ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳನ್ನು ಒತ್ತಡದ ಕೂಪಕ್ಕೆ ನೂಕುವ ಮುನ್ನ...

ಸವಿತಾ ಯಾಜಿ
Published 16 ಜೂನ್ 2024, 23:47 IST
Last Updated 16 ಜೂನ್ 2024, 23:47 IST
ಅಕ್ಷರ ಗಾತ್ರ
ನಮ್ಮ ಮಕ್ಕಳ ಬಗ್ಗೆ ವ್ಯಾಮೋಹ ಇರುವುದು ತೀರಾ ಸಹಜ. ಅಂತೆಯೇ ಅವರು ಕೇವಲ ನಮ್ಮವರೇ ಆಗಿ ಉಳಿಯುವುದಿಲ್ಲ. ಅವರು ದೇಶದ, ವಿಶ್ವದ ಅಮೂಲ್ಯ ಸಂಪತ್ತಾಗಿ ರೂಪುಗೊಳ್ಳುತ್ತಾರೆ. ಒಳ್ಳೆಯ ಮಕ್ಕಳಿಂದ ಒಳ್ಳೆಯ ಸಮಾಜ, ಒಳ್ಳೆಯ ದೇಶ, ಒಳ್ಳೆಯ ಪ್ರಪಂಚ ನಿರ್ಮಾಣವಾಗುತ್ತದೆ.

ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳು ಓದಿನಲ್ಲಿ ಇತರ ಚಟುವಟಿಕೆಗಳಲ್ಲಿ ಎಲ್ಲರಿಗಿಂತ ಮುಂದಿರಬೇಕು ಎಂಬ ಆಸೆ ಇದ್ದೇ ಇರುತ್ತದೆ.  ಮಕ್ಕಳ ಲಾಲನೆ-ಪಾಲನೆಯಲ್ಲಿ, ವಿದ್ಯಾಭ್ಯಾಸದಲ್ಲಿ ಪೋಷಕರ ಪಾತ್ರ ತುಂಬಾ ಮುಖ್ಯ. ಇವತ್ತಿನ ಜಂಜಡದ ಜೀವನದಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಗಡಿಬಿಡಿಯಲ್ಲಿ ಶಾಲೆಗೆ ತಯಾರಾಗುವ ಮಕ್ಕಳು ಅಲ್ಲಿ 5ರಿಂದ 6 ತಾಸು ಪಾಠ ಕೇಳಿ, ಮನೆಗೆ ಮರಳಿದ ನಂತರ ಮತ್ತೆ ಮನೆಪಾಠಕ್ಕೆ ಹೋಗುತ್ತಾರೆ. ಎಲ್.ಕೆ.ಜಿ., ಯು.ಕೆ.ಜಿಯಿಂದಲೇ ಮನೆಪಾಠದ ಅವಶ್ಯಕತೆ ಇದೆಯೇ?

ತಂದೆ-ತಾಯಿಗಳ, ಕುಟುಂಬದವರ ನಡುವೆ ಆಟ ಆಡುತ್ತಾ ಬಾಲ್ಯವನ್ನು ಕಳೆಯಬೇಕಾದ ಮಗು ಪಾಲಕರ ಒತ್ತಾಯಕ್ಕೆ ಮಣಿದು, ತನ್ನ ಆಸೆ-ಆಕಾಂಕ್ಷೆಯನ್ನು ಬಲಿಕೊಟ್ಟು ತನಗೆ ಇಷ್ಟ ಇಲ್ಲದ ಚಟುವಟಿಕೆಯಲ್ಲಿ ಭಾಗವಹಿಸಿ ಬಾಲ್ಯವನ್ನು ಕಳೆದುಕೊಳ್ಳಬೇಕೆ?

ಹೆತ್ತವರು ತಮ್ಮ ಆಸಕ್ತಿ, ಅಭಿರುಚಿ, ಇಷ್ಟವನ್ನು ಮಗುವಿನ ಮೇಲೆ ಹೇರುತ್ತಾರೆ. ಮಗುವಿನ ಸಹಜ ಅಭಿರುಚಿಗಳನ್ನು  ಅರಿತು, ಅದಕ್ಕೆ ತಕ್ಕುದಾದ ಪ್ರೋತ್ಸಾಹ ನೀಡಬೇಕು. ಕೈ ಹಿಡಿದು ನಡೆಸಬೇಕು, ಎಡವಿದರೆ ಕೈ ಹಿಡಿದು ಎತ್ತಬೇಕು. ಕ್ರಮೇಣ ತನ್ನ ದಾರಿಯನ್ನು ತೋರಿಸಿ ಮುಂದುವರೆಯಲು ಬಿಟ್ಟುಬಿಡಬೇಕು.

ಆದರೆ ಹೆತ್ತವರು ಮಾಡುವ ತಪ್ಪೇನೆಂದರೆ ಎಂಜಿನಿಯರ್, ಡಾಕ್ಟರ್ ಆಗಬೇಕೆಂದು ನಿರೀಕ್ಷಿಸುವುದು. ಮಕ್ಕಳಿಗೂ ತಮ್ಮ ವೃತ್ತಿಯನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಿ ಅವರನ್ನು ಪ್ರೋತ್ಸಾಹಿಸಬೇಕು.

ಮಕ್ಕಳು ಸೋತಾಗ, ಅವಮಾನಕ್ಕೆ ತುತ್ತಾದಾಗ, ಅನುತೀರ್ಣರಾದಾಗ ಹೆತ್ತವರು ಸಹಾನುಭೂತಿ ತೋರಬೇಕು. ಶಿಕ್ಷಿಸಬಾರದು. ಶಿಕ್ಷೆಯಿಂದಲೇ ಮಕ್ಕಳಿಗೆ ಒಳ್ಳೆಯ ವಿದ್ಯೆ ಬುದ್ಧಿ ಕಲಿಸಬಹುದು ಎಂಬ ತಪ್ಪು ಅಭಿಪ್ರಾಯವಿದೆ. ಹೆತ್ತವರು ಶಿಕ್ಷೆಯನ್ನು ಸಾಕಷ್ಟು ಕಡಿಮೆ ಮಾಡಿ ಸಂದರ್ಭ ಬಂದಾಗಲೆಲ್ಲ ಮಕ್ಕಳ ಸದ್ವರ್ತನೆಗಳನ್ನು ಕೊಂಡಾಡಿ ಉತ್ತೇಜನ ನೀಡಿ ಸುಧಾರಣೆಯಾಗುವಂತೆ ನೋಡಿಕೊಳ್ಳಬೇಕು.

ಓದು ಗರಿಷ್ಠ ಅಂಕ ತೆಗಿ, ಪ್ರಥಮ ಬಹುಮಾನ  ತರಬೇಕು; ಇಲ್ಲವಾದರೆ ಮನೆಗೆ ಬರಬೇಡ ಎಂದು ಮಕ್ಕಳ ಮೇಲೆ ವಿಪರೀತ ಒತ್ತಡ ಹೇರಬಾರದು. ಯಶಸ್ಸಿನ ಭರವಸೆ ತುಂಬಿ, ಸೋಲಿನ ಭಯವನ್ನು ಮಕ್ಕಳ ‌ ಮನದಿಂದ ದೂರ ಮಾಡಿ, ನೀನೂ ಕಲಿಯಬಲ್ಲೆ, ನೀನಿದನ್ನು ಸಾಧಿಸಬಲ್ಲೆ ಎಂಬ ಭರವಸೆಯ ಭಾವವನ್ನು ಮಕ್ಕಳಲ್ಲಿ ತುಂಬಬೇಕು.

ಮಕ್ಕಳು ಗಳಿಸುವ ಅಂಕಗಳೇ ಸರ್ವಸ್ವವಲ್ಲ. ಅಂಕಗಳೇ ವಿದ್ಯಾರ್ಥಿಗಳ ಬುದ್ಧಿಶಕ್ತಿ, ಸೃಜನಶೀಲತೆಯನ್ನು ನಿರ್ಧರಿಸುವುದಿಲ್ಲ. ಹಾಗೆಯೇ ಇಬ್ಬರು ಮಕ್ಕಳ ನಡುವೆ ತುಲನೆ ಮಾಡುವುದು. ಸರಿಯಲ್ಲ. ಒಬ್ಬೊಬ್ಬರಲ್ಲೂ ಒಂದೊಂದು ವಿಶಿಷ್ಟ ಗುಣವಿರುತ್ತದೆ. ಅಂಕಗಳಿಗಿಂತ ಮುಖ್ಯವಾದದ್ದು ಯಶಸ್ವೀ ಜೀವನಕ್ಕೆ ಲೋಕಜ್ಞಾನ, ವ್ಯವಹಾರಜ್ಞಾನ, ಅನುಭವ ಎನ್ನುವುದನ್ನು ಪೋಷಕರು ಅರಿಯಬೇಕು.

ಅನೇಕ ಹೆತ್ತವರು ಶಾಲೆಗೆ ಸೇರಿಸಿದ ದಿನದಿಂದಲೇ ತಮ್ಮ ಮಕ್ಕಳು ಅದ್ಭುತವಾದ ಸಾಧನೆ ಮಾಡಬೇಕೆಂದು ನಿರೀಕ್ಷಿಸುತ್ತಾರೆ. ಪ್ರತಿಯೊಂದು ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಬೇಕು; ಪ್ರತಿಯೊಂದು ಸ್ಪರ್ಧೆಯಲ್ಲೂ ಬಹುಮಾನಗಳನ್ನು ಗಳಿಸಬೇಕು ಎಂದು ಅಪೇಕ್ಷಿಸುತ್ತಾರೆ. ಆದರೆ ಸಾಧನೆಯ ಪ್ರಮಾಣವು ಎಲ್ಲಾ ಸಂದರ್ಭಗಳಲ್ಲಿ ಒಂದೇ ಬಗೆಯಾಗಿರುವುದಿಲ್ಲ.

ಕೆಲವು ಮಕ್ಕಳು ಬೇಗ ಬೇಗನೇ ಪ್ರಗತಿ ಸಾಧಿಸುತ್ತ ಅಸಾಧಾರಣ ಪ್ರತಿಭಾವಂತರೆನ್ನಿಸಿಕೊಂಡು ಆಮೇಲೆ ಒಮ್ಮೆಲೆ ರಂಗದಿಂದ ಕಣ್ಮರೆಯಾಗುವ, ಹೇಳ ಹೆಸರಿಲ್ಲದಂತಾಗಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಮತ್ತೆ ಕೆಲವರು ಬಾಲ್ಯ ಕಾಲದಲ್ಲಿ ತೀರ ಸಾಮಾನ್ಯ ಮಟ್ಟದಲ್ಲಿದ್ದು ಹರೆಯಕ್ಕೆ ಬಂದ ಮೇಲೆ ವಿಶೇಷ ಸಾಧನೆ ಮಾಡುತ್ತಿರುವುದು ನಮ್ಮ ಕಣ್ಮುಂದಿವೆ. ಇದನ್ನು ಹಿರಿಯರು ಅರ್ಥಮಾಡಿಕೊಂಡು ಮಕ್ಕಳ ಪ್ರಗತಿ, ಸಾಧನೆ ಬಗ್ಗೆ ತಾಳ್ಮೆಯಿಂದ ಕಾಯಬೇಕು. ಇವತ್ತು ಬಿತ್ತಿದ ಬೀಜ ನಾಳೆಯೇ ಗಿಡವಾಗಿ ನಾಡಿದ್ದು ಫಲ ಕೊಡಬೇಕೆಂದರೆ ಹೇಗೆ? ಅಂತೆಯೇ ಮಕ್ಕಳು ಬೇಗನೆ ಸಾಧನೆ ಮಾಡಬೇಕೆಂದು ನಿರೀಕ್ಷಿಸಿ ಅವರ ಮೇಲೆ ಒತ್ತಡ ಹೇರಬಾರದು. ಅವರು ಸಹಜಗತಿಯಲ್ಲಿ ಅರಳುವುದಕ್ಕೆ ಸನ್ನಿವೇಶ ನಿರ್ಮಾಣ ಮಾಡುವುದಷ್ಟೇ ಪೋಷಕರ ಕರ್ತವ್ಯ.

ಟಿ.ವಿ, ಮೊಬೈಲ್‌ಗಳನ್ನು ನೋಡಲೇಬಾರದು ಎಂದು ಮಕ್ಕಳಿಗೆ ತಾಕೀತು ಮಾಡುವುದು ಸೂಕ್ತವಲ್ಲ. ಈ ಮಾಧ್ಯಮಗಳು ಅನೇಕ  ಶೈಕ್ಷಣಿಕ ಮಹತ್ವದ ವಿಚಾರಗಳನ್ನು ಪ್ರಸಾರ ಮಾಡುತ್ತವೆ. ಯಾವುದನ್ನು ಎಷ್ಟು ಹೊತ್ತು ನೋಡಬೇಕು ಎಂಬುದನ್ನು ಹಿರಿಯರು ನಿರ್ಧರಿಸಬೇಕು. ಮಕ್ಕಳು ಓದುವ ಸಮಯದಲ್ಲಿ ಹಿರಿಯರೂ ನೋಡಬಾರದು.

ಕಾರ್ಯಕ್ರಮಗಳ ಇತಿಮಿತಿ ಅದರ ದುಷ್ಪರಿಣಾಮಗಳು ಇತ್ಯಾದಿಗಳ ಬಗ್ಗೆ ಮಕ್ಕಳ ಜೊತೆ ಚರ್ಚಿಸಬೇಕು. ಆದಷ್ಟು ಮಟ್ಟಿಗೆ ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕು. ಓದುಗಾರಿಕೆಯಿಂದ ಮಕ್ಕಳ ವಿಚಾರಶಕ್ತಿ ಹೆಚ್ಚಾಗುತ್ತದೆ ಎಂಬುದನ್ನು ತಿಳಿಸಬೇಕು.

ನಿತ್ಯ ಮಕ್ಕಳು ಶಾಲೆ ಮುಗಿಸಿ ಬಂದೊಡನೆ ಪೋಷಕರು ಒಂದರ್ಧಗಂಟೆ ಅವರ ಜೊತೆ ಕಾಲ ಕಳೆಯಬೇಕು. ಅವರ ಶಾಲೆ, ಶಿಕ್ಷಕರು, ಪಾಠಪ್ರವಚನಗಳು, ಆಟೋಟಗಳು, ಗೆಳೆಯರು ಇತ್ಯಾದಿಗಳ ಬಗ್ಗೆ ಕೇಳಿ ಅವರೊಪ್ಪಿಸುವ ವರದಿಯನ್ನು ತಾಳ್ಮೆಯಿಂದ ಆಲಿಸಬೇಕು. ಅವರ ಸಾಧನೆಗಳನ್ನು ಮೆಚ್ಚಿ ಕೊಂಡಾಡಬೇಕು. ಸೋಲಿನ, ಅಪಮಾನ ಆದಲ್ಲಿ ಅವರ ಜೊತೆ ಕುಳಿತು ಚರ್ಚಿಸಿ ಧೈರ್ಯ ತುಂಬಬೇಕು.

ಈಗಿನ ಸ್ಪರ್ಧಾತ್ಮಕ ಜಗತ್ತಿನ ಹಿಂದೆ ಬಿದ್ದಿರುವ ಪೋಷಕರು ಅನಗತ್ಯ ಒತ್ತಡ ಹಾಕುತ್ತಿರುವುದರಿಂದ ಮಕ್ಕಳು ಆತ್ಮಹತ್ಯೆಯಂಥ ಅಪಾಯಕಾರಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಶೇಕಡ 90ರಷ್ಟು ಅಂಕ ಪಡೆದರೂ ಕಡಿಮೆ ಎಂಬ ಭಾವನೆ ಕೆಲವರಲ್ಲಿ ಬೇರೂರಿದೆ.

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯೇ ಅಂತಿಮವಲ್ಲ; ಅದರಾಚೆಗೂ ಜೀವನದ ಪರೀಕ್ಷೆಯೂ ಇದೆಯೆಂಬ ವಾಸ್ತವತೆಯನ್ನು ಪೋಷಕರಾದ ನಾವು ಅರಿತುಕೊಳ್ಳಬೇಕು.

ಮಕ್ಕಳನ್ನು ಹೆದರಿಸಿ ಬೆದರಿಸಿ ಸರಿ ದಾರಿಗೆ ತರುವ ಒತ್ತಡಕ್ಕಿಂತ ಪ್ರೀತಿ ವಾತ್ಸಲ್ಯದ ಮಾತುಗಳು ಅತಿ ಅವಶ್ಯ. ಇದು ಮಕ್ಕಳ ಪೋಷಕರಾಗಬೇಕಾದವರಿಗೆ ಇರುವ ಮೊದಲ ಅರ್ಹತೆ. ಉತ್ತಮ ಮಕ್ಕಳು ಬೇಕೆಂದಲ್ಲಿ ಉತ್ತಮ ಪೋಷಕರು ನಾವಾಗೋಣ.

ಮಕ್ಕಳನ್ನು ಅರಿಯುವುದು ಅಂದರೆ...

1.  State, CBSE, ICSEಗೆ ಸೇರಿಸಿ ತಮ್ಮ ಮಕ್ಕಳು ತುಂಬಾ ಬುದ್ಧಿವಂತರಾಗಬೇಕು ಎನ್ನುವ ಹಂಬಲ. ಯಾವುದಕ್ಕೇ ಸೇರಿಸುವ ಮೊದಲು ಮಕ್ಕಳ ಬುದ್ಧಿಮತ್ತೆಯನ್ನು ನೋಡಿ ಸೇರಿಸಿ. ಕ್ಲಿಷ್ಟ ಪಠ್ಯದ ಒತ್ತಡದಿಂದ ಕೆಲವೊಂದು ಮಕ್ಕಳು ಮಾನಸಿಕವಾಗಿ ಕುಗ್ಗಿರುವ ಉದಾಹರಣೆ ಇದೆ.

2. ಟ್ಯೂಷನ್‌ಗೆ ಹೋಗಲು ಮಗುವಿಗೆ ಆಸಕ್ತಿ ಇದೆಯೇ ವಿಚಾರಿಸಿ.

3. ಸಂಗೀತ, ನೃತ್ಯ, ಈಜು, ಅಬಾಕಸ್ ಇವುಗಳಲ್ಲಿ ಮಗುವಿನ ಅಭಿರುಚಿ ಯಾವುದರಲ್ಲಿ ಎಂಬುದನ್ನು ಅರಿತು ಮುಂದುವರಿಸಿ.

4. ಮಕ್ಕಳನ್ನು ವಸ್ತುಗಳಂತೆ ಕಾಣಬೇಡಿ. ಪದೇ ಪದೇ ಮಕ್ಕಳಿಗೆ ಆಸಕ್ತಿ ಇಲ್ಲದ ವಿಷಯದಲ್ಲಿ ಒತ್ತಡ ಹಾಕಬೇಡಿ.

5. ಸ್ವಲ್ಪ ಸಮಯ ಅವರ ಪಾಡಿಗೆ ಆಡಲು, ಓದಲು, ಮೌನವಾಗಿರಲು ಬಿಡಿ. ಮಕ್ಕಳಿಗೂ ಖಾಸಗಿತನದ ಅಗತ್ಯವಿರುತ್ತದೆ..

6. ಮಕ್ಕಳನ್ನು ಅತಿಯಾದ ಶಿಸ್ತಿನಿಂದ ಅಥವಾ ಅತಿ ಪ್ರೀತಿ ತೋರಿಸಿ ಸ್ವೇಚ್ಛೆಗೆ ಆಸ್ಪದ ಕೊಡಬೇಡಿ.

7. ಎಲ್ಲ ಮಕ್ಕಳ ಬುದ್ಧಿಮತ್ತೆ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ಬೇರೆ ಮಕ್ಕಳಂತೆ ನೀನೂ ಕಲಿಯಬೇಕು ಎಂಬ ಒತ್ತಡ ತರದಿರಿ.

8. ಎಸ್ಸೆಸ್ಸೆಲ್ಸಿ, ಪಿಯುಸಿ ನಂತರದ ಕೋರ್ಸ್ ಆಯ್ಕೆಗೆ ಅವರಿಗೂ ಅವಕಾಶ ಕೊಟ್ಟು ಚರ್ಚಿಸಿ, ಮುಂದುವರಿಯಬೇಕು.

9. ಯಾವ ಕಾಲೇಜು, ಯಾವ ಊರು ಎಲ್ಲವನ್ನೂ ಮಕ್ಕಳ ಇಚ್ಛೆಗನುಗುಣವಾಗಿ ಬಿಟ್ಟುಬಿಡಿ.

10. ಮಕ್ಕಳು ಕಾಲೇಜು ನಂತರ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಅವರನ್ನು ಪ್ರೋತ್ಸಾಹಿಸಿ, ಗೌರವಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT