ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ: ಪ್ಯಾರಾ ಮೆಡಿಕಲ್ ಕೋರ್ಸ್‌ನಲ್ಲಿ ಅವಕಾಶಗಳೇನು?

Last Updated 24 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

1. ಸರ್, ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಓದುತ್ತಿದ್ದೇನೆ. ಮುಂದೆ ಪ್ಯಾರಾ ಮೆಡಿಕಲ್ ಆಯ್ಕೆ ಮಾಡಿಕೊಂಡರೆ ಒಳ್ಳೆಯದೇ? ಮತ್ತು ಯಾವ ಕೋರ್ಸ್ ತೆಗೆದುಕೊಂಡರೆ ಒಳ್ಳೆಯ ವೇತನದ ಕೆಲಸ ಸಿಗಬಹುದು?
-
ಅಶ್ರಿತ್, ಶೃಂಗೇರಿ.

ಈಗ ಹೆಚ್ಚಿನ ಬೇಡಿಕೆಯಿರುವ ಮತ್ತು ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಕೆಲವು ಪ್ಯಾರಾ ಮೆಡಿಕಲ್ ಪದವಿ ಕೋರ್ಸ್‌ಗಳೆಂದರೆ ಬಿಎಸ್‌ಸಿ ನರ್ಸಿಂಗ್, ಫಿಸಿಯೋತೆರಪಿ, ರೇಡಿಯಾಲಜಿ, ಇಮೇಜಿಂಗ್, ಕಾರ್ಡಿಯಾಕ್ ಕೇರ್, ಅನಸ್ತೇಶಿಯಾ, ಒ.ಟಿ., ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ಮೆಡಿಕಲ್ ಲ್ಯಾಬ್, ನ್ಯೂಕ್ಲಿಯರ್ ಮೆಡಿಸಿನ್ ಟೆಕ್ನಾಲಜಿ ಇತ್ಯಾದಿ. ಸಾಮಾನ್ಯವಾಗಿ, ಇವೆಲ್ಲವೂ 3-4 ವರ್ಷದ ಕೋರ್ಸ್‌ಗಳು ಮತ್ತು ಕೋರ್ಸ್ ಮುಗಿದ ನಂತರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ಅಪಘಾತ ಚಿಕಿತ್ಸಾ ಕೇಂದ್ರಗಳು, ಪ್ರಯೋಗಾಲಯಗಳು, ತುರ್ತು ನಿಗಾ ಘಟಕಗಳು, ಮೆಡಿಕಲ್ ಕಾಲೇಜುಗಳಲ್ಲಿ ಉದ್ಯೋಗವನ್ನು ಅರಸಬಹುದು. ಹೆಚ್ಚಿನ ವಿವರಗಳಿಗಾಗಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಜಾಲತಾಣವನ್ನು ಪರಿಶೀಲಿಸಿ.

ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿಯ ಯೋಜನೆ ಮಾಡಿ ಅದಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಬೇಕು. ವೃತ್ತಿಯಲ್ಲಿ ನಿಮ್ಮ ಕಾರ್ಯಕ್ಷಮತೆ ನಿರೀಕ್ಷೆಗೆ ಅನುಗುಣವಾಗಿದ್ದರೆ ವೇತನ, ಇನ್ನಿತರ ಅನುಕೂಲಗಳು ಕಾಲಕ್ರಮೇಣ ಹೆಚ್ಚಾಗುತ್ತವೆ.

2. ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಎಂ.ಟೆಕ್ 2021ರಲ್ಲಿ ಮುಗಿಸಿದ್ದೇನೆ. ಒಂದು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುವುದಾದರೆ ಯಾವ ಕ್ಷೇತ್ರದ ವೃತ್ತಿಗಳಿಗೆ ಹೋಗಬಹುದು?
-ನಾಗರಾಜ್ ಎನ್, ಕೋಲಾರ.

ಏರೋಸ್ಪೇಸ್, ಏರೋನಾಟಿಕಲ್, ಆಟೋಮೊಬೈಲ್, ಮೈನಿಂಗ್, ಮ್ಯಾನುಫ್ಯಾಕ್ಚರಿಂಗ್, ಎಲೆಕ್ಟ್ರಿಕಲ್, ಡಿಫೆನ್ಸ್ ಇತ್ಯಾದಿ ಕ್ಷೇತ್ರಗಳಲ್ಲಿನ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ವೃತ್ತಿಯನ್ನು ಅರಸಬಹುದು.

3. ನಾನು ಬಿಕಾಂ ಮುಗಿಸಿದ್ದೇನೆ; ಆದರೆ, ಮುಂದೇನು ಮಾಡಬೇಕೆಂದು ತಿಳಿಯದೆ ಗೊಂದಲದಲ್ಲಿದ್ದೇನೆ. ಸರಿಯಾದ ಮಾರ್ಗದರ್ಶನ ನೀಡುವವರಿಲ್ಲ. ನಾವು ಮಧ್ಯಮ ವರ್ಗದ ಕುಟುಂಬದವರು. ಹಾಗಾಗಿ, ಖಾಸಗಿ ಕಾಲೇಜಿಗೆ ಸೇರಲು ಸಾಧ್ಯವಿಲ್ಲ; ಸರ್ಕಾರಿ ಕಾಲೇಜಿಗೇ ಸೇರಬೇಕು. ದಯವಿಟ್ಟು ನಿಮ್ಮ ಮಾರ್ಗದರ್ಶನ ನೀಡಿ.
-ಪವಿತ್ರ, ಕೋಲಾರ.

ಕಾಮರ್ಸ್ ವಿಸ್ತಾರವಾದ ಕ್ಷೇತ್ರ. ಬಿಕಾಂ ನಂತರ ಮಾಡಬಹುದಾದ ಕೋರ್ಸ್‌ಗಳೆಂದರೆ ಎಂಕಾಂ, ಎಂಬಿಎ, ಎಂಸಿಎ, ಸಿಎ, ಐಸಿಡಬ್ಲ್ಯುಎ, ಎಸಿಎಸ್, ಐಎಎಸ್, ಕೆಎಎಸ್ ಇತ್ಯಾದಿ. ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿಯ ಯೋಜನೆ ಮಾಡಿ ಅದರಂತೆ ಕೋರ್ಸ್ ಆಯ್ಕೆ ಮಾಡಿ, ಸರ್ಕಾರಿ ಕಾಲೇಜುಗಳಲ್ಲಿ ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಆರ್ಥಿಕ ಸಮಸ್ಯೆಯಿರುವ ವಿದ್ಯಾರ್ಥಿಗಳಿಗಿರುವ ಅನೇಕ ಸ್ಕಾಲರ್‌ಶಿಪ್, ಉಚಿತ ಪುಸ್ತಕಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಆ ಅನುಕೂಲಗಳನ್ನು ಪಡೆದುಕೊಳ್ಳಿ. ಅಗತ್ಯವಿದ್ದರೆ, ವೃತ್ತಿ ಸಮಾಲೋಚಕರನ್ನು ಸಂಪರ್ಕಿಸಿ.

4. ನಾನು ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ನಾನು ಹೇಗೆ ಎಲೆಕ್ಟ್ರಿಕಲ್ ಲೈಸೆನ್ಸ್ ಪಡೆಯಬೇಕು?
-ಪವನ್, ಊರು ತಿಳಿಸಿಲ್ಲ.

ಎಲೆಕ್ಟ್ರಿಲ್ ಲೈಸೆನ್ಸ್ ವಿವರಗಳಿಗಾಗಿ ಗಮನಿಸಿ: https://ksei.gov.in/pdf/faq/LECFAQ.pdf

5. ನಾನು ಅಮೆರಿಕದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಕೋರ್ಸನ್ನು 2017ರಲ್ಲಿ ಮುಗಿಸಿದ್ದರೂ ನಿರುದ್ಯೋಗಿಯಾಗಿದ್ದು ಖಿನ್ನತೆಗೆ ಒಳಗಾಗಿದ್ದೆ. ಅಕ್ಟೋಬರ್ 2020ರಲ್ಲಿ ಭಾರತಕ್ಕೆ ವಾಪಸ್ ಬಂದೆ. ಇಲ್ಲಿನ ಕೆಲವು ಸಂದರ್ಶನಗಳಲ್ಲಿ ಸಫಲತೆ ಸಿಗಲಿಲ್ಲ. ಇದುವರೆಗೆ, ಇಲ್ಲೂ ಕೆಲಸ ಸಿಗದೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. 4 ವರ್ಷದಿಂದ ಉದ್ಯೋಗವಿಲ್ಲದೆ ಶಿಕ್ಷಣದ ಸಾಲವನ್ನೂ ತೀರಿಸಲಾಗುತ್ತಿಲ್ಲ. ಈ ವಿಷಯದ ಸಲುವಾಗಿ ಎಲ್ಲರೂ ನಿರಾಶೆಗೊಂಡಿದ್ದು ನಾನು ಮುಂದೇನು ಮಾಡಬಹುದೆಂದು ತಿಳಿಸಿ.
-
ನಿಸರ್ಗ್, ಊರು ತಿಳಿಸಿಲ್ಲ.

ನಿರುದ್ಯೋಗ, ಸಾಲದ ಹೊರೆಯಿಂದ ಬಳಲುತ್ತಿರುವ ನಿಮ್ಮ ಸಮಸ್ಯೆ ಅರ್ಥವಾಗುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸಕಾರಾತ್ಮಕ ಮನೋಭಾವವೇ ಸಂಜೀವಿನಿಯಾಗಬಲ್ಲದು. ಉನ್ನತ ವ್ಯಾಸಂಗ ಮಾಡಿರುವ ನೀವು ಆಶಾವಾದಿಗಳಾಗಿ ಹೊಸ ದೃಷ್ಟಿಕೋನದಿಂದ ನಿಮಗಿರುವ ಸಾಧ್ಯತೆಗಳ ಬಗ್ಗೆ ಯೋಚಿಸಿ. ಉದಾಹರಣೆಗೆ, ಯುಪಿಎಸ್‌ಸಿ/ ಕೆಪಿಎಸ್‌ಸಿ ಪರೀಕ್ಷೆಗಳ ಮುಖಾಂತರ ಸರ್ಕಾರದ ಉನ್ನತ ಹುದ್ದೆಗಳಿಗೆ ಪ್ರಯತ್ನಿಸಬಹುದು ಅಥವಾ ವಿಸ್ತಾರವಾದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಬಂಧಿತ ಖಾಸಗಿ ಕ್ಷೇತ್ರದಲ್ಲಿರುವ ಅವಕಾಶಗಳತ್ತ ಗಮನವನ್ನು ಹರಿಸಬಹುದು. ಇದಲ್ಲದೆ, ಸ್ವಯಂ ಉದ್ಯೋಗವೂ ನಿಮಗಿರುವ ಅವಕಾಶವೆನ್ನುವುದನ್ನು ಮರೆಯದಿರಿ. ಹಾಗಾಗಿ, ಈ ಎಲ್ಲಾ ಅವಕಾಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸ್ಪಷ್ಟವಾದ ಗುರಿ, ಸಾಧಿಸುವ ಛಲ ಮತ್ತು ಗೆಲ್ಲುವ ಆತ್ಮವಿಶ್ವಾಸವಿದ್ದರೆ ಉಜ್ವಲ ಭವಿಷ್ಯ ನಿಮ್ಮದಾಗಬಲ್ಲದು. ಅಗತ್ಯವಿದ್ದರೆ, ವೃತ್ತಿ ಸಮಾಲೋಚಕರ ಮಾರ್ಗದರ್ಶನವನ್ನು ಪಡೆಯಿರಿ.

ವಿ. ಪ್ರದೀಪ್ ಕುಮಾರ್
ವಿ. ಪ್ರದೀಪ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT