ಶುಕ್ರವಾರ, ಮೇ 7, 2021
20 °C

ಉತ್ತಮ ಕೆಲಸಗಳಿಗೆ ಶಾಶ್ವತ ಗೌರವ...

ಗಾಣಧಾಳು ಶ್ರಿಕಂಠ Updated:

ಅಕ್ಷರ ಗಾತ್ರ : | |

****
ಸತ್ಕಾರಮಾನ ಪೂಜಾರ್ಥಂ ತಪೋ ದಂಭೇನ ಚೈವ ಯತ್|
ಕ್ರಿಯತೇ ತದಿಹ ಪ್ರೊಕ್ತಂ ರಾಜಸಂ ಚಲಮಧ್ರುವಮ್‌||

*****

ಶ್ಲೋಕದ ತಾತ್ಪರ್ಯ;

ಮನ್ನಣೆ, ಹೊಗಳಿಕೆ ಮತ್ತು ಗೌರವಗಳಿಗಾಗಿ ಬೂಟಾಟಿಕೆ, ಡಂಬಾಚಾರದಿಂದ ಆಚರಿಸುವ ತಪಸ್ಸನ್ನು ರಾಜಸ ಎನ್ನುತ್ತಾರೆ. ಇಂಥ ಕಾರ್ಯಗಳು ಸ್ಥಿರ ಹಾಗೂ ಶಾಶ್ವತವಾಗಿ ಉಳಿಯುವುದಿಲ್ಲ.

****

ಇವತ್ತು ಸಮಾಜದ ಬಹುತೇಕ ಕ್ಷೇತ್ರಗಳಲ್ಲಿ ಮನ್ನಣೆಯ ದಾಹವಿರುವವರು, ಹೊಗಳಿಕೆ ಬಯಸುವವರು, ಗೌರವಕ್ಕಾಗಿ ಹಾತೊರೆಯುವವರು ಬಹಳ ಮಂದಿ ಇದ್ದಾರೆ. ಹೇಗಾದರೂ ಮಾಡಿ ಇಂಥ ಗೌರವ, ಪುರಸ್ಕಾರಗಳನ್ನು ಪಡೆಯಲು ಬೇಕಾದ ವ್ಯವಸ್ಥೆಯನ್ನೂ ಸೃಷ್ಟಿಸಿಕೊಳ್ಳುತ್ತಾರೆ. ಮಾರ್ಗ ಯಾವುದಾದರೂ ಪರವಾಗಿಲ್ಲ, ಒಟ್ಟು ಗೌರವ, ಮನ್ನಣೆ ದೊರೆತರೆ ಸಾಕು ಎನ್ನುವುದು ಅವರ ಗುರಿ.

ಹೀಗೆ ಅನ್ಯ ಮಾರ್ಗದಿಂದ ಪಡೆಯುವ, ಕೃತಕವಾಗಿ ತಮ್ಮದಾಗಿಸಿಕೊಳ್ಳುವ ಗೌರವ, ಮನ್ನಣೆಗಳು ಆ ಕ್ಷಣದಲ್ಲಿ ತೃಪ್ತಿ ನೀಡಬಹುದೇ ಹೊರತು ಶಾಶ್ವತವಾಗಿ ನಿಲ್ಲುವುದಿಲ್ಲ. ಅದರಲ್ಲೂ ಡಂಬಾಚಾರ, ಬೂಟಾಟಿಕೆ ಮೂಲಕ ಸಂಪಾದಿಸುವ ಗೌರವ, ಮನ್ನಣೆ ಎಂದೂ ನೀರ ಮೇಲಿನ ಗುಳ್ಳೆಯೇ. ಇದನ್ನೇ ರಾಜಸ ಎಂದು ಮೇಲಿನ ಶ್ಲೋಕದಲ್ಲಿ ಹೇಳಿರುವುದು.

ಯಾವುದೇ ಕೆಲಸ ಮಾಡುವಾಗ ಕರ್ತವ್ಯವನ್ನು ಚೆನ್ನಾಗಿ, ಸೊಗಸಾಗಿ, ಸರಿಯಾಗಿ ಪಾಲಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿರಬೇಕು. ಇಂಥ ಕರ್ಮವೂ ಭಗವಂತನ ಸಾಕ್ಷಾತ್ಕಾರಕ್ಕೆ ಮಾರ್ಗವಾಗುತ್ತದೆ. ಆದರೆ ಫಲವನ್ನು ಅಪೇಕ್ಷಿಸಿ, ಕೆಲವರನ್ನು ಮೆಚ್ಚಿಸಲೆಂದು ಆಚರಿಸುವ ಕರ್ತವ್ಯದಿಂದ ನಮಗೆ ಆ ಕ್ಷಣಕ್ಕೆ ಫಲಗಳು ದೊರೆಯಬಹುದು ಅಥವಾ ದೊರೆಯದೆ ಇರಬಹುದು. ಆದರೆ ಇಂಥ ಕಾಮನೆಗಳನ್ನೇ ಗಮನದಲ್ಲಿರಿಸಿಕೊಂಡು ಆಚರಿಸುವ ಕರ್ಮಗಳಿಂದ ಶಾಶ್ವತವಾದ ಸುಖ ಅಂದರೆ ನೆಮ್ಮದಿ ಸಿಗುವುದು ಕಷ್ಟ. ಕಾಯಕವನ್ನು ದೇವರಪೂಜೆ ಎಂದುಕೊಂಡಾಗ, ಅಷ್ಟು ಶ್ರದ್ಧೆಯಿಂದ ನಮ್ಮ ಕೆಲಸಗಳನ್ನು ಮಾಡಿದಾಗ ಅದು ಕೈಲಾಸವೂ ಅಗುತ್ತದೆ.

ನಾವು ಮಾಡುವ ಕೆಲಸ, ಕಾರ್ಯಗಳು ಉತ್ತಮವಾಗಿದ್ದರೆ, ಗೌರವ, ಮನ್ನಣೆಗಳು ಪ್ರಶಸ್ತಿ ಪುರಸ್ಕಾರಗಳು ನಮ್ಮನ್ನು ಅರಸಿಕೊಂಡು ‌ಬರುತ್ತವೆ. ನಮ್ಮ ನಡೆ ನುಡಿ ಉತ್ತಮವಾಗಿದ್ದರೆ ಜನ ತಾನಾಗೇ ಗೌರವಿಸುತ್ತಾರೆ. ಹೀಗೆ ಹುಡುಕಿಕೊಂಡು ಬರುವ ಗೌರವಗಳು ನಮ್ಮ ಬದುಕಿನೊಂದಿಗೆ ಶಾಶ್ವತವಾಗಿ ಉಳಿಯುತ್ತವೆ. ನಾವು ಅಳಿದ ನಂತರವೂ ನಮ್ಮನ್ನು ನೆನಪಿಸುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.