ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಡಿಎ ಪರೀಕ್ಷೆ ಸಾಮಾನ್ಯ ಜ್ಞಾನಕ್ಕೆ ಆದ್ಯತೆ

Last Updated 7 ಜುಲೈ 2021, 19:30 IST
ಅಕ್ಷರ ಗಾತ್ರ

ಕ ರ್ನಾಟಕ ಲೋಕ ಸೇವಾ ಆಯೋಗವು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ)ರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು ಬರುವ ಸೆಪ್ಟೆಂಬರ್ 18 ಮತ್ತು 19ರಂದು ದಿನಾಂಕ ನಿಗದಿಪಡಿಸಿದೆ. ಕಡ್ಡಾಯ ಭಾಷಾ ಕನ್ನಡ ಪತ್ರಿಕೆ ಸೆ. 18ರಂದು ನಡೆದರೆ, ಸಾಮಾನ್ಯ ಜ್ಞಾನ ಮತ್ತು ಇಂಗ್ಲಿಷ್‌/ ಕನ್ನಡದ ಪರೀಕ್ಷೆಗಳು ಸೆ. 19ರಂದು ನಡೆಯಲಿವೆ. ಹಾಗಾದರೆ ಈ ಪರೀಕ್ಷೆ ಹೇಗಿರುತ್ತದೆ ಮತ್ತು ತಯಾರಿ ಹೇಗೆ ನಡೆಸಬೇಕೆಂಬುದನ್ನು ನೋಡೋಣ.

ಪರೀಕ್ಷೆಯಲ್ಲಿ ಏನೇನು ಇರುತ್ತದೆ?

ಈ ಪರೀಕ್ಷೆಯಲ್ಲಿ ಮೂರು ಪ್ರಶ್ನೆ ಪತ್ರಿಕೆಗಳು ಇರುತ್ತವೆ. ಮೊದಲನೆಯದು ಕಡ್ಡಾಯ ಕನ್ನಡ. ಈ ಪತ್ರಿಕೆಯಲ್ಲಿ ಪಡೆದಿರುವ ಅಂಕಗಳನ್ನು ಅಂತಿಮ ರ‍್ಯಾಕಿಂಗ್‌ ಪಟ್ಟಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಎರಡನೆಯದು ಸಾಮಾನ್ಯ ಕನ್ನಡವಾದರೆ, ಮೂರನೆಯದು ಸಾಮಾನ್ಯ ಜ್ಞಾನ. ಎರಡನೇ ಮತ್ತು ಮೂರನೇ ಪತ್ರಿಕೆಗಳು ಮಹತ್ವದ್ದಾಗಿವೆ. ಇವೆರಡರಲ್ಲಿ ಗಳಿಸಿದ ಅಂಕಗಳನ್ನು ಸ್ಪರ್ಧೆಗೆ ಪರಿಗಣಿಸುವುದರಿಂದ ಅತ್ಯುತ್ತಮ ತಯಾರಿ ಮಾಡಿಕೊಳ್ಳಬೇಕು.

ದ್ವಿತೀಯ ಪತ್ರಿಕೆಯಲ್ಲಿ ನಿಮ್ಮ ಕನ್ನಡ ಭಾಷಾ ಜ್ಞಾನದ ಸಮಗ್ರ ಪರೀಕ್ಷೆ ಮಾಡುತ್ತಾರೆ. ಇದು ಕೂಡಾ 100 ಅಂಕಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ಕನ್ನಡವು ಮಹತ್ವದ ಪತ್ರಿಕೆಯಾಗಿದ್ದು ನೀವು ಕನ್ನಡದಲ್ಲಿ ಎಷ್ಟು ಹೆಚ್ಚು ಅಂಕಗಳನ್ನು ಗಳಿಸುತ್ತಿರೋ ಅಷ್ಟೂ ಆಯ್ಕೆ ಸಾಧ್ಯತೆ ಹೆಚ್ಚು. ಏಕೆಂದರೆ ಸಾಮಾನ್ಯ ಜ್ಞಾನಕ್ಕೆ ಹೋಲಿಸಿದರೆ ಈ ಪತ್ರಿಕೆ ಸುಲಭವಾಗಿರುತ್ತದೆ, ಆದ್ದರಿಂದ ನೀವು ಸುಲಭವಾಗಿ ಹೆಚ್ಚು ಅಂಕ ಪಡೆಯಬಲ್ಲಿರಿ. (ಸಾಮಾನ್ಯಜ್ಞಾನವನ್ನು ನಿರ್ಲಕ್ಷಿಸಬೇಡಿ. ಎರಡೂ ಪತ್ರಿಕೆಗಳಲ್ಲಿ ನೀವು ಪಡೆದ ಅಂಕಗಳನ್ನು ಆಧರಿಸಿಯೇ ಅಂತಿಮ ರ‍್ಯಾಂಕ್ ನಿಶ್ಚಯವಾಗುತ್ತದೆ). ನೀವು ಒಂದು ವೇಳೆ ಪ್ರಯತ್ನಿಸಿದರೆ, ಸುಲಭವಾಗಿ 100 ಅಂಕಗಳಿಗೆ 90 ರಿಂದ 95ರ ತನಕ ಪಡೆಯಬಹುದು, ಆದರೆ ಇದೇ ಪ್ರಮಾಣದ ಅಂಕವನ್ನು ಸಾಮಾನ್ಯ ಅಧ್ಯಯನದಲ್ಲಿ ಗಳಿಸುವುದು ಕಷ್ಟ. ಹೀಗಾಗಿ ಕನ್ನಡವನ್ನು ಗಮನವಿಟ್ಟು ಓದಿ. ಈ ಪತ್ರಿಕೆಯಲ್ಲಿ ಕೇವಲ ವ್ಯಾಕರಣ ಮಾತ್ರ ಇರುವುದಿಲ್ಲ, ಅದರ ಜೊತೆಗೆ ಬೇರೆ ವಿಷಯ ಕೂಡ ಇರುತ್ತದೆ. ಹಳೆಯ ಪ್ರಶ್ನೆಪತ್ರಿಕೆಯನ್ನು ಗಮನಿಸಿದರೆ ಈ ಕೆಳಗಿನ ವಿಷಯಗಳಿಂದ ಪ್ರಶ್ನೆಗಳನ್ನು ಕೇಳಿರುವುದು ಗೊತ್ತಾಗುತ್ತದೆ. ಅವುಗಳೆಂದರೆ

1) ಕನ್ನಡ ಭಾಷೆ ಮತ್ತು ಸಾಹಿತ್ಯ, 2) ಪದಗಳ ಸುಧಾರಣೆ, 3) ಸಮಾನಾರ್ಥಕ ಪದಗಳು, 4) ವಿರುದ್ಧಾರ್ಥಕ ಪದಗಳು, 5) ನುಡಿಗಟ್ಟುಗಳ ಅರ್ಥವನ್ನು ಗ್ರಹಿಸುವುದು, 6) ತಪ್ಪಿರುವ ಭಾಗವನ್ನು ಸರಿಪಡಿಸಿ, 7) ಬಿಟ್ಟಸ್ಥಳ ತುಂಬಿ, 8) ಪ್ಯಾರಾ ಓದಿ: ಪ್ರಶ್ನೆಗೆ ಉತ್ತರಿಸಿ, 9) ಪದ ಬಳಸಿ ವಾಕ್ಯ ರಚಿಸಿ, 10) ವಾಕ್ಯಗಳನ್ನು ಬಳಸಿ: ಸಾಹಿತ್ಯ ಖಂಡ ರಚಿಸಿ, 11) ವ್ಯಾಕರಣ 12) ಭಿನ್ನ ಪದ ಗುರುತಿಸಿ.

ಸಾಮಾನ್ಯಜ್ಞಾನ ಪತ್ರಿಕೆಯು 100 ಅಂಕಗಳನ್ನು ಒಳಗೊಂಡಿರುತ್ತದೆ. ಈ ಪತ್ರಿಕೆಯಲ್ಲಿ ಭಾರತದ ಇತಿಹಾಸ, ಭೂಗೋಳ, ಭಾರತದ ಸಂವಿಧಾನ, ಭಾರತದ ಅರ್ಥಶಾಸ್ತ್ರ, ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಲ್ಲದೇ ಕರ್ನಾಟಕದ ಐತಿಹಾಸಿಕ ಅಂಶಗಳು, ನಮ್ಮ ರಾಜ್ಯದ ಆರ್ಥಿಕ ಬೆಳವಣಿಗೆಗಳ ಕುರಿತ ಪ್ರಶ್ನೆಗಳು, ರಾಜಕೀಯ ತಿರುವುಗಳನ್ನು ಸಂವಿಧಾನಾತ್ಮಕ ದೃಷ್ಟಿಯಲ್ಲಿ ನೋಡುವಂತೆ ವಿಷಯ ಜೋಡಿಸಿ ಪ್ರಶ್ನೆಗಳನ್ನು ಹೆಣೆಯುವುದನ್ನು ಕಾಣುತ್ತೇವೆ.

ಸಲಹೆಗಳು

l ಪ್ರತಿ ದಿನ ಪರೀಕ್ಷೆ ಮುಗಿಯುವ ತನಕ ಕನಿಷ್ಠ 5-6 ಗಂಟೆಯನ್ನಾದರೂ ಓದಲು ಮೀಸಲಿಡಿ. ಅದರಲ್ಲಿ 1 ಗಂಟೆ ಬಹು ಆಯ್ಕೆ ಪ್ರಶ್ನೆಗಳನ್ನು ಬಿಡಿಸಲು ಮೀಸಲಿಡಿ.

l ಪ್ರತಿನಿತ್ಯವೂ ನೀವು ಹಿಂದೆ ಓದಿದ ವಿಷಯವನ್ನು ಪುನರಾವರ್ತನೆ ಮಾಡುತ್ತಾ ಅಧ್ಯಯನ ಮಾಡುವುದರಿಂದ ಹಿಂದೆ ಓದಿರುವುದನ್ನು ಮರೆತು ಹೋಗದಂತೆ ತಡೆಯಬಹುದು.

l ದಿನಪತ್ರಿಕೆಗಳನ್ನು ಓದುವಾಗ ನೀವು ಈಗಾಗಲೇ ಭಾರತದ ಸಂವಿಧಾನವನ್ನು ಓದಿರುವುದರ ಆಧಾರದ ಮೇಲೆ ಅದಕ್ಕೆ ಸಂಬಂಧಿಸಿದ ಲೇಖನ/ ವರದಿಗಳಿದ್ದರೆ ಗಮನ ಕೊಟ್ಟು ಓದಿ. ಭಾರತೀಯ ಅರ್ಥಶಾಸ್ತ್ರದ ಹಿನ್ನೆಲೆಯಲ್ಲಿರುವ ವರದಿಗಳನ್ನು ಓದಿ. ವಿಜ್ಞಾನದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕಟವಾಗುವ ಎಲ್ಲಾ ವರದಿ ಹಾಗೂ ಲೇಖನಗಳನ್ನು ಮರೆಯದೇ ಓದಿ.

l ಇತಿಹಾಸವನ್ನು ಅಧ್ಯಯನ ಮಾಡುವಾಗ ಕರ್ನಾಟಕ ಹಾಗೂ ಭಾರತ ಇತಿಹಾಸ ಎರಡನ್ನೂ ಗಮನ ಕೊಟ್ಟು ಓದಿ. ಸ್ವಾತಂತ್ರ್ಯ ಹೋರಾಟ, ಸಾಂಸ್ಕೃತಿಕ ಭಾರತ ಮತ್ತು ಸಾಂಸ್ಕೃತಿಕ ಕರ್ನಾಟಕದ ಕುರಿತಾದ ಎಲ್ಲಾ ಅಂಶಗಳನ್ನು ಗಮನ ಕೊಟ್ಟು ಓದಿ.

l ರಾಷ್ಟ್ರೀಯ ಉದ್ಯಾನವನ, ನದಿಗಳು, ಪ್ರಶಸ್ತಿಗಳು, ಇತ್ತೀಚೆಗೆ ಪ್ರಕಟವಾದ ಪುಸ್ತಕ
ಗಳು ಮತ್ತು ಅದರ ಲೇಖಕರು, ನೈಸರ್ಗಿಕ ವಿಕೋಪಗಳಾದ ಚಂಡಮಾರುತ, ಸುನಾಮಿ,
ಪ್ರವಾಹ ಮೊದಲಾದವುಗಳಿಗೆ ಸಂಬಂಧಿಸಿದ ಮಾಹಿತಿ, ಕ್ರೀಡಾರಂಗದಲ್ಲಾದ ಇತ್ತೀಚಿನ ಸಾಧನೆ ಮತ್ತು ಸಾಧಕರ ಪರಿಚಯ, ಕಲಾವಿದರ ಸಾಧನೆ, ಇತ್ತೀಚೆಗೆ ಪ್ರಕಟವಾದ ಪ್ರಶಸ್ತಿಗಳು, ಅಂತರರಾಷ್ಟ್ರೀಯ/ ರಾಷ್ಟ್ರೀಯ/ ರಾಜ್ಯದಲ್ಲಿ ಸುದ್ದಿಯಲ್ಲಿರುವ ಸ್ಥಳಗಳು ಹಾಗೂ ಮಹನೀಯರ ಬಗ್ಗೆ ಮಾಹಿತಿ, ದೇಶಗಳು, ಅವುಗಳ ರಾಜಧಾನಿ ಮತ್ತು ಸುದ್ದಿಯಲ್ಲಿರುವ ಪ್ರಮುಖ ಸ್ಥಳಗಳ ಮಾಹಿತಿ.

ತಯಾರಿ ಹೀಗಿರಲಿ..

ಈಗ ಲಭ್ಯವಿರುವ ಎರಡು ತಿಂಗಳಲ್ಲಿ ಸಂಪೂರ್ಣ ಅಧ್ಯಯನ ಮಾಡಿಕೊಂಡು ಮುನ್ನಡೆಯಬೇಕಾಗಿದೆ. ಅದಕ್ಕಾಗಿ ಹಿಂದಿನ ಪ್ರಶ್ನೆಪತ್ರಿಕೆಯನ್ನು ತಿರುವಿ ಹಾಕಿ. ಸಾಮಾನ್ಯಜ್ಞಾನ ಮತ್ತು ಸಾಮಾನ್ಯ ಕನ್ನಡ ಪರೀಕ್ಷೆಗಳ ತಯಾರಿಗೆ ಒಂದೇ ರೀತಿಯ ಮಹತ್ವ ಕೊಟ್ಟು ಓದಿ.

ಅದಕ್ಕಾಗಿ 8, 9, 10ನೇ ತರಗತಿಯ ವಿಜ್ಞಾನ ಮತ್ತು ಸಮಾಜವಿಜ್ಞಾನದ ಪುಸ್ತಕಗಳನ್ನು ಆರಂಭದಲ್ಲಿ ಓದಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ ಮತ್ತು ಆರ್ಥಿಕ ಸಮೀಕ್ಷೆಗಳನ್ನು ಓದಿ. ಇಡೀ ಪುಸ್ತಕ ಓದುವ ಅವಶ್ಯಕತೆ ಇಲ್ಲ, ಆದರೆ ಸಮೀಕ್ಷೆಯ ಸಾರಾಂಶ ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಅವುಗಳನ್ನು ತಪ್ಪದೇ ಓದಿಕೊಳ್ಳಬೇಕು. ಇದಾದ ನಂತರ ಕರ್ನಾಟಕ ಸರ್ಕಾರದ ಗ್ಯಾಜೆಟಿಯರ್‌ನಲ್ಲಿ ಪ್ರಕಟಿಸಿರುವ ‘ಕರ್ನಾಟಕದ ಕೈಪಿಡಿ’ಯ ಇತ್ತೀಚಿನ ಆವೃತ್ತಿಯಲ್ಲಿರುವ ಕರ್ನಾಟಕದ ಇತಿಹಾಸ ಮತ್ತು ಕರ್ನಾಟಕದ ಭೂಗೋಳದ ವಿಷಯವನ್ನು ಓದಿಕೊಳ್ಳಿ. ಜೊತೆಗೆ ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಜನರಲ್ ನಾಲೆಜ್‌ ವಿಷಯಗಳು ಅಲ್ಲಿ ಲಭ್ಯವಿವೆ. ಅವುಗಳನ್ನು ನೋಡಿಕೊಳ್ಳಲು ಮರೆಯಬೇಡಿ. ಸಾಮಾನ್ಯ ಕನ್ನಡ ಪತ್ರಿಕೆಗೆ ಮೈಸೂರು ವಿಶ್ವವಿದ್ಯಾಲಯದ ‘ಕನ್ನಡ ಕೈಪಿಡಿ’, ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ಸಂಕ್ಷಿಪ್ತ ನಿಘಂಟು‘ ಪರಾಮರ್ಶಿಸಿ. ಎಸ್‌ಡಿಎ ಪರೀಕ್ಷೆಗೆಂದೇ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶೇಷ ಪಾಠಗಳಿವೆ.

(ಲೇಖಕ: ನಿರ್ದೇಶಕರು, ಜ್ಞಾನಭಾರತಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT