ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಸಿ.ಎ – ಎಂ.ಎಸ್ಸಿ ಯಾವುದು ಸೂಕ್ತ ?

Published 30 ಏಪ್ರಿಲ್ 2023, 22:34 IST
Last Updated 30 ಏಪ್ರಿಲ್ 2023, 22:34 IST
ಅಕ್ಷರ ಗಾತ್ರ

1. ನಾನೀಗ ಬಿ.ಎಸ್ಸಿ ಮೂರನೇ ವರ್ಷದಲ್ಲಿ ಓದುತ್ತಿದ್ದೇನೆ. ಮುಂದೆ ಎಂ.ಸಿ.ಎ ಅಥವಾ ಎಂ.ಎಸ್ಸಿ ಮಾಡಬೇಕೆಂದಿದ್ದೇನೆ. ಸರಿಯಾದ ಆಯ್ಕೆ ಯಾವುದೆಂದು ತಿಳಿಸಿ – ಹೆಸರು, ಊರು ತಿಳಿಸಿಲ್ಲ.

ನೀವು ಯಾವ ವಿಷಯಗಳಲ್ಲಿ ಬಿ.ಎಸ್ಸಿ ಮಾಡುತ್ತಿದ್ದೀರೆಂದು ತಿಳಿಸಿಲ್ಲ. ಎಂ.ಸಿ.ಎ ಕೋರ್ಸ್, ಕಂಪ್ಯೂಟರ್ ವಿಜ್ಞಾನದ ಸಿದ್ಧಾಂತಗಳು ಮತ್ತು ಅಪ್ಲಿಕೇಷನ್ಸ್ ಕುರಿತು ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಎಂ.ಎಸ್ಸಿ ಕೋರ್ಸ್ ನಂತರದ ಅವಕಾಶಗಳು, ಕೋರ್ಸಿನ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ವೃತ್ತಿಯ ದೃಷ್ಠಿಯಿಂದ, ಎಂ.ಸಿಎ ಅಥವಾ ಎಂ.ಎಸ್ಸಿ ನಂತರ, ಆಯಾ ಕ್ಷೇತ್ರಗಳಲ್ಲಿನ ಕೆಲಸದ ವಿವರಗಳಿಗೆ (ಜಾಬ್ ಪ್ರೊಫೈಲ್) ತಕ್ಕಂತೆ ಜ್ಞಾನ, ಆಸಕ್ತಿ, ಅಭಿರುಚಿ ಮತ್ತು ಕೌಶಲಗಳ ಅಗತ್ಯವಿರುತ್ತದೆ. ಹಾಗಾಗಿ, ನಿಮಗೆ ಯಾವ ವೃತ್ತಿ/ಕೋರ್ಸ್ ಸೂಕ್ತವೆಂದು ಪರಿಶೀಲಿಸಲು, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಒಲವು ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ, ವೃತ್ತಿಯೋಜನೆಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ

ಈ ವಿಡಿಯೊ ವೀಕ್ಷಿಸಿ

ಪ್ರ

2. ನಾನು ಬಿಕಾಂ ದ್ವಿತೀಯ ವರ್ಷದಲ್ಲಿ ಓದುತ್ತಿದ್ದೇನೆ. ಸಿ.ಎ ಮಾಡಬೇಕೆಂದುಕೊಂಡಿದ್ದೇನೆ. ಈಗಿನಿಂದಲೇ ತಯಾರಿ ನಡೆಸುವುದು ಹೇಗೆ? ದಯವಿಟ್ಟು ತಿಳಿಸಿ – ಹೆಸರು, ಊರು ತಿಳಿಸಿಲ್ಲ.

ನಿಮಗೆ ಸಿ.ಎ ಮಾಡಲು ಎರಡು ಆಯ್ಕೆಗಳಿವೆ. ನೀವು ಈಗಾಗಲೇ ಮುಗಿಸಿರುವ ಪಿಯುಸಿ ಪರೀಕ್ಷೆಯ ಆಧಾರದ ಮೇಲೆ ಸಿಎ ಫೌಂಡೇಷನ್ ಕೋರ್ಸ್‌ಗೆ, ಇನ್‌ಸ್ಟಿಟ್ಯೂಟ್ ಅಫ್ ಚಾರ್ಟೆಡ್ ಅಕೌಂಟೆಂಟ್ಸ್ ಅಫ್ ಇಂಡಿಯ (ಐಸಿಎಐ) ಅವರಲ್ಲಿ ನೋಂದಾಯಿಸಿಕೊಂಡು ಶೇ 50ರ ಅಂಕಗಳನ್ನು ಪಡೆದು ಉತ್ತೀರ್ಣರಾದ ನಂತರ ಇಂಟರ್‌ಮೀಡಿಯಟ್ ಕೋರ್ಸಿಗೆ ಅರ್ಹತೆ ಸಿಗುತ್ತದೆ. ಅಥವಾ, ಬಿಕಾಂ ಕೋರ್ಸಿನಲ್ಲಿ ಶೇ 55 ಅಂಕಗಳನ್ನು ಗಳಿಸಿದಲ್ಲಿ, ಇಂಟರ್‌ಮೀಡಿಯಟ್ ಕೋರ್ಸಿಗೆ ಫೌಂಡೇಷನ್ ಕೋರ್ಸ್ ಮಾಡುವ ಅಗತ್ಯವಿಲ್ಲದೆ, ನೇರವಾಗಿ ನೋಂದಾಯಿಸಿಕೊಳ್ಳಬಹುದು. ಜೊತೆಗೆ, 3 ವರ್ಷದ ಆರ್ಟಿಕಲ್ಡ್ ತರಬೇತಿ ಪಡೆಯಲು, ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳನ್ನು ಸೇರಬೇಕು. ‌

ಇಂಟರ್‌ಮೀಡಿಯೆಟ್ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಪರಿಶ್ರಮ, ಬದ್ಧತೆ, ಆತ್ಮವಿಶ್ವಾಸ ಮತ್ತು ಸಮಯದ ನಿರ್ವಹಣೆಯಿಂದ ಸಿಎ ಕೋರ್ಸ್ ಮಾಡಬಹುದು; ಕೋಚಿಂಗ್ ಕಡ್ಡಾಯವಲ್ಲ. ಮೇಲಾಗಿ, ಚಾರ್ಟರ್ಡ್ ಅಕೌಂಟೆಂಟ್ ಇನ್‌ಸ್ಟಿಟ್ಯೂಟ್ ವತಿಯಿಂದ ನೀಡುವ ಕೋಚಿಂಗ್ ಮತ್ತು ಮಾರ್ಗದರ್ಶನದ ಸೌಲಭ್ಯವನ್ನು ನೀವು ಉಪಯೋಗಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ

ಈ ವಿಡಿಯೊ ವೀಕ್ಷಿಸಿ   

ಪ್ರ

3. ನನಗೆ ಕಿವಿ ಕೇಳಿಸುವುದಿಲ್ಲ. ನಾನು ಡಿಪ್ಲೊಮಾ (ಸಿವಿಲ್ ಎಂಜಿನಿಯರಿಂಗ್) ಮುಗಿಸಿದ್ದೇನೆ. ಆದರೆ ಕೆಲವು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದು, ನನ್ನ ಅಣ್ಣನ ಸಹಾಯದಿಂದ ಉತ್ತೀರ್ಣನಾಗಲು ಪ್ರಯತ್ನಿಸುತ್ತಿದ್ದೇನೆ. ಮುಂದೆ ಬಿ.ಇ ಮಾಡಬೇಕು; ಆದರೆ, ಪಾಠಗಳನ್ನು ಕೇಳಿಸಿಕೊಳ್ಳದೆ ಬಿಇ ಓದುವುದು ಕಷ್ಟ. ಕಾಲೇಜಿನಲ್ಲಿ ಉಪನ್ಯಾಸಕರನ್ನು ಕೇಳುವುದಕ್ಕೆ ಭಯ; ಏಕೆಂದರೆ, ಅವರು ನನಗೆ ಅರ್ಥ ಆಗುವ ಹಾಗೆ ಹೇಳುವುದಿಲ್ಲ. ನನ್ನ ಪ್ರಯತ್ನದಿಂದಲೇ ಉತ್ತೀರ್ಣನಾಗುವುದು ಹೇಗೆ? – ಹೆಸರು, ಊರು ತಿಳಿಸಿಲ್ಲ.

ಶ್ರವಣ ದೋಷವಿದ್ದರೂ, ಡಿಪ್ಲೊಮಾ ಮುಗಿಸಿ ಎಂಜಿನಿಯರಿಂಗ್ ಪದವಿಯನ್ನು ಮಾಡುವ ಧ್ಯೇಯವಿರುವ ನಿಮಗೆ ಅಭಿನಂದನೆಗಳು. ಎಂಜಿನಿಯರಿಂಗ್ ಪದವಿಯನ್ನು ಮಾಡಲು ತಮಿಳುನಾಡಿನ ಕೃಷ್ಣನ್‌ಕೋವಿಲ್‌ನಲ್ಲಿರುವ ಕಲಸಲಿಂಗಮ್ ಅಕಾಡೆಮಿ ಅಫ್ ರಿಸರ್ಚ್ ಅಂಡ್ ಎಜುಕೇಷನ್ ಸಂಸ್ಥೆಯನ್ನು ಸಂಪರ್ಕಿಸಿ. ಈ ಸಂಸ್ಥೆ ಶ್ರವಣದೋಷವಿರುವ ವಿದ್ಯಾರ್ಥಿಗಳಿಗೆಂದೇ ವಿಶೇಷವಾದ ಬಿ.ಟೆಕ್ ಕೋರ್ಸ್‌ ಮಾಡಲು ಬೇಕಾಗುವ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿದೆ ಎನ್ನಲಾಗುತ್ತದೆ. ದೇಶದಲ್ಲಿರುವ ಇಂತಹ ಸಂಸ್ಥೆಗಳನ್ನು ಸಂಪರ್ಕಿಸಿ ನಿಮ್ಮ ಧ್ಯೇಯವನ್ನು ಸಾಧಿಸಲು ಪ್ರಯತ್ನಿಸಿ.  

ಇದಲ್ಲದೆ, ನೀವು ಓದುವ ಕಾರ್ಯತಂತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ನಿಮ್ಮ ಓದುವಿಕೆ ಹೆಚ್ಚು ಪರಿಣಾಮಕಾರಿಯಾಗಬಹುದು.   

ಪ್ರ

4. ನಾನು ಬಿಎಸ್ಸಿ (ಪಿ.ಸಿ.ಎಂ) ಪದವಿ ಮುಗಿಸಿದ್ದೇನೆ. ಮುಂದೆ ಎಂ.ಎಸ್ಸಿ (ಡೇಟಾ ಸೈನ್ಸ್‌) ಮಾಡಬೇಕೆಂದುಕೊಂಡಿದ್ದೇನೆ. ಎಂ.ಎಸ್ಸಿ ಕೋರ್ಸ್‌ನಲ್ಲಿ ಡೇಟಾ ಸೈನ್ಸ್ ಹಾಗೂ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಎಂಬಂತೆ ಎರಡು ಆಯ್ಕೆಗಳಿವೆ. ಇವೆರಡರಲ್ಲಿ ಯಾವುದು ಸೂಕ್ತ? – ವಿಶಾಲ್, ಬೆಳಗಾವಿ.

ವ್ಯಾಪಾರದ ಮಾಹಿತಿ, ದತ್ತಾಂಶ ತಿಳುವಳಿಕೆ ಮತ್ತು ತಯಾರಿಕೆ, ಮೌಲ್ಯಮಾಪನ ಮತ್ತು ನಿಯೋಜನೆಗಾಗಿ ಉದ್ಯಮಗಳು ಡೇಟಾ ಸೈನ್ಸ್ ಮೇಲೆ ಹೆಚ್ಚು ಅವಲಂಬಿತವಾಗಿವೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಡೇಟಾ ಸೈನ್ಸ್ ತಜ್ಞರಿಗೆ ಅಪಾರವಾದ ಬೇಡಿಕೆಯಿದೆ.

ಡೇಟಾ ಸೈನ್ಸ್ ಕ್ಷೇತ್ರದಲ್ಲಿರುವ ಅನೇಕ ವಿಭಾಗಗಳಲ್ಲಿ ಅನಾಲಿಟಿಕ್ಸ್ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಮೇಲ್ನೋಟಕ್ಕೆ ಎಂ.ಎಸ್ಸಿ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉತ್ತಮ ಆಯ್ಕೆಯೆಂದು ಅನಿಸಿದರೂ, ಎರಡೂ ಕೋರ್ಸ್‌ಗಳ ಸಂಪೂರ್ಣ ವಿವರಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ಮೇಲಷ್ಟೇ ನಿರ್ಣಯಕ್ಕೆ ಬರಬಹುದು.

ಉದಾಹರಣೆಗೆ, ಎರಡೂ ಕೋರ್ಸ್‌ಗಳ ಕಲಿಕೆಯ ಫಲಿತಾಂಶವೇನು(ಲರ್ನಿಂಗ್ ಔಟ್‌ಕಮ್) ಎನ್ನುವುದು ವೃತ್ತಿಯ ದೃಷ್ಟಿಯಿಂದ ಮುಖ್ಯವಾಗುತ್ತದೆ. ಹಾಗಾಗಿ, ನೀವು ತಿಳಿಸಿರುವ ಎರಡೂ ವಿಶ್ವವಿದ್ಯಾಲಯಗಳ ಪಠ್ಯಕ್ರಮದ ವಿಷಯ, ವಿನ್ಯಾಸ, ಮೂಲಸೌಕರ್ಯಗಳು, ಪ್ಲೇಸ್‌ಮೆಂಟ್ ಮಾಹಿತಿ, ಇತ್ಯಾದಿಗಳನ್ನು ಪರಿಶೀಲಿಸಿ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಕೌಶಲಗಳನ್ನು ಗಮನಿಸಿ, ಯಾವ ವಿಶ್ವವಿದ್ಯಾಲಯದ ಕೋರ್ಸ್ ಸೂಕ್ತವೆಂದು ನಿರ್ಧರಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ

ಈ ವಿಡಿಯೊ ವೀಕ್ಷಿಸಿ

ಪ್ರ

5. ನಾನು ದ್ವಿತೀಯ ಪಿಯುಸಿ ಪರೀಕ್ಷೆಯ ಎಲ್ಲಾ ವಿಷಯದಲ್ಲಿಯೂ ತೇರ್ಗಡೆಯಾಗಿರುತ್ತೇನೆ. ಒಂದೆರಡು ವಿಷಯದಲ್ಲಿ ಅತೃಪ್ತಿಯಿದೆ. ಫಲಿತಾಂಶವನ್ನು ತಿರಸ್ಕರಿಸಿ ಮತ್ತೆ ಪರೀಕ್ಷೆ ಬರೆದರೆ ಪುನರಾವರ್ತಿತ ಅಭ್ಯರ್ಥಿ ಎಂದು ಅಂಕ ಪಟ್ಟಿಯಲ್ಲಿ ನಮೂದಿಸುತ್ತಾರಾ? ಹಾಗೂ, ಅದರಲ್ಲಿ ಮೊದಲಿಗಿಂತಲೂ ಕಡಿಮೆ ಅಂಕಗಳು ಬಂದರೆ ಯಾವ ಅಂಕವನ್ನು ಪರಿಗಣಿಸುತ್ತಾರೆ? – ಹೆಸರು, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ, ಒಂದು ಬಾರಿ ಫಲಿತಾಂಶವನ್ನು ತಿರಸ್ಕರಿಸಿ, ಪೂರಕ ಪರೀಕ್ಷೆಗೆ ಹಾಜರಾದ ಮೇಲೆ ಹಿಂದಿನ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು ಮರುಪಡೆಯಲು ಅವಕಾಶವಿರುವುದಿಲ್ಲ. ಹಾಗೂ, ಅಂಕಪಟ್ಟಿಯಲ್ಲಿನ ವಿದ್ಯಾರ್ಥಿಯ ವಿವರದಲ್ಲಿ ‘ಪುನರಾವರ್ತಿತ’ (ರಿಪೀಟರ್) ಎಂಬ ಮಾಹಿತಿಯಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT