಾಸಗಿ ಶಾಲೆಗಳು ತಮ್ಮಲ್ಲಿ ಈಗಿರುವ ವಿದ್ಯಾರ್ಥಿಗಳ ಸಹೋದರ ಅಥವಾ ಸಹೋದರಿಯರಿಗೆ ಪ್ರವೇಶ ನೀಡುವಲ್ಲಿ ಆದ್ಯತೆ ನೀಡುತ್ತವೆ. ನಂತರದ ಆದ್ಯತೆ ಅಲ್ಲಿನ ಸಿಬ್ಬಂದಿ ಮಕ್ಕಳಿಗಿರುತ್ತದೆ. ಇವುಗಳಾದ ಬಳಿಕ ಇತರರ ಅರ್ಜಿಗಳ ಪರಿಶೀಲನೆ ನಡೆಸುತ್ತವೆ.

ಏಕರೂಪ ವೇಳಾಪಟ್ಟಿ, ನಿಯಮ ಬೇಕು: ‘ಮಕ್ಕಳ ಪ್ರವೇಶಕ್ಕೆ ಎಲ್ಲ ಶಾಲೆಗಳಿಗೂ ಅನ್ವಯ ಆಗುವಂತೆ ಏಕರೂಪ ವೇಳಾಪಟ್ಟಿ, ಏಕರೂಪ ನಿಯಮ ಇರಬೇಕು. ಅದರ ಜತೆಗೆ ಎಲ್ಲ ಶಾಲೆಗಳ ಪ್ರವೇಶ ಪ್ರಕ್ರಿಯೆ ಏಕಗವಾಕ್ಷಿ ಯೋಜನೆಯಡಿ ನಡೆಯಬೇಕು. ಇದನ್ನು ಸರ್ಕಾರ ಅಥವಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ನಡೆಸುವಂತಾಗಬೇಕು’ ಎಂದು ಒತ್ತಾಯಿಸುತ್ತಾರೆ ಪೋಷಕ ಪ್ರವೀಣ್ ಮೈಸೂರು.

‘ನಗರದಲ್ಲಿ ಸಹಸ್ರಾರು ಪ್ರೀಸ್ಕೂಲ್‌ಗಳಿವೆ. ಅಲ್ಲಿ ಯುಕೆಜಿ ವರೆಗೆ ಮಾತ್ರ ಮಕ್ಕಳನ್ನು ಓದಿಸಲು ಸಾಧ್ಯ. ಅಲ್ಲಿನ ಮಕ್ಕಳಿಗೆ ಒಂದನೇ ತರಗತಿಗೆ ಪ್ರವೇಶ ಕೊಡಿಸಲು ಪೋಷಕರು ಹರಸಾಹಸ ಪಡುವುದನ್ನು ನೋಡಿದ್ದೇನೆ. ನನ್ನ ಮಗು ರಾಜರಾಜೇಶ್ವರಿ ನಗರದ ಪ್ರಿ–ಸ್ಕೂಲ್‌ನಲ್ಲಿ ಎಲ್‌ಕೆಜಿ ಓದುತ್ತಿದೆ. ಒಂದನೇ ತರಗತಿಗೆ (2020) ನಮಗೆ ಬೇಕಾದ ಶಾಲೆಗಳಲ್ಲಿ ಪ್ರವೇಶ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಮುಂದಿನ ವರ್ಷವೇ (2019) ಬೇರೆ ಶಾಲೆಯೊಂದರಲ್ಲಿ ಯುಕೆಜಿಗೆ ದಾಖಲಿಸಲು ಈಗಿನಿಂದಲೇ ಸರ್ವ ಪ್ರಯತ್ನ ನಡೆಸುತ್ತಿದ್ದೇನೆ. ಆದರೆ ಒಂದೊಂದು ಶಾಲೆಯ ಪ್ರವೇಶಾತಿ ವೇಳಾಪಟ್ಟಿಗಳು ಒಂದೊಂದು ರೀತಿ ಇವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಅಸಹಾಯಕರು: ‘ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸುವ ಪ್ರವೇಶಾತಿ ವೇಳಾಪಟ್ಟಿಯನ್ನು ಕೆಲ ಪ್ರತಿಷ್ಠಿತ ಖಾಸಗಿ ಶಾಲೆಗಳು ಪಾಲಿಸುವುದಿಲ್ಲ. ಅವುಗಳ ಆಡಳಿತ ಮಂಡಳಿಗಳು ತಮ್ಮದೇ ಆದ ಪ್ರತ್ಯೇಕ ಪ್ರವೇಶಾತಿ ವೇಳಾಪಟ್ಟಿ ಅನುಸರಿಸುತ್ತವೆ. ಇವುಗಳಲ್ಲಿ ಬಹುತೇಕ ಶಾಲೆಗಳು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಾನ್ಯತೆ ಪಡೆದ ಶಾಲೆಗಳು. ಅವುಗಳ ಮೇಲೆ ನಾವು ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಹಾಗಾಗಿ ನಾವೆಲ್ಲ ಅಸಹಾಯಕರು’ ಎಂದು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT