ಭಾನುವಾರ, ಮೇ 31, 2020
27 °C

ವೃತ್ತಿ ಕೌಶಲ ವೃದ್ಧಿಗಿದು ಸಕಾಲ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕು ಆರೋಗ್ಯಕ್ಕೆ ಕಂಟಕವಾಗುವ ಜೊತೆಗೆ ಉದ್ಯೋಗ ಭದ್ರತೆಯನ್ನೂ ಬುಡಮೇಲು ಮಾಡಿದೆ. ಕೆಲವರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ, ಮತ್ತೆ ಕೆಲವರು ವೇತನ ಕಡಿತದ ಕತ್ತರಿಯಲ್ಲಿ ಸಿಲುಕಿದ್ದಾರೆ, ಇನ್ನೂ ಕೆಲವರು ಕೆಲಸ ಕಳೆದುಕೊಂಡಿದ್ದಾರೆ. ಆದರೆ ನಾಳಿನ ಭರವಸೆಗಾಗಿ ಇಂದೇ ಕೆಲವು ಕೌಶಲಗಳನ್ನು ಕಲಿತುಕೊಂಡರೆ ಬದುಕು ನಿರಾಳವಾದೀತು...

ಕೋವಿಡ್‌–19ನಿಂದ ಎದುರಾಗಿರುವ ಸಂಕಷ್ಟ ಒಂದಲ್ಲ, ಎರಡಲ್ಲ. ಸೋಂಕು ಹರಡದಂತೆ ಬಚಾವಾಗಲು ಲಾಕ್‌ಡೌನ್‌ ಘೋಷಿಸಿದಾಗ ಎದುರಾಗಿದ್ದು ಆರ್ಥಿಕ ಆಘಾತ. ಕೆಲವೇ ದಿನಗಳಲ್ಲಿ ಸಣ್ಣಪುಟ್ಟ ಉದ್ಯೋಗದಲ್ಲಿದ್ದವರು ಕೆಲಸ ಕಳೆದುಕೊಂಡರು. ಸಣ್ಣ ಉದ್ಯಮ ನಡೆಸುತ್ತಿದ್ದವರು ನೆಲಕಚ್ಚಬೇಕಾಯಿತು. ಮುಂದೇನು ಎಂಬ ಪ್ರಶ್ನೆ ಬೃಹದಾಕಾರವಾಗಿ ನಿಂತಿದೆ. ಈ ವಿಷಯದಲ್ಲಿ ಪುರುಷರು ಮಾತ್ರವಲ್ಲ, ಪುರುಷರಿಗೆ ಸರಿಸಮನಾಗಿ ದುಡಿಯುತ್ತಿರುವ ಮಹಿಳೆಯರು ಕೂಡ ಹೆಚ್ಚಿನ ಅಪಾಯದಲ್ಲಿದ್ದಾರೆ. ಸಂಸಾರದ ಬಂಡಿ ಸಾಗಲು ಅಹರ್ನಿಶಿ ದುಡಿಯುತ್ತಿದ್ದ ಬಹುತೇಕ ಮಹಿಳೆಯರಲ್ಲಿ ಉದ್ಯೋಗ ಕಳೆದುಕೊಂಡವರು, ಕಳೆದುಕೊಳ್ಳುವ ಭೀತಿಯಲ್ಲಿರುವವರು ಪರ್ಯಾಯಕ್ಕಾಗಿ ತಡಕಾಡುತ್ತಿದ್ದಾರೆ.

ಆದರೆ ತಮ್ಮಲ್ಲಿರುವ ಅರ್ಹತೆಗೆ ಉದ್ಯೋಗ ಸಿಗಬಹುದೇ ಎಂಬ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ. ಹಿಂದೆ ಇದ್ದಂತಹ ಉದ್ಯಮಗಳಲ್ಲಿ ಬಹುತೇಕ ಉದ್ಯಮಗಳು ತಕ್ಷಣಕ್ಕೆ ಚಿಗುರುವ ಲಕ್ಷಣಗಳಿಲ್ಲ. ಹಿಂದೆ ಮಾಡಿರುವಂತಹ ಕೆಲಸವನ್ನೇ ಮುಂದುವರಿಸಲು ಬಯಸುವ ದುಡಿಯುವ ಕೈಗಳಿಗೆ ಅಂತಹುದೇ ಕೆಲಸ ಕೊಡುವವರು ಬೇಕಲ್ಲ! ಹಾಗಾದರೆ ಉದ್ಯೋಗದಲ್ಲಿ ಇಂತಹ ಅಪಾಯಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಕೋವಿಡ್‌ ನಂತರ ಬದಲಾಗಬಹುದಾದ ಸಂದರ್ಭಗಳಲ್ಲಿಯೂ ಉದ್ಯೋಗ ಪಡೆಯಲು ಏನು ಮಾಡಬೇಕು?

ಈಗ ಬೇಕಾಗಿರುವ ಅರ್ಹತೆಯೆಂದರೆ ಕೌಶಲ. ಕೌಶಲವೊಂದು ಇದ್ದರೆ ಅದಕ್ಕೆ ಸರಿಯಾದ ಕೆಲಸ ಹುಡುಕಿಕೊಳ್ಳುವುದು ಸುಲಭ. ಅರ್ಹತೆಯನ್ನು ಅಭಿವೃದ್ಧಿಪಡಿಸಿಕೊಳ್ಳುವ ಕೆಲಸವನ್ನು ಈ ಲಾಕ್‌ಡೌನ್‌ ಅವಧಿಯಲ್ಲಿ ಕೆಲವರಾದರೂ ಮಾಡಿಕೊಂಡಿದ್ದಾರೆ ಆನ್‌ಲೈನ್‌ ಕೋರ್ಸ್‌ ಮೂಲಕ. ಪ್ರಸ್ತುತ ಬೇಡಿಕೆ ಇರುವ ಕೌಶಲಗಳು ಯಾವುವು ಎಂದು ತಿಳಿದುಕೊಳ್ಳುವುದು ಮುಖ್ಯ. ಉದ್ಯಮಗಳಲ್ಲಿ ನೇಮಕಾತಿ ಮಾಡಿಕೊಳ್ಳುವವರು ಬಯಸುವ, ಬೇಡಿಕೆಯಲ್ಲಿರುವ ಅಂತಹ ಕೆಲವು ಕೌಶಲಗಳನ್ನು ಇಲ್ಲಿ ಹೇಳಬಹುದು.

ಡಿಜಿಟಲ್ ಮಾರ್ಕೆಟಿಂಗ್

ಬದಲಾಗುವ ಸಂದರ್ಭಗಳೊಂದಿಗೆ ಬದಲಾಗದೇ ಉಳಿದಿರುವ ಕ್ಷೇತ್ರಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮುಖ್ಯವಾದುದು. ಪ್ರತಿಯೊಂದು ವ್ಯವಹಾರವೂ ಈಗ ಡಿಜಿಟಲ್ ಪ್ರಕ್ರಿಯೆಗಳಾಗಿ ಪರಿವರ್ತನೆಯಾಗುತ್ತಿರುವುದರಿಂದ ಡಿಜಿಟಲ್ ಮಾರ್ಕೆಟಿಂಗ್‌ನ ಬೇಡಿಕೆ ಹೆಚ್ಚುತ್ತಲೇ ಹೊರಟಿದೆ. ಸಾಂಪ್ರದಾಯಿಕ ಶಿಕ್ಷಣ ಯಾವುದೇ ಆಗಿರಲಿ, ಆನ್‌ಲೈನ್‌ ಮೂಲಕ ಡಿಜಿಟಲ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದ ಕೆಲವು ಕೌಶಲಗಳನ್ನು ಅಳವಡಿಸಿಕೊಳ್ಳಬಹುದು.

ಕೌಶಲಗಳು: ಗ್ರಾಹಕರ ಸಂಖ್ಯೆಯನ್ನು ವಿಸ್ತರಿಸಲು ಸಲಹೆ ನೀಡುವುದು, ನೇರ ಮಾರುಕಟ್ಟೆ ಯೋಜನೆ ಮತ್ತು ಬಜೆಟ್ ಅನ್ನು ರೂಪಿಸುವುದು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ನಿರ್ವಹಿಸುವುದು, ಡೇಟಾ-ಚಾಲಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಗ್ರಾಹಕ ಸಂವಹನ ಸಂದೇಶಗಳನ್ನು ವಿನ್ಯಾಸಗೊಳಿಸುವುದು, ತಂತ್ರಗಳನ್ನು ಯೋಜಿಸುವುದು. 

ಸಾಮಾಜಿಕ ಮಾಧ್ಯಮ ನಿರ್ವಹಣೆ 

ಡಿಜಿಟಲ್ ಮಾರ್ಕೆಟಿಂಗ್‌ನ ಒಂದು ಭಾಗವಾಗಿರುವ ಸಾಮಾಜಿಕ ಮಾಧ್ಯಮ ನಿರ್ವಹಣೆ ಇತ್ತೀಚೆಗೆ ಸ್ವತಂತ್ರ ಕ್ಷೇತ್ರವಾಗಿ ಬೆಳೆದಿದೆ. ಬಹುತೇಕ ಎಲ್ಲಾ ಪ್ರಕಾರದ ವ್ಯವಹಾರಗಳಿಗೂ, ವ್ಯಕ್ತಿಗಳಿಗೂ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸುವವರ ಅಗತ್ಯವಿರುತ್ತದೆ. ಆದರೆ ಕೇವಲ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ಗಳನ್ನು ಜಾಲಾಡುವುದು, ಪೋಸ್ಟರ್‌ ಹಾಕುವುದು, ಪ್ರತಿಕ್ರಿಯಿಸುವುದು ಅಷ್ಟೇ ಅಲ್ಲ. ಇದನ್ನು ಮೀರಿಯೂ ಇನ್ನೂ ಅನೇಕ ಕೆಲಸಗಳನ್ನು ಮಾಡಬೇಕಾಗುತ್ತದೆ.

ಕೌಶಲಗಳು: ಎಸ್‌ಇಒ ಮೂಲಗಳು, ಗ್ರಾಹಕರ ವಿಭಾಗ, ಬ್ರಾಂಡಿಂಗ್, ಕಂಟೆಂಟ್‌ ಮಾರ್ಕೆಟಿಂಗ್ ಮತ್ತು ಸಂವಹನ, ವಿನ್ಯಾಸ, ಕಾಪಿರೈಟಿಂಗ್.

ಯೋಜನಾ ನಿರ್ವಹಣೆ

ಯಾವತ್ತೂ ಬೇಡಿಕೆ ಕಳೆದುಕೊಳ್ಳದ ಕ್ಷೇತ್ರ ಪ್ರಾಜೆಕ್ಟ್‌‌ ಮ್ಯಾನೇಜ್‌ಮೆಂಟ್‌. ಯೋಜನಾ ನಿರ್ವಹಣೆ ಚಕ್ರದಲ್ಲಿ ಐದು ಹಂತಗಳು ಬರುತ್ತವೆ– ಪ್ರಾರಂಭ, ಯೋಜನೆ, ಕಾರ್ಯಗತಗೊಳಿಸುವುದು, ಮೇಲ್ವಿಚಾರಣೆ ಮತ್ತು ನಿಯಂತ್ರಣ ಹಾಗೂ ಮುಕ್ತಾಯ. ಈ ಹಂತಗಳನ್ನು ಪರಿಣಾಮಕಾರಿಯಾಗಿ ಕಲಿತರೆ ಉದ್ಯೋಗ ಅವಕಾಶಗಳಿಗೇನೂ ಕೊರತೆ ಇರದು. 

ಕೌಶಲಗಳು: ಅತ್ಯುತ್ತಮ ಯೋಜನಾ ನಿರ್ವಹಣೆ ತಂತ್ರಗಳು, ದಾಖಲೆ ಮತ್ತು ವರದಿ,  ಬಹುಕಾರ್ಯತಂತ್ರ,  ಮಾತುಕತೆ, ವ್ಯಾಪಾರ ಸಂವಹನ, ವೇಳಾಪಟ್ಟಿ ಮತ್ತು ಸಮಯ ನಿರ್ವಹಣೆ, ಎಂ.ಎಸ್, ಬಜೆಟ್, ವಿಶ್ಲೇಷಣಾತ್ಮಕ ಮನಸ್ಸು.

ಸರ್ಚ್ ಎಂಜಿನ್ ಆಪ್ಟಿಮೈಸೇಶನ್ (ಎಸ್‌ಇಒ)

ಹೆಚ್ಚಿನ ಕಂಪನಿಗಳು ಆನ್‌ಲೈನ್ ಖ್ಯಾತಿಯನ್ನು ಹೆಚ್ಚಿಸಲು ಹುಡುಕಾಟಗಳತ್ತ ಮುಖ ಮಾಡಿರುವುದರಿಂದ, ಎಸ್‌ಇಒ ಕೌಶಲಗಳ ಅಭಿವೃದ್ಧಿಯು ನಿಮ್ಮ ಸಾಮರ್ಥ್ಯದ ಮೌಲ್ಯವನ್ನು ಹೆಚ್ಚಿಸುವ ಜೊತೆಗೆ, ಅವಕಾಶಗಳ ಬಾಗಿಲನ್ನೂ ತೆರೆಯುತ್ತದೆ. 

ಕೌಶಲಗಳು: ಎಸ್‌ಇಒ ಕೋರ್ಸ್, ವೆಬ್‌ಸೈಟ್‌ನ ಕಾರ್ಯಕ್ರಮತೆ ಹೆಚ್ಚಿಸುವುದು, ವೆಬ್‌ಸೈಟ್‌ನಲ್ಲಿ ದಟ್ಟಣೆಯನ್ನು ನಿರ್ಮಿಸುವುದು, ಹುಡುಕಾಟದ ಫಲಿತಾಂಶಗಳನ್ನು ಹೆಚ್ಚಿಸುವುದು ಇತ್ಯಾದಿ.  

ವ್ಯಾಪಾರ ವಿಶ್ಲೇಷಣೆ

ಇದು ಬಹಳ ಸೂಕ್ಷ್ಮವಾದ ಕಾರ್ಯಕ್ಷೇತ್ರವಾಗಿದೆ. ಇಲ್ಲಿ ವ್ಯವಹಾರದ ಮೌಲ್ಯವನ್ನು ಹೆಚ್ಚಿಸುವಂತಹ ಒಳನೋಟಗಳನ್ನಾಗಿ ಡೇಟಾವನ್ನು ಪರಿವರ್ತಿಸಬೇಕು. ಮುಖ್ಯವಾಗಿ ಒಳನೋಟವುಳ್ಳ ವ್ಯವಹಾರದ ಮಾಹಿತಿಯನ್ನು ರಚಿಸಲು, ಕಚ್ಚಾ ಡೇಟಾವನ್ನು ಸಂಗ್ರಹಿಸುವುದು, ಪರಿಷ್ಕರಿಸುವುದು, ಜೋಡಿಸುವುದು, ವಿಶ್ಲೇಷಿಸುವುದು ಮತ್ತು ಪ್ರಸ್ತುತಪಡಿಸುವಂತಹ ಪ್ರಾಥಮಿಕ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

ಕೌಶಲಗಳು: ಡೇಟಾ ಸಂಗ್ರಹ, ಡೇಟಾ ಮಾಡೆಲಿಂಗ್, ಡೇಟಾ ದೃಶ್ಯೀಕರಣ, ಡೇಟಾ ಮತ್ತು ವ್ಯವಹಾರ ವಿಶ್ಲೇಷಣೆ, ಡೇಟಾಬೇಸ್ ನಿರ್ವಹಣೆ ಮತ್ತು ವರದಿ ಮಾಡುವುದು, ವ್ಯವಹಾರ ಆಡಳಿತ, ಮೈಕ್ರೋಸಾಫ್ಟ್ ಆಫೀಸ್ ಮತ್ತು ಎಕ್ಸೆಲ್.

ಸೈಬರ್ ಭದ್ರತೆ

ಆನ್‌ಲೈನ್ ವ್ಯವಹಾರಗಳ ಸಂಖ್ಯೆ ಹೆಚ್ಚಿದಂತೆ ಸೈಬರ್ ಸುರಕ್ಷತೆಯ ಪ್ರಾಮುಖ್ಯತೆಯೂ ಹೆಚ್ಚಿದೆ. ಪ್ರಮಾಣೀಕೃತ ಸೈಬರ್ ಭದ್ರತಾ ವೃತ್ತಿಪರರಿಗೆ ಅವಕಾಶವೂ ಹೆಚ್ಚಿದೆ. ಡೇಟಾಬೇಸ್‌ಗಳು, ಕಂಪ್ಯೂಟರ್ ನೆಟ್‌ವರ್ಕ್‌ಗಳು, ಹಾರ್ಡ್‌ವೇರ್, ಫೈರ್‌ವಾಲ್‌ಗಳು ಮತ್ತು ಎನ್‌ಕ್ರಿಪ್ಶನ್‌ನಲ್ಲಿನ ವ್ಯತ್ಯಾಸಗಳು ಮತ್ತು ದೌರ್ಬಲ್ಯಗಳನ್ನು ಕಂಡುಹಿಡಿಯುವ ಜವಾಬ್ದಾರಿಯನ್ನು ಸೈಬರ್ ಸೆಕ್ಯುರಿಟಿ ವೃತ್ತಿಪರರು ಹೊಂದಿರುತ್ತಾರೆ.

ಕೋವಿಡ್‌–19 ಬಿಕ್ಕಟ್ಟಿನ ನಂತರದ ಉದ್ಯೋಗ ಕ್ಷೇತ್ರದಲ್ಲಿ ಯಾವ ರೀತಿಯ ತರಂಗಗಳು ಏಳಲಿವೆ ಎನ್ನುವುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ ಕಡಿಮೆ ಅವಧಿಯಲ್ಲಿ, ಹೆಚ್ಚು ಬೇಡಿಕೆ ಇರುವ ಕೆಲವು ಕೌಶಲಗಳನ್ನು ಕಲಿತರೆ ಅವಕಾಶ ಹೆಚ್ಚು. ಹಲವಾರು ಉಚಿತ ಆನ್‌ಲೈನ್ ಕೋರ್ಸ್‌ಗಳನ್ನು ಮನೆಯಲ್ಲಿಯೇ ಸುಲಭವಾಗಿ ಅಧ್ಯಯನ ಮಾಡಬಹುದು.

ಬರವಣಿಗೆ ಮತ್ತು ವಿನ್ಯಾಸ

ಎಲ್ಲಾ ರೀತಿಯ ವ್ಯವಹಾರಗಳಿಗೆ ಅನನ್ಯ ಮತ್ತು ಆಕರ್ಷಕವಾಗಿರುವ ವಿಷಯ ಮಂಡನೆಯ ಅಗತ್ಯವಿರುತ್ತದೆ. ಹಾಗೆಯೇ ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ವಿನ್ಯಾಸವೂ ಅಗತ್ಯವಿರುತ್ತದೆ. ಇತ್ತೀಚೆಗೆ ಪ್ರತಿಯೊಂದು  ಕಂಪನಿಗಳು ಬರಹಗಾರರ ಮತ್ತು ವಿನ್ಯಾಸಕರ ತಂಡವನ್ನು ಹೊಂದಿರುತ್ತವೆ.

ಕೌಶಲಗಳು: ಅತ್ಯುತ್ತಮ ಲಿಖಿತ ಮತ್ತು ಮೌಖಿಕ ಸಂವಹನ, ಮೂಲ ಎಸ್‌ಇಒ ಜ್ಞಾನ, ಕಾಪಿರೈಟಿಂಗ್, ಸ್ಟೋರಿ ಟೆಲ್ಲಿಂಗ್‌, ಸಂಶೋಧನೆ, ಭಾಷಾಂತರ, ಗ್ರಾಫಿಕ್‌, ಫೋಟೊಶಾಪ್‌.

ಡೇಟಾ ವಿಶ್ಲೇಷಣೆ

ಈಗಂತೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ಡೇಟಾ ವಿಶ್ಲೇಷಣೆಯ ಅಗತ್ಯ ಹೆಚ್ಚಿದೆ. ಡೇಟಾವನ್ನು ನಿಯಂತ್ರಿಸುವ ಮತ್ತು ಮಾಪನಾಂಕ ನಿರ್ಣಯಿಸುವ ಮೂಲಕ ನೀವು ಸುಲಭವಾಗಿ ಡೇಟಾ ಹೊರತೆಗೆಯಲು ಮತ್ತು ಅದನ್ನು ಬಳಸಲು ಸಹಾಯ ಮಾಡಬೇಕಾಗುತ್ತದೆ. ಹಣಕಾಸು ಸಂಸ್ಥೆಗಳು, ಸಲಹಾ ಸಂಸ್ಥೆಗಳು, ಉತ್ಪಾದನಾ ಸಂಸ್ಥೆಗಳು, ಔಷಧಗಳು ಮತ್ತು ಶಿಕ್ಷಣದಂತಹ ವಿವಿಧ ಕ್ಷೇತ್ರಗಳಲ್ಲಿ ಈ ಸೇವೆಗೆ ಹೆಚ್ಚಿನ ಬೇಡಿಕೆ ಇದೆ.

ಕೌಶಲಗಳು: ಡೇಟಾಬೇಸ್ ವಿನ್ಯಾಸ, ದತ್ತಾಂಶ ಶೇಖರಣೆ, ಡೇಟಾ ಪರಿಷ್ಕರಣ, ಡೇಟಾ ದೃಶ್ಯೀಕರಣ ಮತ್ತು ವರದಿ ಮಾಡುವ ತಂತ್ರಗಳು, ಎಂಎಸ್ ಆಫೀಸ್‌, ಏಕ್ಸೆಲ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು