ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯ ಕೆಲಸ ಎಂದರೆ ಯಾವುದು?

Last Updated 7 ನವೆಂಬರ್ 2021, 19:31 IST
ಅಕ್ಷರ ಗಾತ್ರ

1.ಸರ್, ನಾನು ಪಿಯುಸಿ (ವಿಜ್ಞಾನ) ಮುಗಿಸಿದ್ದೇನೆ. ಮುಂದೆ ಎಂಜಿನಿಯರಿಂಗ್ ತೆಗೆದುಕೊಳ್ಳುವುದು ಉತ್ತಮವೋ, ಬಿಎಸ್‌ಸಿ (ನರ್ಸಿಂಗ್) ಉತ್ತಮವೋ? ಒಳ್ಳೆಯ ಕೆಲಸ ಸಿಗಲು ಯಾವ ಕೋರ್ಸ್ ಮಾಡಬೇಕು?

ದರ್ಶನ್, ದಾವಣಗೆರೆ.

ನಿಮ್ಮ ಜೀವನದಲ್ಲಿ ಸಂತೃಪ್ತಿಯನ್ನು ನೀಡುವ ಕೆಲಸವನ್ನು ಒಳ್ಳೆಯ ಕೆಲಸವೆಂದು ಹೇಳಬಹುದು. ವೈಯಕ್ತಿಕ ಜೀವನ ಸುಖಕರವಾಗಿರಬೇಕಾದರೆ, ನೀವು ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬೇಕು; ಆಗಲೇ ಜೀವನದ ಎಲ್ಲಾ ಸಂಪತ್ತು, ಸಂತೃಪ್ತಿ ನಿಮ್ಮದಾಗಬಲ್ಲದು. ಕಲಿತ ವಿದ್ಯೆಗೂ, ನಿಮ್ಮಲ್ಲಿರುವ ಕೌಶಲಗಳಿಗೂ ಸರಿಹೊಂದುವಂತಹ, ನಿಮ್ಮ ಇಷ್ಟ, ಅಭಿರುಚಿಗೆ ಸ್ಪಂದಿಸುವಂತಹ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಿ. ಏಕೆಂದರೆ, ಒಲವಿಲ್ಲದ ವೃತ್ತಿ ನೀರಸಮಯ; ಅಂತಹ ವೃತ್ತಿಯಲ್ಲಿ ಯಶಸ್ಸು ಅಸಾಧ್ಯ.

ಬೌದ್ಧಿಕ ಶಿಕ್ಷಣದಿಂದ ಹೆಚ್ಚಿನ ವೇತನದ ಕೆಲಸ ಸಿಗಬಹುದು; ಸಂತೃಪ್ತಿಯ ಜೀವನವಲ್ಲ. ಹೆಚ್ಚಿನ ವೇತನ, ಸವಲತ್ತುಗಳಿದ್ದರೂ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನವಿಲ್ಲದೆ, ಪರಸ್ಪರ ಭಿನ್ನಾಭಿಪ್ರಾಯ, ಮನಸ್ತಾಪಗಳಿಂದ, ಖಿನ್ನತೆಯಿಂದ ಬಳಲುತ್ತಿರುವ ಸಂಸಾರಗಳನ್ನು ನಾವು ನೋಡಬಹುದು.

ಜೀವನದಲ್ಲಿ ಕನಸುಗಳಿರಬೇಕು; ಕನಸುಗಳು ಮಹತ್ವಾಕಾಂಕ್ಷೆಯಾಗಬೇಕು. ಅದರಂತೆ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ನಿರ್ದಿಷ್ಟವಾದ, ಸ್ಪಷ್ಟವಾದ, ಸಾಧಿಸಬಹುದಾದ ಮತ್ತು ಅಳೆಯಬಹುದಾದ ಗುರಿಯಿರಬೇಕು. ಬಾಳಿಗೊಂದು ಗುರಿ ಇದ್ದರೆ, ನಮ್ಮಲ್ಲಿರುವ ಸುಪ್ತ ಶಕ್ತಿಗಳನ್ನು ಆ ಗುರಿಯೆಡೆಗೆ ಕೇಂದ್ರೀಕರಿಸಿ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಂತೃಪ್ತಿಯನ್ನು ಪಡೆಯಬಹುದು. ‌‌

2.ಸರ್, 2021ರಲ್ಲಿ ಪಿಯುಸಿ (ವಿಜ್ಞಾನ) ಮುಗಿಸಿದ್ದೇನೆ. ಬಿಎಸ್‌ಸಿ (ನರ್ಸಿಂಗ್)ಗೆ ಸೇರಬೇಕು ಅಂತ ಇದ್ದೇನೆ. ಪ್ರವೇಶ ಪ್ರಕ್ರಿಯೆ, ಸರ್ಕಾರದ ಸೀಟು ಗಿಟ್ಟಿಸಿಕೊಳ್ಳುವುದು ಹೇಗೆ?

ಸಹನ್ ಪಿ., ಚಿತ್ರದುರ್ಗ.

ಬಿಎಸ್‌ಸಿ ನರ್ಸಿಂಗ್ ಕೋರ್ಸಿಗೆ ಪಿಯುಸಿ ಫಲಿತಾಂಶದ ಆಧಾರದ ಮೇಲೆ ಪ್ರವೇಶದ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ, ಡೈರೆಕ್ಟೊರೇಟ್ ಆಫ್ ಮೆಡಿಕಲ್ ಎಜುಕೇಷನ್ ಜಾಲತಾಣವನ್ನು ಪರಾಮರ್ಶಿಸಿ.

3.ನಾನು ಸದ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮುಂದೆ ನಾನು ಪಿಎಸ್‌ಐ ಆಗಬೇಕು ಅಂತ ಸತತವಾಗಿ ಅಭ್ಯಾಸ ಮಾಡುತ್ತಿದ್ದು 3 ಬಾರಿ ಪ್ರಯತ್ನಿಸಿದರೂ ಸಫಲತೆ ಸಿಕ್ಕಿಲ್ಲ. ಯಾವುದೇ ಕೋಚಿಂಗ್ ತೆಗೆದುಕೊಂಡಿಲ್ಲ. ಈ ಮೊದಲು ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಿಕ್ಕಿದೆ. ಪಿಎಸ್‌ಐ ದ್ವಿತೀಯ ಪೇಪರ್ ಪರೀಕ್ಷೆಯಲ್ಲಿ 5-10 ಅಂಕದಲ್ಲಿ ವೈಫಲ್ಯವಾಗುತ್ತಿದೆ. ಹಿಂದಿನ ಪ್ರಶ್ನೆ ಪತ್ರಿಕೆಗಳನ್ನೂ ಬಿಡಿಸಿದ್ದೇನೆ, ನನ್ನ ವಿಫಲತೆಗೆ ಕಾರಣಗಳನ್ನು ತಿಳಿದು ವಿಷಯಗಳನ್ನು ಚೆನ್ನಾಗಿ ಓದಿದರೂ ಸಾಧ್ಯವಾಗುತ್ತಿಲ್ಲ.

ಹೆಸರು, ಊರು ತಿಳಿಸಿಲ್ಲ.

4. ನಾನು ಪದವಿ ಮುಗಿಸಿ ಎರಡು ವರ್ಷ ಆಗಿದೆ. ಪೊಲೀಸ್ ಆಗಬೇಕು ಅನ್ನೋ ಕನಸು ತುಂಬಾ ಇದೆ. ಅದಕ್ಕೆ ಸಿದ್ಧತೆಯನ್ನೂ ನಡೆಸುತ್ತಿದ್ದೇನೆ. ಆದರೂ, ಯಾವ ಪರೀಕ್ಷೆ ಬರೆದರೂ 50 ಅಂಕದ ಮೇಲೆ ಹೋಗುತ್ತಿಲ್ಲ; ಆತ್ಮವಿಶ್ವಾಸ ಕುಗ್ಗುತ್ತಾ ಇದೆ. ನನ್ನನ್ನು ನಂಬಿ ನನ್ನ ಕುಟುಂಬ ಇದೆ. ಹೇಗೆ ತಯಾರಿ ನಡೆಸಬೇಕು?

ಚಂದ್ರಿಕಾ, ಹಾವೇರಿ.

ಅಭ್ಯರ್ಥಿಗಳಿಗೆ ಸರಿಯಾದ ಉದ್ಯೋಗ ಸಿಗುವುದು ಎಷ್ಟು ಕಷ್ಟವೋ ಸಂಸ್ಥೆಗಳಿಗೆ ಕೌಶಲಯುಕ್ತ ಅಭ್ಯರ್ಥಿಗಳು ಸಿಗುವುದೂ ಸಹ ಅಷ್ಟೇ ಕಷ್ಟ! ಕೌಶಲವೆಂದರೆ ಅಪೇಕ್ಷಿತ ಅಥವಾ ಪೂರ್ವನಿರ್ಧಾರಿತ ಮಾನದಂಡದಂತೆ ವೃತ್ತಿಯ ಕೆಲಸಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಸಾಮರ್ಥ್ಯ. ಆದ್ದರಿಂದಲೇ, ವೃತ್ತಿಯಲ್ಲಿ ಯಶಸ್ವಿಯಾಗಲು ಅಭ್ಯರ್ಥಿಗಳಿಗೆ ಅರ್ಹತೆ ಮತ್ತು ಯೋಗ್ಯತೆಯಿದೆಯೇ ಎಂದು ಗುರುತಿಸುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಹಾಗಾಗಿ, ಪೊಲೀಸ್ ವೃತ್ತಿಗೆ ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಕೌಶಲಗಳಿವೆಯೇ ಎಂದು ನಿಮಗೂ ಖಾತರಿಯಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೇಗೆ ಓದಬೇಕು ಎನ್ನುವುದನ್ನು ಆಗಸ್ಟ್ ತಿಂಗಳ 23ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಹಾಗೂ, ಹಿಂದಿನ ಪರೀಕ್ಷೆಗಳಲ್ಲಿನ ವಿಫಲತೆಯ ಕಾರಣಗಳನ್ನು ಅವಲೋಕಿಸಿ ಮುಂದಿನ ಪರೀಕ್ಷೆಯಲ್ಲಿ ಸೂಕ್ತವಾಗಿ ಬರೆಯುವ ತಂತ್ರಗಾರಿಕೆಯನ್ನು ಯೋಜಿಸಿ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಬೇಕಾದರೆ ಆತ್ಮವಿಶ್ವಾಸವನ್ನು ಬೆಳೆಸುವ ಸ್ವಯಂಪ್ರೇರಣೆಯೇ ಸಾಧನೆಗೆ ಸಂಜೀವಿನಿಯಾಗಬೇಕು.

5. ನಾನು ಪ್ರಸ್ತುತ ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅಧ್ಯಯನ ಮಾಡುತಿದ್ದು, ಎನ್‌ಆರ್‌ಎ (ನ್ಯಾಷನಲ್ ರಿಕ್ರೂಟ್‌ಮೆಂಟ್‌ ಏಜೆನ್ಸಿ) ಬಗ್ಗೆ ಹಲವಾರು ಗೊಂದಲಗಳಿವೆ. ದಯವಿಟ್ಟು ಅದರ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕೊಡಿ.

ರಾಜೇಶ್, ಸಿದ್ದಾಪುರ.

ಎನ್‌ಆರ್‌ಎ ಸ್ಥಾಪಿಸುವ ಮೊದಲು, ಭಾರತೀಯ ರೈಲ್ವೆ, ಇತರ ಇಲಾಖೆಗಳು, ಸಚಿವಾಲಯಗಳು, ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ಸರ್ಕಾರಿ ಸೇವೆಗಳ ಅಡಿಯಲ್ಲಿ ಗ್ರೂಪ್ ಬಿ., ಗ್ರೂಪ್ ಸಿ ಮತ್ತು ಗ್ರೂಪ್ ಡಿ (ನಾನ್-ಗೆಜೆಟೆಡ್) ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಮಾಡಲಾಗುತ್ತಿತ್ತು. ಹೆಚ್ಚಿನ ಹುದ್ದೆಗಳಿಗೆ ಒಂದೇ ರೀತಿಯ ಅರ್ಹತೆಯ ಅಗತ್ಯವನ್ನು ಮನಗಂಡು ಎನ್‌ಆರ್‌ಎ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದರಿಂದ ಸರ್ಕಾರಿ ಸಂಸ್ಥೆಗಳ ಬಹುತೇಕ ಹುದ್ದೆಗಳನ್ನು ಅರಸುವ ಅಭ್ಯರ್ಥಿಗಳಿಗೆ ಒಂದೇ ಪರೀಕ್ಷೆಯ ಸೌಲಭ್ಯ ದೊರಕಲಿದೆ. ಎನ್‌ಆರ್‌ಎ ನಿರ್ವಹಿಸುವ ಮೊದಲ ಸಿಇಟಿ ಪರೀಕ್ಷೆ 2022ರಲ್ಲಿ ನಡೆಯುವ ನಿರೀಕ್ಷೆಯಿದೆ.

6. ಸರ್, ನಾನು ಬಿಎನ್‌ವೈಎಸ್‌ನ ಇಂಟರ್ನ್‌ಶಿಪ್ ಮಾಡುತ್ತಿರುವೆ. ಮುಂದೆ, ನಾನು ಸ್ನಾತಕೋತ್ತರ ಪದವಿ ಮಾಡಿದರೆ ಉತ್ತಮವೇ ಅಥವಾ ಸರ್ಕಾರಿ ಕೆಲಸದ ಅವಕಾಶಗಳಿವೆಯೇ (ಕರ್ನಾಟಕದಲ್ಲಿ) ಹಾಗೂ ಖಾಸಗಿ ಕೆಲಸದ ಲಭ್ಯತೆ ಬಗ್ಗೆ ದಯಮಾಡಿ ತಿಳಿಸಿಕೂಡಿ.

ಅಭಿಷೇಕ್, ಬೆಂಗಳೂರು.

ಇಂದು ಅತ್ಯಂತ ಹೆಚ್ಚಿನ ಬೇಡಿಕೆಯಲ್ಲಿರುವ, ಆರೋಗ್ಯ ಅಥವಾ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ವಲಯದಲ್ಲಿ ನೀವು ಪದವಿ ಶಿಕ್ಷಣವನ್ನು ಮುಗಿಸುವ ಹಂತದಲ್ಲಿದ್ದೀರಿ. ಇದಲ್ಲದೆ, ನ್ಯಾಚುರೋಪತಿ ಮತ್ತು ಯೋಗದ ಅಭ್ಯಾಸದಿಂದ ಆರೋಗ್ಯದ ಮೇಲಾಗುವ ಸಕಾರಾತ್ಮಕ ಪರಿಣಾಮಗಳ ಅರಿವು ಪ್ರಪಂಚಾದಾದ್ಯಂತ ಇದೆ.

ಅತ್ಯಂತ ತ್ವರಿತವಾದ ಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಈ ಕ್ಷೇತ್ರದಲ್ಲಿ ನೀವು ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರ ಕೆಲಸಕ್ಕೆ ಸೇರಬಹುದು. ಹಲವಾರು ವರ್ಷಗಳ ಅನುಭವದ ನಂತರ ಖುದ್ದಾಗಿ ಪ್ರಾಕ್ಟೀಸ್ ಮಾಡಬಹುದು. ಇದಲ್ಲದೆ, ಸಂಶೋಧನಾ ಸಂಸ್ಥೆಗಳು, ಯೋಗ ತರಬೇತಿ ಸಂಸ್ಥೆಗಳು, ಆಯುಷ್ ಸಚಿವಾಲಯ ಇತ್ಯಾದಿಗಳಲ್ಲಿಯೂ ವೃತ್ತಿಯನ್ನು ಅರಸುವ ಅವಕಾಶಗಳಿವೆ. ನಿಮ್ಮ ವೃತ್ತಿಜೀವನದ ಯೋಜನೆಯಂತೆ ಉನ್ನತ ಶಿಕ್ಷಣದ ಅಗತ್ಯವಿದೆಯೇ ಎಂದು ಪರಿಶೀಲಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT