ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಸ್ಕೂಲ್: ಎಚ್ಚರಿಕೆ ಇರಲಿ!

Last Updated 23 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಮಗುವಿನೊಂದಿಗೆ ಆಟವಾಡುತ್ತ ಬಹುತೇಕ ಮನೆಯಂಗಳದಲ್ಲಿಯೇ ಸಮಯ ಕಳೆಯುತ್ತಿದ್ದ ಪ್ರಸೂನಾಂಬ ಸುಮಾರು ಎರಡು ಮೂರು ತಿಂಗಳಿಂದ ಮನೆಯಿಂದ ಹೊರಗೆ ಬಾರದೆ, ನೆರೆಹೊರೆಯವರೊಂದಿಗೂ ಮಾತನಾಡದೆ ಇದ್ದರು. ಅವರನ್ನು ಆಕಸ್ಮಿಕವಾಗಿ ಭೇಟಿಯಾದಾಗ ಕೇಳಿಯೇಬಿಟ್ಟೆ: ‘ಯಾಕೆ ಹೊರಗೆಲ್ಲೂ ಕಾಣುತ್ತಿಲ್ಲ? ಮಗುವನ್ನು ಸಹ ಆಟವಾಡಲು ಹೊರಗೆ ಬಿಡುತ್ತಿಲ್ಲ? ಏನಾದರೂ ಸಮಸ್ಯೆಯೆ?’ ಅವಳಿಂದ ಬಂದ ಉತ್ತರ ಕೇಳಿ ದಂಗಾದೆ. ’ಇಲ್ಲ, ನಮ್ಮ ಪಾಪುವಿಗೆ ಮೂರು ವರ್ಷಗಳು ತುಂಬಿವೆ. ಅಕ್ಕಪಕ್ಕದ ಜನರೆಲ್ಲ ನನ್ನನ್ನು ನೋಡಿದಾಗಲೆಲ್ಲಾ ಯಾಕಿನ್ನು ನಿಮ್ಮ ಮಗುವನ್ನು ಸ್ಕೂಲಿಗೆ ಸೇರಿಸಿಲ್ಲ, ಮೂರು ವರ್ಷವಾದರೂ ಮನೆಯಲ್ಲಿಯೇ ಇಟ್ಟುಕೊಂಡಿರುವಿರಿ? ಎಂದು ಪದೇ ಪದೇ ಕೇಳುತ್ತಾರೆ. ನಮಗೆ ಆರ್ಥಿಕ ಸಂಕಷ್ಟವಿರುವುದರಿಂದ ಈ ವರ್ಷ ಶಾಲೆಗೆ ಸೇರಿಸಲಾಗಲಿಲ್ಲ, ಅವರ ಪ್ರಶ್ನೆಗಳನ್ನು ಎದುರಿಸಲಾಗದೆ ನಾನು ಹೊರಗೆ ಬರುತ್ತಿಲ್ಲ’ ಎಂದರು.

ಮಕ್ಕಳನ್ನು ಪ್ರಿಸ್ಕೂಲ್‌ಗೆ ಸೇರಿಸುವುದೆಂದರೆ ಪೋಷಕರು ಹಾಗೂ ಮಗುವಿನ ಕುಟುಂಬವರ್ಗದವರಿಗೆ ಎಲ್ಲಿಲ್ಲದ ಸಂಭ್ರಮ. ಎಂ.ಬಿ.ಬಿ.ಎಸ್., ಎಂಜನಿಯರಿಂಗ್ ಪದವಿಗಳಿಗೆ ಎಷ್ಟು ಶುಲ್ಕ ಕಟ್ಟಿದ್ದಾರೆ ಎಂಬುದಕ್ಕಿಂತಲೂ ತಮ್ಮ ಮಗುವಿನ ಪ್ರೀಸ್ಕೂಲ್ ಅಡ್ಮಿಷನ್ ಶುಲ್ಕ ದುಬಾರಿ ಮತ್ತು ಅದನ್ನು ಕಟ್ಟುತ್ತಿದ್ದೇವೆ ಎಂಬುದು ಪೋಷಕರ ಹುಸಿ ಪ್ರತಿಷ್ಠೆಯಾಗಿದೆ. ಸಾಮಾನ್ಯವಾಗಿ ಪ್ರಿಸ್ಕೂಲ್‌ಗೆ ದಾಖಲಾದ ಮಕ್ಕಳ ಪಾಲಕರು ನಮ್ಮ ಮಗು ಶಾಲೆಗೆ ಹೋದಾಗಿನಿಂದ ತುಂಬಾ ಚೆನ್ನಾಗಿ ಮಾತನಾಡುತ್ತದೆ; ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುತ್ತಾದೆ ಎಂದು ಹೇಳುತ್ತಿರುತ್ತಾರೆ. ಇದಕ್ಕೆ ಕಾರಣ ಮಗು ಹೋಗುವ ಶಾಲೆ, ಕಟ್ಟಿದ ಶುಲ್ಕ, ಶಿಕ್ಷಕರು, ಪಠ್ಯಕ್ರಮ ಎಂಬುದು ಅನೇಕರ ಆಂಬೋಣ. ಆದರೆ ಶೇಕಡಾ 80ರಷ್ಟು ಸಮವಯಸ್ಕರ (Peer group) ಒಡನಾಟ ಎಂಬುದು ತಿಳಿದಿರಲಿ. ಹಳ್ಳಿಗಳಲ್ಲಿ ಹಾಗೂ ಕೂಡುಕುಟುಂಬದ ವ್ಯವಸ್ಥೆಯಿರುವೆಡೆಯಲ್ಲಿ ಸಮವಯಸ್ಕರ ಒಡನಾಟ ಮತ್ತು ಮಗುವಿನೊಂದಿಗೆ ಕಾಲ ಕಳೆಯಲು ಹಿರಿಯರಿಗೆ ಸಮಯವಿದ್ದಲ್ಲಿ ಮಗುವನ್ನು ಪ್ರಿಸ್ಕೂಲ್‌ಗೆ ಸೇರಿಸುವ ಅವಶ್ಯಕತೆಯಿರುವುದಿಲ್ಲ. ದುರಂತವೆಂದರೆ ಇದರ ಅರಿವಿಲ್ಲದ ಹಳ್ಳಿಗಾಡಿನ ಪೋಷಕರು ಸಹ 10ರಿಂದ 20 ಕಿ.ಮೀ. ದೂರವಿರುವ ಸಣ್ಣ ಪಟ್ಟಣಗಳಲ್ಲಿರುವ ಪ್ರಿಸ್ಕೂಲ್‌ಗೆ ಮಕ್ಕಳನ್ನು ಸೇರಿಸುತ್ತಿರುವುದು.

ಇತ್ತೀಚೆಗೆ ನಾಯಿಕೊಡೆಗಳಂತೆ ಎಲ್ಲೆಡೆ ಹುಟ್ಟಿಕೊಂಡಿರುವ ಪ್ರಿಸ್ಕೂಲ್‌ಗಳು ‘ಮಕ್ಕಳ ಮನೋವಿಜ್ಞಾನ ಆಧಾರಿತ ಚಟುವಟಿಕೆಗಳ ಮೂಲಕ ಕಲಿಸುತ್ತೇವೆ’ ಎಂದು ಹೇಳಿಕೊಂಡು ಮಕ್ಕಳನ್ನು ದಾಖಲು ಮಾಡಿಕೊಳ್ಳುತ್ತಿವೆ. ಆದರೆ ಅದನ್ನು ಕಾರ್ಯರೂಪಕ್ಕೆ ತರದೇ ಅನೇಕ ದೋಷಪೂರ್ಣ ವಿಧಾನಗಳ ಮೂಲಕ ಮಕ್ಕಳಿಗೆ ಒತ್ತಡದಿಂದ ಕಲಿಸುವ ಮೂಲಕ ಮಕ್ಕಳ ಬೌದ್ಧಿಕ, ಸಂವೇದನಾತ್ಮಕ (ಭಾವನಾತ್ಮಕ), ಸಾಮಾಜಿಕ ವಿಕಾಸದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತಿವೆ.

ಈಗಾಗಲೇ ಪ್ರಿಸ್ಕೂಲ್‌ಗಳು ಕಾರ್ಯಾರಂಭಿಸಿ ಮೂರು ನಾಲ್ಕು ತಿಂಗಳುಗಳಾಗಿರುವುದರಿಂದ ನಿಮ್ಮ ಮಕ್ಕಳ ಪ್ರಿಸ್ಕೂಲ್‌ಗಳ ಬಗ್ಗೆ ನಿಮಗೆ ತಿಳಿದಿರಬೇಕಾದ ವಿಷಯಗಳೆಂದರೆ:

* ಶಿಕ್ಷಕರು, ಆಯಾಗಳು, ಸೆಕ್ಯೂರಿಟಿಗಾರ್ಡ್, ಡ್ರೈವರ್ ಹಾಗೂ ಇನ್ನುಳಿದ ಸಿಬ್ಬಂದಿ ವರ್ಗದವರ ವರ್ತನೆ ಮತ್ತು ಭಾವನಾತ್ಮಕ ನಡವಳಿಕೆಗಳ ಬಗ್ಗೆ ಶಾಲೆಯ ಆಡಳಿತ ಮಂಡಳಿ ಮನೋವೈಜ್ಞಾನಿಕ ಮಾಪನ ಮಾಡಿರುವುದೇ, ದಾಖಲೆಯಿಟ್ಟಿರುವುದೇ ಪರಿಶೀಲಿಸಿ.

*ಶಿಕ್ಷಕರು ಮತ್ತು ಮಕ್ಕಳ ಅನುಪಾತದ ಬಗ್ಗೆ ಹಾಗೂ ಶಿಕ್ಷಕರು ಪಡೆದಿರುವ ತರಬೇತಿಯ ಬಗ್ಗೆ ಅರಿವಿರಲಿ.

*ದಾಖಲಾತಿ ಸಮಯದಲ್ಲಿ ವರ್ಣಿಸಿದ ಪಠ್ಯಕ್ರಮ, ಚಟುವಟಿಕೆ ಆಧಾರಿತ ಕಲಿಕೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆಯೋ ಇಲ್ಲವೋ ಗಮನಿಸಿ.

*ದಾಖಲಾತಿ ಸಮಯದಲ್ಲಿ ನಿಮಗೆ ಪ್ರದರ್ಶಿಸಿದ, ಓರಣವಾಗಿ ಜೋಡಿಸಿಟ್ಟ ಆಟಿಕೆಗಳು, ಚಟುವಟಿಕಾ ಸಾಮಾಗ್ರಿಗಳನ್ನು ಮಕ್ಕಳಿಗೆ ನೀಡುತ್ತಿರುವರೊ ಇಲ್ಲವೋ ಎಂಬುದನ್ನು ಮಕ್ಕಳಿಂದ ವಿಚಾರಿಸಿಕೊಳ್ಳಿ.

*ರೂಪ, ಗುಣ, ಬುದ್ಧಿವಂತಿಕೆ ಇತ್ಯಾದಿ ವಿಷಯಗಳಲ್ಲಿ ಮಗುವನ್ನು ಸಿಬ್ಬಂದಿ ವರ್ಗದವರು ಪ್ರತ್ಯೇಕಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಿ.

*ಮುದ್ದಾಗಿರುವ ಮಗುವನ್ನು ಎಲ್ಲರೂ ಮುದ್ದಿಸಿ ನೋಡಲು ‘ಚೆನ್ನಾಗಿಲ್ಲದ’, ‘ಪ್ರಶ್ನೆಗಳಿಗೆ ಉತ್ತರಿಸದ’ ಮಗುವನ್ನು ಅವಗಣನೆಗೆ ಗುರಿ ಮಾಡಿರುತ್ತಾರೆ, ಇತ್ತ ಕಡೆ ಗಮನವಿರಲಿ.

*ನಿಮ್ಮ ಮಗುವಿಗೆ ಪ್ರತಿದಿನ ನೀವು ಕಳಿಸುವ ಆಹಾರವನ್ನು ಅಲ್ಲಿ ನೀಡುತ್ತಿದ್ದಾರೆಯೇ ಎಂಬುದನ್ನು ಗಮನಿಸಿ.

*ಕಲಿಕೆಗೆ ಸಂಬಂಧಿಸಿದಂತೆ ಶಿಕ್ಷಕರಿಂದ ಮಕ್ಕಳಿಗೆ ಯಾವುದೇ ಒತ್ತಡಗಳಾಗದಂತೆ ನೋಡಿಕೊಳ್ಳಿ.

*ಸಾಮಾಜಿಕ ಕೌಶಲಗಳನ್ನು ಕಲಿಸುವಾಗ ಗುಂಪುಗಳ ರಚನಾತ್ಮಕ ಆಯೋಜನೆ ಮಾಡುತ್ತಿರುವರೋ ತಿಳಿಯಿರಿ.

*ಶಿಸ್ತುಪಾಲನೆಗಾಗಿ ಶಾಲೆಯಲ್ಲಿ ಬಳಸುವ ಕ್ರಮಗಳ ಬಗ್ಗೆ ನಿಗಾ ಇರಲಿ.

*ಬೇಗ ಕಲಿಸಬೇಕೆನ್ನು ದಾವಂತಕ್ಕೆ ಬಿದ್ದು ದೋಷಪೂರ್ಣ ವಿಧಾನಗಳನ್ನು ಅನುಸರಿಸುತ್ತಿರುವರೆ ಗಮನಿಸಿ.

*ಯಾವುದೇ ಸಿಬ್ಬಂದಿ, ಡ್ರೈವರ್, ಸೆಕ್ಯೂರಿಟಿ ಮಕ್ಕಳ ಮರ್ಮಾಂಗ ಮುಟ್ಟುತ್ತಾರೆಯೆ? ಕೇಳಿ ತಿಳಿದುಕೊಳ್ಳಿ.

*ಆಟಿಕೆಗಳನ್ನು ಬಳಸುವಾಗ ನಿಯಮಗಳ ಪಾಲನೆಯಾಗುತ್ತಿದೆಯೇ? ಗಮನಿಸಿ. ಉದಾ: ಎತಾತ (ಸೀಸಾ), ಸ್ಪೈಡರ್‍ನಂತಹ ಕ್ರೀಡೋಪಕರಣಗಳನ್ನು ಮಕ್ಕಳು ಬಳಸುವಾಗ ಇಬ್ಬರು ಆಯಾಗಳು ಇರಲೇ ಬೇಕೆಂಬ ನಿಯಮವಿದೆ. (ಮೂರುವರ್ಷದ ಒಳಗಿನ ಮಕ್ಕಳು ಆಯತಪ್ಪಿ ಕೆಳಗೆ ಬಿದ್ದರೆ ಮಿದುಳಿಗೆ ಸರಿಪಡಿಸಲಾಗದ ಆಘಾತವಾಗುವ ಸಾಧ್ಯತೆಯಿರುತ್ತದೆ - ಈ ವಿಷಯದ ಅರಿವಿರುವ ಆಯಾಗಳಿರಬೇಕು).

*ಮೂರರಿಂದ ಆರುವರ್ಷದವರೆಗಿನ ಮಕ್ಕಳ ಬಗ್ಗೆ ಪಾಲಕರು ತಿಳಿದಿರಬೇಕಾದ ವಿಷಯಗಳು:

*ಮಕ್ಕಳ ಶೈಕ್ಷಣಿಕ ಅವಕಾಶಗಳು ಪಾಲನೆ, ಆರೋಗ್ಯ, ಪೌಷ್ಟಿಕ ಆಹಾರ ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.

*ಮಗುವಿನ ಯೋಚನೆಗಳು ಸರಳ ಮತ್ತು ತರ್ಕರಹಿತವಾಗಿರುತ್ತವೆ.

*ಈ ವಯಸ್ಸಿನ ಮಕ್ಕಳು ಮಾತೃಭಾಷೆಯ ಮೇಲೆ ಹಿಡಿತ ಸಾಧಿಸಿರುತ್ತವೆ ಹಾಗೂ ಇತರೆ ಭಾಷೆಗಳನ್ನು ಬೇಗ ಕಲಿಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

*ಶಿಕ್ಷಕರೊಂದಿಗೆ ಭಾವನಾತ್ಮಕ ಅವಲಂಬನೆಯನ್ನು ಹೊಂದಿರುತ್ತಾರೆ.

*ಪದಸಂಪತ್ತು ಹಾಗೂ ವಾಕ್ಯರಚನೆಯಲ್ಲಿ ಅಭೂತಪೂರ್ವ ಹೆಚ್ಚಳ ಕಂಡುಬರುತ್ತದೆ.

*ವಯಸ್ಸರಂತೆ ತಾವು ಕೆಲಸ ಕಾರ್ಯಗಳನ್ನು ಮಾಡಬೇಕೆಂಬ ಕಾರ್ಯೋತ್ಸಾಹ ಪ್ರವೃತ್ತಿ ಹೆಚ್ಚಿರುತ್ತದೆ.

*ಸರಿತಪ್ಪುಗಳ ಪ್ರಜ್ಞೆ ನಿರ್ದಿಷ್ಟ ಸನ್ನಿವೇಶಗಳಿಗೆ ಮಾತ್ರ ಸಂಬಂಧಿಸಿರುತ್ತದೆ.

*ಮಕ್ಕಳು ತಮ್ಮ ಭಾವೋದ್ವೇಗಗಳನ್ನು ನಿಯಂತ್ರಿಸಲಾರರು.

*ತನ್ನ ಸುತ್ತಲಿನ ಪರಿಸರದ ಬಗ್ಗೆ ಕೌತುಕವನ್ನು ಹೊಂದಿದ್ದು ಅನ್ವೇಷಣೆಯನ್ನು ಪ್ರಾರಂಭಿಸುತ್ತಾರೆ.

*ಅವಲೋಕನ ಮತ್ತು ಅನುಕರಣೆಯಿಂದ ಸಾಮಾಜಿಕ ವರ್ತನೆಯನ್ನು ಕಲಿಯುತ್ತವೆ.

*ಲೌಕಿಕ ಜ್ಞಾನವಿಲ್ಲದ ಮಕ್ಕಳು ದೃಶ್ಯಮಾಧ್ಯಮಗಳ ಮೂಲಕ ಕಂಡದ್ದೆಲ್ಲವನ್ನು ಸತ್ಯವೆಂದು ನಂಬುತ್ತಾರೆ.

*ಪ್ರೀಸ್ಕೂಲ್‌ಗೆ ದಾಖಲಾದ ನಂತರ ನಿಮ್ಮ ಮಗುವು ಆಕ್ರಮಣಶೀಲ ವರ್ತನೆ, ಅವಿಧೇಯತೆ, ಕೆಟ್ಟ ಪದಗಳ ಬಳಕೆ, ವಯಸ್ಕರನ್ನು ಕಂಡಾಗ ಹೆದರುವುದು, ಸಮವಯಸ್ಕರೊಂದಿಗೆ ಬೆರೆಯಲು ಹಿಂಜರಿಯುವುದು, ಚಟುವಟಿಕಾಶೀಲ ಮಗು ಖಿನ್ನವಾಗಿರುವುದು ಕಂಡುಬಂದಲ್ಲಿ ಗಂಭೀರವಾಗಿ ಪರಿಗಣಿಸಿ, ಅದಕ್ಕೆ ಶಾಲೆಯಿಂದ ಕಾರಣ ತಿಳಿಯಿರಿ. ಸಿಬ್ಬಂದಿ ತಮ್ಮ ಕೆಲಸ ಕಡಿಮೆ ಮಾಡಿಕೊಳ್ಳಲು ದೋಷಪೂರ್ಣ ಪದ್ಧತಿಯನ್ನು ಅನುಸರಿಸುತ್ತಿರುತ್ತಾರೆ. ಈ ಕುರಿತು ನಿಗಾ ಇರಲಿ. ಅವಶ್ಯಕತೆ ಬಂದರೆ ಶಾಲೆಯ ಸಿಸಿಟಿವಿ ಫೂಟೇಜ್‍ ಅನ್ನು ಪರಿಶೀಲಿಸಲು ಹಿಂಜರಿಯಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT