ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗದ ಓದಿಗೆ ಸ್ಕಿಮ್ಮಿಂಗ್ ತಂತ್ರ

Last Updated 7 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವಾಗ, ಕಡಿಮೆ ಅವಧಿಯಲ್ಲಿ ಹೆಚ್ಚು ಅಂಶಗಳನ್ನು ಓದುವುದು ಅನಿವಾರ್ಯವಾಗುತ್ತದೆ. ಇಂತಹ ವೇಳೆಯಲ್ಲಿ ವೇಗದ ಓದಿಗೆ ಪೂರಕವಾದ ತಂತ್ರಗಾರಿಕೆ ಅನುಸರಿಸಬೇಕಾದ ಅನಿವಾರ್ಯತೆ ಬರುತ್ತದೆ. ವೇಗದ ಓದಿಗೆ ಪೂರಕವಾದ ತಂತ್ರಗಾರಿಕೆಯೇ ಸ್ಕಿಮ್ಮಿಂಗ್.

ಸ್ಕಿಮ್ಮಿಂಗ್ ಎನ್ನುವುದು ಓದುವ ಪಠ್ಯದಲ್ಲಿನ ಮೂಲ ಕಲ್ಪನೆಯನ್ನು ಸಂಗ್ರಹಿಸಲು ಬಳಸುವ ಕ್ರಿಯೆಯಾಗಿದೆ. ಪಠ್ಯದಲ್ಲಿ ನಮ್ಮ ನಿರ್ದಿಷ್ಟ ಓದಿಗೆ ಬೇಕಾದ ಅಂಶಗಳಿವೆಯೇ, ಇಲ್ಲವೇ ಎಂಬುದನ್ನು ಕಣ್ಣಾಡಿಸುವ ಮೂಲಕ ಪ್ರಮುಖಾಂಶಗಳನ್ನು ಹುಡುಕುವ ಕ್ರಿಯೆಯೇ ‘ಸ್ಕಿಮ್ಮಿಂಗ್’. ಪಠ್ಯವನ್ನು ಸ್ಕಿಮ್ಮಿಂಗ್ ಮಾಡುವುದು ಎಂದರೆ ಪಠ್ಯದ ಮುಖ್ಯ ಕಲ್ಪನೆ ಅಥವಾ ಸಾರಾಂಶವನ್ನು ಪಡೆಯಲು ಅದನ್ನು ವೇಗವಾಗಿ ಓದುವುದು ಎಂದರ್ಥ. ಓದಬೇಕಾದ ಪಠ್ಯದಲ್ಲಿನ ಸಾಮಾನ್ಯ ಸಂಗತಿಗಳಿಗಿಂತ ವಿಶೇಷ ಸಂಗತಿಗಳು ಅಥವಾ ವಿಶೇಷ ಮಾಹಿತಿಗಳನ್ನು ಹುಡುಕುವ ಪ್ರಕ್ರಿಯೆಯೂ ಹೌದು.

ಸ್ಕಿಮ್ಮಿಂಗ್ ಮಾಡುವಾಗ ಪಠ್ಯದಲ್ಲಿನ ಅಂಕಿ-ಅಂಶಗಳನ್ನು, ವಿವರವಾದ ಮಾಹಿತಿಯನ್ನು ಸಂಪೂರ್ಣವಾದ ಕಥೆಗಳನ್ನು ಉದ್ದೇಪೂರ್ವಕವಾಗಿಯೇ ಕೈಬಿಡಲಾಗುತ್ತದೆ. ಏಕೆಂದರೆ ಸ್ಕಿಮ್ಮಿಂಗ್ ಕೇವಲ ಪ್ರಮುಖ ಅಂಶಗಳತ್ತ ಚಿತ್ತ ಹರಿಸುವ ತಂತ್ರವಾಗಿದೆ. ಈ ತಂತ್ರದಲ್ಲಿ ಪ್ರತಿ ಪದಗಳನ್ನು ಓದುವ ಬದಲು ನಮಗೆ ಬೇಕಾದ ಅಂಶಗಳತ್ತ ಮಾತ್ರ ಗಮನ ಹರಿಸಬೇಕು. ಪ್ಯಾರಾದ ಪ್ರಾರಂಬದ ಪದಗಳು ಮತ್ತು ಕೊನೆ ಪದಗಳನ್ನು ಗಮನಿಸಿದರೆ ಇಡೀ ಪ್ಯಾರಾದ ಸಾರಾಂಶವನ್ನು ಗ್ರಹಿಸಬಹುದು. ಪಠ್ಯದಲ್ಲಿನ ದಪ್ಪ ಅಕ್ಷರಗಳತ್ತ ಚಿತ್ತ ಹರಿಸುವುದರಿಂದ ಪದಗಳ ನಡುವಿನ ಹೊಂದಣಿಕೆ ಮತ್ತು ಅರ್ಥವನ್ನು ಗ್ರಹಿಸಬಹುದು. ಇದರಿಂದ ಸಮಯ ಉಳಿತಾಯವಾಗುತ್ತದೆ.

ಸ್ಕಿಮ್ಮಿಂಗ್ ಯಾಕೆ ಬೇಕು?

• ಓದಿನ ವೇಗವನ್ನು ಹೆಚ್ಚಿಸುತ್ತದೆ.

• ಓದಿಗೆ ಖಚಿತತೆ ನೀಡುತ್ತದೆ.

• ಪ್ರಮುಖಾಂಶಗಳ ಓದಿಗೆ ಹೆಚ್ಚು ಪೂರಕ.

• ಪೂರ್ವಜ್ಞಾನವನ್ನು ಸ್ಮರಿಸಿಕೊಳ್ಳಲು ಸಹಾಯಕ.

• ಸಮಯವನ್ನು ಉಳಿಸುತ್ತದೆ.

• ಓದಿಗೆ ನಿರ್ದಿಷ್ಟತೆ ಸಿಗುತ್ತದೆ.

ಅನುಸರಿಸಬೇಕಾದ ಕ್ರಮಗಳು

• ಮೊದಲು ಶೀರ್ಷಿಕೆ ಓದಿ. ಸಾಮಾನ್ಯವಾಗಿ ಶೀರ್ಷಿಕೆಗಳು ನಿಮಗೆ ಪಠ್ಯದ ಪ್ರಮುಖ ಕಲ್ಪನೆಯನ್ನು ನೀಡುತ್ತವೆ. ಶೀರ್ಷಿಕೆಯಲ್ಲೇ ಈ ಮಾಹಿತಿ ನಿಮಗೆ ಅನ್ವಯವಾಗುವದಿಲ್ಲ ಎನ್ನುವುದು ತಿಳಿದರೆ ಅದನ್ನು ಬಿಟ್ಟು ಬೇರೆಯ ಪಠ್ಯವನ್ನು ಓದಬಹುದು.

• ನಂತರ ಪಠ್ಯದ ಉಪ ಶೀರ್ಷಿಕೆಗಳನ್ನು (ಯಾವುದಾದರೂ ಇದ್ದರೆ) ಓದಿ. ಇದು ಪಠ್ಯ ಏನಿದೆ ಎಂಬುದರ ಕುರಿತು ಮೂಲಭೂತ ಕಲ್ಪನೆಯನ್ನು ನೀಡುತ್ತದೆ.

• ಪಠ್ಯದ ಮೊದಲ ಪ್ಯಾರ ಓದಿ. ಇದು ಪಠ್ಯದ ಪೂರ್ವ ಪೀಠಿಕೆಯಾಗಿರುತ್ತದೆ. ಓದುವ ಪಠ್ಯದ ಅಗತ್ಯತೆಯನ್ನು ತಿಳಿಸುತ್ತದೆ.
• ನಂತರ ಪಠ್ಯದ ಮೊದಲ ಕೆಲವು ಸಾಲುಗಳನ್ನು ಓದಿ. ಇದು ನಿಮಗೆ ಪಠ್ಯದ ಸಾರಾಂಶವನ್ನು ನೀಡುತ್ತದೆ.

• ಎಲ್ಲಾ ಪ್ಯಾರಾಗಳ ಮೊದಲ ಸಾಲುಗಳನ್ನೂ ಓದಬಹುದು ಮತ್ತು ಪಠ್ಯದ ಕುರಿತು ಹೆಚ್ಚಿನ ವಿಚಾರಗಳನ್ನು ಪಡೆಯಲು ಅವುಗಳಲ್ಲಿ ದಪ್ಪ ಅಕ್ಷರಗಳ ಪದಗಳ ಮೇಲೆ ಗಮನ ಕೇಂದ್ರೀಕರಿಸಬಹುದು.

• ನೀವು ಮಾಹಿತಿ ಹುಡುಕುತ್ತಿರುವ ಪ್ರಮುಖ ಪದ/ಪದಗುಚ್ಛಗಳ ಮೇಲೆ ಗಮನ ಕೇಂದ್ರೀಕರಿಸಿ.

• ಪ್ರಮುಖ ಮಾಹಿತಿ/ಅಂಶಗಳನ್ನು ಹೈಲೈಟ್ ಮಾಡಿ ಅಥವಾ ಕೆಳಗೆ ಗೆರೆ ಎಳೆದು ಗುರುತಿಸಿಕೊಳ್ಳಿ.

• ಪ್ಯಾರಾದ ಮೊದಲ ಸಾಲು ಓದಿದಂತೆ ಪ್ಯಾರಾದ ಕೊನೆಯ ಸಾಲನ್ನೂ ಗಮನಿಸಿ.

• ಪಠ್ಯದ ಕೊನೆಯ ಭಾಗದ ಮೇಲೆ ಗಮನ ಹರಿಸಿ. ಅದು ಇಡೀ ಪಠ್ಯದ ಅಂತಿಮ ತೀರ್ಮಾನವನ್ನು ತಿಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT