ಶನಿವಾರ, ಮೇ 8, 2021
24 °C
ವಿಟಿಯು ಘಟಿಕೋತ್ಸವ ಏ.3ರಂದು; ಪ್ರೊ.ಅಶುತೋಷ್‌ಗೆ ಗೌರವ ಡಾಕ್ಟರೇಟ್

ವಿಟಿಯು 20ನೇ ವಾರ್ಷಿಕ ಘಟಿಕೋತ್ಸವ: ಅಸ್ಮಥ್‌ ಶರ್ಮೀನ್‌ಗೆ 13 ಚಿನ್ನದ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 20ನೇ ವಾರ್ಷಿಕ ಘಟಿಕೋತ್ಸವವನ್ನು ಇಲ್ಲಿನ ಜ್ಞಾನಸಂಗಮ ಕ್ಯಾಂಪಸ್‌ನಲ್ಲಿ ಏ.3ರಂದು ಮಧ್ಯಾಹ್ನ 12ಕ್ಕೆ ಆಯೋಜಿಸಲಾಗಿದೆ’ ಎಂದು ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದರು.

‘ರಾಜ್ಯಪಾಲ ವಜುಭಾಯಿ ಆರ್. ವಾಲಾ ಅಧ್ಯಕ್ಷತೆ ವಹಿಸುವರು. ರಕ್ಷಣಾ ಇಲಾಖೆಯ ಮಾಜಿ ವೈಜ್ಞಾನಿಕ ಸಲಹೆಗಾರ ಡಾ.ವಿ.ಕೆ. ಆತ್ರೆ ಘಟಿಕೋತ್ಸವ ಭಾಷಣ ಮಾಡುವರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ.ಅಶುತೋಷ್ ಶರ್ಮಾ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿ ಪ್ರದಾನ ಮಾಡಲಾಗುವುದು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುವರು.

‘63,100 ಬಿ.ಇ., 892 ಬಿ.ಆರ್ಕ್., 4,817 ಎಂಬಿಎ, 1,248 ಎಂಸಿಎ, 1,704 ಎಂ.ಟೆಕ್, 77 ಎಂ.ಆರ್ಕ್ ಹಾಗೂ 278 ಪಿಜಿ ಡಿಪ್ಲೊಮಾ ಪದವಿ ಪ್ರದಾನ‌ ಮಾಡಲಾಗುವುದು. ಸಂಶೋಧನಾ ಅಧ್ಯಯನ ಪೂರ್ಣಗೊಳಿಸಿದ 635 ವಿದ್ಯಾರ್ಥಿಗಳಿಗೆ 635 ಪಿಎಚ್.ಡಿ., ಐವರಿಗೆ ‘ಎಂ.ಎಸ್ಸಿ (ಎಂಜಿನಿಯರಿಂಗ್) ಬೈ ರಿಸರ್ಚ್’ ಮತ್ತು ಮೂವರಿಗೆ ಸಂಯುಕ್ತ ದ್ವಿಪದವಿ (ಇಂಟಿಗ್ರೇಟೆಡ್ ಡುಯಲ್ ಡಿಗ್ರಿ) ಪ್ರದಾನ ಮಾಡಲಾಗುವುದು’ ಎಂದು ತಿಳಿಸಿದರು.

‘ಕೋವಿಡ್–19 ಕಾರಣದಿಂದ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುವುದು. ಸಭಾಂಗಣದಲ್ಲಿ ನೂರು ಮಂದಿಗೆ ಮಾತ್ರ ಅವಕಾಶ ಇರಲಿದೆ. ಎಲ್ಲ  ಎಂಜಿನಿಯರಿಂಗ್ ಕಾಲೇಜುಗಳಲ್ಲೂ ಕಾರ್ಯಕ್ರಮ ನೇರಪ್ರಸಾರ ಮಾಡಲಾಗುವುದು’ ಎಂದು ತಿಳಿಸಿದರು.

‘ಕೊರೊನಾ ಸಂಕಷ್ಟದಿಂದಾಗಿ ಕಾಲೇಜುಗಳಲ್ಲಿ ಆಫ್‌ಲೈನ್‌ ತರಗತಿಗಳು ಇರಲಿಲ್ಲ. ಆನ್‌ಲೈನ್‌ನಲ್ಲಿ ತರಗತಿ ನಡೆಸಲಾಗಿದೆ. ಈ ಬಾರಿ ಒಟ್ಟಾರೆಯಾಗಿ ಎಲ್ಲ ಕೋರ್ಸ್‌ಗಳಲ್ಲಿ ಸರಾಸರಿ ಶೇ. 81.62ರಷ್ಟು ಫಲಿತಾಂಶ ಬಂದಿದೆ. ಹೋದ ವರ್ಷ ಈ ಪ್ರಮಾಣ ಶೇ. 78.08ರಷ್ಟಿತ್ತು’ ಎಂದು ಹೇಳಿದರು.

ಕುಲಸಚಿವರಾದ ಪ್ರೊ.ಎ.ಎಸ್. ದೇಶಪಾಂಡೆ ಹಾಗೂ ಪ್ರೊ.ಬಿ.ಈ. ರಂಗಸ್ವಾಮಿ ಇದ್ದರು.

***

ಚಿನ್ನದ ಪದಕ ಪಡೆದವರ ವಿವರ

‘ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿನಿ ಅಸ್ಮಥ್‌ ಶರ್ಮೀನ್‌ ಅತಿ ಹೆಚ್ಚು ಅಂದರೆ 13 ಚಿನ್ನದ ಪದಕ ಗಳಿಸಿ ‘ಚಿನ್ನದ ಯುವತಿ’ಯಾಗಿ ಸಾಧನೆ ತೋರಿದ್ದಾರೆ. ಬೆಂಗಳೂರಿನ ಬಿಎಂಎಸ್ ತಾಂತ್ರಿಕ ಸಂಸ್ಥೆಯ ಮೆಕ್ಯಾನಿಕಲ್‌ ವಿಭಾಗದ ಅರುಣ ಡಿ., ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಸಂಸ್ಥೆಯ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದ ಗಗನಾ ರೆಡ್ಡಿ, ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ವಿಭಾಗದ ಎಚ್‌.ಆರ್. ಅಪೂರ್ವಾ ತಲಾ 7 ಚಿನ್ನದ ಪದಕ ಗಳಿಸಿದ್ದಾರೆ’.

‘ಬೆಂಗಳೂರಿನ ವೇಮನ ತಾಂತ್ರಿಕ ಸಂಸ್ಥೆಯ ಎ. ಸನ್ನಿಧಿ 6, ಬೆಂಗಳೂರಿ‌ನ ಬಿಎನ್ಎಂಐಟಿ ಎಂಬಿಎ ಕಾಲೇಜಿನ ಕೆ.ಎಂ. ಭೂಮಿಕಾ, ಬೆಂಗಳೂರಿನ ಬಿಐಟಿ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಸ್ಟ್ರುಮೆಂಟೇಷನ್‌ ವಿಭಾಗದ ಸೀಮಾ ಹೆಗಡೆ, ಬೆಂಗಳೂರಿನ ಆರ್‌ಎನ್‌ಎಸ್ಐಟಿಯ ಮಾಹಿತಿ ವಿಜ್ಞಾನ ವಿಭಾಗದ ಪಿ. ಯುಕ್ತಾ, ಮಂಗಳೂರಿನ ಶ್ರೀನಿವಾಸ್ ತಾಂತ್ರಿಕ ಸಂಸ್ಥೆಯ ನ್ಯಾನೊಟೆಕ್ನಾಲಜಿ ವಿಭಾಗದ ಜುನೇದ್ ಖಾನ್ ತಲಾ 4 ಚಿನ್ನದ ಪದಕ, ಮಂಗಳೂರಿನ ಸಂತ ಜೋಸೆಫ್‌ ಎಂಜಿನಿಯರಿಂಗ್ ಕಾಲೇಜಿನ ಡಿಸಿಲ್ವಾ ಡಯಾನೋ ಡೇನಿಯಲ್ ಹಾಗೂ ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಎಂ.ಬಿ. ಪ್ರಿಯಾ ತಲಾ 3 ಚಿನ್ನದ ಪದಕಗಳನ್ನು ಗಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

***

ವಿಶ್ವವಿದ್ಯಾಲಯದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಹಣಕಾಸಿ‌ನ ದುರ್ಬಳಕೆ ಆಗಿಲ್ಲ

- ಡಾ.ಕೆ. ಕರಿಸಿದ್ದಪ್ಪ, ಕುಲಪತಿ, ವಿಟಿಯು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು