ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್‌.ಡಿಗೆ 6 ವರ್ಷ ಅವಕಾಶ: ಮೈಸೂರು ವಿ.ವಿ ಶಿಕ್ಷಣ ಮಂಡಳಿ ಅಸ್ತು

Last Updated 23 ಸೆಪ್ಟೆಂಬರ್ 2022, 9:24 IST
ಅಕ್ಷರ ಗಾತ್ರ

ಮೈಸೂರು: ಆರು ವರ್ಷಗಳವರೆಗೆ ಅವಕಾಶ ನೀಡುವುದು ಸೇರಿದಂತೆ ಹಲವು ಮಾರ್ಪಾಡುಗಳನ್ನು ಒಳಗೊಂಡಿರುವ ‘ಪಿಎಚ್‌.ಡಿ. ನಿಯಮಾವಳಿಗಳು–2022’ಕ್ಕೆ ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿಯ 2ನೇ ಸಾಮಾನ್ಯ ಸಭೆ ಅನುಮೋದನೆ ನೀಡಿತು.

ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ಅಧ್ಯಕ್ಷತೆಯಲ್ಲಿ ಮಾನಸ ಗಂಗೋತ್ರಿಯ ಲಲಿತ ಕಲಾ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಂಡಿಸಿದ್ದ ನಿಯಮಾವಳಿಗಳಿಗೆ ಸಭೆಯು ಅಸ್ತು ಎಂದಿತು.

2017ರ ನಂತರ ನಿಯಮಾವಳಿಗೆ ಆಗಿರುವ ತಿದ್ದುಪಡಿಗಳನ್ನು ಅಳವಡಿಸಿಕೊಳ್ಳಲು ವ್ಯವಹಾರ ಅಧ್ಯಯನ ವಿಭಾಗದ ಪ್ರೊ.ಡಿ.ಆನಂದ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ಸಲ್ಲಿಸಿದ್ದ ನಡಾವಳಿಯನ್ನು ಶಿಕ್ಷಣ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಯಿತು.

‘ಹೊಸ ನಿಯಮಾವಳಿಗೆ ಅ.12ರಂದು ನಡೆಯುವ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು. ಇದು 2022–23ನೇ ಸಾಲಿನಿಂದಲೇ ಜಾರಿಗೆ ಬರಲಿದ್ದು, ಹೊಸದಾಗಿ ಪಿಎಚ್‌.ಡಿ ಮಾಡಲು ಬಯಸುವವರಿಗೆ ಅನ್ವಯವಾಗಲಿದೆ’ ಎಂದು ಕುಲಪತಿ ಹೇಮಂತ್‌ಕುಮಾರ್‌ ಪ್ರಕಟಿಸಿದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್‌ ತಿದ್ದುಪಡಿಗಳ ಬಗ್ಗೆ ಮಾಹಿತಿ ನೀಡಿದರು.

ತಿದ್ದುಪಡಿಗಳೇನು?

* ಹಿಂದೆ ಪಿಎಚ್‌.ಡಿ. ಮುಗಿಸಲು 5+2 ವರ್ಷ ಅವಕಾಶವಿತ್ತು. ಇದನ್ನು 6+1 ವರ್ಷಕ್ಕೆ ಬದಲಿಸಲಾಗಿದೆ. ಅಭ್ಯರ್ಥಿಯು 5 ವರ್ಷಗಳಾದ ಬಳಿಕವೂ ಮುಗಿಸದಿದ್ದಲ್ಲಿ ವಿಸ್ತರಣೆಗೆ ಸರಾಸರಿ ₹ 30ಸಾವಿರ ಶುಲ್ಕ ಕಟ್ಟಬೇಕಾಗುತ್ತಿತ್ತು. ಈಗ, ಆರು ವರ್ಷಗಳಿಗೆ ಅವಕಾಶವಿರಲಿದೆ. 6 ವರ್ಷ ದಾಟಿದರೆ ವಿಸ್ತರಣೆಗೆ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಮಹಿಳೆಯರು ಹಾಗೂ ದೈಹಿಕ ನ್ಯೂನತೆಯುಳ್ಳವರಿಗೆ ಮತ್ತೆರಡು ವರ್ಷ ಅವಕಾಶ ನೀಡಲು ಉಲ್ಲೇಖಿಸಲಾಗಿದೆ. ಆದರೆ, ಫೆಲೋಶಿಪ್ ಅನ್ನು 4 ವರ್ಷಗಳವರೆಗೆ ಮಾತ್ರ ಕೊಡಲಾಗುತ್ತದೆ.

* ಮಾರ್ಗದರ್ಶಕರು: ಪ್ರಾಧ್ಯಾಪಕರಾಗಿದ್ದಲ್ಲಿ ಗರಿಷ್ಠ 12 ಮಂದಿಗೆ ಗೈಡ್ ಮಾಡಲು ಅವಕಾಶವಿದೆ. 8ರೊಂದಿಗೆ 4 ಸೂಪರ್‌ ನ್ಯೂಮರರಿ (ಇಬ್ಬರು ವಿದೇಶಿಯರು, ಒಬ್ಬ ದೈಹಿಕ ನ್ಯೂನತೆಯುಳ್ಳುವರು ಹಾಗೂ ಒಬ್ಬರು ಹೈದರಾಬಾದ್ ಕರ್ನಾಟಕ) ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಬಹುದು. ಆದರೆ, ನಿರ್ದಿಷ್ಟ ವರ್ಗದವರು ಬಾರದಿದ್ದರೆ ಸಾಮಾನ್ಯ ವರ್ಗದವರಿಗೆ ಅನ್ವಯಿಸಿಕೊಳ್ಳುವಂತಿಲ್ಲ. ಸಹ ಪ್ರಾಧ್ಯಾಪಕರಿಗೆ 6+4 ಹಾಗೂ ಸಹಾಯಕ ಪ್ರಾಧ್ಯಾಪಕರಿಗೆ 4+4ಗೆ ಅವಕಾಶವಿದೆ.

* ವಿಶ್ವವಿದ್ಯಾಲಯದಲ್ಲಿ ನಡೆದಿರುವ ಯಾವುದಾದರೂ ರಾಷ್ಟ್ರೀಯ ಮಟ್ಟದ ಯೋಜನೆಯಲ್ಲಿ ಐದು ವರ್ಷ ಕಾರ್ಯನಿರ್ವಹಿಸಿರುವವರಿಗೆ ಗೈಡ್ ಆಗುವುದಕ್ಕೆ ಅವಕಾಶವಿದೆ (ಆ ಯೋಜನೆಯು ಮುಂದುವರಿಯುವಂತಿದ್ದಲ್ಲಿ ಮಾತ್ರ).

ವಿವರಣಾತ್ಮಕ ಉತ್ತರದ ಅಗತ್ಯವಿಲ್ಲ!

* ಪಿಎಚ್‌.ಡಿ. ಪದವಿಗೆ ಪ್ರವೇಶ ಪರೀಕ್ಷಾ ಕ್ರಮದಲ್ಲೂ ಬದಲಾವಣೆ ಮಾಡಲಾಗಿದೆ. ಹಿಂದೆ, 100 ಅಂಕಗಳಲ್ಲಿ 50 ಅಂಕಗಳ ಪ್ರಶ್ನೆಗಳಿಗೆ ವಿವರಣಾತ್ಮಕ ಉತ್ತರ (ಡಿಸ್ಕ್ರಿಪ್ಟಿವ್) ಮತ್ತು 50 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳಿರುತ್ತಿದ್ದವು (ಎಂಸಿಕ್ಯೂ). ತಿದ್ದುಪಡಿ ನಿಯಮಾವಳಿಯಲ್ಲಿ, 100 ಅಂಕಗಳಿಗೂ ಎಂಸಿಕ್ಯೂ ಪ್ರಶ್ನೆಗಳೇ ಇರುತ್ತವೆ. ರಾಷ್ಟ್ರಮಟ್ಟದ ಪರೀಕ್ಷೆಗಳೆಲ್ಲವೂ ಇದೇ ಮಾದರಿಯಲ್ಲಿ ನಡೆಯುತ್ತಿರುವುದರಿಂದ ಇಲ್ಲೂ ಅಳವಡಿಸಿಕೊಳ್ಳಲಾಗಿದೆ. ಡೀನ್‌ಗಳ ಅಭಿಪ್ರಾಯವನ್ನು ಪರಿಗಣಿಸಲಾಗಿದೆ.

* ಕೋರ್ಸ್‌ ವರ್ಕ್‌ ಸಲ್ಲಿಕೆಯ ಅವಧಿಯನ್ನು 20 ವಾರಗಳ ಬದಲಿಗೆ 16 ವಾರಕ್ಕೆ ಇಳಿಸಲಾಗಿದೆ.

* ಸಂಶೋಧನೆ ಮತ್ತು ಪ್ರಕಟಣೆ ನೈತಿಕತೆ (ರಿಸರ್ಚ್‌ ಅಂಡ್ ಪಬ್ಲಿಕೇಷನ್ ಎಥಿಕ್ಸ್‌) ಕೋರ್ಸ್‌ ಅನ್ನು ಹೊಸದಾಗಿ ಪರಿಚಯಿಸಲಾಗಿದೆ.

* ಅಭ್ಯರ್ಥಿಗಳು ಸಲ್ಲಿಸುವ ಮಹಾಪ್ರಬಂಧ ಮೊದಲಾದವುಗಳನ್ನು ವಿಭಾಗಗಳ ಮುಖ್ಯಸ್ಥರು 15 ದಿನಗಳೊಳಗೆ ಕಡ್ಡಾಯವಾಗಿ ಮುಂದಿನ ಕ್ರಮಕ್ಕಾಗಿ ಸಲ್ಲಿಸಬೇಕು. ಪ್ರಕ್ರಿಯೆಗಳನ್ನು ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಬೇಕು.

* ಒಂದು ವೇಳೆ ಗೈಡ್ ಅಕಾಲಿಕ ನಿಧನವಾದಲ್ಲಿ, ಅವರ ಬಳಿ ಸಂಶೋಧನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಇತರರಿಗೆ ಹಂಚಿಕೆ ಮಾಡಲು ಸಮಿತಿ ರಚಿಸಲು ಅವಕಾಶ ಕಲ್ಪಿಸಲಾಗಿದೆ.

* ಐಎಸ್‌ಎಸ್‌ಎನ್‌ (ಇಂಟರ್‌ನ್ಯಾಷನಲ್‌ ಸ್ಟಾಂಡರ್ಡ್‌ ಸೀರಿಯಲ್ ನಂಬರ್) ಇರುವ ಜರ್ನಲ್‌ನಲ್ಲಿ 2 ಪೇಪರ್‌ಗಳು ಪ್ರಕಟವಾಗಿದ್ದರೆ ಹಾಗೂ ಒಂದು ಪೇಪರ್‌ ವಿಚಾರಸಂಕಿರಣದ ನಡಾವಳಿಯಲ್ಲಿ ಪ್ರಕಟವಾಗಿದ್ದರೆ ಮಾತ್ರ ಪಿಎಚ್‌.ಡಿ. ಪದವಿ ಅಂಗೀಕಾರಕ್ಕೆ ಪರಿಗಣಿಸಲಾಗುತ್ತದೆ.

* ಸಂಶೋಧನಾ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಮುಚ್ಚಿಸಲಾಗುತ್ತದೆ.

‘ಗುಣಮಟ್ಟದ ಸಂಶೋಧನೆಗೆ ಒತ್ತು ನೀಡಬೇಕು. ಅಕ್ರಮಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಬೇಕು’ ಎಂದು ಮಂಡಳಿಯ ಸದಸ್ಯರು ಒತ್ತಾಯಿಸಿದರು.

ಕುಲಸಚಿವ ಆರ್.ಶಿವಪ್ಪ, ಹಣಕಾಸು ಅಧಿಕಾರಿ ಡಾ.ಸಂಗೀತಾ ಗಜಾನನ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT