ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಇದು ಒಡಿಶಾದ ‘ಹೊಲಿಗೆ ಹಳ್ಳಿ’

Last Updated 19 ಸೆಪ್ಟೆಂಬರ್ 2020, 7:26 IST
ಅಕ್ಷರ ಗಾತ್ರ

ಒಡಿಶಾದ ಬಾಲಸೋರ್ ಜಿಲ್ಲೆಯ ಸುವರ್ಣರೇಖಾ ನದಿಯ ದಂಡೆಯಲ್ಲಿರುವ ಕೊಟಸಾಹಿ ಪಂಚಾಯ್ತಿಯ ಗೋವರ್ಧನಪುರ ಎಂಬ ಪುಟ್ಟ ಹಳ್ಳಿಗೆ ಕಾಲಿಡುತ್ತಿದ್ದಂತೆ ಹೊಲಿಗೆ ಯಂತ್ರಗಳ ಸದ್ದು ಕೇಳುತ್ತದೆ.ಆ ಸದ್ದನ್ನು ಆಲಿಸುತ್ತಾ ಊರಿನೊಳಗೆ ಹೆಜ್ಜೆ ಹಾಕಿದರೆ, ಮನೆಯೊಳಗೆ ಬಟ್ಟೆ ಹೊಲಿಯುವವರು ಕಾಣುತ್ತಾರೆ. ಹೊರಗಡೆ ಜಗಲಿಯಲ್ಲಿ ಬಟ್ಟೆಗಳನ್ನು ಅಳೆಯುತ್ತಾ, ಕತ್ತರಿಸುತ್ತಿರುವವರು ಕಾಣುತ್ತಾರೆ.

ಸುಮಾರು ನಾಲ್ಕನೂರು ಕುಟುಂಬಗಳಿರುವ ಗೋವರ್ಧನಪುರದಲ್ಲಿ ಜೋಗಿ ಸಮುದಾಯದವರೇ ಹೆಚ್ಚಿದ್ದಾರೆ. ಇಲ್ಲಿನ ಪ್ರತಿ ಮನೆಯಲ್ಲೂ ಒಬ್ಬ ಟೈಲರ್ ಇದ್ದಾರೆ. ಹೊಲಿಗೆ ಯಂತ್ರದ ಚಕ್ರ ಉರುಳುತ್ತಿದ್ದರೆ, ಬದುಕಿನ ಬಂಡಿಯೂ ಸರಾಗವಾಗಿ ನಡೆಯುತ್ತದೆ. ಟೈಲರಿಂಗ್ ವೃತ್ತಿ ಎನ್ನುವುದು ಊರಿನ ಜನರಿಗೆ ಬದುಕು ಕೊಟ್ಟಿದೆ.

ಗೋವರ್ಧನಪುರದಲ್ಲಿ ಟೈಲರ್ ವೃತ್ತಿ ನಡೆಸುತ್ತಿರುವವರು ಮೂಲತಃ ಕೃಷಿಕರು. ಇವರಲ್ಲಿ ಹಲವರಿಗೆ ಜಮೀನಿದೆ. ಮಳೆಯಾಧಾರಿತವಾಗಿ ಭತ್ತ ಬೆಳೆಯುತ್ತಾರೆ. ಆದರೆ, ಪ್ರತಿ ವರ್ಷ ಉಂಟಾಗುವ ಪ್ರವಾಹ ಭತ್ತದ ಬೆಳೆಯನ್ನು ಆಪೋಷಣ ತೆಗೆದುಕೊಳ್ಳುತ್ತದೆ. ‘ಅತೀವೃಷ್ಟಿಯಿಂದ ಉಂಟಾಗುವ ಅನಿಶ್ಚಿತ ಸನ್ನಿವೇಶದಿಂದ ಪಾರಾಗಲು ಜೀವನೋಪಾಯಕ್ಕಾಗಿ ಟೈಲರಿಂಗ್ ವೃತ್ತಿ ಮಾಡುತ್ತಿದ್ದೇವೆ‘ ಎನ್ನುತ್ತಾರೆ ಹೊಲಿಗೆ ವೃತ್ತಿ ಆಯ್ಕೆ ಮಾಡಿಕೊಂಡಿರುವ ಕುಟುಂಬದವರು.

ಈ ಟೈಲರಿಂಗ್ ವೃತ್ತಿ ಇಂದು ನಿನ್ನೆಯಿಂದ ಆರಂಭವಾಗಿಲ್ಲ. ತಲೆಮಾರುಗಳಿಂದಲೂ ನಡೆದುಕೊಂಡು ಬಂದಿದೆ.ಲಿಂಗಭೇದ, ವಯೋಭೇದವಿಲ್ಲದೇ ನಡೆಯುತ್ತಿದೆ. ಹೊಲಿಗೆ ಕೌಶಲ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗವಾಗುತ್ತಾ ಬಂದಿದೆ. ಕೆಲವು ಕುಟುಂಬಗಳಲ್ಲಿ ಅಪ್ಪಂದಿರು ಮಕ್ಕಳಿಗೆ ಹೊಲಿಗೆ ಕಲಿಸಿದ್ದರೆ, ಇನ್ನೂ ಕೆಲವು ಕಡೆ ಸಂಬಂಧಿಕರಿಂದ ಕಲಿತವರೂ ಇದ್ದಾರೆ. ಹೀಗೆ ಹೊಲಿಗೆ ಕಲಿತ ಯುವ ಸಮುದಾಯ, ಮುಂದೆ ಹೊಸ ಹೊಸ ವಿನ್ಯಾಸಗಳೊಂದಿಗೆ ಆ ವೃತ್ತಿಯನ್ನು ಮುನ್ನಡೆಸುತ್ತಿದ್ದಾರೆ.

‘ಸಮವಸ್ತ್ರ’ಗಳೇ ಪ್ರಮುಖ ಉತ್ಪನ್ನಗಳು..

ಸಾಂಪ್ರದಾಯಿಕವಾಗಿ ಹೊಲಿಗೆ ವೃತ್ತಿ ಆರಂಭಿಸಿದ ಈ ಹಳ್ಳಿಗರು, ಕಾಲಕ್ಕೆ ತಕ್ಕಂತೆ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವೃತ್ತಿ ಯನ್ನು ಮೇಲ್ದರ್ಜೆಗೆ ಏರಿಸಿಕೊಂಡಿದ್ದಾರೆ. ಹೊಸ ಹೊಸ ವಿನ್ಯಾಸಗಳನ್ನು ಸಿದ್ಧಪಡಿಸುತ್ತಾರೆ. ಸುಧಾರಿತ ಯಂತ್ರಗಳನ್ನು ಬಳಸುತ್ತಿ ದ್ದಾರೆ. ಮಾನವ ಚಾಲಿತದಿಂದ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳವರೆಗೆ ಅಪ್‌ಡೇಟ್ ಆಗಿದ್ದಾರೆ. ಬಟ್ಟೆ, ದಾರ ಮತ್ತಿತರ ಕಚ್ಚಾವಸ್ತುಗಳನ್ನು ಕೋಲ್ಕತ್ತಾದಿಂದ ಖರೀದಿಸುತ್ತಾರೆ.

ಬಾಲಸೋರ್‌, ಭದ್ರಾಕ್, ಜಜ್ಪುರ್ ಮತ್ತು ಮಯೂರ್ಭಂಜ್ ಜಿಲ್ಲೆಗಳ ಹಲವು ಶಾಲೆಗಳಿಗೆ ಮತ್ತು ಅಂಗನವಾಡಿ ಕೇಂದ್ರಗಳ ಮಕ್ಕಳ ಸಮವವಸ್ತ್ರಗಳನ್ನು ಇಲ್ಲಿನ ಕುಟುಂಬಗಳೇ ತಯಾರಿಸಿಕೊಡುತ್ತವೆ. ಇದೇ ಈ ಊರಿನಿಂದ ತಯಾರಾಗುವ ಪ್ರಮುಖ ಉತ್ಪನ್ನ. ಪ್ರತಿವರ್ಷ ಶಾಲಾ ಆರಂಭವಾಗುವ ದಿನಗಳಲ್ಲಿ ಇಲ್ಲಿನ ಟೈಲರ್‌ಗಳಿಗೆ ಕೈ ತುಂಬಾ ಕೆಲಸ.

ಸಮವಸ್ತ್ರಗಳ ಜತೆಗೆ ಶರ್ಟ್, ಚೂಡಿದಾರ್, ಪೆಟ್ಟಿಕೋಟ್‌ನಂತಹ ಉಡುಪುಗಳನ್ನು ಹೊಲಿಯುತ್ತಾರೆ. ಒಡಿಶಾದ ಜಿಲ್ಲಾ ಕೇಂದ್ರ ಗಳಲ್ಲಿರುವ ಸಗಟು ಬಟ್ಟೆ ವ್ಯಾಪಾರಿಗಳು ಇವರಲ್ಲಿಗೆ ಬಂದು ಸಿದ್ಧ ಉಡುಪುಗಳನ್ನು ಖರೀದಿಸುತ್ತಾರೆ. ಕೆಲವರು ಆರ್ಡರ್ ಕೊಟ್ಟು ಉಡುಪುಗಳನ್ನು ತಯಾರಿಸಲು ಹೇಳುತ್ತಾರೆ.ಈಗೀಗ ಪಿಲ್ಲೋಕವರ್‌ನಿಂದ ಹಿಡಿದು, ಮನೆಯ ಅಲಂಕಾರಕ್ಕೆ ಅಗತ್ಯವಾಗಿರುವ ಕಸೂತಿ ಕೆಲಸಗಳನ್ನೂ ಮಾಡಿಕೊಡುತ್ತಿದ್ದಾರೆ.

ತಾವು ಹೊಲಿಯುವ ಬಟ್ಟೆಗಳನ್ನು ತೀರಾ ದುಬಾರಿ ಬೆಲೆಗೆ ಮಾರುವುದಿಲ್ಲ. ಒಂದು ಶರ್ಟ್‌ಗೆ ₹20 ರಿಂದ ₹30 ಲಾಭವಿಟ್ಟು ಮಾರುತ್ತಾರೆ. ಚೂಡಿದಾರ್ ತಯಾರಿಕೆಗೆ ವೆಚ್ಚ ಹೆಚ್ಚು. ₹40 ರಿಂದ ₹50ರವರೆಗೂ ಲಾಭ ಇಟ್ಟು ಮಾರುತ್ತಾರೆ. ಚೂಡಿದಾರ್‌ ಹೊಲಿಯುವುದರಿಂದ ಆದಾಯವೂ ಹೆಚ್ಚಂತೆ. ಒಂದು ದಿನಕ್ಕೆ 25 ರಿಂದ 30 ಚೂಡಿದಾರ್ ಹೊಲಿಯುತ್ತಾರಂತೆ.

‘ಸೌರಶಕ್ತಿ’ನೀಡಿದ ಸೆಲ್ಕೊ

ಶಾಲಾ ಮಕ್ಕಳ ಸಮವಸ್ತ್ರ ತಯಾರಿಕೆ ಮತ್ತು ರೆಡಿಮೇಡ್ ಉಡುಪುಗಳನ್ನು ಪೂರೈಸುತ್ತಾ ಬದುಕು ನಡೆಸುತ್ತಿದ್ದ ಗೋವರ್ಧನಪುರ ದವರಿಗೆ ‘ಅನಿಶ್ಚಿತತೆ ವಿದ್ಯುತ್ ಪೂರೈಕೆ‘ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ಅನಿಯಮಿತ ಪವರ್ ಕಟ್‌ನಿಂದಾಗಿ ‘ಬೇಡಿಕೆ‘ ಇದ್ದರೂ, ಉಡುಪುಗಳನ್ನು ಸಕಾಲದಲ್ಲಿ ಗ್ರಾಹಕರಿಗೆ ಪೂರೈಸಲಾಗುತ್ತಿರಲಿಲ್ಲ.

ಈ ‘ಹೊಲಿಗೆ ಹಳ್ಳಿ‘ಯ ಬಗ್ಗೆ ಕೇಳಿದ್ದ ಬೆಂಗಳೂರಿನ ಸೆಲ್ಕೊ ಪ್ರತಿಷ್ಠಾನದ ಸಿಬ್ಬಂದಿ, ಲಾಕ್‌ಡೌನ್‌ ಘೋಷಣೆಗೆ ಕೆಲವು ತಿಂಗಳುಗಳ ಮುನ್ನ ಈ ಹಳ್ಳಿಗೆ ಭೇಟಿ ನೀಡಿ, ಅಲ್ಲಿನ ಟೈಲರ್‌ಗಳು ಎದುರಿಸುತ್ತಿರುವ ವಿದ್ಯುತ್‌ ಸಮಸ್ಯೆ ಬಗ್ಗೆ ಮಾಹಿತಿ ಸಂಗ್ರಹಿಸಿತು. ಅಲ್ಲಿನ ಕುಟುಂಬಗಳೊಂದಿಗೆ ಚರ್ಚಿಸಿ, ‘ನಿಮ್ಮ ಟೈಲರಿಂಗ್ ಮಷಿನ್‌ಗಳಿಗೆ ಸೌರಚಾಲಿತ ವಿದ್ಯುತ್‌ ಮೋಟರ್‌ಗಳನ್ನು ಅಳವಡಿಸಿಕೊಂಡರೆ, ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದಲ್ಲ‘ ಎಂದು ಸಲಹೆ ನೀಡಿದರು. ಅಷ್ಟೇ ಅಲ್ಲ, ಈಗಿರುವ ಮೋಟಾರ್‌ಗಳಿಗೆ ಸೌರಶಕ್ತಿ ಸಂಪರ್ಕ ಕೊಡಿಸಲು ನೆರವಾಗುವುದಾಗಿ ಭರವಸೆಯನ್ನು ನೀಡಿದರು.

ಸೆಲ್ಕೊ ಸಲಹೆಗೆ ಒಪ್ಪಿದ ಹತ್ತು ಕುಟುಂಬಗಳು, ಹಾಲಿ ಇರುವ ಮೋಟಾರ್‌ಗೆ ಸೌರಶಕ್ತಿ ಸೌಲಭ್ಯವನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರಿದವು. ಮೋಟಾರ್‌ಗಳಿಗೆ ಸೌರಶಕ್ತಿ ಸಂಪರ್ಕ ಪಡೆದುಕೊಳ್ಳಲು ಜಲೇಶ್ವರದ ಸಿಂಡಿಕೇಟ್‌ ಬ್ಯಾಂಕ್‌ ಸಾಲ ಸೌಲಭ್ಯ ನೀಡಿತು. ಸೆಲ್ಕೊ ಪ್ರತಿಷ್ಠಾನ, ಸೌರಶಕ್ತಿ ಸೌಲಭ್ಯಕ್ಕೆ ಬೇಕಾದ ಪರಿಕರಗಳು ಮತ್ತು ಸೌರ ದೀಪದ ಜತೆಗೆ ತಾಂತ್ರಿಕ ನೆರವು ನೀಡಿತು ಎಂದು ವಿವರಿಸಿದರು ಸೆಲ್ಕೊ ಪ್ರತಿಷ್ಠಾನದ ಸಂಜಯ್. ‘ಹೊಲಿಗೆ ಯಂತ್ರಕ್ಕೆ ಸೌರಶಕ್ತಿ ಸೌಲಭ್ಯ ದೊರೆತೆ ಮೇಲೆ ಕರೆಂಟ್ ಹೋಗುತ್ತದೆ ಎಂಬ ಭಯವಿಲ್ಲ.ಈಗ ಮೊದಲಿಗಿಂತಲೂ ವೇಗವಾಗಿ ಬಟ್ಟೆಗಳನ್ನು ಹೊಲಿಯಲು ಸಾಧ್ಯವಾಗಿದೆ. ಕಡಿಮೆ ಕೆಲಸ, ಹೆಚ್ಚು ಆದಾಯ' ಎನ್ನುತ್ತಾರೆ ಗ್ರಾಮದ ಸುನಂದಾ ಮೊಹಾಂತಿ.

ಲಾಕ್‌ಡೌನ್‌ಲ್ಲೂ ನಿಲ್ಲದ ‘ವೃತ್ತಿ’:ಸರಾಗವಾಗಿ ಸಾಗುತ್ತಿದ್ದ ಗೋವರ್ಧಪುರದ ಹೊಲಿಗೆ ವೃತ್ತಿಗೆ ಕೋವಿಡ್‌–ಲಾಕ್‌ಡೌನ್ ಆರಂಭದಲ್ಲಿ ತಡೆಯೊಡ್ಡಿತು. ಶಾಲಾ ಕಾಲೇಜು ಮುಚ್ಚಿದ ಕಾರಣ ಸಮವಸ್ತ್ರಕ್ಕೆ ಬೇಡಿಕೆ ಇಲ್ಲದಂತಾಯಿತು. ಬಟ್ಟೆ ಅಂಗಡಿಗಳು ವ್ಯಾಪಾರ ಸ್ಥಗಿತಗೊಂಡಿದ್ದರಿಂದ ಸಿದ್ಧ ಉಡುಪುಗಳನ್ನು ಕೊಳ್ಳುವವರಿಲ್ಲದಂತಾಯಿತು.

ಆದರೆ, ಇದ್ಯಾವುದಕ್ಕೂ ಈ ಊರಿನವರು ಅಂಜಲಿಲ್ಲ. ಬದಲಿಗೆ, ತಮ್ಮ ಕೆಲಸದ ವಿಧಾನವನ್ನೇ ಬದಲಿಸಿಕೊಂಡರು. ಉಡುಪುಗಳ ಬದಲಾಗಿ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಅಗತ್ಯವಾದ ಮಾಸ್ಕ್‌ಗಳನ್ನು ಹೊಲಿಯಲು ಶುರು ಮಾಡಿದರು. ತಮ್ಮಲ್ಲಿ ರುವ ಕಚ್ಚಾವಸ್ತುಗಳನ್ನೇ ಬಳಸಿಕೊಂಡು ಮಾಸ್ಕ್‌ ತಯಾರಿಸಿದರು.

ಈಗ ಪ್ರತಿದಿವಸ ಅಂದಾಜು 150-200 ಮಾಸ್ಕ್‌ಗಳನ್ನು ಇಲ್ಲಿ ಹೊಲಿಯುತ್ತಿದ್ದಾರೆ. ಮೂರರಿಂದ ನಾಲ್ಕು ಮಂದಿ ಒಂದೆಡೆ ಸೇರಿ ದೊಡ್ಡ ಸಂಖ್ಯೆಯಲ್ಲಿ ಮಾಸ್ಕ್‌ಗಳನ್ನು ತಯಾರಿಸಿ ಸ್ಥಳೀಯರಿಗೆ, ಸಮೀಪದ ಹಳ್ಳಿಗರಿಗೆ, ಆರೋಗ್ಯ ಕೇಂದ್ರಗಳಿಗೆ ಮತ್ತು ಆರೋಗ್ಯ ಇಲಾಖೆಗಳಿಗೆ ಪ್ರತಿದಿವಸ ಪೂರೈಸುತ್ತಿದ್ದಾರೆ. ಬಾಲಸೋರ್‌ನಕೆಲವೊಂದು ಸರ್ಕಾರಿ ಕಚೇರಿಗಳು, ಸಮಗ್ರ ಬುಡಕಟ್ಟು ಅಭಿವೃದ್ಧಿ ಸಂಸ್ಥೆಗಳಿಗೆ ಮಾಸ್ಕ್‌ಗಳನ್ನು ಪೂರೈಕೆ ಮಾಡುತ್ತಿದ್ದಾರೆ.‘ನಮಗೆ ಪ್ರತಿದಿನ ಕೆಲಸ ಸಿಕ್ಕ ಖುಷಿಯಿದೆ‘ ಎನ್ನುತ್ತಾರೆ ಈ ಹಳ್ಳಿಯ ದಮಯಂತಿ ನಾಥ್, ಝರಾನಾ ಹಾಗೂ ಮತ್ತಿತರ ಮಹಿಳೆಯರು.

ಇಷ್ಟೆಲ್ಲ ವೃತ್ತಿಪರವಾಗಿರುವ ಈ ಹಳ್ಳಿಯಲ್ಲಿ ಕೆಲವೊಂದು ಕಂಪನಿಗಳು ಆಗಾಗ್ಗೆ ಟೈಲರಿಂಗ್ ತರಬೇತಿಯನ್ನೂ ಏರ್ಪಡಿಸುತ್ತಿರು ತ್ತಾರೆ. ಆದರೆ, ಸರ್ಕಾರದಿಂದ ನಮಗೆ ಸೂಕ್ತ ನೆರವು ಸಿಗುತ್ತಿಲ್ಲ. ಬ್ಯಾಂಕ್ ಸಾಲದಂತಹ ಸೌಲಭ್ಯಗಳು ದೊರೆತರೆ, ನಾವು ನಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಬಹುದು. ವೇಗವಾಗಿ ಹೊಲಿಯುವ ಯಂತ್ರಗಳನ್ನು ಖರೀದಿಸಬಹುದು ಎಂದು ಹೇಳುತ್ತಾರೆ ಗ್ರಾಮಸ್ಥರು.

(ಪೂರಕ ಮಾಹಿತಿ: ಭಾರತಿ ಹೆಗಡೆ, ಸಂಜಯ್‌ ಒಡಿಶಾ ಮತ್ತು ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT