ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಖ್ಯ ಉದ್ಯೋಗಗಳ ಸಂಖ್ಯಾಕ್ಷೇತ್ರ: ಇಲ್ಲಿ ಲೆಕ್ಕ ಗೊತ್ತಿದ್ದವ ನಂಬರ್ ಒನ್

Published 26 ಜೂನ್ 2023, 0:34 IST
Last Updated 26 ಜೂನ್ 2023, 0:34 IST
ಅಕ್ಷರ ಗಾತ್ರ

ಅಭಿವೃದ್ಧಿಗಾಗಿ ದಾಪುಗಾಲಿಡುತ್ತಿರುವ ಇಂದಿನ ಯುಗಮಾನವನ್ನು ‘ಯೋಜನಾ ಯುಗ’ ಎನ್ನುತ್ತೇವೆ. ಏರುತ್ತಿರುವ ಜನಸಂಖ್ಯೆಯ ಆರೋಗ್ಯ, ಶಿಕ್ಷಣ, ಜೀವನ ಮಟ್ಟ, ಆದಾಯ ಅಗತ್ಯಗಳನ್ನರಿತು ಕೆಲಸ ಮಾಡಬೇಕಾದ ಅನಿವಾರ್ಯತೆ ಹೊಂದಿರುವ ಸರ್ಕಾರಗಳು ಏನನ್ನಾದರೂ ಹಮ್ಮಿಕೊಳ್ಳುವುದಕ್ಕೂ ಮುಂಚೆ ವಸ್ತುಸ್ಥಿತಿಯ ಕುರಿತು ಮಾಹಿತಿ ಬಯಸುತ್ತವೆ.

ಯಾವುದೇ ಮಾಹಿತಿ ಅಂಕಿ-ಅಂಶಗಳಿಂದ ಕೂಡಿರುತ್ತದೆ. ಆ ಮಾಹಿತಿ ನಿಖರವೂ, ಸತ್ಯವೂ ಆಗಿರಬೇಕಾಗುತ್ತದೆ. ಕ್ರೀಡೆ, ವ್ಯಾಪಾರ, ಉದ್ಯಮ, ಉದ್ಯೋಗ, ಶಿಕ್ಷಣ, ಸಾಕ್ಷರತೆ, ಅಭಿವೃದ್ಧಿ, ಬೇಡಿಕೆ, ಪೂರಣ, ಅರಣ್ಯ, ಆರೋಗ್ಯ ಕ್ಷೇತ್ರ ಇತ್ಯಾದಿಗಳಿಗೆ ಸಂಬಂಧಿಸಿದ ಯೋಜನೆ ರೂಪಿಸಲು ಆಯಾ ಕ್ಷೇತ್ರಗಳ ಆಗು ಹೋಗುಗಳ ಕುರಿತ ಅಧಿಕೃತ ಮಾಹಿತಿ ಬೇಕಾಗುತ್ತದೆ. ಇದನ್ನು ಒದಗಿಸುವವರು ನುರಿತ ಸಂಖ್ಯಾಶಾಸ್ತ್ರಜ್ಞರು ಅಥವಾ ಅಂಕಿ-ಅಂಶ ತಜ್ಞರು.

ಪ್ರಸ್ತುತ ಸ್ಟ್ಯಾಸ್ಟಿಕಲ್‌ ತಜ್ಞರಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಈ ತಜ್ಞರೆಲ್ಲ ಪ್ರತಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳ ಯೋಜನೆಗಳಿಗೆ ಅಗತ್ಯವಾದ ಮಾಹಿತಿ ಒದಗಿಸುವವರು ಇವರೇ. ಸ್ಥಳೀಯ ಮತ್ತು ವಿದೇಶಗಳಲ್ಲೂ ಅಪಾರ ಬೇಡಿಕೆ ಹೊಂದಿರುವ ಇವರು ಗಣಿತ ಮತ್ತು ಸಂಖ್ಯಾಶಾಸ್ತ್ರವನ್ನು ಆಳವಾಗಿ ತಿಳಿದುಕೊಂಡಿರ ಬೇಕಾಗುತ್ತದೆ.

ಯಾವ ಯಾವ ಕೋರ್ಸ್?

ಗಣಿತ ಅಥವಾ ಸ್ಟ್ಯಾಟಿಸ್ಟಿಕ್ಸ್ ವಿಷಯಗಳಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿರುವ ವಿದ್ಯಾರ್ಥಿಗಳು ಮುಂದೆ, ಇದೇ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಓದಬಹುದು. ನಂತರ ಅದೇ ವಿಷಯದಲ್ಲಿ ಪಿಎಚ್‌.ಡಿ ಮಾಡಬಹುದು.

ಸಾಮಾನ್ಯವಾಗಿ ವಾಣಿಜ್ಯ ಹಾಗೂ ವಿಜ್ಞಾನ ಓದಿದವರು ಈ ಕೋರ್ಸ್‌ಗಳಿಗೆ ಆರ್ಹರಾಗಿರುತ್ತಾರೆ. ಮೂರು ವರ್ಷದ ಪದವಿ, ಎರಡು ವರ್ಷಗಳ ಸ್ನಾತಕೋತ್ತರ ಪದವಿ, ಆರು ತಿಂಗಳಿನಿಂದ ಒಂದು ವರ್ಷದವರೆಗಿನ ಸರ್ಟಿಫಿಕೇಟ್ ಕೋರ್ಸ್‌ಗಳಿವೆ. ರಾಜ್ಯದ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ಗಳೂ ಲಭ್ಯವಿವೆ. ಅರ್ಹ ವಿದ್ಯಾರ್ಥಿಗಳು ಬಿ.ಎ ಮತ್ತು ಎಂ.ಎ ನಲ್ಲಿ ಸ್ಟ್ಯಾಟಿಸ್ಟಿಕ್ಸ್, ಬಿ.ಎಸ್ಸಿ ಮತ್ತು ಎಂ.ಎಸ್ಸಿಯಲ್ಲಿ ಸ್ಟ್ಯಾಟಿಸ್ಟಿಕ್ಸ್ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದು. ಹಾಗೆಯೇ ಡಿಪ್ಲೊಮಾದಲ್ಲೂ ಸ್ಟ್ಯಾಟಿಕ್ಸ್‌ ವಿಷಯವನ್ನು ಅಧ್ಯಯನ ಮಾಡಲು ಅವಕಾಶವಿದೆ. 

ಈ ಎಲ್ಲ ಕೋರ್ಸ್‌ಗಳಲ್ಲಿ ದತ್ತಾಂಶ ಸಂಗ್ರಹಣೆ, ತರ್ಕಬದ್ಧ ವಿಶ್ಲೇಷಣೆ, ಸಂಖ್ಯಾಶಾಸ್ತ್ರೀಯ  ಜಿಜ್ಞಾಸೆ, ದತ್ತಾಂಶದ ಮೌಲ್ಯ ನಿರ್ಣಯ, ಅಂಕೆ-ಸಂಖ್ಯೆ ಗಣಿತದ ಮೂಲಭೂತ ಸಿದ್ಧಾಂತಗಳನ್ನು ವ್ಯವಸ್ಥಿತವಾಗಿ ಕಲಿಸಿಕೊಡುತ್ತವೆ.

ಸಮಸ್ಯೆ ಬಿಡಿಸುವುದು, ಬದಲಾಗುತ್ತಿರುವ ಅಂಕಿ-ಅಂಶಗಳ ತ್ವರಿತ ತಿಳುವಳಿಕೆ, ಸಂಖ್ಯಾಶಾಸ್ತ್ರದ ವಿಸ್ತೃತ ಮತ್ತು ಖಚಿತ ಜ್ಞಾನ ಹೊಂದುವ ವಿದ್ಯಾರ್ಥಿಗಳು ಉದ್ಯಮ, ಸರ್ಕಾರ, ಸಂಸ್ಥೆಗಳು ಬಯಸುವ ಕೌಶಲವನ್ನು ಹೊಂದಿರುತ್ತಾರೆ.

ಎಲ್ಲೆಲ್ಲಿ ವಿದ್ಯಾಭ್ಯಾಸ?

ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯಲ್ಲಿ(ISI) ಪದವಿ ಪಡೆಯುವುದು ಬಹುತೇಕ ವಿದ್ಯಾರ್ಥಿಗಳ ಕನಸಾಗಿ ರುತ್ತದೆ. ಅಲ್ಲಿ ಓದಿದರೆ ಉನ್ನತ ಹುದ್ದೆಯ ಜೊತೆಗೆ, ಕೈತುಂಬಾ ವೇತನ ಸಿಗುತ್ತದೆ. ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಪೂನಾ ವಿಶ್ವವಿದ್ಯಾಲಯ, ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ, ದೆಹಲಿ ವಿವಿ, ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಗಳು ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತವೆ. ಇವುಗಳಲ್ಲದೇ ಭಾರತದ ಬಹುತೇಕ ವಿವಿಗಳ ಅಧೀನದ ಕಾಲೇಜುಗಳಲ್ಲಿ ಅಧ್ಯಯನಕ್ಕೆ ಅವಕಾಶವಿದೆ. ದೆಹಲಿ, ಬೆಂಗಳೂರು, ಚೆನ್ನೈ, ಕೋಲ್ಕತ್ತಾದ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್, ಐಐಟಿ ಕಾನ್ಪುರ್, ಚೆನ್ನೈನ ಲೊಯೋಲ ಕಾಲೇಜು, ಅಹಮದಾಬಾದ್‌ನ ಕ್ಸೇವಿರ‍್ಸ್, ಇಂದೋರ್‌ನ ದೇವಿ ಅಹಲ್ಯ ವಿವಿ, ದೆಹಲಿಯ ಸೇಂಟ್ ಸ್ಟೀಫನ್ಸ್, ಹಿಂದೂ ಕಾಲೇಜುಗಳಲ್ಲೂ ಅಧ್ಯಯನಕ್ಕೆ ಅವಕಾಶಗಳಿವೆ.

ಅಮೆರಿಕದ ಎಂಐಟಿ, ಹಾರ್ವರ್ಡ್, ಸ್ಟಾನ್‌ಫರ್ಡ್, ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಿಚಿಗನ್ ವಿವಿ, ಕಾರ್ನೆಲ್ ವಿವಿ, ವಾಷಿಂಗ್ಟನ್ ವಿವಿ, ಯುರೋಪಿನ ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಇಂಪೀರಿಯಲ್ ಕಾಲೇಜು, ಸಿಂಗಪುರದ ನ್ಯಾಷನಲ್ ವಿವಿ, ಕ್ಯಾಲಿಫೋರ್ನಿಯ ವಿವಿ, ಆಸ್ಟೇಲಿಯದ ಮೆಲ್ಟರ್ಸ್ ವಿವಿ, ಜಪಾನ್‌ನ ಟೋಕಿಯೊ ವಿವಿಗಳಲ್ಲೂ ಸಹ ಉನ್ನತ ವಿದ್ಯಾಭ್ಯಾಸದ ಅವಕಾಶಗಳಿವೆ.

ಇವುಗಳಲ್ಲದೇ ಆನ್‌ಲೈನ್ ಮಾದರಿಯಲ್ಲೂ ಸಂಖ್ಯಾಶಾಸ್ತ್ರ ಕಲಿಸುವ ಅನೇಕ ವಿವಿಗಳು ವಿದೇಶದಲ್ಲಿವೆ. ಪದವಿ ಶಿಕ್ಷಣದ ನಂತರ ಬಯೋ ಇನ್‌ಫಾರ್ಮ್ಯಾಟಿಕ್ಸ್, ಬಯೋಸ್ಟ್ಯಾಟಿಸ್ಟಿಕ್ಸ್, ಪಬ್ಲಿಕ್ ಹೆಲ್ತ್, ಆಸ್ಟ್ರೋನಮಿ, ಆಸ್ಟ್ರೊಫಿಸಿಕ್ಸ್, ಡಿಜಿಟಲ್ ಮಾರ್ಕೆಟಿಂಗ್, ಅರ್ಥಶಾಸ್ತ್ರ, ಆಕ್ಚುಏರಿಯಲ್ ಸೈನ್ಸ್ ವಿಷಯಗಳಲ್ಲಿ ಉನ್ನತ ಅಧ್ಯಯನ ಕೈಗೊಳ್ಳಬಹುದು.

ಯಾವ ಯಾವ ಕೆಲಸ ?

ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ ಅಧ್ಯಯನ ಮಾಡಿರುವವರು ಈ ಕೆಳಗಿನ ಹುದ್ದೆಗಳನ್ನು ನಿರ್ವಹಿಸಲು ಆರ್ಹತೆ ಪಡೆಯುತ್ತಾರೆ. ಹಾಗೆಯೇ, ವಾರ್ಷಿಕ ಕನಿಷ್ಠ  ₹4 ಲಕ್ಷದಿಂದ ₹10 ಲಕ್ಷದವರೆಗೂ ವೇತನ ಪಡೆಯುತ್ತಾರೆ.  ಅಮೆರಿಕದಲ್ಲಿ ‌‌ವಾರ್ಷಿಕ ಸಂಬಳ 70,000 ಡಾಲರ್‌ನಷ್ಟಿದೆ.

ಸ್ಟ್ಯಾಟಿಸ್ಟೀಶಿಯನ್, ಡೇಟಾ ಸೈಂಟಿಸ್ಟ್, ಎಸ್‌ಎಎಸ್ ಡೆವೆಲಪರ್, ಬ್ಯುಸಿನೆಸ್ ಅನಾಲಿಸ್ಟ್, ಮ್ಯಾಥಮ್ಯಾಟೀಶಿಯನ್, ರಿಸ್ಕ್ ಅನಾಲಿಸ್ಟ್, ಡೇಟಾ ಅನಾಲಿಸ್ಟ್, ಕಂಟೆಂಟ್ ಅನಾಲಿಸ್ಟ್, ಸ್ಟಾಟಿಸ್ಟಿಕ್ಸ್ ಟ್ರೇನರ್, ಡೇಟಾ ಅನಾಲಿಸ್ಟ್, ಬಯೋ ಸ್ಟಾಟ್‌ಟೀಸಿಯನ್‌,‌‌ಎಕನಾಮೆಟ್ರೀಶಿಯನ್ ಮತ್ತು ಕನ್ಸಲ್ಟೆಂಟ್ ಆಗಿ ಕೆಲಸ ಮಾಡಬಹುದು.

ಯಾವ ಕ್ಷೇತ್ರದಲ್ಲಿ ಉದ್ಯೋಗ ?‌

ಹಣಕಾಸು, ಜಾಹೀರಾತು, ಸಂಶೋಧನೆ ಮತ್ತು ಅಭಿವೃದ್ಧಿ, ವಿವಿಧ ಗಣತಿ, ಬ್ಯಾಂಕಿಂಗ್, ಎಕಾಲಜಿ ಸೇವೆ, ಮಾರ್ಕೆಟಿಂಗ್, ಆರೋಗ್ಯ, ಚುನಾವಣೆ, ಮನರಂಜನೆ, ಕ್ರೀಡೆ, ಶಿಕ್ಷಣ, ಪ್ರವಾಸೋದ್ಯಮ, ಅಪರಾಧ, ಗುಣಮಟ್ಟ ನಿರ್ಣಯ, ಯೋಜನೆ ಮತ್ತು ಅನುಷ್ಠಾನಗಳಿಗೆ ಸಂಬಂಧಿಸಿದ ರಂಗಗಳಲ್ಲಿ ಸಂಖ್ಯಾಶಾಸ್ತ್ರ ಓದಿದವರಿಗೆ ವಿಪುಲ ಉದ್ಯೋಗದ ಅವಕಾಶಗಳಿವೆ. ಅಮೆರಿಕವೊಂದರಲ್ಲೆ ಮುಂದಿನ ಐದು ವರ್ಷಗಳಲ್ಲಿ ಸಂಖ್ಯಾಶಾಸ್ತ್ರ ತಜ್ಞರ ಬೇಡಿಕೆ ಶೇ 34 ರಷ್ಟು ಹೆಚ್ಚಲಿದೆ ಎಂಬ ಅಂದಾಜಿದೆ.

ಕೆಲಸ ನೀಡುವ ಸಂಸ್ಥೆಗಳು: ಪದವಿ ಮತ್ತು ಉನ್ನತ ಪದವಿ ಪಡೆದವರನ್ನು ಈ ಕೆಳಕಂಡ ಉದ್ಯಮಗಳು ಕೆಲಸಕ್ಕಾಗಿ ಕೈಬೀಸಿ ಕರೆಯುತ್ತವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಚ್.ಡಿ.ಎಫ್.ಸಿ, ಜಿ.ಇ. ಕ್ಯಾಪಿಟಲ್, ಕಾಗ್ನಿಜಂಟ್, ಅಮೆರಿಕನ್ ಎಕ್ಸ್‌ಪ್ರೆಸ್‌, ಟಿಎನ್‌ಎಸ್ ಇನ್ನೊವೇಶನ್ ಲ್ಯಾಬ್ಸ್‌, ಬ್ಲ್ಯೂ ಓಶನ್ ಮಾರ್ಕೆಟಿಂಗ್, ಬಿ.ಎನ್ ಪರಿಭಾಸ್ ಇಂಡಿಯ, ಅಕ್ಸೆಂಚರ್, ನೀಲ್ಸನ್ ಕಂಪನಿ, ಹೆವ್‌ಲೆಟ್ ಪರಾರ್ಡ್, ಎಚ್.ಎಸ್.ಬಿ.ಸಿ, ಇಂಡಿಯನ್ ಮಾರ್ಕೆಟ್ ರಿಸರ್ಚ್ ಬ್ಯೂರೋ, ಜೆನ್‌ಪ್ಯಾಕ್ಟ್, ಡೆಲಾಯಿಟ್ ಕನ್ಸ್ಲ್ಟಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT