ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ಯಾವ ‘ಪ್ರೋಗ್ರಾಮಿಂಗ್‌ ಕೋರ್ಸ್’ ಉತ್ತಮ?

Last Updated 13 ಮಾರ್ಚ್ 2022, 19:30 IST
ಅಕ್ಷರ ಗಾತ್ರ

1. ನಾನು 2021ರಲ್ಲಿ ಬಿಸಿಎ ಮುಗಿಸಿದ್ದೇನೆ. ಈಗ ಎಂಸಿಎ/ಎಂಟೆಕ್ ಮಾಡುವುದೋ ಅಥವಾ ಬೇರೆ ಯಾವುದಾದರೂ ಕೋರ್ಸ್ ಮಾಡುವುದೋ ಎಂಬ ಗೊಂದಲದಲ್ಲಿದ್ದೇನೆ. ಹಾಗಾಗಿ ಬಿಸಿಎ ಮುಗಿಸಿದವರಿಗೆ ಯಾವ 'ಪ್ರೋಗ್ರಾಮಿಂಗ್ ಕೋರ್ಸ್' ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು, ತಿಳಿಸಿ?

ಹೆಸರು, ಊರು ತಿಳಿಸಿಲ್ಲ.

ಮಾಹಿತಿ ತಂತ್ರಜ್ಞಾನ(ಐಟಿ) ಕ್ಷೇತ್ರ ಬಹಳ ವಿಸ್ತಾರವಾಗಿದೆ. ಈಗ ತ್ವರಿತವಾಗಿ ಅಭಿವೃದ್ಧಿಯಾಗುತ್ತಿರುವ ಐಟಿ ಕ್ಷೇತ್ರದಲ್ಲಿ ಅನೇಕ ‘ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌‘ ಕೋರ್ಸ್‌ಗಳಿವೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಏಕೆಂದರೆ, ಪ್ರತಿ ಕೋರ್ಸ್‌ಗೆ (ಉದಾಹರಣೆಗೆ, ಜಾವಾ, ಜಾವಾ ಸ್ಕ್ರಿಪ್ಟ್, ಸಿ, ಸಿ++, ಎಚ್‌ಟಿಎಂಎಲ್, ಪೈಥಾನ್, ಸ್ವಿಫ್ಟ್, ಯೂನಿಟಿ, ಗೋ, ರಸ್ಟ್ ಇತ್ಯಾದಿ) ತನ್ನದೇ ಆದ ಉಪಯುಕ್ತತೆ ಮತ್ತು ಇತಿಮಿತಿಯಿರುತ್ತದೆ. ಈ ಕ್ಷೇತ್ರದಲ್ಲಿರುವ ಆಕರ್ಷಕ ಮತ್ತು ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಲು ಸ್ಪಷ್ಟವಾದ ವೃತ್ತಿಯೋಜನೆಯಿರಲೇ ಬೇಕು. ಆದ್ದರಿಂದ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿದರೆ ನಿಮಗೆ ಯಾವ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ ಕೋರ್ಸ್‌ನಲ್ಲಿ ಪರಿಣತಿಬೇಕಾಗುತ್ತದೆ ಎಂದು ಅರಿವಾಗುತ್ತದೆ. ಬಿಸಿಎ ನಂತರ ಪ್ರೋಗ್ರಾಮಿಂಗ್ ಅಲ್ಲದೇ ಡೇಟಾ ಸೈಂಟಿಸ್ಟ್, ಡಿಜಿಟಲ್ ಮಾರ್ಕೆಟಿಂಗ್, ಪ್ರಾಡಕ್ಟ್ ಮ್ಯಾನೇಜ್‌ಮೆಂಟ್, ಬ್ಲಾಕ್‌ಚೈನ್ ಮುಂತಾದ ಕ್ಷೇತ್ರಗಳಲ್ಲೂ ವೃತ್ತಿಯನ್ನು ಅರಸಬಹುದು. ಹೆಚ್ಚಿನ ತಜ್ಞತೆಗಾಗಿ ಎಂಸಿಎ/ಎಂಟೆಕ್ ಮಾಡಬಹುದು.

2. ದೂರ ಶಿಕ್ಷಣದಲ್ಲಿ ಪಡೆದ ಪದವಿ, ಯುಜಿಸಿ ಮಾನ್ಯತೆ ಹೊಂದಿದೆಯೇ ಎಂಬುದನ್ನು ನಾವು ಹೇಗೆ ಖಚಿತ ಪಡಿಸಿಕೊಳ್ಳಬೇಕು?

ಮಹೇಶ್, ಊರು ತಿಳಿಸಿಲ್ಲ.

ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ನಿಯಮದ ಪ್ರಕಾರ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್), 'ಎ' ಶ್ರೇಣಿಯ ಮಾನ್ಯತೆ ಪಡೆದಿರುವ ಎಲ್ಲ ವಿಶ್ವವಿದ್ಯಾಲಯಗಳಿಗೂ ದೂರ ಶಿಕ್ಷಣ ಕೋರ್ಸ್ ಆರಂಭಿಸಲು ಅನುಮತಿ ನೀಡುತ್ತದೆ. ಈ ಕೋರ್ಸ್‌ಗಳನ್ನು ನಡೆಸಲು ದೂರ ಶಿಕ್ಷಣ ಬ್ಯೂರೊ, ಯುಜಿಸಿ ಮಾನ್ಯತೆಯನ್ನು ಪಡೆದಿರಬೇಕು. ಪ್ರತಿ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗುವಂತೆ ಮಾನ್ಯತೆ ಪಡೆದಿರುವ ಕೋರ್ಸ್‌ಗಳ ಪಟ್ಟಿಯನ್ನು ದೂರ ಶಿಕ್ಷಣ ಬ್ಯೂರೊ, ಯುಜಿಸಿ ಸಂಸ್ಥೆಯ ಜಾಲತಾಣದಲ್ಲಿ ಪ್ರಕಟಿಸುತ್ತದೆ. ಈ ಜಾಲತಾಣದಲ್ಲಿ ಕಳೆದ ಹಲವಾರು ವರ್ಷಗಳಿಗೆ ಅನ್ವಯವಾಗುವ ಮಾನ್ಯತೆ ಪಡೆದ ಕೋರ್ಸ್‌ಗಳ ಮಾಹಿತಿಯೂ ಲಭ್ಯ. ಹಾಗಾಗಿ, ದೂರ ಶಿಕ್ಷಣ ಮತ್ತು ಆನ್‌ಲೈನ್ ಕೋರ್ಸ್‌ಗೆ ಸೇರುವ ಮೊದಲು ಈ ಜಾಲತಾಣದಲ್ಲಿನ ಮಾಹಿತಿಯನ್ನು ಪರಾಮರ್ಶಿಸಿ: https://deb.ugc.ac.in/

3. ನಾನು ವಿಜ್ಞಾನ ಪದವಿ ಮುಗಿಸಿದ್ದೇನೆ. ಪ್ರಸ್ತುತ, ಒಂದು ವರ್ಷದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಓದಿನ ಜೊತೆಗೆ ಅರೆಕಾಲಿಕ ಕೆಲಸ ಪಡೆಯಲು ಕಡಿಮೆ ಅವಧಿಯ ಉತ್ತಮ ಕೋರ್ಸ್ ತಿಳಿಸಿ. ಮಾಹಿತಿ ತಂತ್ರಜ್ಞಾನ ವಲಯದಲ್ಲಿದ್ದರೆ ಒಳ್ಳೆಯದು.

ಹೆಸರು, ಊರು ತಿಳಿಸಿಲ್ಲ.

ನಿಮ್ಮ ಆಸಕ್ತಿಗೆ ಅನುಗುಣವಾಗಿ ಮಾಹಿತಿ ತಂತ್ರಜ್ಞಾನ ವಲಯದ ಗ್ರಾಫಿಕ್ ಡಿಸೈನ್, ವೆಬ್ ಡಿಸೈನ್, ವಿಎಫ್‌ಎಕ್ಸ್, ಅನಿಮೇಷನ್, ಎಸ್‌ಇಒ, ಡಿಜಿಟಲ್ ಮಾರ್ಕೆಟಿಂಗ್, ಡೇಟಾ ಸೈನ್ಸ್, ಮೆಷಿನ್ ಲರ್ನಿಂಗ್ ಇತ್ಯಾದಿ ಕೋರ್ಸ್‌ಗಳನ್ನು ಮಾಡಬಹುದು. ಜೊತೆಗೆ, ಯಾವುದೇ ಕೋರ್ಸ್‌ನ ಅಗತ್ಯವಿಲ್ಲದೇ ಮಾಡಬಹುದಾದ ಅನೇಕ ಅರೆಕಾಲಿಕ ಉದ್ಯೋಗಾವಕಾಶಗಳೂ ಲಭ್ಯ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/earn-while-you-learn-3/

4. ನಾನು ಡಿಪ್ಲೊಮಾ ಮಾಡಿದ್ದು ಪೊಲೀಸ್ ಕಾನ್ಸ್ಟೇಬಲ್ ಆಗಬೇಕು ಅಂತ ತುಂಬಾ ಆಸೆ ಇದೆ. ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಪರೀಕ್ಷೆ ಬರೆಯಬಹುದೇ?

ಮೊಹಮದ್ ಅಲಿ, ರಂಗೇನಹಳ್ಳಿ.

ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಅಥವಾ ಎರಡು ವರ್ಷದ ಐಟಿಐ ಕೋರ್ಸ್ ಅನ್ನು ಪಿಯುಸಿ ಗೆ ತತ್ಸಮಾನ ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://ksp.karnataka.gov.in/page/Administration/Recruitment/kn

5. ನಾನು ಕೆಪಿಎಸ್‌ಸಿ ಇಲಾಖೆ ನಡೆಸುತ್ತಿರುವ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳಿಗೆ ತಯಾರಿ ನಡೆಸುತ್ತಿದ್ದೆನೆ. ಈ ಮೊದಲು ಇರುವಂತೆ ‘ಕನ್ನಡ ವಿಷಯ ಪತ್ರಿಕೆ-2‘ ಈ ಮುಂದೆ ನಡೆಯುವ ಪರೀಕ್ಷೆಗೆ ಇರಲಿದೆಯೇ?

ಆನಂದ, ಬೆಳಗಾವಿ.

ಎಫ್‌ಡಿಎ/ಎಸ್‌ಡಿಎ ಪರೀಕ್ಷೆಗಳು ಇದೇ ವರ್ಷದ ಸೆಪ್ಟೆಂಬರ್ 18 ಮತ್ತು 19 ರಂದು ನಡೆಯಲಿದೆ. ಪರೀಕ್ಷೆಯ ಇನ್ನಿತರ ವಿವರಗಳ ನಿಖರವಾದ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.kpsc.kar.nic.in/

6. ನಾನು ಕನ್ನಡ ಶಿಕ್ಷಕನಾಗಲು ಇಚ್ಛಿಸಿದ್ದೇನೆ . ಈಗ ಬಿಎ ಪದವಿಯಲ್ಲಿ ಐಚ್ಛಿಕ ಕನ್ನಡ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಶಿಕ್ಷಕನಾಗಬೇಕಾದರೆ ಮುಂದೆ ಯಾವ ಕೋರ್ಸ್‌ಗಳನ್ನು ಮಾಡಬೇಕು?

ಹೆಸರು, ಊರು ತಿಳಿಸಿಲ್ಲ.

ಪ್ರೌಢ ಶಾಲೆಗಳಲ್ಲಿ ಶಿಕ್ಷಕರಾಗಲು ಬಿಎ, ಬಿ.ಇಡಿ ನಂತರ ಟಿಇಟಿ/ಸಿಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ಪದವಿ ಕೋರ್ಸ್‌ನಲ್ಲಿ ಓದಿರುವ ಪ್ರಮುಖ ವಿಷಯಗಳನ್ನು ಬೋಧಿಸಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://collegedunia.com/courses/bachelor-of-education-bed/how-to-become-a-teacher#2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT