ಶುಕ್ರವಾರ, ಆಗಸ್ಟ್ 19, 2022
22 °C

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಬಿಎಸ್ಸಿ(ಅರಣ್ಯ) ನಂತರ ಮುಂದೇನು?

ವಿ.ಪ್ರದೀಪ್‌ ಕುಮಾರ್ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

1. ನಾನು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದೇನೆ. ಬಿಎಸ್‌ಸಿ (ಅರಣ್ಯ) ಮಾಡಬೇಕೆಂದುಕೊಂಡಿರುವೆ. ಆದರೆ ಕೆಲವರು ಇದರಲ್ಲಿ ಭವಿಷ್ಯವಿಲ್ಲ ಎನ್ನುತ್ತಿದ್ದಾರೆ. ಈ ಪದವಿ ನಂತರ ಸಿಗಬಹುದಾದ  ಹುದ್ದೆಗಳ ಬಗ್ಗೆ ತಿಳಿಸಿ.

ಚಿನ್ಮಯ್, ಮಂಡ್ಯ

ನೀವು ಬಿ.ಎಸ್ಸಿ(ಅರಣ್ಯ) ಪದವಿಯ ಪೂರ್ಣಗೊಳಿಸಿದ ನಂತರ, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ  ಆರ್‌ಎಫ್‌ಒ ಹುದ್ದೆಯನ್ನು ಪಡೆದುಕೊಳ್ಳಬಹುದು. ಆರ್‌ಎಫ್‌ಒ ಹುದ್ದೆಗೆ ಪದವಿ ಪರೀಕ್ಷೆಯಲ್ಲಿ ಶೇ 50 ಅಂಕಗಳಿಸಿರ ಬೇಕು. ಕರ್ನಾಟಕ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ ನಂತರ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದಾದ ನಂತರ ದೇಹದಾರ್ಢ್ಯತೆ, ವೈದ್ಯಕೀಯ ಮತ್ತು ದೈಹಿಕ ಕ್ಷಮತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಈ ಎಲ್ಲಾ ಪರೀಕ್ಷೆಗಳ ಆಧಾರದ ಮೇಲೆ ನೇಮಕಾತಿಯಾಗುತ್ತದೆ. ಡಿಆರ್‌ಎಫ್‌ಒ ಹುದ್ದೆಗೆ ಪಿಯುಸಿ ಪರೀಕ್ಷೆಯ ನಂತರ ಅರ್ಹತೆ ಸಿಗುತ್ತದೆ. ನೇಮಕಾತಿ ಪ್ರಕ್ರಿಯೆ, ಎರಡು ಹುದ್ದೆಗಳಿಗೂ ಸಮಾನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://kfdrecruitment.in/

2. ನಾನು ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದೇನೆ. ಪಿಯುಸಿ ನಂತರ, ಜೆಇಇ ಮೇನ್ಸ್ ಮತ್ತು ಅಡ್ವಾನ್ಸ್‌ ಮಾಡಿದ ಬಳಿಕ, ದೇಶದ ಯಾವುದಾದರೂ ಪ್ರತಿಷ್ಟಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಮುಗಿಸಬೇಕೆಂಬ ಆಸೆ ಇದೆ. ಆದರೆ ಮನೆಯಲ್ಲಿನ ಪರಿಸ್ಥಿತಿ ಗಮನಿಸಿದರೆ, ಓದು ಮುಗಿದ ಬಳಿಕ ಯಾವ ಕೆಲಸ ಸಿಗಬಹುದು? ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕ್ಯಾಂಪಸ್ ನೇಮಕಾತಿ ಇರುತ್ತದೆಯೇ?

ಹೆಸರು, ಊರು ತಿಳಿಸಿಲ್ಲ.

ಅಭ್ಯರ್ಥಿಗಳಿಗೆ ಸರಿಯಾದ ಉದ್ಯೋಗ ಸಿಗುವುದು ಎಷ್ಟು ಕಷ್ಟವೋ, ಉದ್ಯೋಗದಾತರಿಗೆ ಕೌಶಲಯುಕ್ತ ಅಭ್ಯರ್ಥಿಗಳು ಸಿಗುವುದೂ ಸಹ ಅಷ್ಟೇ ಕಷ್ಟ. ಆದ್ದರಿಂದ, ವೃತ್ತಿಜೀವನದಲ್ಲಿ ಯಶಸ್ಸಿನ ಅನ್ವೇಷಣೆಯಲ್ಲಿರುವ ಅಭ್ಯರ್ಥಿಗಳು, ಜ್ಞಾನಾರ್ಜನೆಯ ಜೊತೆಗೆ ತಮ್ಮ ಶಕ್ತಿ, ಸಾಮರ್ಥ್ಯ, ಕುಂದು ಕೊರತೆಗಳನ್ನರಿತು, ಪ್ರಾಮಾಣಿಕ ಪ್ರಯತ್ನಗಳಿಂದ ವೃತ್ತಿ ಸಂಬಂಧಿತ ಕೌಶಲಗಳನ್ನು, ತಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡರೆ ಕ್ಯಾಂಪಸ್ ನೇಮಕಾತಿ ಸುಲಭವಾಗುತ್ತದೆ.

ಸಾಮಾನ್ಯವಾಗಿ, ಎಲ್ಲಾ ಪ್ರತಿಷ್ಟಿತ ಕಾಲೇಜುಗಳಲ್ಲಿ ಕ್ಯಾಂಪಸ್ ನೇಮಕಾತಿ ಇರುತ್ತದೆ. ಹಾಗೂ, ನೀವು ಬರೆಯುತ್ತಿರುವ ಪ್ರವೇಶ ಪರೀಕ್ಷೆಗಳ ನಂತರ, ಕ್ಯಾಂಪಸ್ ನೇಮಕಾತಿ ಮತ್ತು ಸಂಪನ್ಮೂಲಗಳನ್ನು ಪರಿಗಣಿಸಿ, ಕಾಲೇಜನ್ನು ಆಯ್ಕೆಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI

3. ನಾನು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದೇನೆ. ಬಿಎಸ್‌ಸಿ ಮುಗಿಸಿ, ಕೆಎಎಸ್ ಪರೀಕ್ಷೆ ಪಾಸುಮಾಡಿ ತಹಶೀಲ್ದಾರ್ ಆಗಬೇಕು ಎನ್ನುವುದು ನನ್ನ ಆಸೆ. ಆದರೆ, ನನ್ನ ಪೋಷಕರು ಎಂಜಿನಿಯರಿಂಗ್ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ನಾನು ಮಾನಸಿಕ ಹಿಂಸೆಗೆ ಒಳಪಟ್ಟಿದ್ದೀನಿ. ಇದರಲ್ಲಿ, ಯಾವುದು ಮಾಡಿದರೆ ನನ್ನ ಆಸೆ ಈಡೇರಬಹುದು?

ದೀಪಾ ಹಕ್ಕೀ, ಐನಾಪುರ್.

ಮಕ್ಕಳ ಭವಿಷ್ಯದ ಬಗ್ಗೆ ಪೋಷಕರ ಆಸಕ್ತಿ, ಚಿಂತನೆ, ಆತಂಕ ಇವೆಲ್ಲವೂ ಸಾಮಾನ್ಯ. ಆದ್ದರಿಂದಲೇ, ಪಿಯುಸಿ ನಂತರ ಮುಂದೇನು ಎನ್ನುವ ನಿರ್ಣಾಯಕ ಹಂತದ ಈ ಪ್ರಶ್ನೆಯ ಕುರಿತು ಎಲ್ಲಾ ವಿಧ್ಯಾರ್ಥಿಗಳಿಗೂ ಪೋಷಕರಿಗೂ ನಿರಂತರ ವಾಗಿ ಆಗುವ ಚರ್ಚೆ, ವಾದ ಸರ್ವೇಸಾಮಾನ್ಯ. ಆದರೆ, ಈ ಚರ್ಚೆಯನ್ನು ಮಾನಸಿಕ ಹಿಂಸೆಯೆಂದುಕೊಳ್ಳದೆ, ಪೋಷಕರನ್ನು ನಿಮ್ಮ ಒಳಿತನ್ನೇ ಬಯಸುವ ಸ್ನೇಹಿತರೆಂದು ಭಾವಿಸಿ.

ಕೆಎಎಸ್ ಪರೀಕ್ಷೆಯನ್ನು ಯಾವುದೇ ಪದವಿಯ ನಂತರ ಮಾಡಬಹುದು. ಮುಖ್ಯವಾಗಿ ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನೂ, ಕುಟುಂಬದ ಅಗತ್ಯ ಮತ್ತು ಸವಾಲುಗಳನ್ನೂ ಪರಿಗಣಿಸಿ, ಒಂದು ಮುಕ್ತ ವಾತಾವರಣದಲ್ಲಿ ಪರಸ್ಪರ ಚರ್ಚಿಸಿ, ವೃತ್ತಿ ಯೋಜನೆಯನ್ನು ಮಾಡಿ. ಅದರಂತೆ ಕೋರ್ಸ್ ಆಯ್ಕೆಯನ್ನು ಮಾಡಿ, ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ. ವೃತ್ತಿ ಯೋಜನೆಯನ್ನು ಮಾಡುವುದರ ಕುರಿತ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/c/EducationalExpertManagementCareerConsultant


ಪ್ರದೀಪ್‌

4. ನನಗೆ ಈಗ 23 ವರ್ಷ. ಚಿಕ್ಕಂದಿನಿಂದಲೂ ಕ್ರಿಕೆಟ್ ಎಂದರೆ ಹುಚ್ಚು. ನಾನು ಈಗ ಕ್ರಿಕೆಟ್ ಅಕಾಡೆಮಿಗೆ ಸೇರಿದರೆ, ಭವಿಷ್ಯದಲ್ಲಿ ಏನಾದರೂ ಪ್ರಯೋಜನವಾಗುತ್ತದೆಯೇ?  

ಹೆಸರು, ಊರು ತಿಳಿಸಿಲ್ಲ.

ಕ್ರಿಕೆಟ್ ಆಟದಲ್ಲಿ ನಿಮಗಿರುವ ಆಸಕ್ತಿ ಶ್ಲಾಘನೀಯ. ಕ್ರಿಕೆಟ್ ಕ್ಷೇತ್ರದಲ್ಲಿ, ಈವರೆಗಿನ ನಿಮ್ಮ ಸಾಧನೆಯ ಕುರಿತು ನೀವು ಮಾಹಿತಿಯನ್ನು ನೀಡಿಲ್ಲವಾದ್ದರಿಂದ ನಿಷ್ಪಕ್ಷಪಾತವಾಗಿ ವಿಶ್ಲೇಷಿಸಿ, ಮಾರ್ಗದರ್ಶನ ನೀಡುವುದು ಅಸಾಧ್ಯ.

ಇದೊಂದು, ಅತಿ ಹೆಚ್ಚು ಪೈಪೋಟಿಯಿರುವ ಕ್ಷೇತ್ರ; ಹಾಗಾಗಿ, ಸಾಧನೆ ಇಲ್ಲಿ ಸುಲಭವಲ್ಲ. ಈ ಹವ್ಯಾಸವನ್ನು, ವೃತ್ತಿಯ ನ್ನಾಗಿ ಪರಿವರ್ತಿಸುವ ಶಕ್ತಿ, ನೈಪುಣ್ಯ ಮತ್ತು ಪ್ರತಿಭೆ ನಿಮ್ಮಲ್ಲಿದೆಯೇ? ಇದು ಜೀವನೋಪಾಯದ ವಿಚಾರ; ನೀವು ಈ ವೃತ್ತಿಯನ್ನೇ ಅವಲಂಬಿಸಿ, ಜೀವನದಲ್ಲಿ ಏಳಿಗೆಯನ್ನು ಸಾಧಿಸಬಲ್ಲಿರಾ? ಬದುಕಿನ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಭಾಯಿಸಬಲ್ಲಿರಾ? ಈ ಮೂಲಭೂತ ಪ್ರಶ್ನೆಗಳಿಗೆ, ನಿಮ್ಮ ಪೋಷಕರೊಡನೆ ಚರ್ಚಿಸಿ, ಉತ್ತರವನ್ನು ಕಂಡುಕೊಳ್ಳಿ.

ನೀವು ಗಮನಿಸಬೇಕಾದ ವಿಚಾರವೇನೆಂದರೆ, ಇಂತಹ ಅಸಂಪ್ರದಾಯಿಕ ವೃತ್ತಿಗಳಲ್ಲಿ ಮೊದಲ ಹಲವಾರು ವರ್ಷಗಳು ಅತ್ಯಂತ ಕಠಿಣವಾಗಿರುತ್ತದೆ. ಆಗ ನಿಮ್ಮ ನೆಲೆಯನ್ನು ಕಂಡುಕೊಳ್ಳಲು ಕಷ್ಟಗಳನ್ನೂ, ಸವಾಲುಗಳನ್ನೂ ಎದುರಿಸ ಬೇಕಾಗುತ್ತದೆ. ಆದ್ದರಿಂದ, ನಿಮ್ಮಲ್ಲಿ ಅಸಾಧಾರಣವಾದ ಪ್ರತಿಭೆಯಿದ್ದು, ಕುಟುಂಬದ ಬೆಂಬಲ ಸಂಪೂರ್ಣವಾಗಿದ್ದರೆ, ವೃತ್ತಿಪರ ಕ್ರಿಕೆಟ್ ಆಟಗಾರರಾಗಲು ಪ್ರಯತ್ನಿಸಬಹುದು. ಹೆಚ್ಚಿನ ಮಾರ್ಗದರ್ಶನ ಅಗತ್ಯವೆನಿಸಿದರೆ, ಈ ಅಂಕಣದ ಮೂಲಕ, ನಮ್ಮನ್ನು ಸಂಪರ್ಕಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು