ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಲಿತ ವಿದ್ಯಮಾನ: ಶ್ರೀಲಂಕಾದ ತೀವ್ರ ಬಿಕ್ಕಟ್ಟು

Last Updated 1 ಜೂನ್ 2022, 21:30 IST
ಅಕ್ಷರ ಗಾತ್ರ

ಯುಪಿಎಸ್‌ಸಿ– ಪ್ರಿಲಿಮ್ಸ್‌ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ –2, ಕೆಪಿಎಸ್‌ಸಿ ಪ್ರಿಲಿಮ್ಸ್‌ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ –2 ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಅಂತರರಾಷ್ಟ್ರೀಯ ಮಟ್ಟದ ಪ್ರಚಲಿತ ವಿದ್ಯಮಾನ ಶ್ರೀಲಂಕಾ ಬಿಕ್ಕಟ್ಟಿನ ಕುರಿತ ಮಾಹಿತಿ ಇಲ್ಲಿದೆ.

ನೆರೆಯ ಶ್ರೀಲಂಕಾ ದ್ವೀಪ ರಾಷ್ಟ್ರದಲ್ಲಿ ಇತ್ತೀಚೆಗೆ ಒಂದು ಗ್ಯಾಸ್ ಸಿಲಿಂಡರ್ ಬೆಲೆ ₹4000 ಆಗಿದೆ. ಶಾಲೆಗಳಲ್ಲಿ ಪ್ರಶ್ನೆ ಪತ್ರಿಕೆ ಇಲ್ಲದ ಕಾರಣಕ್ಕೆ ಪರೀಕ್ಷೆ ನಡೆಸಲು ಸಾಧ್ಯವಿಲ್ಲದೆ ಪರೀಕ್ಷೆ ರದ್ದಾಗಿದೆ. ಸೇನಾ ಯೋಧರ ರಕ್ಷಣೆಯಲ್ಲಿ ಪೆಟ್ರೋಲ್ ಡೀಸೆಲ್‌ ವಿತರಿಸಬೇಕಾದಂತಹ ಅರಾಜಕತೆ ನಿರ್ಮಾಣವಾಗಿದೆ.

ಶ್ರೀಲಂಕಾದ ಸ್ಥಿತಿ ಮೊದಲಿನಿಂದ ಹೀಗಿತ್ತೇ?

ಹಾಗೆ ನೋಡಿದರೆ 2016 ಹೊತ್ತಿನಲ್ಲಿ ಶ್ರೀಲಂಕಾದ ಮಾನವ ಅಭಿವೃದ್ಧಿ ಸೂಚ್ಯಂಕಗಳಾದ ಶಿಕ್ಷಣ, ಆರೋಗ್ಯ, ಸುಗಮವಾಗಿ ಬಿಸಿನೆಸ್ ನಡೆಸಬಹುದಾದ ಅವಕಾಶ, ಸಹಕಾರಿ ವ್ಯವಸ್ಥೆ ಇವೆಲ್ಲದ ರಲ್ಲೂ ಶ್ರೀಲಂಕಾವು ಭಾರತಕ್ಕಿಂತ ಮೇಲೆ ಇತ್ತು.

ಈ ಪರಿ ಹಿಂದೆ ಉಳಿಯಲು ಕಾರಣಗಳೇನು?

ನವ ಉದಾರಿ ನೀತಿಗಳು, ವಿದೇಶಿ ಖಾಸಗಿ ಬಂಡವಾಳದ ಹರಿವು, ಸಂಪೂರ್ಣ ಆಮದು ಉತ್ಪನ್ನಗಳ ಮೇಲೆ ರಾಷ್ಟ್ರ ಅವಲಂಬಿತವಾಗಿದ್ದು, ಕೋವಿಡ್ ಪರಿಣಾಮಗಳು, ಪ್ರಭುತ್ವದ ಸರ್ವಾಧಿಕಾರಿ ನಿಲುವುಗಳ, ಪರಿಣಿತರ ಸಲಹೆಗಳನ್ನು ಪರಿಗಣಿಸದಿದ್ದದ್ದು ಶ್ರೀಲಂಕಾದ ಡೋಲಾಯ ಮಾನ ಪರಿಸ್ಥಿತಿಗೆ ಕಾರಣವಾಗಿದೆ.

ಭಾರತದ ಮೇಲಾದ ಪರಿಣಾಮಗಳು

1983ರಲ್ಲಿಯೇ ತಮಿಳರ ಮೇಲೆ ಬೌದ್ಧರು ಮತ್ತು ಅಲ್ಲಿನ ರಾಷ್ಟ್ರೀಯವಾದಿಗಳು ಆಕ್ರಮಣ ಮಾಡಿದಾಗ ಎಲ್‌ಟಿಟಿಇ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆದಿತ್ತು. ಶ್ರೀಲಂಕಾದ ಉತ್ತರ ಭಾಗ ಜಾಫ್ನಾದಿಂದ ವಲಸೆಬಂದ ತಮಿಳರನ್ನು ನಮ್ಮ ತಮಿಳು ನಾಡಿನಲ್ಲಿಯೇ ಆಶ್ರಯ ಕೊಡಬೇಕಾದ ಅನಿವಾರ್ಯತೆಗೆ ಭಾರತ ಸಿಲುಕಿಕೊಂಡಿತ್ತು.

ಶ್ರೀಲಂಕಾದ ಚರಿತ್ರೆ

ಭಾರತ-ಬಾಂಗ್ಲಾ ಪಾಕಿಸ್ತಾನ-ಶ್ರೀಲಂಕಾಗಳು ಬ್ರಿಟಿಷರ ವಸಾಹತು ದೇಶಗಳಾಗಿದ್ದವು; ಹಾಗಾಗಿ ಶ್ರೀಲಂಕಾ ಬ್ರಿಟಿಷರ ಪಾಲಿಗೆ ಒಂದು ಬೃಹತ್ ಚಹಾ ತೋಟ ಮತ್ತು ರಬ್ಬರ್ ತೋಟಗಳಷ್ಟೇ ಆಗಿತ್ತು. ಭಾರತ 1947ರಲ್ಲಿ ಮತ್ತು ಶ್ರೀಲಂಕಾ 1948ರಲ್ಲಿ ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆದವು.

ಬ್ರಿಟೀಷರ ಒಡೆದು ಆಳುವ ನೀತಿಯ ಫಲವಾಗಿ ಭಾರತದಲ್ಲಿ ಹಿಂದು-ಮುಸ್ಲಿಂ ವಿಭಜನೆ ನಡೆದಂತೆ ಶ್ರೀಲಂಕಾದಲ್ಲಿ ಬೌದ್ಧರು ಮತ್ತು ತಮಿಳು ಎನ್ನುವಂತಹ ವೈಷಮ್ಯವನ್ನು ಭಿತ್ತಿಯೇ ಬ್ರಿಟಿಷರು ಹೋಗಿದ್ದರು. ನಂತರದಲ್ಲಿ ಬೌದ್ಧ ಧರ್ಮದ ಪ್ರಧಾನ ಧರ್ಮ ಮತ್ತು ಸಿಂಹಳೀಯ ಭಾಷೆಯೇ ಪ್ರಧಾನ ಭಾಷೆ ಎಂಬಂಥ ಒಂದು ಮನ್ನಣೆ ಸಂವಿಧಾನಿಕವಾಗಿಯೇ ಲಭಿಸಿತ್ತು. ಇವು ಕೂಡಾ ಮುಂದೆ ಅಲ್ಲಿನ ಅಂತಃಕಲಹಗಳಿಗೆ ಕಾರಣವಾಗಿತ್ತು.

1970 ರಲ್ಲಿ ರೈತಾಪಿ ದಂಗೆಗಳ ರೀತಿಯ ದಂಗೆಗಳು ಶ್ರೀಲಂಕಾದಲ್ಲಿ ಶುರುವಾಗಿದ್ದವು.

1977 ರಲ್ಲಿ ಶ್ರೀಲಂಕಾ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ(IMF) ಸಾಲ ಪಡೆದುಕೊಂಡಿತು. ದಕ್ಷಿಣ ಏಷ್ಯಾದಲ್ಲಿಯೇ ಪ್ರಥಮಬಾರಿಗೆ ಐಎಂಎಫ್‌ನಿಂದ ಸಾಲ ಪಡೆದುಕೊಂಡಿತು. ಪ್ರಾರಂಭದಲ್ಲಿ ಆರ್ಥಿಕತೆ ಚೇತರಿಸಿ ಕೊಂಡಿತಾದರೂ ಐಎಂಎಫ್‌ನ ಷರತ್ತುಗಳನ್ನು ಪಾಲಿಸುತ್ತಾ ಶ್ರೀಲಂಕಾದ ಆರ್ಥಿಕತೆ ಕುಸಿಯ ತೊಡಗಿತು. ಪರಿಣಾಮವಾಗಿ ಮತ್ತೆ ಮತ್ತೆ ಸಾಲ ಮಾಡಲೇಬೇಕಾದ ಒತ್ತಡಕ್ಕೆ ಒಳಗಾಗಿ ಈ ಹಣಕಾಸು ಸಂಸ್ಥೆಯಿಂದ ಸಾಲ ಪಡೆದುಕೊಳ್ಳುತ್ತಲೇ ಹೋಯಿತು. 1977ರಿಂದ ಇದುವರೆಗೂ ಶ್ರೀಲಂಕಾ 17 ಬಾರಿ ಸಾಲ‌ಪಡೆದಿದೆ.

ಆರ್ಥಿಕ ಬಿಕ್ಕಟ್ಟಿನ ಪ್ರಧಾನ ಕಾರಣಗಳು

ಅಸಮರ್ಪಕ ಆರ್ಥಿಕ ನಿರ್ವಹಣೆ

ಈಸ್ಟರ್ ಬಾಂಬಿಂಗ್ ಪ್ರಕರಣ

ವಿಸ್ತರಣಾ ಹಣಕಾಸು ನೀತಿ(ಅಪಾಯಕಾರಿ ತೆರಿಗೆ ಕಡಿತ)

ಕೋವಿಡ್ ಬಿಕ್ಕಟ್ಟು

ಅನಾವಶ್ಯಕ ಮೂಲಸೌಕರ್ಯ ಯೋಜನೆಗಳು

ಸಾವಯವ ಕೃಷಿಯತ್ತ ಅಕಾಲಿಕ ಹೊರಳುವಿಕೆ

ರಷ್ಯಾ-ಉಕ್ರೇನಿಯನ್ ಸಂಘರ್ಷ

ಸರ್ವಾಧಿಕಾರಿ ಧೋರಣೆ

ಆರ್ಥಿಕ ತಜರ ಸಲಹೆಗಳ ನಿರ್ಲಕ್ಷ್ಯ

ಆಂತರಿಕ ಜನಾಂಗೀಯ ಕಲಹಗಳು

ಕುಸಿದ ಪ್ರವಾಸೋದ್ಯಮ.

ಒಟ್ಟಿನಲ್ಲಿ ಮಾನವ ನಿರ್ಮಿತ ಮತ್ತು ಕೋವಿಡ್ ನಿರ್ಮಿತ ಸಮಸ್ಯೆಗಳು ಮತ್ತು ಸರ್ವಾಧಿಕಾರಿ ನಿರ್ಧಾರಗಳು ಶ್ರೀಲಂಕಾದ ಈ ದುರ್ಬರ ಸ್ಥಿತಿಗೆ ಕಾರಣವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT