ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಹೊಡೆಯಬಹುದೇ?

Last Updated 30 ಸೆಪ್ಟೆಂಬರ್ 2018, 19:45 IST
ಅಕ್ಷರ ಗಾತ್ರ

ಇನ್ನೇನು ಅರ್ಧವಾರ್ಷಿಕ ಪರೀಕ್ಷೆಗಳು ಮುಗಿದು ದಸರೆಯ ರಜೆ ಬರುತ್ತದೆ. ಶಾಲೆಗಳಲ್ಲಿ ತಡಸಲಿನಲ್ಲಿ ನೀರು ಹರಿದಂತೆ ಕೆಲಸಗಳು ಸಾಗುತ್ತಿರುವುದು ಈಗ ತುಸು ಶಾಂತವಾಗುವುದು ಮತ್ತೆ ಭೋರ್ಗರೆಯಲು ಮಾತ್ರ! ವರ್ಷದ ಕೊನೆಯ ಭಾಗ ತೆರೆದುಕೊಳ್ಳುತ್ತದಲ್ಲ! ಈ ಭೋರ್ಗರೆತದ ಮೊದಲು ಶಾಲೆಯಲ್ಲಿನ ವಾತಾವರಣವನ್ನು ಶಿಸ್ತು ಹಾಗೂ ಕಲಿಕೆಗೆ ಪೂರಿತವಾಗಿ ಮಾಡುವುದು ಬಹುದೊಡ್ಡ ಸವಾಲು.

ಅಂದರೆ, ಶಾಲೆಗಳಲ್ಲಿ ಕಲಿಕೆ ನಡೆಯುತ್ತಿಲ್ಲ, ಶಿಸ್ತಿಲ್ಲ ಎಂದಲ್ಲ. ಅವನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಹೇಗೆ ಎಂಬುದು ಪ್ರಶ್ನೆ. ಇದು ತುಂಬ ಚರ್ಚೆಯಾಗುತ್ತಿರುವ ವಿಷಯವೂ ಹೌದು. ಕಲಿಕೆ ಎಂಬುದು ಭಾಗಶಃ ಮಾತ್ರ ಯಶಸ್ವಿಯಾಗುತ್ತಿದೆ ಎಂಬುದು ಬಹಳ ದಿನಗಳಿಂದ ಕೇಳಿ ಬರುತ್ತಿದೆಯಾದರೆ, ಶಿಸ್ತು ನಾಸ್ತಿಯಾಗುತ್ತಿದೆ ಎಂಬುದು ಹೆಚ್ಚುಹೆಚ್ಚಾಗಿ ಕೇಳಿಬರುತ್ತಿರುವ ಮಾತು. ಕೆಲವರಂತೂ ಇದಕ್ಕೆ ನೈತಿಕತೆಯನ್ನು ಸೇರಿಸಿ ಗೊಂದಲ ಮಾಡಿಕೊಂಡಿರುವುದೂ ಉಂಟು. ಶಿಸ್ತಿಲ್ಲದೆ ಬೆಳೆದ ಮಕ್ಕಳು ಕೆಟ್ಟ ನಾಗರಿಕರಾಗುತ್ತಾರೆ; ಹೀಗಾದರೆ ದೇಶದ ಭವಿಷ್ಯವೇನು ಎಂಬುದು ಹಿರಿಯರ ಆತಂಕ.

ಮೊದಲನೆಯದಾಗಿ ಶಿಸ್ತನ್ನು ಪರಿಗಣಿಸೋಣ. ಸಾಂಪ್ರದಾಯಿಕವಾಗಿ ಶಿಸ್ತೆಂದರೆ ಹಿರಿಯರು ಹೇಳಿದ್ದನ್ನು ಮಕ್ಕಳು ಕೇಳಬೇಕು. ಗಲಾಟೆ ಮಾಡಬಾರದು, ಕೂತಲ್ಲಿಂದ ಎದ್ದು ಓಡಾಡಬಾರದು, ಅಕ್ಕಪಕ್ಕದ ಮಕ್ಕಳೊಂದಿಗೆ ಮಾತನಾಡಬಾರದು, ಜಗಳದ ಮಾತು ದೂರವೇ ಉಳಿಯಿತು, ಬ್ಯಾಗುಗಳನ್ನು ಎಳೆದಾಡಬಾರದು, ಏನನ್ನೂ ಎಸೆಯಬಾರದು, ಆದಷ್ಟೂ ತರಗತಿಯ ನಡುವೆ ನೀರು ಕುಡಿಯಲಾಗಲಿ, ಶೌಚಾಲಯಕ್ಕಾಗಲಿ ಹೋಗಬೇಕೆಂದು ಅನುಮತಿ ಕೇಳಬಾರದು... ಬಾರದು... ಬಾರದು... ಬಾರದು.... ಇನ್ನು ಬೇಕು ಎಂಬುದು ಏನಾದರು ಇದೆಯೇ ಎಂದರೆ ಬೇಕಾದಷ್ಟಿದೆ. ಶಿಕ್ಷಕರು ಹೇಳಿದ್ದನ್ನು ಸ್ವಲ್ಪವೂ ತಪ್ಪದೆ ಕೇಳಬೇಕು. ಮನೆಗೆಲಸವನ್ನು ತಪ್ಪದೆ ಮಾಡಿಕೊಂಡು ಬರಬೇಕು. ಪ್ರಾರ್ಥನೆಯಲ್ಲಿ ಒಂದಿಷ್ಟೂ ಗಲಾಟೆ ಮಾಡದೆ ಭಾಗವಹಿಸಬೇಕು. ತಿಂಡಿ/ಊಟ ಆದ ನಂತರ ಆ ಸ್ಥಳವನ್ನು ಸ್ವಚ್ಛವಾಗಿಲು ಸಹಕರಿಸಬೇಕು. ಇತ್ಯಾದಿ ಇತ್ಯಾದಿ ಇದು ಸಾಧ್ಯವೆ? ನಿಜವಾಗಿ ಅವರಿನ್ನೂ ಮಕ್ಕಳಲ್ಲವೆ? ಎಂದಾಗ ‘ಶಿಸ್ತು ಕಲಿಯುವುದು ಬೇಡವೆ’ ಎಂಬ ಪ್ರಶ‍್ನೆ ಎದುರಾಗುತ್ತದೆ. ಹಾಗಾದರೆ, ಇದನ್ನು ದೊಡ್ಡವರು (ಚಟುವಟಿಕೆಗಳನ್ನು ಸೂಕ್ತವಾಗಿ ಅನ್ವಯಿಸಿದಾಗ) ಮಾಡುತ್ತಿದ್ದೇವೆಯೇ? ಈ ಪ್ರಶ್ನೆಗೆ ನಗುವೇ ಉತ್ತರ!

ಈಗ ಶಿಸ್ತನ್ನು ಕಲಿಸುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ, ಮಕ್ಕಳಿಗೆ ಹೊಡೆಯಬಾರದು ಎಂಬ ಕಾನೂನೇ ಇದ್ದರೂ ಬಹಳಷ್ಟು ಕಡೆ ಆಗುತ್ತಿರುವುದು ಅದೇ. ಈ ಬಗ್ಗೆ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಶಿಕ್ಷಣ ಕುರಿತಾದ ಪತ್ರಿಕೆಗಳಲ್ಲಿ ಅಧ್ಯಯನಗಳು ಪ್ರಕಟವಾಗಿವೆ. ಹೊಡೆಯದೆ ಇದ್ದಲ್ಲಿ ಮಕ್ಕಳು ಕಲಿಯುವುದಿಲ್ಲ. ಶಿಸ್ತು ಮತ್ತು ಹೊಡೆತ ಪರ್ಯಾಯ ಪದಗಳು ಎಂಬ ಭಾವನೆ ಮಕ್ಕಳ ಮನಸ್ಸಿನಲ್ಲಿಯೇ ಮೂಡಿಬಿಟ್ಟಿದೆ. ಅದರಲ್ಲಿಯೂ ಯಾವುದಾದರು ಶಿಕ್ಷಕರು ‘ಮೃದು’ ಮಕ್ಕಳಿಗೆ ಹೊಡೆಯರು ಎಂದಾದರೆ, ‘ಗಟ್ಟಿಗ’ ಮೇಷ್ಟ್ರುಗಳು ‘ತರಗತಿ ನಿರ್ವಹಿಸಲು ತೊಂದರೆಯಾದರೆ, ನನಗೆ ಹೇಳಿ ಕಳಿಸಿ. ಪಿನ್‍ ಡ್ರಾಪ್‍ ಸೈಲೆನ್ಸ್‍ ಇರುವಂತೆ ಮಾಡುತ್ತೇನೆ’ ಎನ್ನುತ್ತಾರೆ. ಇಂತಹ ‘ಗಟ್ಟಿಗ’ ಮೇಷ್ಟ್ರುಗಳು ಶಾಲೆಯಲ್ಲಿ ಪ್ರಸಿದ್ಧರೂ ಆಗಿರುತ್ತಾರೆ! ಅಂದರೆ ಆ ಮೇಷ್ಟ್ರುಗಳು ಪಾಷಾಣಹೃದಯರು ಎಂದಲ್ಲ. ನಮ್ಮ ವ್ಯವಸ್ಥೆ ಹಾಗಿದೆ, ಅಷ್ಟೆ. ಇದನ್ನು ಪ್ರೀತಿಯ ದಾರಿಗೆ ತರಬೇಕು. ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರುವುದು ಹೇಗೆ ಎಂಬುದೇ ಪ್ರಶ್ನೆ.

ಅಲ್ಲದೆ, ಮಕ್ಕಳು ಮಾತು ಕೇಳದಿದ್ದರೆ, ಅವರವರಲ್ಲಿಯೇ ಹೊಡೆದಾಡಿದರೆ, ಸರಿಯಾಗಿ ಕಲಿಯದಿದ್ದರೆ ಶಾಲೆಗೆ ಬರುವ ಉದ್ದೇಶವೇನು? ಶಾಲೆಗೆ ಮಕ್ಕಳನ್ನು ಕಳಿಸುವ ಉದ್ದೇಶಗಳಲ್ಲಿ ಪ್ರಮುಖವಾದದ್ದು ಮಗು ಶಿಸ್ತನ್ನು ಕಲಿಯಲಿ ಎಂಬುದೇ. ಅದೇ ಆಗದಿದ್ದರೆ ಹೇಗೆ ಎಂಬುದು ಬಹಳ ಒಳ್ಳೆಯ ಮಾತೇ. ಆದರೆ, ಆ ಶಿಸ್ತನ್ನು ಹೇಗೆ ಕಲಿಸುವುದು? ಇಂದಿನ ವಿಜ್ಞಾನದ ದೃಷ್ಟಿಯಿಂದ ಈ ಸಮಸ್ಯೆಯನ್ನು ನೋಡಿ ಪರಿಹರಿಸುವುದು ಪರಿಹಾರಮಾರ್ಗ.

ನಮ್ಮ ಕಲಿಕೆಯ ವ್ಯವಸ್ಥೆಯಲ್ಲಿ ಮಕ್ಕಳ ವಯಸ್ಸನ್ನು ಪರಿಗಣಿಸಿ ಕಲಿಕೆಯನ್ನು ಮಾಡಿಸಬೇಕು. ಇಲ್ಲವಾದಲ್ಲಿ ಅಶಿಸ್ತು ಮೂಡುತ್ತದೆ ಎಂಬುದು ಒಂದು ಮಹತ್ವದ ಅಂಶ. ಹದಿವಯಸ್ಸಿನ ಮಕ್ಕಳು ಓಡಾಡಿ ಕುಣಿಯಬೇಕು. ಅದಕ್ಕೆ ಶಾಲೆಯಲ್ಲಿ ಆಸ್ಪದವಿದೆಯೇ? ಹೇಳಲಾಗದು. ಕೆಲವೆಡೆ ಇದೆ, ಕೆಲವೆಡೆ ಇಲ್ಲ. ಓಡಾಡಿ ಕುಣಿಯುವ ವಯಸ್ಸು, ಮನಸ್ಸಿನ ಮಕ್ಕಳನ್ನು ಒಂದು ಕೊಠಡಿಯಲ್ಲಿ ಹಾಕಿ ಪಾಠವನ್ನು ಬಿಗಿದರೆ ಶಿಸ್ತು ಉಳಿಯುವುದೇ? ಒಂದು ಬೆಂಚಿನ ಹುಡುಗ ಮುಂದಿನ ಬೆಂಚಿನ ಹುಡುಗನ ಕಾಲನ್ನು ತನ್ನ ಬೂಟುಗಾಲಿನಿಂದ ತಿವಿದು ಸುಮ್ಮನೆ ಕೂರುತ್ತಾನೆ. ನಿಧಾನವಾಗಿ ಅಶಿಸ್ತು ತರಗತಿಯಲ್ಲಿ ಹಬ್ಬುತ್ತದೆ! ಇಂತಹ ಸಂದರ್ಭದಲ್ಲಿ ಶಿಕ್ಷಕ ಏನು ಮಾಡಬೇಕು? ಅದಕ್ಕೆ ಕೆಲವು ತಜ್ಞರು ಕೊಡುತ್ತಿರುವ ಪರಿಹಾರಗಳು ಎರಡು ಒಂದು ತರಗತಿಯಲ್ಲಿ ಶಿಕ್ಷಕರು ತೀರಾ ಬಿಗಿಯಾಗಬಾರದು ಮತ್ತು ಮುಖ್ಯವಾದ್ದು ಎರಡು ಇಪ್ಪತ್ತು ನಿಮಿಷಕ್ಕೊಮ್ಮೆ ವಿದ್ಯಾರ್ಥಿಗಳನ್ನು ನಿಲ್ಲಿಸಿ ಕೈಕಾಲುಗಳನ್ನು ಮೇಲೆತ್ತುವ ಪಕ್ಕಕ್ಕೆ ಬಾಗಿಸುವ ಚಟುವಟಿಕೆ ಮಾಡಿಸಿ. ಇದೊಂದು ಸೃಜನಾತ್ಮಕ ಪರಿಹಾರ. ಹಾಗೆಯೇ ಶಿಕ್ಷಕರು ಮಕ್ಕಳನ್ನು ವಿಶ‍್ವಾಸಕ್ಕೆ ತೆಗೆದುಕೊಂಡು ಬೇರೆ ಬೇರೆ ಪರಿಹಾರವನ್ನು ಕಂಡುಕೊಳ್ಳಬಹುದು. ಆ ಮೂಲಕ ಶಿಸ್ತನ್ನು ಉಂಟುಮಾಡುವುದು ಒಂದು ಒಳ್ಳೆಯ, ಇತ್ತೀಚೆಗೆ ಚಾಲ್ತಿಗೆ ಬರುತ್ತಿರುವ ಕ್ರಮ.

ಕುತೂಹಲಕಾರಿ ವಿಷಯವೆಂದರೆ, ಸಣ್ಣ ಮಕ್ಕಳಿಗೆ ಸಾಮಾನ್ಯವಾಗಿ ಬೈದೋ, ಕೋಲು-ಸ್ಕೇಲು ತೋರಿಸಿಯೋ ‘ಶಿಸ್ತನ್ನು ಉಂಟುಮಾಡುವ’ ಬದಲು ಸಣ್ಣಪುಟ್ಟ ಜವಾಬ್ದಾರಿ ಕೊಡುವ ಪದ್ಧತಿಗೆ ಯಶಸ್ಸು ಸಿಗುತ್ತಿರುವುದು! ಇದರ ಸಿದ್ಧಾಂತದ ಭಾಗವೆಂದರೆ ಮಕ್ಕಳು ಮೂರು, ನಾಲ್ಕು ಭಾಷೆಯನ್ನು ಕಲಿಯಬಲ್ಲರು, ಅನೇಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬಲ್ಲರು ಎಂಬ ತಿಳಿವಳಿಕೆಯ ಮುಂದುವರೆದ ಭಾಗವೇ ಆಗಿದೆ. ಮಕ್ಕಳು ಕಲಿಯುವಲ್ಲಿ ಮಾತ್ರವಲ್ಲ. ಇತರ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ಹೊಸತಿಳಿವನ್ನು ಆಧರಿಸಿದ್ದು. ಆಂದರೆ, ಈ ಶಾಲೆ, ಇಲ್ಲಿನ ವಸ್ತುಗಳು ಎಲ್ಲವೂ ನಿಮ್ಮದೂ ಕೂಡ. ಇದರ ರಕ್ಷಣೆ ನಿಮ್ಮ ಜವಾಬ್ದಾರಿ ಎಂದು ತಿಳಿಸುವುದು. ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವನ್ನು ಮಾಡಿಕೊಡುವುದು ಹಾಗೂ ಗೌರವಿಸುವುದು. ಅವರ ಯೋಜನೆಗಳನ್ನು ಕೇಳುವುದು ಶಿಸ್ತನ್ನು ಕಲಿಸುವುದರಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ತಿಳಿದುಬಂದಿದೆ. ಇದರಿಂದ ಶಿಸ್ತು ಒದೆಯನ್ನು ತಿನ್ನುವುದರ ಮೂಲಕವಲ್ಲದೆ, ಭಾಗವಹಿಸುವಿಕೆಯ ಮೂಲಕ ಒಂದು ಚೇತೋಹಾರಿ ಅನುಭವವಾಗಿ ಹೊಮ್ಮುತ್ತದೆ. ಜೊತೆಗೆ ಕಾಲ ಕಳೆದಂತೆ ವ್ಯಕ್ತಿತ್ವ ಗಟ್ಟಿಯಾಗಲೂ ಸಹಾಯ ಮಾಡುತ್ತದೆ. ಇದಕ್ಕಾಗಿ ಶಿಕ್ಷಕರು ಸ್ವಲ್ಪ ಶ್ರಮಪಡಬೇಕಾದರೂ ಆ ಶ್ರಮ ಸಾರ್ಥಕವಾಗುತ್ತದೆ. ಕ್ರಮೇಣ ಶಿಕ್ಷಕರ ಮೇಲಿನ ಒತ್ತಡ ಸಹ ಕಡಿಮೆಯಾಗುತ್ತದೆಯಾಗಿ ಈ ಕುರಿತು ಹೆಚ್ಚು ಒತ್ತುಕೊಡುವುದು ಮತ್ತು ಅಧ್ಯಯನಗಳನ್ನು ಮಾಡಿ ಪ್ರಯೋಗಿಸುವುದು ಅತ್ಯಾವಶ್ಯಕವಾಗಿದೆ.

ಇನ್ನು ಕಲಿಕೆ. ಕೇವಲ ಅಂಕಗಳಿಕೆಯ ಹೂಟವಾಗಿ ಉಳಿದಿರುವ ಕಲಿಕೆಯನ್ನು, ವಿಷಯವನ್ನು ತಿಳಿಸುವ ಕಾರ್ಯಕ್ರಮಗಳ ಮೂಲಕ ಅರಿವನ್ನಾಗಿಸಬೇಕಾಗಿದೆ. ಪುರಾತನವಾದ ಒಂದು ಕ್ರಮ ಇಂದಿಗೂ ಎಂದೆಂದಿಗೂ ಪ್ರಸ್ತುತವೇ ಆಗಿ ಉಳಿಯಲಿದೆ. ಅದೇ ಪ್ರತಿ ಅವಕಾಶವನ್ನು ಸಹ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಲಿಕೆಯ ಗುರಿ ಮತ್ತು ಪ್ರಯೋಜನವನ್ನು ತಿಳಿಸುವುದು. ಇನ್ನು ದಸರೆಯಲ್ಲಿನ ಶೈಕ್ಷಣಿಕ ಪ್ರವಾಸವನ್ನು ಈ ಕಾರ್ಯಕ್ಕಾಗಿ ಚೆನ್ನಾಗಿಯೇ ಬಳಸಿಕೊಳ್ಳಬಹುದು. ಪ್ರವಾಸಕ್ಕೆ ಹೋಗುವ ಸ್ಥಳಗಳನ್ನು ಕುರಿತಾಗಿ ಮಕ್ಕಳಿಗೇ ಜವಾಬ್ದಾರಿ ಕೊಟ್ಟು ಟಿಪ್ಪಣಿ ಬರೆಸಿದರೆ ಒಂದು ದೊಡ್ಡ ಹಂತ ಮೀರಿದಂತಾಗುತ್ತದೆ. ಪ್ರವಾಸಿಕ್ಷೇತ್ರದ ಮಾಹಿತಿ, ಅಲ್ಲಿನ ಶಾಸನ, ದೇಗುಲಗಳು. ವಿಜ್ಞಾನಕೇಂದ್ರಗಳು, ಇತರ ಪ್ರವಾಸಿ/ಆಸಕ್ತಿ ಸ್ಥಳಗಳನ್ನು ಮಕ್ಕಳಿಂದಲೇ ಗುರುತಿಸುವಂತೆ ಮಾಡಬೇಕು. ಪ್ರವಾಸದ ವ್ಯವಸ್ಥಾಪನೆಯಲ್ಲಿಯೂ ಅಭಿಪ್ರಾಯ-ಕೆಲಸಗಳ ಮಟ್ಟದಲ್ಲಿ ಅವರಿಗೆ ಸ್ಥಾನಕೊಟ್ಟರೆ ವ್ಯವಹಾರಜ್ಞಾನ ಒದಗುತ್ತದೆ ಮತ್ತು ಪ್ರಾಯೋಗಿಕವಾಗಿ ತೊಡಗಿಕೊಳ್ಳುವ ಕಸುವು ಮಕ್ಕಳಿಗೆ ಬರುತ್ತದೆ. ಇದು ಕಲಿಕೆಯಲ್ಲಿ ಮಹತ್ವದ ಅಂಶ.

ಇಂದಿನ ವಾಸ್ತವ ಜಗತ್ತಿನಲ್ಲಿ ಇದು ಕಷ್ಟವಾದರೂ ದೇಶದ ಭವಿಷ್ಯವನ್ನು ರೂಪಿಸುವ ಮಾನವಸಂಪನ್ಮೂಲ ನಮ್ಮ ಕೈಲಿದೆ ಎಂಬ ಅರಿವಿನಿಂದ ಶಿಕ್ಷಕರು, ಆಡಳಿತ ಮಂಡಳಿ ಹಾಗೂ ಎಸ್‍. ಡಿ. ಎಂ. ಸಿ. ಕೆಲಸ ಮಾಡಬೇಕಿದೆ. ಗ್ರಂಥಾಲಯ, ಪ್ರಯೋಗಶಾಲೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಜೋಡಿಸಿ ಕಲಿಕೆಯನ್ನು ನೇರ್ಪುಗೊಳಿಸಬೇಕು. ಇಲ್ಲಿ ಶಿಕ್ಷಕರ ತರಬೇತಿಯೂ ಮುಖ್ಯ. ಚಿತ್ರದುರ್ಗದ ಚಳ್ಳಕೆರೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರಿಗೆ ಪ್ರಯೋಗಗಳ ತರಬೇತಿಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ನೀಡುತ್ತಾರೆ. ಇದನ್ನು ಬಳಸಿಕೊಳ್ಳಬೇಕು. ಕೆಲವು ಖಾಸಗೀ ಸಂಸ್ಥೆಗಳೂ ಈ ಕೆಲಸ ಮಾಡುತ್ತಿವೆ. ಅದನ್ನು ಕೂಡ ಬಳಸಿಕೊಳ್ಳಬಹುದು.

ಒಟ್ಟಾರೆ, ಆಧುನಿಕ ಪದ್ಧತಿಗಳನ್ನು ಬಳಸಿಕೊಂಡು ಮಕ್ಕಳನ್ನು – ಅವರ ಬಾಲ್ಯವನ್ನು ಕಸಿಯಗೊಡದೆ, ಶಿಸ್ತನ್ನು ಕಲಿಸುತ್ತಲೇ – ಕಲಿಕೆಯ ಖುಷಿಯನ್ನು ಅವರ ಮನಸ್ಸಿಗೆ ತರುವುದು ಬಹಳ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT