ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್‌ಆರ್‌ಬಿ’ ನೇಮಕಾತಿ ಹೀಗಿರಲಿವೆ ಪರೀಕ್ಷೆಗಳು

Published 15 ಜೂನ್ 2023, 0:34 IST
Last Updated 15 ಜೂನ್ 2023, 0:34 IST
ಅಕ್ಷರ ಗಾತ್ರ
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮೂರು ಹಂತಗ ಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯ ಸ್ವರೂಪ ಹೇಗಿರುತ್ತದೆ ಎಂಬ ವಿವರಣೆ ಇಲ್ಲಿದೆ.

ದೇಶದ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 8601 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಇದರಲ್ಲಿ ರಾಜ್ಯದ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 806 ಹುದ್ದೆಗಳೂ ಸೇರಿವೆ.

ಆಫೀಸ್‌ ಅಸಿಸ್ಟೆಂಟ್‌(ಮಲ್ಟಿಪರ್ಪಸ್‌) ಮತ್ತು ವಿವಿಧ ಹಂತದ ಆಫೀಸರ್‌ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ.

ಮೂರು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. ಆಫೀಸರ್‌ ಸ್ಕೇಲ್‌ –I (ಪಿಒ) ಹುದ್ದೆಗೆ, ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಪ್ರಕ್ರಿಯೆ ನಡೆಯುತ್ತದೆ. ಆಫೀಸರ್ ಸ್ಕೇಲ್-II ಮತ್ತು III ರ ನೇಮಕಾತಿಗಾಗಿ ಮುಖ್ಯಪರೀಕ್ಷೆ(ಒಂದೇ ಬಾರಿ) ಹಾಗೂ ಸಂದರ್ಶನ ಪ್ರಕ್ರಿಯೆ ಮಾತ್ರ ನಡೆಸಲಾಗುತ್ತದೆ. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ.

ಗಮನಿಸಿ: ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್‌ ) ಪರೀಕ್ಷೆ ಬರೆಯುವವರು ಗಣಿತಕ್ಕೆ ಸಂಬಂಧಿಸಿ ದಂತೆ ಸಂಖ್ಯಾತ್ಮಕ ಸಾಮರ್ಥ್ಯ ಪರೀಕ್ಷೆ ಬರೆಯಬೇಕು ಹಾಗೂ ಅಧಿಕಾರಿ ಸ್ಕೇಲ್-I ಹುದ್ದೆಗಾಗಿ ಪರೀಕ್ಷೆ ಬರೆಯುವವರು ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್ ಟೆಸ್ಟ್‌ ಬರೆಯಬೇಕು.‌

ಸಮಯದ ಮಿತಿ ಅರಿಯಿರಿ:

ಪರೀಕ್ಷಾ ಅವಧಿ ಒಟ್ಟು 45 ನಿಮಿಷಗಳು. ಹಾಗಾಗಿ 20 ನಿಮಿಷ ರೀಸನಿಂಗ್ ಪರೀಕ್ಷೆಗೂ ಹಾಗೂ 25 ನಿಮಿಷ ಗಣಿತ ಪರೀಕ್ಷೆಗೆ ನಿಗದಿಪಡಿಸಿಕೊಳ್ಳಿ. ನಿಮ್ಮ ಅಭ್ಯಾಸದ ಕ್ರಮದ ಮೇಲೆ ಹಾಗೂ ನಿಮಗಿ ರುವ ವಿಷಯಗಳ ಸಾಮರ್ಥ್ಯದ ಮೇಲೆ ಸಮಯವನ್ನು ಬದಲಾಯಿಸಿಕೊಳ್ಳಬಹುದು.

ಹೇಗೆ ಭಿನ್ನವಾಗಿವೆ?

ಸಂಖ್ಯಾ ಸಾಮರ್ಥ್ಯ ಪರೀಕ್ಷೆಯು ಒಂದು ಮೂಲಭೂತ ಕೌಶಲ. ಇದರ ಮೂಲಕ ಸಂಖ್ಯೆಗಳ ವಿಷಯದಲ್ಲಿ ಅಭ್ಯರ್ಥಿಗಿರುವ ವೇಗ ಹಾಗೂ ನಿಖರತೆಯನ್ನು ಪರೀಕ್ಷಿಸಲಾಗುತ್ತದೆ. ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ, ಪ್ರಶ್ನೆ ಅರ್ಥಮಾಡಿಕೊಳ್ಳುವುದರ ಜೊತೆಗೆ ಅದನ್ನ ಬಿಡಿಸಲು ಜ್ಞಾನದ ಮೂಲವನ್ನು (Basic concept) ಅನ್ವಯಿಸುವುದು ಮುಖ್ಯ ಉದ್ದೇಶವಾಗಿದೆ.

ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಬೀಜಗಣಿತ ಮತ್ತು ಅಭಿವ್ಯಕ್ತಿಗಳನ್ನು ಒಳಗೊಂಡಿರುವ ಪ್ರಶ್ನೆ ಗಳನ್ನು ಹೊಂದಿದೆ. ಇದರಲ್ಲಿ ಪ್ರಶ್ನೆಗಳನ್ನು ಬಿಡಿಸಲು ಅಭ್ಯರ್ಥಿಗಳು ತರ್ಕ ಮತ್ತು ಜ್ಞಾನವನ್ನು ಅನ್ವಯಿಸುವ ಅಗತ್ಯವಿದೆ. ಸಂಖ್ಯಾ ಸಾಮರ್ಥ್ಯ ಪರೀಕ್ಷೆಯಲ್ಲಿ, ಲೆಕ್ಕಾಚಾರದ ಸಾಮರ್ಥ್ಯ ಮತ್ತು ನಿಖರತೆಯನ್ನು ಸರಳ ಸಂಖ್ಯೆಯ ಪ್ರಶ್ನೆಗಳ ಮೂಲಕ ಪರೀಕ್ಷಿಸಲಾಗುತ್ತದೆ.

ಕ್ಲಿಷ್ಟತೆಯ ಮಟ್ಟ:

ಸಂಖ್ಯಾತ್ಮಕ ಸಾಮರ್ಥ್ಯ ಪರೀಕ್ಷೆಯಲ್ಲಿ ಸರಳೀಕರಣ, ಸಂಖ್ಯಾ ಸರಣಿ, ಅಂಕಗಣಿತದ ಪ್ರಶ್ನೆಗಳು, ಬೀಜಗಣಿತದ ಪ್ರಶ್ನೆಗಳಿರುತ್ತವೆ. ಈ ಪರೀಕ್ಷೆ ಮೂಲಕ ಅಭ್ಯರ್ಥಿಗೆ ಸಂಖ್ಯೆಗಳೊಂದಿಗೆ ವ್ಯವಹರಿಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಆ ಪ್ರಶ್ನೆಗಳಲ್ಲಿ ತಾರ್ಕಿಕ ಅಂಶವಿರುವುದಿಲ್ಲ.

ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್‌ ವಿಷಯದಲ್ಲಿ ತಾರ್ಕಿಕ ಅರ್ಹತೆ ಮತ್ತು ಸಂಖ್ಯೆಗಳೊಂದಿಗೆ ವ್ಯವಹರಿಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಇದು ಎರಡೂ ವಿಷಯಗಳ ಸಂಯೋಜನೆ.

ಇದರಲ್ಲಿ ಪ್ರಶ್ನೆಗಳು ತುಂಬಾ ಕಠಿಣವಾಗಿರುವುದಿಲ್ಲ, ಆದರೆ ಇವುಗಳನ್ನು ಬಿಡಿಸಲು ಹೆಚ್ಚು ಅಭ್ಯಾಸ ಮಾಡಿರಬೇಕು. ಆದ್ದರಿಂದ ನೀವು ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ ಸಮಯವನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಅರಿಯುವಿರಿ.

ಡೇಟಾ ಇಂಟರ್‌ಪ್ರಿಟೇಷನ್‌(DI) ಕುರಿತ ಪ್ರಶ್ನೆಗಳು ಸುಲಭವಾಗಿರುತ್ತವೆ. ಹಾಗಾಗಿ ಅವುಗಳನ್ನು ಮೊದಲು ಉತ್ತರಿಸಿ. ಈ ಪ್ರಶ್ನೆಗಳು ಚಿತ್ರಾತ್ಮಕ ವಿಶ್ಲೇಷಣೆ ಆಧಾರಿತವಾಗಿವೆ. ಸಾಂದರ್ಭಿಕವಾಗಿ, ಬೇಸಿಕ್ ಕೋ-ಆರ್ಡಿನೇಟ್ ಜ್ಯಾಮಿತಿ (ರೇಖೆಗಳು ಮತ್ತು ವಲಯಗಳು), ಮಾಪನಗಳಿಂದಲೂ ಕೆಲವು ಪ್ರಶ್ನೆಗಳು ಬರಬಹುದು. ಆದರೆ ಚಕ್ರಬಡ್ಡಿ(compound interest) ಕುರಿತ  ಪ್ರಶ್ನೆಗಳು ಬಿಡಿಸಲು  ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ಅವುಗಳನ್ನು ವಿಭಾಗದ ಕೊನೆಯಲ್ಲಿ ಬಿಡಿಸಬೇಕು.

ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ, ಸಂಭವನೀಯತೆ, ಕ್ರಮಪಲ್ಲಟನೆ ಮತ್ತು ಸಂಯೋಜನೆ, ಡೇಟಾ ಸಮರ್ಪಕತೆ ಸರಾಸರಿ, ಶೇಕಡಾವಾರು, ಗುಣಾಕಾರ, ಭಾಗಾಕಾರ, ವರ್ಗಮೂಲಗಳು, A.P, G.P (Arithmetic Progression and Geometric Progression) ಸೇರಿದಂತೆ ಸಂಖ್ಯಾ ಲೆಕ್ಕಾಚಾರದ ಪ್ರಶ್ನೆಗಳ ವಿಷಯದ ಮೇಲೆ ಪ್ರಶ್ನೆಗಳಿರುತ್ತವೆ. ಸರಳ ಮತ್ತು ಚಕ್ರ ಬಡ್ಡಿ, ಲಾಭ/ನಷ್ಟ ಕುರಿತ ಪ್ರಶ್ನೆಗಳೂ ಇರುತ್ತವೆ.

ಕೆಲಸದ ಸಮಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಉದಾ: 3 ಜನರು ಒಂದು‌ಕೆಲಸವನ್ನು 5 ದಿನಗಳಲ್ಲಿ ಮಾಡಿದರೆ 7 ಜನರು ಆ ಕೆಲಸವನ್ನು ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಇಂಥವೂ ಇರುತ್ತವೆ.

ಕರ್ನಾಟಕದ ಅಭ್ಯರ್ಥಿಗಳು ಕನ್ನಡ, ಕೊಂಕಣಿ, ಇಂಗ್ಲಿಷ್ ಮತ್ತು ಹಿಂದಿ –ಇವುಗಳಲ್ಲಿ ಯಾವುದಾದರೊಂದು ಭಾಷೆಯ ಆಯ್ಕೆ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಭಾಷೆಯನ್ನು ಆಯ್ಕೆ ಮಾಡಿಕೊಂಡಿರಬೇಕು. ಅದೇ ಭಾಷೆಯಲ್ಲೇ ಪರೀಕ್ಷೆ ಬರೆಯಬೇಕು (ಪರೀಕ್ಷಾ ಸಂದರ್ಭದಲ್ಲಿ ಬದಲಾವಣೆಗೆ ಅವಕಾಶವಿಲ್ಲ)

ಋಣಾತ್ಮಕ ಮೌಲ್ಯ ಮಾಪನ ಇದೆ: ವಸ್ತು ನಿಷ್ಠ ಮಾದರಿಯ ಪರೀಕ್ಷೆಗಳಲ್ಲಿ ನೆಗೆಟಿವ್ ಕರೆಕ್ಷನ್‌(ಋಣಾತ್ಮಕ ಮೌಲ್ಯಮಾಪನ) ಇದೆ. ಒಂದು ತಪ್ಪು ಉತ್ತರಕ್ಕೆ, ಅದಕ್ಕೆ ನಿಗದಿಪಡಿಸಿದ ಅಂಕಗಳಲ್ಲಿ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಪ್ರಶ್ನೆ ಖಾಲಿ ಬಿಟ್ಟರೆ, ಯಾವುದೇ ಅಂಕ ಕಳೆಯುವುದಿಲ್ಲ. ಎಲ್ಲ ಹಂತದ ಋಣಾತ್ಮಕ ಮೌಲ್ಯಮಾಪನದಲ್ಲೂ ಇದೇ ನಿಯಮ ಅನ್ವಯಿಸುತ್ತದೆ.

(ಮುಂದಿನ ವಾರ: ಪರೀಕ್ಷೆ ತಯಾರಿ, ಯಾವ ಯಾವ ವಿಷಯಗಳನ್ನ ಓದಬೇಕು, ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ)

(ಲೇಖಕರು ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT