ಶನಿವಾರ, ಆಗಸ್ಟ್ 13, 2022
22 °C
ಶಿಕ್ಷಕರ ದಿನಾಚರಣೆ ವಿಶೇಷ

PV Web Exclusive | ಈ ‘ಅಕ್ಷರ’ ಫಕೀರರಿಗೊಂದು ಸಲಾಂ...!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಮತ್ತೆ ಶಿಕ್ಷಕ ದಿನಾಚರಣೆ (ಸೆ. 5) ಬಂದಿದೆ. ಜೀವನದಲ್ಲಿ ಗುರಿ, ಗುರು ಬಹುಮುಖ್ಯ. ಗುರುಗಳು ಬೀರಿದ ಪ್ರಭಾವದಿಂದ ಜೀವನದ ದಿಕ್ಕನ್ನೇ ಬದಲಿಸಿಕೊಂಡು ಯಶಸ್ಸು ಕಂಡವರು, ಸಾಧನೆಯ ಹಾದಿ ತುಳಿದವರ ಸಂಖ್ಯೆ ಸಾಕಷ್ಟಿವೆ. ಗುರಿ ಮುಟ್ಟಲು ಉತ್ತಮ ಗುರುಗಳ ಸೋಪಾನ ಅಗತ್ಯ. ಗುರು ಸ್ಥಾನಕ್ಕೆ ತನ್ನದೇ ಆದ ಘನತೆ- ಗೌರವಗಳಿವೆ. ಅದರ ಜೊತೆಗೆ, ತನ್ನದೇ ಆದ ಔನ್ನತ್ಯವೂ ಇದ್ದರಷ್ಟೇ ವೃತ್ತಿಯ ಪಾವಿತ್ರ್ಯತೆ ಉಳಿಯಲು ಸಾಧ್ಯ.

ಸಮಾಜದಲ್ಲಿ ಶಿಕ್ಷಕ ಹುದ್ದೆಯೂ ಕಳಂಕಿತಗೊಳ್ಳುತ್ತಿರುವುದು ಇತ್ತೀಚಿನ ಬೆಳವಣಿಗೆ. ನೈತಿಕ ಅಧ:ಪತನ ಹೊಂದಿದವರು, ವೃತ್ತಿಯ ಹೊಣೆಗಾರಿಕೆ ಅರಿವಿಲ್ಲದೇ ಹೊಟ್ಟೆ ಹೊರೆಯಲು ಈ ಕ್ಷೇತ್ರಕ್ಕೆ ಬರುವವರು ಇದಕ್ಕೆ ಕಾರಣ ಇರಬಹುದು. ಈ ನಡುವೆಯೇ ವೃತ್ತಿಯ ಪಾವಿತ್ರ್ಯ ಕಾಪಾಡುವ ಪ್ರಾಮಾಣಿಕರೂ ಇದ್ದಾರೆ. ಬದ್ಧತೆಯಿಂದ ಕೆಲಸ ಮಾಡುವವರೂ ಇದ್ದಾರೆ.

ಅನಕ್ಷರಸ್ಥರಾಗಿದ್ದರೂ ಶಿಕ್ಷಣದ ಮಹತ್ವದ ಅರಿತ ‘ಅಕ್ಷರ ಸಂತ’ ಹರೇಕಳ ಹಾಜಬ್ಬ, ಶಿಕ್ಷಕ ಅಲ್ಲದಿದ್ದರೂ ಈ ಸಂದರ್ಭದಲ್ಲಿ ನೆನಪಾಗುತ್ತಾರೆ. ಒಬ್ಬ ಶಿಕ್ಷಕನಿಂದ ಸಾಧ್ಯವಾಗದ ಕೆಲಸವನ್ನು ಅವರು ಬೀದಿಬದಿಯಲ್ಲಿ ಕಿತ್ತಳೆ ಮಾರಿ ಮಾಡಿ ತೋರಿಸಿದ್ದಾರೆ. ಶಿಕ್ಷಣದ ಬಗ್ಗೆ ಅರಿವೇ ಇಲ್ಲದ ಹಮಾಲಿ ಮಕ್ಕಳ ಪಾಲಿಗೆ ಹುಬ್ಬಳ್ಳಿಯ ರಾಮು ಮೂಲಗಿ ಎಂಬ ‘ಜಾನಪದ ತಜ್ಞ’ ಮಾರ್ಗದರ್ಶಕರಾಗಿದ್ದಾರೆ. ಶಿಕ್ಷಣದ ಜೊತೆ ಜನಪದ ಸಾಹಿತ್ಯ ಪಸರಿಸುವ ಕೊಪ್ಪಳ ಜಿಲ್ಲೆಯ ಬಿನ್ನಾಳ ಗ್ರಾಮದ ಜೀವನಸಾಬ ವಾಲಿಕಾರ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ವಿಶ್ವದಲ್ಲೇ ಅತಿ ಕಿರಿಯ ಮುಖ್ಯ ಶಿಕ್ಷಕನೆಂದು ಗುರುತಿಸಿಕೊಂಡ ಪಶ್ಚಿಮ ಬಂಗಾಲದ ಬಾಬರ್‌ ಅಲಿ, ಸೈಕಲ್‌ನಲ್ಲೇ ಸುತ್ತಿ ಲಕ್ನೋದ ಸ್ಲಂ ಮಕ್ಕಳಿಗೆ ಬೋಧಿಸುವ ಆದಿತ್ಯಕುಮಾರ್, ದಿಲ್ಲಿಯಲ್ಲಿ ಮೆಟ್ರೋ ಕೆಳಗಡೆ ಶಾಲೆ ನಡೆಸುವ ರಾಜೇಶ್‌ಕುಮಾರ್‌ ವರ್ಮಾ, ನದಿಯಲ್ಲಿ ಈಜಾಡುತ್ತ ಶಾಲೆಗೆ ಬರುವ ಅಬ್ದುಲ್‌ ಮಲಿಕ್‌... ಇಂಥವರು ಇಡೀ ಶಿಕ್ಷಕ ವರ್ಗಕ್ಕೆ ಮಾದರಿ. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಅವರ ಬಗ್ಗೆ ಒಂದಿಷ್ಟು...

ಶಾಲೆ ಕಟ್ಟಿದ ಫಕೀರ– ಹರೇಕಳ ಹಾಜಬ್ಬ

‘ಅಕ್ಷರ ಸಂತ’ ಎಂದೇ ಗುರುತಿಸಿಕೊಂಡಿರುವ ಹರೇಕಳ ಹಾಜಬ್ಬ ಅವರ ಯಶೋಗಾಥೆ ಗೊತ್ತೇ ಇದೆ. ಕಿತ್ತಳೆ ಹಣ್ಣಿನ ಬುಟ್ಟಿ ಹೊತ್ತು ಬೀದಿ ಬೀದಿ ತಿರುಗುತ್ತಲೇ, ತನ್ನೂರಿನ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆ ಕಟ್ಟಲು ಮುಂದಾದ ಅವರ ಬದುಕಿನ ಚಿತ್ರಣ ಕುವೆಂಪು ಮತ್ತು ಧಾರವಾಡ ವಿಶ್ವವಿದ್ಯಾಲಯದ ಪಠ್ಯಪುಸ್ತಕದಲ್ಲೂ ಇದೆ!

ಅನಕ್ಷರಸ್ಥ ಹಾಜಬ್ಬ, ತಮ್ಮ ಊರಿನ ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂಬ ಕಾರಣಕ್ಕೆ ಶಾಲೆ ಕಟ್ಟಿದ್ದಾರೆ. ಆ ಉದ್ದೇಶದಿಂದ ಅಧಿಕಾರಿಗಳು, ಜನಪ್ರತಿನಿಧಿಗಳು, ಶ್ರೀಮಂತರು ಹೀಗೆ ಹಲವರ ಮನೆಯ ಕದ ತಟ್ಟಿ ಯಶಸ್ಸು ಕಂಡಿದ್ದಾರೆ. ಮಂಗಳೂರು ತಾಲ್ಲೂಕು ಹರೇಕಳ ಗ್ರಾಮದ ನ್ಯೂಪಡ್ಪುವಿನ ಮದ್ರಸಾ ಒಂದರಲ್ಲಿ 1999ರಲ್ಲಿ ಹಾಜಬ್ಬ ಅವರು ಶಾಲೆ ಆರಂಭಿಸಿದಾಗ, ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಾಗೆಂದು, ಅವರು ವಿಚಲಿತರಾಗಲಿಲ್ಲ. ಕಿತ್ತಳೆ ಮಾರುತ್ತಲೇ ಶಾಲೆಗೆ ಅಗತ್ಯವಾದ ಸಹಾಯಧನ ಯಾಚಿಸಿ ಸಂಗ್ರಹಿಸಿದರು. ಪ್ರತಿ ವರ್ಷ ಒಂದೊಂದು ತರಗತಿ ಹೆಚ್ಚಿಸುತ್ತಲೇ ಹೋದರು.

ಈ ಅಕ್ಷರ ಸಂತ ಈಗ ‘ಪದ್ಮಶ್ರೀ ಪುರಸ್ಕೃತ’. ಈ ಹಿಂದೆಯೇ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ರಾಜ್ಯವಷ್ಟೇ ಅಲ್ಲ, ದೇಶ, ವಿದೇಶಗಳಿಂದಲೂ ಮಾನ– ಸಮ್ಮಾನ ಸಂದಿದೆ.

 ‘ಹಮಾಲಿ’ ಮಕ್ಕಳ ರಾಮಣ್ಣ ಮಾಸ್ತರ

ವಿಸ್ತ್ರೀರ್ಣದಲ್ಲಿ ಏಷ್ಯಾದಲ್ಲೇ ಅತಿ ದೊಡ್ಡ ಎಪಿಎಂಸಿ ಎನ್ನಲಾದ ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಕಾರ್ಯನಿರ್ವಹಿಸುತ್ತಿರುವ ಹಮಾಲಿಗಳ ಮಕ್ಕಳಿಗೆ ಶಾಲೆಗಳನ್ನು ಮಾಡಿ ಅವರಿಗೆ ವಿದ್ಯಾಭ್ಯಾಸ ನೀಡುವಲ್ಲಿ ರಾಮು ಮೂಲಗಿ ಅವರು ಮಾಡುತ್ತಿರುವ ಸೇವೆ ಸ್ಮರಣೀಯ.

ಎಪಿಎಂಸಿಯಲ್ಲಿ ಸಾವಿರಾರು ಹಮಾಲಿ ಕಾರ್ಮಿಕರಿದ್ದಾರೆ. ಅವರಿಗಾಗಿ 300ಕ್ಕೂ ಹೆಚ್ಚು ವಸತಿಗಳನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. ಅವರ ಮಕ್ಕಳ ಶಿಕ್ಷಣಕ್ಕಾಗಿ 1999ರಲ್ಲಿ ಅಲ್ಲೊಂದು ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಲಾಗಿದೆ. ನಂತರ ವಸತಿ ನಿಲಯವನ್ನೂ ಆರಂಭಿಸಲಾಗಿದೆ. ಅದೀಗ ಹಿರಿಯ ಪ್ರಾಥಮಿಕ ಶಾಲೆಯಾಗಿದೆ. 150ಕ್ಕೂ ಹೆಚ್ಚು ಮಕ್ಕಳಿದ್ದಾರೆ.

ಹಮಾಲಿಗಳ ಮಕ್ಕಳಿಗೆಂದೇ ಇರುವ ಏಕೈಕ ಶಾಲೆಯಿದು. ಸರ್ಕಾರಿ ಶಾಲೆ ಎಂಬ ನಾಮಫಲ ಬಿಟ್ಟರೆ, ಉಳಿದ ಎಲ್ಲವೂ ಇಲ್ಲಿ ದಾನಿಗಳ ಕೊಡುಗೆ. ಇದು, ಇಲ್ಲಿಯ ಮುಖ್ಯ ಶಿಕ್ಷಕ ಮೂಲಗಿ ಅವರ ಪರಿಶ್ರಮದ ಫಲ. ಈ ಶಾಲೆಗೆ 2006–07ರಲ್ಲಿ ಅತ್ಯುತ್ತಮ ಶಾಲೆ ಎಂಬ ಗರಿ ಸಿಕ್ಕಿದೆ. ಶಿಕ್ಷಣ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಮೂಲಗಿಯವರು, ಬಡತನ, ಅನಕ್ಷರತೆ, ಹಳ್ಳಿ ಜನರ ಕಷ್ಟವನ್ನು ಸ್ವತಃ ಬಲ್ಲವರು. ಶಿಕ್ಷಣ ಮಹತ್ವ ಸಾರಲು ಅವರು ಆರಂಭಿಸಿದ್ದು ‘ಶಿಕ್ಷಣ ಚಿಂತನೆ’ ಯೋಜನೆ. ಉಪನ್ಯಾಸ, ನಾಟಕ, ಜಾನಪದ ಹಾಡುಗಳ ಮೂಲಕ ಹಮ್ಮಿಕೊಂಡರು. ಶಾಲೆ ನಿರ್ಮಿಸಲು ದಾನಿಯೊಬ್ಬರು  ಜಾಗ ನೀಡಿದರು. 2002ರಲ್ಲಿ ಶಾಲೆ ಉದ್ಘಾಟನೆಯಾಯಿತು. ಶಾಲೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ದಾನಿಗಳಿಂದ ಸಂಗ್ರಹಿಸಿದರು. ಜಾನಪದ ಹಾಡುಗಾರರಿಕೆಯ ಮೂಲಕ ಅವರೀಗ ಹೆಚ್ಚು ಜನಪ್ರಿಯ ಶಿಕ್ಷಕ. ಈ ವಸತಿ ಶಾಲೆಯಲ್ಲೀಗ ಪ್ರವಾಹಪೀಡಿತ ಉತ್ತರಕರ್ನಾಟಕದ ಜಿಲ್ಲೆಗಳ ಹಮಾಲಿಗಳ ಮಕ್ಕಳು ಇದ್ದಾರೆ.

ಈ ಶಿಕ್ಷಕನ ‘ಜೀವನ’ವೇ ಜನಪದ ಜೋಕಾಲಿ

ಕೊಪ್ಪಳ ಜಿಲ್ಲೆ ಬಿನ್ನಾಳದ ಶಿಕ್ಷಕ ಜೀವನಸಾಬ ವಾಲಿಕಾರ ಅವರ ಜೀವನವೇ ಜನಪದ ಜೋಕಾಲಿ. ತಮ್ಮ ಕಲೆಯಿಂದಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅವರು, ವಿದ್ಯಾರ್ಥಿಗಳಿಗೂ ಜನಪದ ಸಾಹಿತ್ಯ ಪರಿಚಯಿಸುತ್ತಿದ್ದಾರೆ. ವೃತ್ತಿ ಮತ್ತು ಜನಪದ ಹಾಡುಗಾರಿಕೆ ಮೂಲಕ ಸಾಧನೆಯ ಹಾದಿಯಲ್ಲಿರುವ ವಾಲಿಕಾರ, ಹೊಸ ಬಂಡಿಹರ್ಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

ನಟನೆ, ಜಾಗೃತಿ,ಗೀತೆಗಳ ಗಾಯನ, ನಿರೂಪಣೆ, ಜನಪದ ಸಾಹಿತ್ಯದಲ್ಲಿ ಹಾಸ್ಯ ಭಾಷಣ, ಜನಪದ ಸಾಹಿತ್ಯ ಮತ್ತು ಕಲೆಯಬಗ್ಗೆ ಉಪನ್ಯಾಸ ನೀಡುವ ವಾಲಿಕರ ಅವರು, ಹೋದ ಕಡೆಗಳೆಲ್ಲ ಶಿಕ್ಷಣದ ಅಗತ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಜನಪದ ಗಾಯಕರಾಗಿ ದೇಶವಷ್ಟೇ ಅಲ್ಲ, ಕೊಲ್ಲಿ ರಾಷ್ಟ್ರಗಳನ್ನೂ ಸುತ್ತಿ ಬಂದಿದ್ದಾರೆ. ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಅವರನ್ನು ಈಗಾಗಲೇ ಅರಸಿ ಬಂದಿದೆ. 

ವಿಶ್ವದ ‘ಅತಿ ಕಿರಿಯ’ ಮುಖ್ಯ ಶಿಕ್ಷಕ!

ವಿಶ್ವದ ಅತ್ಯಂತ ಕಿರಿಯ ಮುಖ್ಯ ಶಿಕ್ಷಕ ಈ ಬಾಬರ್‌ ಅಲಿ. ಶಿಕ್ಷಣ ಕಲಿಯುವಾಗಲೇ ಶಿಕ್ಷಕನಾದ ಅಲಿ, ಪಶ್ಚಿಮ ಬಂಗಾಳದ ಮುರ್ಷಿರಾಬಾದ್‌ನವರು. 1993 ಮಾರ್ಚ್ 18ರಂದು ಜನಿಸಿದ ಅವರು, ತನ್ನ ಒಂಬತ್ತರ ಹರೆಯಲ್ಲೇ ಶಿಕ್ಷಕನಾಗುತ್ತಾರೆ. ಬೀದಿಬದಿ ಮಕ್ಕಳು ಶಿಕ್ಷಣ ವಂಚಿತರಾಗುವುದನ್ನು ಕಂಡು ತಾನೇ ಶಾಲೆಯೊಂದನ್ನು ಆರಂಭಿಸಿದವರು. ಹದಿನಾರರ ಹರೆಯಲ್ಲೇ ಅವರಿಗೆ ಬಿಬಿಸಿ (2009ರ ಅಕ್ಟೋಬರ್‌ನಲ್ಲಿ) ‘ವಿಶ್ವದಲ್ಲೇ ಅತಿ ಕಿರಿಯ ಮುಖ್ಯ ಶಿಕ್ಷಕ’ ಎಂಬ ಪಟ್ಟ ನೀಡಿತ್ತು!

ಬಾಬರ್‌ನ ತಂದೆ ಸೆಣಬು ವ್ಯಾಪಾರಿಯಾಗಿದ್ದರು. ಬಡತನವೇ ತುಂಬಿದ್ದ ಆ ಊರಿನಲ್ಲಿ, ಈ ಕಾರಣಕ್ಕೆ ಬಾಬರ್‌ ಶಾಲೆಗೆ ಹೋಗುವಂತಾಗಿತ್ತು. ಬಾಬರ್‌ ತನ್ನ ಮನೆಯ ಸಮೀಪದಲ್ಲಿದ್ದ ನೇರಳೆ ಮರದಡಿಯಲ್ಲಿ ಶಾಲೆಯನ್ನು ಆರಂಭಿಸಿದಾಗ, ಆ ಶಾಲೆಗೆ ಮೊದಲ ವಿದ್ಯಾರ್ಥಿಯಾಗಿ ಸೇರಿದ್ದು ಬಾಬರ್‌ ಅವರ ಅಕ್ಕ. ಇಂದು ಅವರ ಶಾಲೆಯಲ್ಲಿ ಸಾವಿರಾರು ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಬಾಬರ್ ಅಲಿಯ ಬದುಕು ಇತರ ವಿದ್ಯಾರ್ಥಿಗಳಿಗೆ ‘ಪಾಠ’ ಆಗಿದೆ. ರಾಜ್ಯದ ಪ್ರಥಮ ಪಿಯುಸಿ ಆಂಗ್ಲ ವಿಷಯದ ಪಠ್ಯದಲ್ಲಿ ಬಾಬರ್‌ ಅಲಿಯ ಪಠ್ಯವಿದೆ. ಸಿಬಿಎಸ್‌ಇ ಮಂಡಳಿಯ ಎನ್‌ಸಿಆರ್‌ಟಿ ಪಠ್ಯಕ್ರಮದ 10ನೇ ತರಗತಿಗೂ ಪಾಠ ಆಗಿದೆ.

‘ಸೈಕಲ್‌ ಗುರೂಜಿ’ ಆದಿತ್ಯ ಕುಮಾರ್

‘ಸೈಕಲ್‌ ಗುರೂಜಿ’ ಎಂದೇ ಖ್ಯಾತಿ ಪಡೆದರು ಈ ಆದಿತ್ಯ ಕುಮಾರ್. 1995ರಿಂದಲೂ ನಿತ್ಯ 60ರಿಂದ 65 ಕಿ.ಮೀ ಸೈಕಲ್‌ ತುಳಿದು ಲಕ್ನೋದ ಸ್ಲಂ ಮಕ್ಕಳಿಗೆ ಅವರು ಪಾಠ ಹೇಳಿ ಕೊಡುತ್ತಿದ್ದಾರೆ. ಆ ಮೂಲಕ, ಲಿಮ್ಕಾ ದಾಖಲೆಗೆ ಸೇರಿದ್ದಾರೆ.

ಕಾರ್ಮಿಕನ ಮಗನಾದ ಆದಿತ್ಯ ಕುಮಾರ್, ಉತ್ತರಪ್ರದೇಶ ಸಾಲೆಂಪುರ್ ಫರೂಕಾಬಾದ್‌ನವರು. ಕಾನ್ಪುರದಲ್ಲಿ ಬಿ. ಎಸ್‌ಸಿ ಮುಗಿಸಿದ ಬಳಿಕ ಮನೆ ಬಿಟ್ಟ ಅವರು, ಲಕ್ನೋದ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಮಲಗುತ್ತಿದ್ದರು. ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಗುರಿಯಿಂದ ಹೊರಟ ಅವರು, ಸ್ಲಂ ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದರು. ಶಿಕ್ಷಣದ ಅಗತ್ಯದ ಬಗ್ಗೆ ಅರಿವು ಮೂಡಿಸಲು ಸೈಕಲ್‌ನಲ್ಲಿ ಕಿ.ಮೀಟರ್‌ ಗಟ್ಟಲೆ ಓಡಾಡಿದರು. 2 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗುವಂತೆ ಮಾಡಿದರು.

ಆದಿತ್ಯ ಕುಮಾರ್‌ಗೆ ಸ್ವಂತ ವಿಳಾಸ ಎನ್ನುವುದೇ ಇಲ್ಲವಂತೆ. ಕುಟುಂಬ ಅವರ ಬೆಂಬಲಕ್ಕೆ ನಿಂತಿಲ್ಲ. ಹಾಗೆಂದು ಅವರೇ ಹೇಳಿಕೊಂಡಿದ್ದಾರೆ. ‘ನನ್ನ ಹೋರಾಟಗಳನ್ನು ಗುರುತಿಸಲು ನನ್ನವರು ವಿಫಲರಾದರು. ನಾನಿರುವುದು ರಸ್ತೆಗಳಲ್ಲಿ. ಯಾರಾದರೂ ಕರೆದರೆ ಅವರ ಮನೆಯಲ್ಲಿ. ಲಿಮ್ಕಾ ದಾಖಲೆಗೆ ಸಂಬಂಧಿಸಿದ ಪ್ರಮಾಣಪತ್ರವನ್ನು ನನಗೆ ಕಳುಹಿಸಲು ವಿಳಾಸ ಕೇಳಿದಾಗ ನನಗೊಂದು ವಿಳಾಸ ಇರಲಿಲ್ಲ. ಪರಿಚಿತರೊಬ್ಬರು ಅದನ್ನು ಸ್ವೀಕರಿಸಿ ನನಗೆ ಕೊಟ್ಟರು’ ಎಂದೂ ಆದಿತ್ಯ ಕುಮಾರ್‌ ಹೇಳಿಕೊಂಡಿದ್ದಾರೆ.

 ‘ಅಂಡರ್ ದಿ ಬ್ರಿಡ್ಜ್ ಸ್ಕೂಲ್’ನ ರಾಜೇಶ್ ಕುಮಾರ್ ಶರ್ಮಾ 

ದೆಹಲಿಯ ಯಮುನಾ ನದಿ ತೀರದ ಬಳಿ ಮೆಟ್ರೊ ಸೇತುವೆಯಡಿಯಲ್ಲಿ ಸ್ಲಂ ಮಕ್ಕಳಿಗಾಗಿ 14 ವರ್ಷಗಳಿಂದ ಈ ರಾಜೇಶ್‌ ಕುಮಾರ್ ಶರ್ಮಾ ಪಾಠ ಮಾಡುತ್ತಾರೆ. 2006ರಲ್ಲಿ ಆರಂಭವಾದ ಅವರ ಶಾಲೆಗೆ ಗೋಡೆಗಳಿಲ್ಲ. ಈ ತೆರೆದ ಶಾಲೆಯಲ್ಲಿ ಗೋಡೆಯ ಮೇಲೆ ಕಪ್ಪು ಬಣ್ಣದ ಕೋಟ್ ಪೇಂಟಿಂಗ್ ಮಾಡಿದ ಐದು ಬ್ಲ್ಯಾಕ್‌ ಬೋರ್ಡ್‌ಗಳನ್ನು ಹೊರತುಪಡಿಸಿ ಇನ್ನೇನೂ ಇಲ್ಲ. 2005ರಲ್ಲಿ ಆರಂಭವಾದ ಅವರ ಶಾಲೆ ಈಗ ‘ದಿ ಫ್ರೀ ಸ್ಕೂಲ್‌ ಅಂಡರ್ ದಿ ಬ್ರಿಡ್ಜ್ ಸ್ಕೂಲ್’ ಎಂದೇ ಖ್ಯಾತಿ ಪಡೆದಿದೆ. ಚಿಂದಿ ಆಯುವವರ, ರಿಕ್ಷಾ ಎಳೆಯುವವರ ಮತ್ತು ಭಿಕ್ಷುಕರ ಮಕ್ಕಳು ಇಲ್ಲಿ ವಿದ್ಯಾರ್ಥಿಗಳು.

ಉತ್ತರ ಪ್ರದೇಶದ ಬಡ ಕುಟುಂಬದಿಂದ ಬಂದ ರಾಜೇಶ್‌ ಕುಮಾರ್‌, ಅವರ ಪೋಷಕರಿಗೆ ಒಂಬತ್ತು ಮಕ್ಕಳು. ಅವರು ಕಿರಿಯವರು. ಕಲಿಯಬೇಕೆಂಬ ಮಹದಾಸೆ ಹೊಂದಿದ್ದ ಅವರಿಗೆ ಬಡತನ ಅಡ್ಡಿ ಮಾಡಿತ್ತು. ಹೀಗಾಗಿ, ಪರವಿ ಪೂರ್ತಿಗೊಳಿಸಲು ಸಾಧ್ಯ ಆಗಿರಲಿಲ್ಲ. 20 ವರ್ಷ ಆಗುತ್ತಿದ್ದಂತೆ ಸಹೋದರನ ಜೊತೆ ಅವರು ದೆಹಲಿಗೆ ಬರುತ್ತಾರೆ. ಕಲ್ಲಂಗಡಿ ಮಾರುತ್ತಾರೆ. ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಾರೆ. ಅದೊಂದು ದಿನ ಮೆಟ್ರೊ ಬ್ರಿಡ್ಜ್‌ನ ಕೆಳಗೆ ಕಾರ್ಮಿಕರ ಮಕ್ಕಳು ಶಾಲೆಗೆ ಹೋಗದೆ ಅಡ್ಡಾಡುತ್ತಿರುವುದನ್ನು ಕಂಡು, ಅವರಿಗಾಗಿ ಏನಾದರೂ ಮಾಡಬೇಕು ಅಂದುಕೊಳ್ಳುತ್ತಾರೆ. ಅಲ್ಲೇ ಸಮೀಪ ಇಬ್ಬರು ಮಕ್ಕಳಿಗೆ ಪಾಠ ಹೇಳಿಕೊಡಲು ಆರಂಭಿಸಿದ ಅವರು ಈಗ ಎರಡು ಪಾಳಿಯಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ಪಾಠ ಮಾಡುತ್ತಾರೆ. ಬೆಳಿಗ್ಗೆ 9ರಿಂದ 11 ರವರೆಗೆ ಬಾಲಕರಿಗೆ ಮತ್ತು ಮಧ್ಯಾಹ್ನ 2 ಗಂಟೆಯಿಂದ 4.30 ರವರೆಗೆ ಬಾಲಕಿಯರಿಗೆ ತರಗತಿಗಳು ನಡೆಯುತ್ತವೆ. ಈ ಶಾಲೆಯಲ್ಲಿ ಏಳು ಶಿಕ್ಷಕರಿದ್ದು, ನಾಲ್ಕರಿಂದ ಹದಿನಾಲ್ಕು ವರ್ಷದೊಳಗಿನ ವಿದ್ಯಾರ್ಥಿಗಳಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಕಲಿಸುವ ಮೂಲಕ ಸ್ವಯಂ ಸೇವೆಯಲ್ಲಿ ತೊಡಗಿದ್ದಾರೆ. ಶಾಲೆಯು ಶಿಕ್ಷಕರಿಗೆ ಸಹಾಯವಾಗುವ ಬಳಪ, ಡಸ್ಟರ್ಸ್, ಪೆನ್ನುಗಳು ಹಾಗೂ ಪೆನ್ಸಿಲ್‌ಗಳಂಥ ಮೂಲ ಲೇಖನ ಸಾಮಗ್ರಿಗಳನ್ನು ಮಾತ್ರ ಹೊಂದಿದೆ. ವಿದ್ಯಾರ್ಥಿಗಳು ತಮ್ಮ ನೋಟ್‌ಬುಕ್‌ಗಳನ್ನು ತಂದು ಕಾರ್ಪೆಟ್ ಹಾಸಿದ ನೆಲದ ಮೇಲೆ ಕುಳಿತು ಅಭ್ಯಾಸ ಮಾಡುತ್ತಾರೆ.

‘ಟ್ಯೂಬ್‌ ಮಾಸ್ಟರ್‌’ ಅಬ್ದುಲ್ ಮಲ್ಲಿಕ್

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಶಿಕ್ಷಕ ಅಬ್ದುಲ್‌ ಮಲ್ಲಿಕ್, ಮಕ್ಕಳಿಗೆ ಪಾಠ ಮಾಡುವ ಸಲುವಾಗಿಯೇ ನಿತ್ಯ 2 ಕಿಲೋ ಮೀಟರ್ ನದಿಯಲ್ಲಿ ಈಜಿ ಬರುತ್ತಾರೆ. ಶಾಲೆಗೆ ನಿಗದಿತ ಸಮಯಕ್ಕೆ ತಲುಪಬೇಕೆಂಬ ಕಾರಣಕ್ಕಾಗಿ ನದಿಯ ಒಂದು ದಡದಲ್ಲಿರುವ ತಮ್ಮ ಮನೆಯಿಂದ ಮತ್ತೊಂದು ದಡದಲ್ಲಿರುವ ಶಾಲೆಗೆ ಈಜಿಕೊಂಡೇ ಹೋಗುತ್ತಾರೆ ಈ 46ರ ಹರೆಯದ ಅಧ್ಯಾಪಕ!

ಕಡು ಬಡತನ ಕುಟುಂಬದ ಹಿನ್ನೆಲೆ ಹೊಂದಿರುವ ಮಲಿಕ್ ಅವರಿಗೆ ಬಾಲ್ಯದಿಂದಲೂ ಶಿಕ್ಷಕರಾಗಬೇಕೆಂಬ ಕನಸಿತ್ತು. ಅದಕ್ಕೆ ಪೂರಕವಾಗಿ ಅವರಿಗೆ ಶಿಕ್ಷಕ ವೃತ್ತಿ ಸಿಕ್ಕಿತ್ತು. ಕೆಲಸ ಸಿಕ್ಕಿದ ಶಾಲೆ ನದಿಯ ಮತ್ತೊಂದು ದಡದಲ್ಲಿ ಕೇವಲ 1.5 ಕಿ.ಮೀ. ದೂರದಲ್ಲಿದೆ. ರಸ್ತೆ ಮೂಲಕ ಹೋಗುವುದಾದರೆ 12 ಕಿ.ಮೀ. ಆಗುತ್ತದೆ. 1993ರಲ್ಲಿ ಶಿಕ್ಷಕನಾಗಿ ಸೇರಿದ ಬಳಿಕ ಒಂದು ವರ್ಷ ಬಸ್ಸಿನಲ್ಲೇ ಓಡಾಡಿದ್ದ ಮಲಿಕ್‌ಗೆ ಅವರ, ಸ್ನೇಹಿತರು ಈಜಿ ಬರುವಂತೆ ಸಲಹೆ ನೀಡಿದರಂತೆ. ಅದನ್ನೇ ಸವಾಲಾಗಿ ತೆಗೆದುಕೊಂಡ ಮಲಿಕ್‌, ಅದರಲ್ಲಿ ಯಶಸ್ಸು ಕಂಡಿದ್ದಾರೆ. ಆ ಮೂಲಕ, ಸುದ್ದಿಯಾಗಿದ್ದಾರೆ.

‘ಒಂದೊಮ್ಮೆ ಬಸ್ ತಪ್ಪಿದರೆ ಮತ್ತೊಂದು ಬಸ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾಗಿತ್ತು. ಹೀಗಾಗಿ, ನಿಗದಿತ ಸಮಯಕ್ಕೆ ಶಾಲೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಈಜಿ ಬರಲು ಆರಂಭಿಸಿದ ಬಳಿಕ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಿದೆ’ ಎನ್ನುತ್ತಾರೆ ಮಲಿಕ್‌. ಸೊಂಟಕ್ಕೆ ರಬ್ಬರ್ ಟ್ಯೂಬ್ ಕಟ್ಟಿಕೊಂಡು ಒಂದು ಕೈನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಟಿಫಿನ್ ಬಾಕ್ಸ್, ಪುಸ್ತಕಗಳನ್ನು ಇಟ್ಟುಕೊಂಡು ಮತ್ತೊಂದು ಕೈನಲ್ಲಿ ಈಜುತ್ತಾ ದಿನಾ ಶಾಲೆ ತಲುಪುತ್ತಾರೆ. ಶಾಲೆ ಮುಗಿದ ಬಳಿಕ ಮತ್ತೆ ಈಜುತ್ತಲೇ ಮನೆ ಸೇರಿಕೊಳ್ಳುವ ಅಬ್ದುಲ್ ಮಲಿಕ್ ಅವರಿಗೆ ವಿದ್ಯಾರ್ಥಿಗಳು ‘ಟ್ಯೂಬ್ ಮಾಸ್ಟರ್’ ಎಂದು ಹೆಸರಿಟ್ಟಿದ್ದಾರೆ. ಯಾಕೆಂದರೆ, ಅವರು ಈಜಿಕೊಂಡು ಬರಲು ‘ಟ್ಯೂಬ್‌’ ಬಳಸುತ್ತಾರೆ!

ಹೀಗೆ ಶಿಕ್ಷಕ ‘ವೃತ್ತಿ’ಗೆ ವಿಶೇಷ ಗೌರವ ತೊಂದುಕೊಟ್ಟಿರುವ ನೂರಾರು ಶಿಕ್ಷಕರು ನಮ್ಮ ಮುಂದೆ ಇದ್ದಾರೆ. ಈ ಪವಿತ್ರ ವೃತ್ತಿಗೆ ಇಂದು ಕಳಂಕ ತರುತ್ತಿರುವವರ ಮಧ್ಯೆ ಇಂಥವರು ಭಿನ್ನವಾಗಿ ನಿಲ್ಲುತ್ತಾರೆ. ಇತರರಿಗೆ ಮಾದರಿಯಾಗುತ್ತಾರೆ. ತೆರೆಯ ಮುಂದೆ ಬಂದು ಪರಿಚಿತರಾದ ಮತ್ತು ಮರೆಯಲ್ಲೇ ಉಳಿದು ವೃತ್ತಿ ಗೌರವ ಉಳಿಸಿಕೊಂಡು ಸದ್ದಿಲ್ಲದೆ ನಿತ್ಯ ‘ಅಕ್ಷರ’ ಸೇವೆಯಲ್ಲಿ ನಿರತರಾಗಿರುವ ಇಂಥವರಿಗೆ ದೊಡ್ಡ ಸಲಾಂ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು