ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದ ಕೋರ್ಸ್‌ಗೆ ಎಸ್ಸೆಸ್ಸೆಲ್ಸಿಯಲ್ಲೇ ಬುನಾದಿ: ಆಫ್‌ಬೀಟ್‌ ವೃತ್ತಿಗೆ ಬೇಡಿಕೆ

Last Updated 14 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನ ವೃತ್ತಿ ಭವಿಷ್ಯದ ಬಗ್ಗೆ ಹೆಚ್ಚು ಆತಂಕವಿರುವುದು ಸಹಜ. ಎಸ್ಸೆಸ್ಸೆಲ್ಸಿಯಲ್ಲಿರುವಾಗಲೇ ಮುಂದೆ ಯಾವ ಕೋರ್ಸ್‌ ಆಯ್ಕೆ ಮಾಡಿಕೊಂಡರೆ ಕನಸಿನ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು ಎಂಬ ತಹತಹವಿರುತ್ತದೆ. ಪರೀಕ್ಷೆ ಮುಗಿದು ಫಲಿತಾಂಶ ಬರುತ್ತಿದ್ದ ಹಾಗೆ ನಿರ್ಧಾರವನ್ನು ಗಟ್ಟಿ ಮಾಡಿಕೊಂಡಿರಬೇಕು. ಸುಲಭ ಮಾರ್ಗವೆಂದರೆ ಪರೀಕ್ಷೆಯ ಓದಿನ ಜೊತೆಜೊತೆಗೇ ಆ ಕನಸನ್ನು ಗುರುತಿಸಿ ಆಯ್ಕೆಗೆ ಮುಕ್ತ ಅವಕಾಶ ಇಟ್ಟುಕೊಳ್ಳುವುದು.

ಸಾಂಪ್ರದಾಯಿಕ ಕೋರ್ಸ್‌ಗಳಾದ ಎಂಜಿನಿಯರಿಂಗ್‌, ವೈದ್ಯಕೀಯ, ಕಾನೂನು ಮೊದಲಾದವುಗಳ ಮೇಲೆ ಆಸಕ್ತಿ ಇಲ್ಲದಿದ್ದರೆ ಹತಾಶೆ ಬೇಡ. ಬೇರೆ ಕೆಲವು ಆಫ್‌ಬೀಟ್‌ ವೃತ್ತಿಗಳಲ್ಲಿ ಕೂಡ ಒಳ್ಳೆಯ ಭವಿಷ್ಯವಿದೆ. ಇವು ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ಕೂಡ ಪ್ರವರ್ಧಮಾನಕ್ಕೆ ಬರುತ್ತಿವೆ. ಸದ್ಯಕ್ಕೆ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಇಂತಹ ಕೆಲವು ಉದ್ಯೋಗಗಳನ್ನು ಪಟ್ಟಿ ಮಾಡಬಹುದು.

ಜೈವಿಕ ತಂತ್ರಜ್ಞಾನ

ಕಳೆದ ಕೆಲವು ವರ್ಷಗಳಿಂದ ವಿಪುಲ ಉದ್ಯೋಗಗಳು ಹಾಗೂ ಜೊತೆಗೆ ಸಂಶೋಧನೆಗೆ ಅವಕಾಶಗಳನ್ನು ನೀಡುತ್ತಿರುವ ಈ ಕ್ಷೇತ್ರ ಜೀವಶಾಸ್ತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿರುವಂತಹದ್ದು. ಜೀವಶಾಸ್ತ್ರದ ಒಂದು ವಿಭಾಗವಾಗಿರುವ ಇದು ಜೀವಕೋಶಗಳ ಬೆಳವಣಿಗೆ ಮತ್ತಿತರ ವಿಷಯಗಳನ್ನು ಒಳಗೊಂಡಿದೆ. ಇದಲ್ಲದೇ ಬಹುತೇಕ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಈ ಕೋರ್ಸ್‌ ಇದೆ. ಉನ್ನತ ಅಧ್ಯಯನ ನಡೆಸುವ ಆಸಕ್ತಿ ಉಳ್ಳವರಿಗೂ ಸಹ ಇದು ಹೇಳಿ ಮಾಡಿಸಿದಂತಹ ವಿಷಯ.

ಇದರ ಬಗ್ಗೆ ಆಸಕ್ತಿ ಇರುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಜೀವಶಾಸ್ತ್ರ ಓದಿದರೂ ಪದವಿ
ತರಗತಿಯಲ್ಲಿ ಜೈವಿಕ ತಂತ್ರಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲೇ ಸ್ನಾತಕೋತ್ತರ ಪದವಿ ಕೂಡ ಪಡೆಯಬಹುದು.

ಪಿಆರ್‌ ಮತ್ತು ಜಾಹೀರಾತು

ಸಂವಹನ ಉದ್ಯಮದ ಒಂದು ಶಾಖೆಯಾಗಿರುವ ಸಾರ್ವಜನಿಕ ಸಂಪರ್ಕ ಮತ್ತು ಜಾಹೀರಾತು ಕ್ಷೇತ್ರವು ಕಳೆದ ಕೆಲವು ವರ್ಷಗಳಿಂದ ಭರಪೂರು ಅವಕಾಶಗಳನ್ನು ಸೃಷ್ಟಿಸುತ್ತಿದೆ. ಬಹು ಆಯ್ಕೆಗಳು ಇದರಲ್ಲಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕೋರ್ಸ್‌ ಕಲಿಕೆಗೆ ಮುಂದಾಗುತ್ತಿದ್ದಾರೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಿ ಕಂಪನಿಗಳಲ್ಲೂ ವೃತ್ತಿಗೆ ಅವಕಾಶಗಳಿವೆ. ಹೀಗಾಗಿ ಆಸಕ್ತರು ಈ ಕೋರ್ಸ್‌ಗಳ ಬಗ್ಗೆ ಈಗಿನಿಂದಲೇ ಮಾಹಿತಿ ಸಂಗ್ರಹಿಸಿ ಪ್ರವೇಶಕ್ಕಾಗಿ ಸಿದ್ಧತೆ ನಡೆಸಬಹುದು.

ಪದವಿ ತರಗತಿಯಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮವನ್ನು ಒಂದು ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು. ಸಾರ್ವಜನಿಕ ಸಂಪರ್ಕ ಅಥವಾ ಜಾಹೀರಾತು ವಿಷಯದಲ್ಲಿ ಡಿಪ್ಲೊಮಾ ಪದವಿ ಪಡೆದರೂ ಅವಕಾಶಗಳಿಗೆ ಕೊರತೆಯಿಲ್ಲ. ಹಾಗೆಯೇ ಮುಂದೆ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯುವಾಗ ಈ ಎರಡೂ ವಿಷಯಗಳನ್ನು ಓದಬಹುದು. ಕೆಲವು ವಿಶ್ವವಿದ್ಯಾಲಯಗಳಲ್ಲಿ ಜಾಹೀರಾತು ವಿಷಯವೊಂದನ್ನೇ ಆಯ್ಕೆ ಮಾಡಿಕೊಂಡು ಉನ್ನತ ಅಧ್ಯಯನ ನಡೆಸುವ ಅವಕಾಶಗಳಿವೆ.

ಮುಖ್ಯ ವಾಹಿನಿಯಲ್ಲಿ ಪಟ್ಟಿ ಮಾಡಲಾಗಿರುವ ಉದ್ಯೋಗಗಳನ್ನು ಬಿಟ್ಟು ಬೇರೆ ವೃತ್ತಿಗಳನ್ನು ಅಂದರೆ ನಿಮಗಿಷ್ಟದ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಇದು ಸುಸಂದರ್ಭ. ಮೇಲೆ ಕೊಡಲಾಗಿರುವ ಮಾಹಿತಿ ಕೆಲವು ಉದಾಹರಣೆಗಳಷ್ಟೆ. ಆಸಕ್ತ ವಿದ್ಯಾರ್ಥಿಗಳು ಸೂಕ್ತ ಮಾಹಿತಿ ಪಡೆದು ಇಷ್ಟದ ಕೋರ್ಸ್‌ ಆಯ್ಕೆ ಮಾಡಿಕೊಂಡರೆ ಉತ್ತಮವಾದ ವೃತ್ತಿ ಭವಿಷ್ಯ ಕಟ್ಟಿಕೊಳ್ಳಬಹುದು. ಈಗ ಯಾವ ಕೋರ್ಸ್‌, ಉದ್ಯೋಗ ಟ್ರೆಂಡ್‌ನಲ್ಲಿದೆ ಎಂಬುದನ್ನು ತಿಳಿದುಕೊಂಡು ಅವುಗಳಿರುವ ಉತ್ತಮ ಶೈಕ್ಷಣಿಕ ಸಂಸ್ಥೆಯನ್ನೂ ಹುಡುಕಿಕೊಳ್ಳುವುದು ಮುಖ್ಯ. ಎಲ್ಲವೂ ನಿಮಗೆ ಅನುಕೂಲವಾಗಿದೆ ಎಂದರೆ ಮಾತ್ರ ಪ್ರವೇಶ ಪಡೆದು ಮುಂದಿನ ಹಾದಿಯನ್ನು ಸುಗಮಗೊಳಿಸಿಕೊಳ್ಳಬಹುದು.‌

ರಂಗ ತರಬೇತಿ

ಸಮೂಹ ಸಂವಹನವೆಂಬುದು ಈಗ ದೊಡ್ಡ ಅಧ್ಯಯನ ವಿಭಾಗವಾಗಿ ಹೊರ ಹೊಮ್ಮಿದೆ. ಇದರ ಅಡಿಯಲ್ಲಿ ಬರುವ ರಂಗ ಅಧ್ಯಯನ ನಟನೆಯ ಬಗ್ಗೆ ಸಂಪೂರ್ಣ ಶಿಕ್ಷಣವನ್ನು ನೀಡುವಂತಹದ್ದು. ವೇದಿಕೆಯಲ್ಲಿ ನಟನಾ ಕೌಶಲ ತೋರಿಸುವ ಆಸಕ್ತಿ ಇದ್ದರೆ ಈ ಕೋರ್ಸ್‌ಗೆ ಸೇರಿಕೊಳ್ಳಬಹುದು. ಈ ಬಗ್ಗೆ ಹಲವಾರು ಸಂಸ್ಥೆಗಳಿದ್ದು, ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT