ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಬಯೋಟೆಕ್‌ ಎಂಜಿನಿಯರಿಂಗ್‌ಗಿರುವ ಅವಕಾಶಗಳೇನು?

Published 29 ಜನವರಿ 2024, 9:36 IST
Last Updated 29 ಜನವರಿ 2024, 9:36 IST
ಅಕ್ಷರ ಗಾತ್ರ

1. ನಾನು ಈ ವರ್ಷ ಬಿ.ಎಸ್ಸಿ ಮುಗಿಸುತ್ತಿದ್ದು,  ಇಂಗ್ಲಿಷ್ ಶಿಕ್ಷಕಿಯಾಗುವ ಆಸೆಯಿದೆ. ಬಿ.ಎಸ್ಸಿ ನಂತರ ಯಾವ ಕೋರ್ಸ್ ಮಾಡಬೇಕು?
ಹೆಸರು, ಊರು ತಿಳಿಸಿಲ್ಲ.

ಉತ್ತಮ ಶಿಕ್ಷಕರಾಗಲು ವಿಷಯದ ಕುರಿತು ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ಈ ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು. ಇವೆಲ್ಲವೂ ನಿಮ್ಮಲ್ಲಿದ್ದು, ಜತೆಗೆ ಆತ್ಮವಿಶ್ವಾಸವಿದ್ದರೆ, ಈ ವೃತ್ತಿಯನ್ನು ಅನುಸರಿಸಬಹುದು. 
ಬಿ.ಎಸ್ಸಿ ನಂತರ ಎಂಎ (ಇಂಗ್ಲಿಷ್) ಮಾಡಿ ರಾಷ್ಜ್ರೀಯ/ರಾಜ್ಯ ಮಟ್ಟದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ವಲಯದ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಬಹುದು. ವೃತ್ತಿಯಲ್ಲಿ ಹೆಚ್ಚಿನ ಪ್ರಗತಿಯನ್ನು ಗಳಿಸಲು,  ಪಿ.ಎಚ್‌ಡಿ (ಇಂಗ್ಲಿಷ್) ಮಾಡಿ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಬಹುದು. ಪಿ.ಎಚ್‌ಡಿ ಪದವಿಯನ್ನು ಗಳಿಸಿರುವ ಅಭ್ಯರ್ಥಿಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯಿಂದ ವಿನಾಯಿತಿ ದೊರಕುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/Mb4PKUb35_Q

2. ನಾನು ದ್ವಿತೀಯ ಪಿಯುಸಿ ಮಾಡುತ್ತಿದ್ದು, ಮುಂದೆ ಎಂಜಿನಿಯರಿಂಗ್ (ಬಯೋಟೆಕ್) ಮಾಡಬೇಕು? ಕೆಸಿಇಟಿ ಪರೀಕ್ಷೆಯಲ್ಲಿ ಎಷ್ಟು ಅಂಕಗಳು ಬರಬೇಕು? ಹಾಗೂ ಎಂಜಿನಿಯರಿಂಗ್ ನಂತರದ ಅವಕಾಶಗಳೇನು?
ಹೆಸರು, ಊರು ತಿಳಿಸಿಲ್ಲ.

ಬಯೋಟೆಕ್ನಾಲಜಿ ಕ್ಷೇತ್ರ ಕ್ಷಿಪ್ರವಾಗಿ ಅಭಿವೃದ್ಧಿಯಾಗುತ್ತಿದೆ. ಎಂಜಿನಿಯರಿಂಗ್ ನಂತರ  ಫಾರ್ಮಾಸ್ಯುಟಿಕಲ್, ಆಹಾರ ಉತ್ಪಾದನೆ, ಸಂಸ್ಕರಣೆ ಮತ್ತು ಸುರಕ್ಷತೆ,  ರಸಾಯನ ವಿಜ್ಞಾನ, ಕೃಷಿ, ಪರಿಸರ ನಿಯಂತ್ರಣ, ತ್ಯಾಜ್ಯ ನಿರ್ವಹಣೆ, ಇಂಧನ, ಜೆನೆಟಿಕ್ಸ್, ಸಂತಾನೋತ್ಪತ್ತಿ, ತಂತ್ರಜ್ಞಾನ ಬೆಂಬಲ, ಸಂಶೋಧನೆ, ಪ್ರಯೋಗಶಾಲೆಗಳು ಮುಂತಾದ ಕ್ಷೇತ್ರಗಳಲ್ಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
ಪಿಯುಸಿ ನಂತರ ಬಿಟೆಕ್ (ಬಯೋಟೆಕ್ನಾಲಜಿ) ಮಾಡಿ ಕ್ಯಾಂಪಸ್ ನೇಮಕಾತಿಯಲ್ಲಿ ವೃತ್ತಿಯನ್ನು ಅರಸಬಹುದು ಅಥವಾ ಉನ್ನತ ಶಿಕ್ಷಣಕ್ಕಾಗಿ ಎಂಟೆಕ್ ಮಾಡಬಹುದು. ನಿಮ್ಮ ಮುಂದಿನ ವೃತ್ತಿಯೋಜನೆಯ ಬಗ್ಗೆ ಸ್ಪಷ್ಟತೆಯಿದ್ದಲ್ಲಿ, ಪಿಯುಸಿ ನಂತರ ಇಂಟಿಗ್ರೇಟೆಡ್ ಎಂಟೆಕ್ (ಬಯೋಟೆಕ್ನಾಲಜಿ) ಕೂಡಾ ಮಾಡಬಹುದು.
ಪಿಯುಸಿ ಮತ್ತು ಕೆಸಿಇಟಿ ಅಂಕಗಳು, ಮತ್ತು ರ‍್ಯಾಂಕಿಂಗ್ ಆಧಾರದ ಮೇಲೆ, ರಾಜ್ಯದ ಕಾಲೇಜುಗಳಲ್ಲಿ ಲಭ್ಯವಿರುವ ಎಂಜಿನಿಯರಿಂಗ್ ಸೀಟ್ ಹಂಚಿಕೆಯಾಗುತ್ತದೆ. ಹಾಗಾಗಿ, ಕೆಸಿಇಟಿ ಪರೀಕ್ಷೆಯಲ್ಲಿ ಎಷ್ಟು ಅಂಕಗಳನ್ನು ಗಳಿಸಬೇಕೆಂದು ನಿಖರವಾಗಿ ಅಂದಾಜಿಸುವುದು ಸಾಧ್ಯವಿಲ್ಲ.  ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ

3. ಸರ್, ನಾನು ಡಿಪ್ಲೊಮಾ (ಆರೋಗ್ಯ ಪರೀಕ್ಷಕ) ಕೋರ್ಸ್ ಮುಗಿಸುತ್ತಿದ್ದು ಭವಿಷ್ಯದ ದೃಷ್ಟಿಯಿಂದ ಮುಂದೆ ಯಾವ ಕೋರ್ಸ್ ಮಾಡಬೇಕು?
ಹೆಸರು, ಊರು ತಿಳಿಸಿಲ್ಲ

ಡಿಪ್ಲೊಮಾ (ಆರೋಗ್ಯ ಪರೀಕ್ಷಕ) ಕೋರ್ಸ್ ನಂತರ ನಿಮ್ಮ ಆಸಕ್ತಿಯ ಅನುಸಾರ ಬಿ.ಎಸ್ಸಿ (ಪ್ಯಾರಾ ಮೆಡಿಕಲ್ ಸೇರಿದಂತೆ ವೈವಿಧ್ಯಮಯ ಆಯ್ಕೆಗಳು) ಮಾಡುವುದು ಸೂಕ್ತ. ಅಥವಾ, ಡಿಪ್ಲೊಮಾ ನಂತರ ವೃತ್ತಿಯನ್ನು ಆರಂಭಿಸಿ, ಸಂಬಂಧಪಟ್ಟ ವಿಷಯದಲ್ಲಿ ಅರೆಕಾಲಿಕ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಬಹುದು.

4. ಸರ್, ನಾನು ಐಟಿಐ ನಂತರ ಪದವಿ ಮತ್ತು ಬಿ.ಇಡಿ ಕೋರ್ಸ್ ಮಾಡಿದ್ದೀನಿ. ನಾನು ಎಚ್‌ಎಸ್‌ಟಿಆರ್ ಪರೀಕ್ಷೆ ಬರೆದು ಸರಕಾರಿ ಉದ್ಯೋಗ ಮಾಡಬಹುದೇ?
ಹೆಸರು, ಊರು ತಿಳಿಸಿಲ್ಲ.

ನೀವು ಪದವಿ ಮತ್ತು ಬಿ.ಇಡಿ ಕೋರ್ಸ್ ಮುಗಿಸಿದ ನಂತರ ಎಚ್‌ಎಸ್‌ಟಿಆರ್ ಪರೀಕ್ಷೆಯ ಮೂಲಕ ಪ್ರೌಢಶಾಲೆಯ ಶಿಕ್ಷಕರಾಗಲು ಅರ್ಹತೆಯಿರುತ್ತದೆ.

5. ನಾನು ಬಿಎ (ಸಮಾಜ ವಿಜ್ಞಾನ) ಪೂರ್ಣಗೊಳಿಸಿದ್ದು, ಸ್ನಾತಕೋತ್ತರ ಇಂಗ್ಲಿಷ್ ಪದವಿಯಲ್ಲಿ ದೂರ ಶಿಕ್ಷಣದ ಮೂಲಕ ಮಾಡಬೇಕೆಂದುಕೊಂಡಿದ್ದೇನೆ. ಜೊತೆಗೆ ಬಿ.ಇಡಿ (ರೆಗ್ಯುಲರ್) ಮಾಡುತ್ತಿದ್ದೇನೆ. ದೂರಶಿಕ್ಷಣದ ಪದವಿ ಸರ್ಕಾರಿ ಉದ್ಯೋಗಕ್ಕೆ ಮಾನ್ಯತೆಯಿರುತ್ತದೆಯೇ? ನಾನು ಪ್ರೌಢಶಾಲಾ ಶಿಕ್ಷಕನಾಗಲು ಅರ್ಹನೇ? 
ಹೆಸರು, ಊರು ತಿಳಿಸಿಲ್ಲ.

ಪದವಿ ಕೋರ್ಸ್ ಮತ್ತು ಬಿ.ಇಡಿ ಕೋರ್ಸ್ ನಂತರ ಪ್ರೌಢಶಾಲೆಯ ಶಿಕ್ಷಕರಾಗಲು ಅರ್ಹತೆಯಿರುತ್ತದೆ. ಆದರೆ, ನೀವು ಬಿಎ/ಸ್ನಾತಕೋತ್ತರ ಪದವಿಯಲ್ಲಿ ಓದಿರುವ ವಿಷಯವನ್ನು ಬೋಧನಾ ವಿಷಯವನ್ನಾಗಿ ಬಿ.ಇಡಿ ಕೋರ್ಸ್‌ನಲ್ಲಿ ಓದಿರಬೇಕು. ಹಾಗೂ, ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ದೂರ ಶಿಕ್ಷಣ ಬ್ಯೂರೊ, ಮಾನ್ಯತೆಯಿರುವ ಎಲ್ಲಾ ದೂರಶಿಕ್ಷಣ ಕೋರ್ಸ್ಗಳಿಗೆ ಸರ್ಕಾರಿ ಉದ್ಯೋಗವನ್ನು ಪಡೆಯಲು ಅರ್ಹತೆಯಿರುತ್ತದೆ. ನೀವು  ಮಾಡಬೇಕೆಂದುಕೊಂಡಿರುವ ದೂರ ಶಿಕ್ಷಣ ಕೋರ್ಸ್ ಮಾನ್ಯತೆಯ ಮಾಹಿತಿಗಾಗಿ ಗಮನಿಸಿ:  https://deb.ugc.ac.in/


6. ಕರ್ನಾಟಕ ರಾಜ್ಯ ಸರ್ಕಾರಿ ಸೇವೆಯಲ್ಲಿರುವ ನೌಕರರು ಕೆಪಿಎಸ್‌ಸಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿಯೇನು?. ನನ್ನ ವಯಸ್ಸು 36 (ಒಬಿಸಿ).
ಹೆಸರು, ಊರು ತಿಳಿಸಿಲ್ಲ.

ಇರುವ ಮಾಹಿತಿಯಂತೆ ಕೆಪಿಎಸ್‌ಸಿ ಪರೀಕ್ಷೆಯ ಮೂಲಕ ಸರ್ಕಾರದ ಉದ್ಯೋಗವನ್ನು ಪಡೆಯಲು, ಒಬಿಸಿ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 38 (ಒಬಿಸಿ) ವರ್ಷಗಳ ಒಳಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT