ಮಂಗಳವಾರ, ಮೇ 11, 2021
20 °C

ಸ್ವಯಂ ಅಧ್ಯಯನ; ಪುನರಾವರ್ತನೆ ಯಶಸ್ಸಿನ ಮೂಲ

ಅರುಣ ಬ. ಚೂರಿ Updated:

ಅಕ್ಷರ ಗಾತ್ರ : | |

Prajavani

(ಮುಂದುವರಿದ ಭಾಗ)

ಸ್ವಯಂ ಅಧ್ಯಯನ ಮಾಡುವಾಗ ಕೇವಲ ಅಧ್ಯಯನದತ್ತ ಮಾತ್ರವಲ್ಲ, ಅಂಕ ಗಳಿಸಲು ನೆರವಾಗುವಂತಹ ಎಲ್ಲಾ ಅಂಶಗಳ ಬಗ್ಗೆ ಗಮನ ನೀಡುವುದು ಅಗತ್ಯ. ಹಾಗೆಯೇ ಪುನರಾವರ್ತನೆ ಕಡೆ ಪ್ರಾಮುಖ್ಯ ನೀಡಬೇಕು.

1. ಫಾರ್ಚೂನ್‌– ಫೋರ್ಸ್‌– ಫೋಕಸ್‌– (ಎಫ್‌ಎಫ್‌ಎಫ್‌)

ಫಾರ್ಚೂನ್‌: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವುದೇ ಕಾರಣಕ್ಕೂ ಉತ್ತರಿಸುವ ಸಂಖ್ಯೆಗಳನ್ನು ಹೆಚ್ಚಿಸುವ ಸಲುವಾಗಿ ಅದೃಷ್ಟವನ್ನು ನಂಬಿ ಅಂದಾಜಿನ ಮೇಲೆ ಉತ್ತರಿಸದಿರಿ. ಇದರಿಂದ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿರುವ ಕಾರಣ ಒಟ್ಟಾರೆ ಅಂಕಗಳು ಕಡಿಮೆಯಾಗುತ್ತವೆ.

ಫೋರ್ಸ್‌: ಸ್ವಯಂ ಅಧ್ಯಯನದಲ್ಲಿ ಬಹುಮುಖ್ಯವಾಗಿ ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ಹಾಗೆಂದ ಮಾತ್ರಕ್ಕೆ ಅತಿಯಾದ ಆತ್ಮವಿಶ್ವಾಸ ಕೂಡ ಒಳ್ಳೆಯದಲ್ಲ. ಪರೀಕ್ಷೆಯಲ್ಲಿ ಅತಿ ಸರಳ ಪ್ರಶ್ನೆಗಳನ್ನು ಉತ್ತರಿಸಲು ಸಾಧ್ಯವಾಗದಿದ್ದಾಗ ಹಟಕ್ಕೆ ಬಿದ್ದು ಒಂದೇ ಪ್ರಶ್ನೆಗಾಗಿ ಹೆಚ್ಚು ಸಮಯವನ್ನು ವ್ಯಯಿಸದಿರಿ. ಹೆಚ್ಚೆಚ್ಚು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರ ಮುಖಾಂತರ ಇಂತಹ ಜ್ಞಾನ ಪಡೆದುಕೊಳ್ಳಬಹುದು.

ಫೋಕಸ್‌: ನಿಮಗೆ ಯಾವ ವಿಷಯದಲ್ಲಿ ದೌರ್ಬಲ್ಯವಿದೆ ಎಂಬುದರ ಮೇಲೆ ಗಮನ ಕ್ರೋಢೀಕರಿಸಿ. ಮಿನಿ ಕ್ವಿಜ್ ಟಾಪಿಕ್ ಟೆಸ್ಟ್ ಹಾಗೂ ಮಾಕ್ ಟೆಸ್ಟ್‌ಗಳಲ್ಲಿ ನಿಮ್ಮ ದೌರ್ಬಲ್ಯ ಅಂದರೆ ಯಾವ ಟಾಪಿಕ್‌ನಲ್ಲಿ ನೀವು ಕಡಿಮೆ ಅಂಕಗಳನ್ನು ಗಳಿಸುತ್ತಿದ್ದೀರಿ ಎಂದು ಅವಲೋಕಿಸಿ ಹಾಗೂ ಆ ಟಾಪಿಕ್‌ಗಳ ಮೇಲೆ ನಿಮ್ಮ ಅಭ್ಯಾಸವನ್ನು ಹೆಚ್ಚಿಸಿಕೊಂಡು, ನೈಪುಣ್ಯವನ್ನು ಹೆಚ್ಚಿಸಿಕೊಳ್ಳಿ.

2. ಕಂಪೇರ್‌– ಕ್ರಿಟಿಸಿಸಮ್‌– ಚಾನ್ಸ್‌ (ಸಿಸಿಸಿ)

ಕಂಪೇರ್‌: ಸ್ವಯಂ ಅಧ್ಯಯನದಲ್ಲಿ ಅತ್ಯವಶ್ಯಕವಾದದ್ದು ಆತ್ಮಬಲ. ಹಾಗಾಗಿ ಅಣಕು ಪರೀಕ್ಷೆ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳಲ್ಲಿ ಬರುವ ಅಂಕಗಳನ್ನು ಇತರ ನಿಮ್ಮ ಸ್ಪರ್ಧಿಗಳೊಂದಿಗೆ ಹೋಲಿಸಿಕೊಂಡು ನಿಮ್ಮ ಆತ್ಮವಿಶ್ವಾಸ ಕುಗ್ಗಿಸಿಕೊಳ್ಳಬೇಡಿ.

ಕ್ರಿಟಿಸಿಸಮ್‌: ಪರೀಕ್ಷೆಯಲ್ಲಿ ಸಫಲರಾಗದಿದ್ದಾಗ ನಿಮ್ಮನ್ನು ನೀವೇ ಟೀಕೆಗೆ ಒಳಪಡಿಸಿಕೊಂಡು ತಕ್ಷಣ ಕಠಿಣ ಸ್ಪರ್ಧೆಯಿದೆ ಅಥವಾ ನಿರೀಕ್ಷಿತ ಮಟ್ಟದಲ್ಲಿ ತಯಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಹಾಗೂ ಇತರೆ ಸಣ್ಣ ಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಸ್ಪರ್ಧೆಯಿಂದ ದೂರ ಹೋಗಬೇಡಿ. ಬದಲಾಗಿ ನಿಮ್ಮ ವೈಫಲ್ಯಕ್ಕೆ ಕಾರಣಗಳನ್ನು ತಿಳಿದುಕೊಂಡು ಮತ್ತೆ ಅವುಗಳ ಮೇಲೆ ಅಧ್ಯಯನ ಮಾಡಿ ಪರೀಕ್ಷೆಯನ್ನು ಎದುರಿಸಿ.

ಚಾನ್ಸ್‌: ಮೊದಲ ಬಾರಿ ಪರೀಕ್ಷೆ ಎದುರಿಸುವ ಬಹುತೇಕ ಅಭ್ಯರ್ಥಿಗಳು ಮಾಡುವ ಬಹುದೊಡ್ಡ ತಪ್ಪು ಎಂದರೆ, ಇದು ನಮ್ಮ ಮೊದಲ ಪ್ರಯತ್ನ, ಇನ್ನು ಮುಂದೆ ಸಾಕಷ್ಟು ಆಯ್ಕೆಗಳಿವೆ ಎಂದು ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗೆ ಒಂದೊಂದಾಗಿ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಹೋದಂತೆ ನೋಡನೋಡುತ್ತಲೇ ನಿಮ್ಮ ಪರೀಕ್ಷೆಯ ಕೊನೆಯ ಪ್ರಯತ್ನ ಬರುವ ಸಾಧ್ಯತೆ ಇರುತ್ತದೆ. ಆಗ ಬಹಳ ಒತ್ತಡದಲ್ಲಿ ಇರುವುದರಿಂದ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಸಫಲರಾಗುವುದು ಕಷ್ಟಸಾಧ್ಯ.

3. ಸ್ಲೀಪ್‌– ಸ್ವಿಚ್‌– ಸಮರಿ (ಎಸ್‌ಎಸ್‌ಎಸ್‌) :

ನಿದ್ರೆ: ಏಕಾಗ್ರತೆಯಿಂದ ಪರೀಕ್ಷೆಗಾಗಿ ಸ್ವಯಂ ಅಧ್ಯಯನ ನಡೆಸಬೇಕೆಂದರೆ ಅತ್ಯವಶ್ಯಕವಾಗಿರುವುದು ಕನಿಷ್ಠ ಎಂಟು ಗಂಟೆಗಳ ಕಾಲ ರಾತ್ರಿಯ ನಿದ್ದೆ ಹೊರತು ಕೇವಲ ಪರೀಕ್ಷೆ ಹತ್ತಿರವಿದ್ದಾಗ ಮಾತ್ರ ಈ ನಿಯಮ ಅನುಸರಿಸುವುದು ಅಥವಾ ರಾತ್ರಿ ಪೂರ್ತಿ ಅಭ್ಯಾಸಿಸಿ ಹಗಲು ನಿದ್ರೆ ಮಾಡುವುದು ಇನ್ನಷ್ಟು ಒತ್ತಡಕ್ಕೆ ಅನುವು ಮಾಡಿಕೊಳ್ಳುತ್ತದೆಯೇ ಹೊರತು ನಿಮಗೆ ಯಾವುದೇ ರೀತಿಯ ಧನಾತ್ಮಕ ಫಲಿತಾಂಶ ದೊರಕಲಾರದು.

ಸ್ವಿಚ್‌: ಇದು ಸ್ವಯಂ ಅಧ್ಯಯನ ನಡೆಸುತ್ತಿರುವಾಗ ಬಹುಮುಖ್ಯ ಪಾತ್ರವಹಿಸುತ್ತದೆ. ಅಂದರೆ ಅವು ಅಧ್ಯಯನ ಸಾಮಗ್ರಿಗಳು, ಅದರಲ್ಲೂ ಆನ್‌ಲೈನ್ ಅಧ್ಯಯನ ಸಾಮಗ್ರಿಗಳು ಪ್ರತಿನಿತ್ಯ ನವೀಕರಣಗೊಳ್ಳುತ್ತಿರುತ್ತವೆ. ಆದರೆ ನಾವು ಆಯ್ಕೆ ಮಾಡಿಕೊಳ್ಳುವಾಗ ಅವುಗಳನ್ನು ವಿಶ್ಲೇಷಿಸಿ ನಮ್ಮ ಪರೀಕ್ಷೆಗೆ ಸಹಾಯವಾಗುವಂತವುಗಳನ್ನು ಆಯ್ಕೆಮಾಡಿಕೊಳ್ಳಬೇಕು ಹಾಗೂ ಇವುಗಳನ್ನು ಪದೇಪದೇ ಬದಲಿಸುತ್ತಿರಬಾರದು. ಇದರಿಂದ ಏಕಾಗ್ರತೆ ಕಡಿಮೆಯಾಗುವುದಲ್ಲದೆ ಸಂಪೂರ್ಣ ಅಧ್ಯಯನ ಸಾಧ್ಯವಾಗದು.

ಸಾರಾಂಶ: ಇದು ಕೊನೆಗೆ ಏಕಾಏಕಿ ತಯಾರಿಸುವಂತಹದಲ್ಲ. ಬದಲಾಗಿ ನಿಮ್ಮ ದಿನನಿತ್ಯದ ಅಧ್ಯಯನದ ಸಮಯದಲ್ಲಿ ಯಾವ ಅಂಶಗಳು ಬಹುಮುಖ್ಯ ಮತ್ತು ಯಾವ ಟಾಪಿಕ್‌ಗಳನ್ನು ನಿರಂತರ ಪುನರಾವರ್ತಿಸುವ ಅವಶ್ಯಕತೆಯಿದೆಯೆಂದು ದಿನನಿತ್ಯದ ಅಭ್ಯಾಸದ ಸಮಯದಲ್ಲಿ ತಯಾರಿಸಿ ಪರೀಕ್ಷೆ ಹತ್ತಿರವಿದ್ದಾಗ ಪುನರಾವರ್ತಿಸಬೇಕು.

4. ರೆಸ್ಟ್‌- ರಿವೈಸ್‌- ರೀಚ್‌ (ಆರ್‌ಆರ್‌ಆರ್‌)
ವಿಶ್ರಾಂತಿ: ಪರೀಕ್ಷೆಗಾಗಿ ಪ್ರಾರಂಭದಿಂದಲೂ ಸೂಕ್ತ ತಯಾರಿ ನಡೆಸಿ ಪರೀಕ್ಷೆ ಹತ್ತಿರವಿದ್ದಾಗ ಆರೋಗ್ಯದ ಸಮಸ್ಯೆ ಎದುರಿಸಿದರೆ ಸಫಲತೆ ಅಸಾಧ್ಯ. ಹಾಗಾಗಿ ಪರೀಕ್ಷೆಗೆ ತಯಾರಿ ಎಷ್ಟು ಮುಖ್ಯವೋ ಆರೋಗ್ಯ ಕೂಡ ಅಷ್ಟೇ ಮುಖ್ಯ. ಪ್ರತಿನಿತ್ಯ ನಿಗದಿತ ಸಮಯ ವಿಶ್ರಾಂತಿ ತೆಗೆದುಕೊಳ್ಳಿ. ಸಾಧ್ಯವಾದರೆ ಯೋಗಾಭ್ಯಾಸ, ಧ್ಯಾನ ಮಾಡಿ. ಇದು ನಿಮ್ಮ ಪರೀಕ್ಷೆಗೆ ಧನಾತ್ಮಕ ಫಲಿತಾಂಶವನ್ನೇ ಕೊಡುತ್ತದೆ.

ಪುನರಾವರ್ತನೆ: ಇದು ಪರೀಕ್ಷೆ ಎದುರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ದಿನದಿಂದ ದಿನಕ್ಕೆ ವಾರದಿಂದ ವಾರಕ್ಕೆ , ವಿಷಯ ಅಧ್ಯಯನದ ಕೊನೆಗೆ ಹಾಗೂ ನಿಮಗೆ ಕಷ್ಟ ಎನಿಸುವ ವಿಷಯಗಳನ್ನು ಒಂದೆಡೆ ನೋಟ್ ಮಾಡಿಕೊಂಡು ಪರೀಕ್ಷೆ ಹತ್ತಿರವಿದ್ದಾಗ ಪುನರಾವರ್ತನೆ ಮಾಡಿ ಮತ್ತು ನಿಮಗೆ ಸುಲಭ ಎನಿಸುವ ವಿಷಯಗಳನ್ನು ಓದದೇ ಇರಬೇಡಿ. ಕಾರಣ ಬಹಳ ದಿನಗಳ ಅಂತರವಾದರೆ ಸುಲಭದ ಪ್ರಶ್ನೆಗಳನ್ನು ಎದುರಿಸಲು ಸಹ ಗೊಂದಲ ಉಂಟಾಗಬಹುದು. ಹಾಗಾಗಿ ಇಂತಹ ವಿಷಯಗಳನ್ನು ಕೂಡ ಒಮ್ಮೆಯಾದರೂ ಪುನರಾವರ್ತಿಸಿ.

ರೀಚ್‌: ಒಟ್ಟಿನಲ್ಲಿ ನಿಮ್ಮ ಗುರಿ ತಲುಪಲು ಒಂದು ತಂತ್ರವನ್ನು ತಯಾರಿಸಿ, ಅದನ್ನು ಹಂತಹಂತವಾಗಿ ವಿಂಗಡಿಸಿ, ಒಂದೊಂದಾಗಿ ಪೂರ್ಣಗೊಳಿಸುತ್ತಾ ಬನ್ನಿ. ಸಾಮಾಜಿಕ ಮಾಧ್ಯಮಗಳನ್ನು ನಿಮ್ಮ ಆನ್‌ಲೈನ್ ಅಧ್ಯಯನಕ್ಕೆ ಸೂಕ್ತವಾಗುವಂತೆ ಬಳಸಿಕೊಳ್ಳಿ. ಪರೀಕ್ಷೆ ಸಫಲತೆ ಒಂದನ್ನೇ ಗುರಿಯಾಗಿಸಿಕೊಂಡು ನಿಮ್ಮ ಪರಿಶ್ರಮದೊಂದಿಗೆ ನಿರಂತರವಾಗಿ ಪ್ರಯತ್ನ ಮುಂದುವರೆಸಿದಲ್ಲಿ ನಿಮ್ಮ ಗುರಿ ತಲುಪುವುದು ಸುಲಭ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು