ಹನೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೋಮವಾರ ವ್ಯಾಸ್ತವ್ಯ ಹೂಡಲಿರುವ ಗೋಪಿನಾಥಂ ಶಾಲೆಯಲ್ಲಿ ಕಿರಿಯ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಇಲ್ಲ. ಇಲ್ಲಿ 1ರಿಂದ 4ನೇ ತರಗತಿವರೆಗೆ ತಮಿಳು ಮಾಧ್ಯಮದಲ್ಲಿ ಶಿಕ್ಷಣ ಹೇಳಿಕೊಡಲಾಗುತ್ತಿದೆ. ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮ ಇದೆ.

ಗಡಿ ಗ್ರಾಮವಾದ ಗೋಪಿನಾಥಂನಲ್ಲಿ ಕನ್ನಡ ಶಾಲೆಯನ್ನೂ ಆರಂಭಿಸಬೇಕು ಎಂಬ ಬೇಡಿಕೆ ಇಲ್ಲಿನ ಜನರದ್ದು. ಶಿಕ್ಷಣ ಸಚಿವರನ್ನು ಸ್ವಾಗತಿಸಲು ಸಜ್ಜುಗೊಂಡಿರುವ ಗ್ರಾಮಸ್ಥರು ಹಾಗೂ ಪೋಷಕರು ಈ ಬೇಡಿಕೆಯನ್ನು ಸಚಿವರ ಮುಂದಿಡಲಿದ್ದಾರೆ.

ಗುಣಮಟ್ಟದ ಶಿಕ್ಷಣ ಮರೀಚಿಕೆ:ತಾಲ್ಲೂಕು ಕೇಂದ್ರದಿಂದ 80 ಕಿ.ಮೀ ದೂರದಲ್ಲಿರುವ ಗೋಪಿನಾಥಂ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಗ್ರಾಮ. ನರಹಂತಕ, ದಂತಚೋರ ವೀರಪ್ಪನ್ ಹುಟ್ಟೂರು ಎಂಬ ಏಕೈಕ ಕಾರಣಕ್ಕೆ ಕುಖ್ಯಾತಿ ಗಳಿಸಿತ್ತು. ಆತನ ಹಾವಳಿಯಿಂದಾಗಿ ಅಭಿವೃದ್ಧಿಯಿಂದಲೂ ವಂಚಿತವಾಗಿತ್ತು. ವೀರಪ್ಪನ್ ಪೊಲೀಸರ ಗುಂಡಿಗೆ ಬಲಿಯಾಗಿ ಒಂದೂವರೆ ದಶಕವಾದರೂ ಪರಿಸ್ಥಿತಿ ಸುಧಾರಿಸಿಲ್ಲ.

ಮೊದಲಿನ ಸ್ಥಿತಿಗಿಂತ ಕೊಂಚ ಚೇತರಿಕೆ ಕಂಡು ಬಂದಿದೆ.ಬಹುತೇಕ ತಮಿಳು ಮಾತೃಭಾಷಿಕರೇ ವಾಸವಿರುವ ಇಲ್ಲಿ ಗುಣಮಟ್ಟದ ಶಿಕ್ಷಣ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ.

1958ರಲ್ಲಿ ಸ್ಥಾಪನೆ:ಚೆನ್ನೈ ಮಹಾಸಂಸ್ಥಾನದ ಆಡಳಿತಾವಧಿಯಲ್ಲಿ ಇಲ್ಲಿನ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ 1958ರಲ್ಲಿ 1ರಿಂದ 5ನೇ ತರಗತಿವರೆಗೆ ತಮಿಳು ಮಾಧ್ಯಮ ಕಿರಿಯ ಪ್ರಾಥಮಿಕಶಾಲೆಯನ್ನು ಪ್ರಾರಂಭಿಸಲಾಯಿತು. ಆ ಬಳಿಕ ಕನ್ನಡ ಮಾಧ್ಯಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಯಿತು. 2003-04ನೇ ಸಾಲಿನಲ್ಲಿ 8ನೇ ತರಗತಿಯನ್ನು ಆರಂಭಿಸಿ ಶಾಲೆಯನ್ನು ಉನ್ನತೀಕರಿಸಲಾಯಿತು.

ಸದ್ಯ ಶಾಲೆಯಲ್ಲಿ 235 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯಲ್ಲಿ 1ರಿಂದ 4ನೇ ತರಗತಿವರೆಗೆ ತಮಿಳು ಮಾಧ್ಯಮವಿದ್ದು, ಇದರ ಜೊತೆಗೆ ಕನ್ನಡ ಮಾಧ್ಯಮವನ್ನು ತೆರೆಯಬೇಕು ಎಂಬ ಕೂಗಿಗೆ ಈಗ ದಶಕದ ಹರೆಯ.

‘ತಮಿಳು ಮಾಧ್ಯಮದ ಜತೆ ಕನ್ನಡ ಮಾಧ್ಯಮವನ್ನು ತೆರೆಯುವ ಅಗತ್ಯವನ್ನು ಶಿಕ್ಷಣ ಇಲಾಖೆ ಗಮನಕ್ಕೆ ತರುವಂತೆ ಒಂದು ವರ್ಷದ ಹಿಂದೆಯೇ ಮುಖ್ಯಶಿಕ್ಷಕರಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುರುಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ತಮಿಳು ಕಲಿತು ಬಳಿಕ 6ನೇ ತರಗತಿಗೆ ಕನ್ನಡ ಮಾಧ್ಯಮಕ್ಕೆ ಸೇರಿದಾಗ ಕಲಿಕೆಯಲ್ಲಿ ಹಿನ್ನಡೆಯಾಗುತ್ತದೆ. ಉದ್ಯೋಗ ಹಾಗೂ ತರಬೇತಿಗಾಗಿ ಕನ್ನಡ ಮಾಧ್ಯಮದ ಪ್ರಮಾಣಪತ್ರ ಅತ್ಯವಶ್ಯಕ. ಆದರೆ, 1ರಿಂದ 4ರ ವರೆಗೆ ತಮಿಳು ಮಾಧ್ಯಮದಲ್ಲಿ ಕಲಿಯುವುದರಿಂದ ಕನ್ನಡ ಮಾಧ್ಯಮದ ಪ್ರಮಾಣಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ಜನ ಅಳಲು ತೋಡಿಕೊಳ್ಳುತ್ತಾರೆ.

‘ಕೆಲವು ಪೋಷಕರು ಪ್ರಾಥಮಿಕ ಶಿಕ್ಷಣದ ಬಳಿಕ ಪ್ರೌಢಶಿಕ್ಷಣಕ್ಕಾಗಿ ತಮಿಳುನಾಡಿನ ಕೊಳತ್ತೂರಿಗೆ ಕಳುಹಿಸುತ್ತಿದ್ದಾರೆ. ಪ್ರತಿನಿತ್ಯ ಮೂರು ಶಾಲಾ ಬಸ್ಸುಗಳಲ್ಲಿ ಇಲ್ಲಿನ ನೂರಾರು ವಿದ್ಯಾರ್ಥಿಗಳು ಅಲ್ಲಿನ ಶಾಲೆಗೆ ತೆರಳುತ್ತಿದ್ದಾರೆ. ಇಲ್ಲಿಯೇ ಪ್ರಾಥಮಿಕ ಹಂತದಿಂದಲೇ ಕನ್ನಡ ಮಾಧ್ಯಮದ ಶಾಲೆ ಆರಂಭಿಸಿದರೆ ಒಳ್ಳೆಯದು’ ಎಂದು ಪೋಷಕ ರಾಜು ಅವರು ಹೇಳಿದರು.

ಎರಡು ಶಾಲೆಗಳಿಗೆ ಒಬ್ಬರೇ ಕಾಯಂ ಶಿಕ್ಷಕ

ಗೋಪಿನಾಥಂ ಬಳಿಯಿರುವ ಪುದೂರು ಹಾಗೂ ಆತೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬರೇ ಕಾಯಂ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಶಿಕ್ಷಕರಿಗೆ ಮಾತ್ರವಲ್ಲದೇ ಮಕ್ಕಳಿಗೂ ತೊಂದರೆಯಾಗುತ್ತಿದೆ. ಎರಡೂ ಶಾಲೆಗಳಲ್ಲಿ ತಲಾ 33 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆತೂರು ತಮಿಳು ಮಾಧ್ಯಮವಾಗಿದ್ದರೆ ಹಾಗೂ ಪುದೂರು ಕನ್ನಡ ಮಾಧ್ಯಮ ಶಾಲೆ.

ಪುದೂರು ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ವೇತಾ ಎಂಬುವವರು ನಾಲ್ಕು ವರ್ಷಗಳ ಹಿಂದೆ ಸಿಆರ್ಪಿಯಾಗಿ ಬಡ್ತಿಯಾಗಿ ತೆರಳಿದ್ದಾರೆ. ಬಳಿಕ ಆತೂರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರನ್ನೇ ಇಲ್ಲಿಗೆ ಶಿಕ್ಷಕರಾಗಿ ನಿಯೋಜಿಸಲಾಯಿತು. ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಅತಿಥಿ ಶಿಕ್ಷಕರನ್ನು ಆತೂರಿಗೆ ನಿಯೋಜಿಸಲಾಗಿದೆ.

ತಮಿಳು ಶಿಕ್ಷಕರೇ ಇಲ್ಲ:ತಮಿಳು ಮಾಧ್ಯಮವಾಗಿರುವ ಆತೂರು ಶಾಲೆಯಲ್ಲಿ ತಮಿಳು ಭಾಷಾ ಶಿಕ್ಷಕರೇ ಇಲ್ಲ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಎರಡು ತಿಂಗಳ ಹಿಂದೆ ಕೊಳ್ಳೇಗಾಲಕ್ಕೆ ವರ್ಗಾವಣೆಗೊಂಡಿದ್ದಾರೆ.

‘ಒಂದು ವರ್ಷದಿಂದ ನಮ್ಮ ಶಾಲೆಯಲ್ಲಿ ಶಿಕ್ಷಕರ ಕೊರತೆ ಕಾಡುತ್ತಲೇ ಇದೆ. ಇಲ್ಲಿಗೆ ಬರುವ ಶಿಕ್ಷಕರು ವಾರಕ್ಕೆ ಎರಡು ಬಾರಿ ಬಂದು ಹೋಗುತ್ತಾರೆ. ಹೀಗಾದರೆ ನಮ್ಮ ಮಕ್ಕಳ ಶಿಕ್ಷಣ ಮಟ್ಟ ಸುಧಾರಿಸುವುದು ಹೇಗೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುರುಗ ಪ್ರಶ್ನಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.