ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

MCQ: ಬಹು ಆಯ್ಕೆಯ ಪರೀಕ್ಷೆ ಯಶಸ್ಸಿಗೆ ತಂತ್ರಗಾರಿಕೆ ಹೇಗೆ?

ಎಂಸಿಕ್ಯು ಅಂದ್ರೆ ಸುಮ್ನೆ ಅಲ್ಲ..
Published 31 ಆಗಸ್ಟ್ 2023, 0:29 IST
Last Updated 31 ಆಗಸ್ಟ್ 2023, 0:29 IST
ಅಕ್ಷರ ಗಾತ್ರ

-ನಾಗೇಶ ಜಿ. ವೈದ್ಯ

ಕಾಲೇಜುಗಳ ಪ್ರವೇಶ ಪರೀಕ್ಷೆಯಿಂದಾರಂಭಿಸಿ ರೈಲ್ವೆ ಇಲಾಖೆಯವರೆಗೂ, ಬ್ಯಾಂಕಿನಿಂದ ಐಎಎಸ್‌ವರೆಗೂ ನೇಮಕಾತಿಯ ಪ್ರಕ್ರಿಯೆಯಾಗಿ ಬಹು ಆಯ್ಕೆಯ ಪರೀಕ್ಷೆಯನ್ನು ನಡೆಸಲಾಗುತ್ತದೆ. 1914ರಲ್ಲಿ ಇದನ್ನು ರಚಿಸಿದ್ದು ಅಮೇರಿಕದ ಫ್ರೆಡೆರಿಕ್ ಕೆಲ್ಲಿ ಎನ್ನುವ ಅಧ್ಯಾಪಕರು.

ಮೊದಲ ನೋಟದಲ್ಲಿ ಬಹು ಆಯ್ಕೆಯ ಪರೀಕ್ಷೆಗಳು ಸರಳವೆಂದು ತೋರಿದರೂ, ಅವುಗಳು ಸಂಕೀರ್ಣತೆಯಿಂದ ಕೂಡಿರುತ್ತವೆ. ಇದು ಅಲ್ಪಾವಧಿಯಲ್ಲಿ ಉತ್ತರಿಸಬೇಕಾದ ನೂರಾರು ಪ್ರಶ್ನೆಗಳ ಮೂಲಕ ಒಬ್ಬರ ಸಾಮರ್ಥ್ಯ ವನ್ನು ಅಳೆಯಲು ಅತ್ಯಂತ ಜನಪ್ರಿಯ ವಿಧಾನವಾಗಿ ಹೊರಹೊಮ್ಮಿದೆ. ಬಹು ಆಯ್ಕೆಯ ಪರೀಕ್ಷೆಗೆ ಬೇಕಿರುವುದು ಆಳವಾದ ಅಧ್ಯಯನ ಮತ್ತು ಜ್ಞಾನ.

ಋಣಾತ್ಮಕ ಅಂಕ ಏಕೆ ?

ಬಹು ಆಯ್ಕೆಯ ಪರೀಕ್ಷೆಯಲ್ಲಿ, ಉತ್ತರವು ತಪ್ಪಾಗಿದೆಯೆಂದರೆ, ಅಭ್ಯರ್ಥಿಗೆ ಉತ್ತರ ತಿಳಿದಿಲ್ಲ ಎನ್ನುವುದು ಖಚಿತ. ಆದರೆ, ಉತ್ತರವು ಸರಿಯಾಗಿದ್ದರೆ, ಅದು ನಿಜವಾಗಿಯೂ ಅಭ್ಯರ್ಥಿಗೆ ತಿಳಿದಿದೆಯೋ ಅಥವಾ ಯಾದೃಚ್ಛಿಕ (Random) ಊಹೆಯ ಕಾರಣದಿಂದ ಅಭ್ಯರ್ಥಿಯ ಉತ್ತರ ಸರಿಯಾಗಿದೆಯೇ ಎಂಬುದನ್ನು ಖಚಿತವಾಗಿ ಹೇಳಲಾಗದು. ಹಾಗಾಗಿ, ಗಂಭೀರವಾಗಿ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವ, ಜ್ಞಾನ ಮತ್ತು ಸಾಮರ್ಥ್ಯವನ್ನು ಹೊಂದಿರುವ ಅಭ್ಯರ್ಥಿಗಿಂತ ಏನನ್ನೂ ಓದದೆಯೂ ಕೇವಲ ಊಹೆಯ ಮೇಲೆ ಉತ್ತರಿಸಿದ ಅಭ್ಯರ್ಥಿ ಹೆಚ್ಚು ಅಂಕಗಳನ್ನು ಗಳಿಸುವ ಸಾಧ್ಯತೆ ಇದೆ.

ಜಾಣರನ್ನು ಪ್ರೋತ್ಸಾಹಿಸಲು ಹಾಗೂ ಊಹೆ ಮಾಡಿ ಉತ್ತರಿಸುವುದನ್ನು ನಿರುತ್ಸಾಹಗೊಳಿಸಲಿಕ್ಕೆಂದೇ ಬಹು ಆಯ್ಕೆಯ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳನ್ನು ಪರಿಚಯಿಸಲಾಯಿತು. ನೀಡಲಾದ ತಪ್ಪು ಉತ್ತರಗಳಿಗೆ ಅಂಕಗಳನ್ನು ಕಡಿತಗೊಳಿಸುವುದರಿಂದ, ಉತ್ತಮ ನಿಖರತೆಯನ್ನು ಹೊಂದಿರುವವರಿಗೆ ನ್ಯಾಯ ಒದಗಿಸುವಂತಾ ಗಿದೆ. ಕೇಂದ್ರ ಲೋಕಸೇವಾ ಆಯೋಗ, ಕರ್ನಾಟಕ ಲೋಕಸೇವಾ ಆಯೋಗ, ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS)ಗಳು ನಡೆಸುವ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿವೆ. ಆದರೆ, ಎಂಜಿನಿಯ ರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಕೆಸಿಇಟಿ ಪರೀಕ್ಷೆಯಲ್ಲಿ ಯಾವುದೇ ಋಣಾತ್ಮಕ ಅಂಕಗಳಿಲ್ಲ.

ಬಹು ಆಯ್ಕೆಯ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಜ್ಞಾನದ ಜೊತೆಗೆ ತಂತ್ರಗಳ ಅಗತ್ಯವಿದೆ.

ಅಧ್ಯಯನ ರೀತಿ : ಯಾವುದೇ ಪರೀಕ್ಷೆಗಳ ವೇಳಾಪಟ್ಟಿ ಸುಮಾರು ಮೂರು ತಿಂಗಳ ಮೊದಲೇ ದೊರಕುತ್ತದೆ. ಹಾಗಾಗಿ, ಸಾಕಷ್ಟು ಮುಂಚಿತವಾಗಿಯೇ ತಯಾರಿಯನ್ನು ಆರಂಭಿಸಿ. ಪರೀಕ್ಷೆಗಾಗಿ ಒಬ್ಬರೇ ತಯಾರಿ ನಡೆಸುವುದು ಒಳ್ಳೆಯದು. ಬಹು ಆಯ್ಕೆಯ ಹಳೆಯ ಪ್ರಶ್ನೆ ಪತ್ರಿಕೆಗಳು ಅನೇಕ ಜಾಲತಾಣಗಳಲ್ಲಿ ಲಭ್ಯವಿವೆ. ಅವುಗಳ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಿ. ಪ್ರತಿ ಸಲದ ಅಭ್ಯಾಸದೊಂದಿಗೆ ವೇಗವಾಗಿ ಹಾಗೂ ಸಮರ್ಪಕವಾಗಿ ಉತ್ತರಿಸುವ ಪ್ರಾವಿಣ್ಯತೆ ಹೊಂದಿ. ಆಗಾಗ ಗೆಳೆಯರೊಂದಿಗೆ ಗುಂಪಿನಲ್ಲಿ ಅಭ್ಯಾಸ ಮಾಡಿ ಹಾಗೂ ಅನುಮಾನಗಳನ್ನು ಪರಿಹರಿಸಿಕೊಳ್ಳಿ.

ಗೊತ್ತಿರುವುದಕ್ಕೆ ಆದ್ಯತೆಯಿರಲಿ : ಖಚಿತ ಉತ್ತರ ಗೊತ್ತಿರುವ ಪ್ರಶ್ನೆಗಳನ್ನು ಮೊದಲ ಸುತ್ತಿನಲ್ಲಿ ಉತ್ತರಿಸಿ. ಇದರಿಂದ ತಿಳಿದಿಲ್ಲದ ಸಂಕೀರ್ಣವಾದ ಪ್ರಶ್ನೆಗಳಿಗೆ ಹೆಚ್ಚಿನ ಸಮಯ ಉಳಿಸಲು ಸಾಧ್ಯ. ಒಂದೇ ಓದಿಗೆ ಅರ್ಥವಾಗದ ಪ್ರಶ್ನೆಗಳನ್ನೂ ಕೊನೆಯ ಅವಧಿಗಾಗಿ ಕಾದಿರಿಸಿ.

ಮನಸ್ಸಿನಲ್ಲಿ ಉತ್ತರಿಸಿ : ಯಾವುದೇ ಪ್ರಶ್ನೆಗಳ ಉತ್ತರಗಳನ್ನು ನೋಡುವ ಮೊದಲು, ನೀವೇ ಉತ್ತರವನ್ನು ನೆನಪಿಸಿಕೊಳ್ಳಿ. ಆ ನಂತರದಲ್ಲಿ ಆ ಉತ್ತರ ಇದೆಯೋ ಎಂಬುದನ್ನು ಪರಿಶೀಲಿಸಿ. ಹಾಗೆ ಮಾಡಿದಾಗ, ತಪ್ಪಾದ ಉತ್ತರವನ್ನು ಆಯ್ಕೆ ಮಾಡುವುದನ್ನು ತಪ್ಪಿಸಬಹುದು. ಉತ್ತರವನ್ನು ಆಯ್ದುಕೊಳ್ಳುವ ಮೊದಲು ಎಲ್ಲ ಆಯ್ಕೆಗಳ ಮೇಲೂ ಕಣ್ಣು ಹಾಯಿಸಿ. ಉದಾಹರಣೆಗೆ, ದಕ್ಷಿಣದ ಕೇಂದ್ರಾಡಳಿತ ಪ್ರದೇಶ ಎಂಬ ಪ್ರಶ್ನೆಗೆ ಅ) ಪಾಂಡಿಚೆರಿ, ಬ) ಚೆನ್ನೈ ಕ) ತೇಲಾಂಗಣ ಡ) ಪುದುಚೆರಿ ಎಂದಿದ್ದಾಗ, ಅವಸರದಲ್ಲಿ ಮೊದಲ ಆಯ್ಕೆ ಯೊಂದನ್ನೇ ಓದಿ ಅದನ್ನೇ ಆಯ್ದುಕೊಂಡರೆ, ಅಂಕ ಕಳೆದುಕೊಳ್ಳುತ್ತೀರಿ. ಪಾಂಡಿಚೆರಿ ಸರಿಯೇ ಆಗಿದ್ದರೂ, ಈಗ ಅದರ ಹೆಸರು ಬದಲಾಗಿರುವುದರಿಂದ, ನಾಲ್ಕನೇ ಆಯ್ಕೆಯೇ ಸರಿ.

ನಿರ್ಮೂಲನಾ ವಿಧಾನ ಬಳಸಿ: ಸರಿಯಾದ ಉತ್ತರ ಗೊತ್ತಿಲ್ಲದಿದ್ದರೆ, ಅಸಮಂಜಸ ಅಥವಾ ತರ್ಕಬದ್ಧವಲ್ಲದ ಆಯ್ಕೆಗಳನ್ನು ತೆಗೆದುಹಾಕುವ ಮೂಲಕ ಉತ್ತರವನ್ನು ಕಂಡುಕೊಳ್ಳಿ. ಉದಾಹರಣೆಗೆ ಇವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು ಎಂಬ ಪ್ರಶ್ನೆಗೆ ಅ) ಎನ್. ಟಿ. ರಾಮರಾವ್, ಬ) ಜೆ. ಜಯಲಲಿತಾ, ಕ) ಕೆ. ಚೆಂಗಲರಾಯ ರೆಡ್ಡಿ ಡ) ಎಂ. ಜಿ. ರಾಮಚಂದ್ರನ್ ಎಂಬ ಉತ್ತರಗಳನ್ನು ನೀಡಲಾಗಿದೆ ಎಂದಿಟ್ಟುಕೊಳ್ಳೋಣ. ಇದಕ್ಕೆ ನಿಮಗೆ ಉತ್ತರ ಗೊತ್ತಿಲ್ಲ. ನೀವೊಬ್ಬ ಚಲನಚಿತ್ರ ಪ್ರೇಮಿ. ಹಾಗಾಗಿ, ಮುಖ್ಯಮಂತ್ರಿಗಳಾಗಿದ್ದ ಚಿತ್ರ ನಟರನ್ನು ನೀವು ಬಲ್ಲಿರಿ. ಹಾಗಾಗಿ, ಕರ್ನಾಟಕದ ಮುಖ್ಯಮಂತ್ರಿ ಅಲ್ಲದವರನ್ನು ಒಂದೊಂದಾಗಿ ತೆಗೆಯುತ್ತ ಬನ್ನಿ. ರಾಮರಾವ್ ಆಂಧ್ರದ ಮುಖ್ಯಮಂತ್ರಿ ಆಗಿದ್ದರು. ಜಯಲಲಿತಾ, ರಾಮಚಂದ್ರನ್ ಅವರು ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದವರು. ಇವರನ್ನೂ ತೆಗೆದರೆ ಉಳಿದುಕೊಳ್ಳುವುದೇ ಸರಿಯಾದ ಉತ್ತರ. ಆದರೆ ಇದಕ್ಕೆ ಕೂಡ ನೀವು ಹೆಚ್ಚು ಓದಿಕೊಂಡಿರಬೇಕು ಎಂಬುದು ಅಪೇಕ್ಷಣೀಯ.

ನಕಾರಾತ್ಮಕ ಪ್ರಶ್ನೆ ಸುಲಭವಾಗಿಸಿ: ಋಣಾತ್ಮಕ ಪದಗಳಿರುವ ಪ್ರಶ್ನೆಗಳು ಗೊಂದಲಕ್ಕೀಡುಮಾಡುವುದು ಸಹಜ. ಅವುಗಳನ್ನು ಧನಾತ್ಮಕವಾಗಿ ಪರಿವರ್ತಿಸಿಕೊಳ್ಳಿ. ಅದರಿಂದ ವೇಗವಾಗಿ ಉತ್ತರ ನೀಡಲು ಸಾಧ್ಯವಾಗುತ್ತದೆ. ಉದಾಹರಣೆಗೆ ಇವರಲ್ಲಿ ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ? ಎನ್ನುವ ಪ್ರಶ್ನೆಯನ್ನು ಇವರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಯಾರು? ಎಂದು ಬದಲಾಯಿಸಿಕೊಂಡರೆ, ಉತ್ತರಿಸುವುದು ಸುಲಭ.

ಉತ್ತರ ಗೊತ್ತಿಲ್ಲದಿದ್ದರೆ: ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕಗಳಿಲ್ಲದಿದ್ದರೆ, ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವುದು ಉತ್ತಮ ನಡೆ. ಆದರೆ, ಋಣಾತ್ಮಕ ಅಂಕಗಳು ಇರುವ ಪರೀಕ್ಷೆಗಳಲ್ಲಿ ಶೇ 50ಕ್ಕಿಂತ ಹೆಚ್ಚು ಖಚಿತತೆ ಇದ್ದಲ್ಲಿ ಮಾತ್ರ ಅವುಗಳನ್ನು ಉತ್ತರಿಸುವ ಸಾಹಸ ಮಾಡಬಹುದು.

ಸಮಯ ನಿರ್ವಹಣೆ: ಪರೀಕ್ಷಾ ಕೊಠಡಿಗೆ ಹೊರಡುವ ಮುನ್ನವೇ ಪ್ರಶ್ನೆ ಪತ್ರಿಕೆಯಲ್ಲಿನ ಪ್ರತಿಯೊಂದು ಭಾಗಕ್ಕೆ, ಪ್ರಶ್ನೆಗಳಿಗೆ ನೀಡಬೇಕಾದ ಕಾಲಾವಧಿಯನ್ನು ನಿರ್ಧರಿಸಿಕೊಳ್ಳಿ. ಅದು ಪೇಪರನ್ನು ನಿಗದಿತ ಸಮಯಕ್ಕಿಂತ ಹತ್ತು ನಿಮಿಷ ಮೊದಲೇ ಮುಗಿಸುವ ಯೋಜನೆಯನ್ನು ಒಳಗೊಂಡಿರಲಿ. ಆ ಸಮಯವನ್ನು ನಿಮ್ಮ ಉತ್ತರಗಳನ್ನು ಒಮ್ಮೆ ಪರಿಶೀಲಿಸಲು ಬಳಸಿಕೊಳ್ಳಿ. ನಿಮ್ಮ ಅನುಕೂಲಕ್ಕಾಗಿ ಪರೀಕ್ಷಾ ಪರಿವೀಕ್ಷಕರು ಕಾಲಕಾಲಕ್ಕೆ ಉಳಿದಿರುವ ಸಮಯವನ್ನು ಘೋಷಿಸುತ್ತಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT