ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ಹಣಾಹಣಿಯಲ್ಲಿ ಗೆಲುವು ಯಾರ ಮಡಿಲಿಗೆ?

ರಾಮನಗರ ವಿಧಾನಸಭಾ ಕ್ಷೇತ್ರ: ಜೆಡಿಎಸ್‌–ಕಾಂಗ್ರೆಸ್‌ ನಡುವೆ ಹೆಚ್ಚಿದ ಪೈಪೋಟಿ, ಗುಪ್ತಗಾಮಿನಿ ರೀತಿಯಲ್ಲಿ ನಡೆದ ತಂತ್ರ–ಪ್ರತಿತಂತ್ರ
Last Updated 4 ಮೇ 2018, 11:38 IST
ಅಕ್ಷರ ಗಾತ್ರ

ರಾಮನಗರ: ಕೆಲವು ದಿನಗಳಿಂದ ಮಳೆ ಬಿದ್ದು ನೆಲ ಒದ್ದೆಯಾಗಿದೆ. ಆದರೆ, ಒಳಗಿನ ಕಾವು ಹಾಗೆಯೇ ಇದ್ದು, ಧಗೆ ಕಡಿಮೆಯಾಗಿಲ್ಲ. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಚುನಾವಣೆಯ ಪ್ರಚಾರವೂ ಹಾಗೆಯೇ. ಫ್ಲೆಕ್ಸ್, ಬ್ಯಾನರ್‌ಗಳ ಅಬ್ಬರ ಇರದಿದ್ದರೂ ಗುಪ್ತಗಾಮಿನಿಯ ರೀತಿಯಲ್ಲಿ ತಂತ್ರ–ಪ್ರತಿತಂತ್ರ ನಡೆದೇ ಇದೆ.

ಮಾವಿನ ಹಣ್ಣಿಗೆ ಹೆಸರಾದ ರಾಮನಗರದಲ್ಲಿ ಈ ಬಾರಿ ಮಾವಿನ ಫಸಲಿಗಿಂತ ಚುನಾವಣೆಯ ಸಂಗತಿಯೇ ಹೆಚ್ಚು ಸುದ್ದಿ ಮಾಡುತ್ತಿದೆ. ಹಣ್ಣಿನ ಬೆಲೆ, ರೇಷ್ಮೆಗೂಡಿನ ದರದ ಏರಿಳಿತಕ್ಕಿಂತ ರಾಜಕೀಯ ಲೆಕ್ಕಾಚಾರಗಳ ಬಗ್ಗೆಯೇ ಹಳ್ಳಿಗಳ ಅರಳಿ ಕಟ್ಟೆಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಚುನಾವಣಾ ಸಮೀಕ್ಷೆಗೆಂದು ‘ಪ್ರಜಾವಾಣಿ’ಯು ಕ್ಷೇತ್ರದ ವಿವಿಧ ಪ್ರದೇಶಗಳಿಗೆ ಭೇಟಿ ಕೊಟ್ಟ ಸಂದರ್ಭ ಕಂಡುಬಂದ ಸಂಗತಿಗಳು ಹತ್ತು ಹಲವು.

ರಾಮನಗರ ಕ್ಷೇತ್ರವು ಆರಂಭದಿಂದಲೂ ಕಾಂಗ್ರೆಸ್‌ ಹಾಗೂ ಜನತಾ ಪರಿವಾರದ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗುತ್ತಲೇ ಬಂದಿದೆ. ಈ ಬಾರಿಯ ಪರಿಸ್ಥಿತಿ ಸಹ ಇದಕ್ಕಿಂತ ಭಿನ್ನ ಏನಲ್ಲ. ಇಲ್ಲಿ ಈಗಾಗಲೇ ಬಿಜೆಪಿ ಸೋಲು ಒಪ್ಪಿಕೊಂಡಂತೆ ಇದೆ. ಹೀಗಾಗಿ ಜೆಡಿಎಸ್‌ನ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ನಡುವೆ ನೇರ ಹಣಾಹಣಿ ಏರ್ಪಡುವುದು ಖಚಿತವಾಗಿದೆ.

ಮೂರು ಬಾರಿ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಕುಮಾರಸ್ವಾಮಿ ರಾಮನಗರವನ್ನು ಜಿಲ್ಲಾ ಕೇಂದ್ರವ
ನ್ನಾಗಿ ರೂಪಿಸಿದ್ದಕ್ಕೆ ಇಲ್ಲಿನ ಜನರು ಈಗಲೂ ಕೃತಜ್ಞತೆ ಸಲ್ಲಿಸುತ್ತಾರೆ. ‘ಅವರಿಂದ ನಮ್ಮೂರಿಗೆ , ನಮ್ಮ ಜಮೀನಿಗೆ ಬೆಲೆ ಬಂದಿತು’ ಎನ್ನುವುದು ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿಯ ನಿವಾಸಿ ಕೃಷ್ಣಪ್ಪ ಅವರ ಕೃತಜ್ಞತೆ ಮಾತು.

ಶಾಸಕರಾಗಿ ಕಳೆದ ಐದು ವರ್ಷದಲ್ಲಿನ ಅವರ ಕಾರ್ಯಗಳಿಗೆ ಮಿಶ್ರ ಪ್ರತಿಕ್ರಿಯೆ ಇದೆ. ಜನರ ಕಷ್ಟ ಕೇಳಲು ಹೆಚ್ಚು ಸಮಯ ಮೀಸಲಿಟ್ಟಿಲ್ಲ.ಸಭೆ–ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿಲ್ಲ. ಹಳ್ಳಿಗಳಿಗೆ ಭೇಟಿ ಕೊಟ್ಟು ಸಮಸ್ಯೆ ಇತ್ಯರ್ಥ
ಪಡಿಸಿಲ್ಲ ಎನ್ನುವುದು ವಿರೋಧಿಗಳ ದೂರು. ಜನರೂ ಇದಕ್ಕೆ ಸಹಮತ ವ್ಯಕ್ತಪಡಿಸುತ್ತಾರೆ.

‘ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಆಗ ರಾಮನಗರ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಆಗುತ್ತದೆ. ಹೀಗಾಗಿ ಅವರನ್ನು ಅತಿ ಹೆಚ್ಚು ಅಂತರದಿಂದ ಗೆಲ್ಲಿಸಿಕೊಡಿ’ ಎಂದು ಜೆಡಿಎಸ್ ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಐದು ವರ್ಷದ ಸಾಧನೆಗಳನ್ನು ಮುಂದೆ ಇಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಮತ ಕೇಳುತ್ತಿದ್ದಾರೆ. ಹಲವು ‘ಭಾಗ್ಯ’ಗಳಿಗೆ ಪ್ರತಿಫಲವಾಗಿ ಮತ ನೀಡುವಂತೆ ಕೋರುತ್ತಿದ್ದಾರೆ.

ಹಳ್ಳಿಗಳಲ್ಲಿ ಜೆಡಿಎಸ್‌ ಮುಂದು: ‘ಪ್ರಜಾವಾಣಿ’ಯು ಭೇಟಿ ನೀಡಿದ ಸಂದರ್ಭ ವ್ಯಕ್ತವಾದ ಅಭಿಪ್ರಾಯದಂತೆ ಸದ್ಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರದಲ್ಲಿ ಜೆಡಿಎಸ್ ಮುಂದೆ ಇದೆ. ರಾಮನಗರ ತಾಲ್ಲೂಕಿನ ಕೈಲಾಂಚ ಹಾಗೂ ಕಸಬಾ ಹೋಬಳಿಗಳ ಹಳ್ಳಿಗಳಲ್ಲಿ ಕುಮಾರಸ್ವಾಮಿ ಪರ ಒಲವು ವ್ಯಕ್ತವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್‌ ಹುಸೇನ್ ಸಹ ಹಳ್ಳಿಗಳಲ್ಲಿ ತಿರುಗಾಟ ಹೆಚ್ಚು ಮಾಡಿದ್ದಾರೆ. ಅನ್ನಭಾಗ್ಯ ಕೊಟ್ಟ ಕಾಂಗ್ರೆಸ್‌ಗೆ ಋಣ ಸಂದಾಯವಾಗಿ ತಮಗೆ ಮತ ಹಾಕುವಂತೆ ಮತದಾರರಿಗೆ ಕೈ ಮುಗಿಯತೊಡಗಿದ್ದಾರೆ.

ನಗರದೊಳಗೆ ಮಿಶ್ರ ಪ್ರತಿಕ್ರಿಯೆ: ರಾಮನಗರ ನಗರಸಭೆಯ ವ್ಯಾಪ್ತಿಯಲ್ಲಿನ ಮತದಾರರು ಎರಡೂ ಪಕ್ಷಗಳ ಬಗ್ಗೆ ಒಲವು ತೋರುತ್ತಿದ್ದಾರೆ. ಆದರೆ ಮತಗಳ ಲೆಕ್ಕಾಚಾರದಲ್ಲಿ ಜೆಡಿಎಸ್ ತೂಕ ಹೆಚ್ಚೇ ತೋರುತ್ತಿದೆ.

ರಾಮನಗರದ ಜನಸಂಖ್ಯೆ 1 ಲಕ್ಷದಷ್ಟಿದೆ. ಒಕ್ಕಲಿಗರ ಜೊತೆಜೊತೆಗೆ ಹಿಂದುಳಿದವರು, ಅಲ್ಪಸಂಖ್ಯಾತರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿನ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಇದೆ. ಇದೆಲ್ಲವೂ ಕೈ ಪಾಳಯಕ್ಕೆ ಅನುಕೂಲಕರವಾಗಿದೆ. ಆದರೆ, ಮತ್ತೊಂದೆಡೆ ಕುಮಾರಸ್ವಾಮಿ ಅವರ ವೈಯಕ್ತಿಕ ವರ್ಚಸ್ಸು ಅವರನ್ನು ಕೈ ಹಿಡಿಯುವ ಸಾಧ್ಯತೆ ಇದೆ.

‘ನಗರದೊಳಗೆ ಯಾರ ಬಲ ಮೇಲಾಗಬಹುದು ಎಂದು ಹೇಳುವುದು ಕಷ್ಟ. ಎರಡೂ ಪಕ್ಷಗಳಿಗೂ ತಮ್ಮದೇ ಆದ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಇವೆ. ಸಂಘಟನೆ ವಿಚಾರದಲ್ಲಿಯೂ ಸಮಬಲವಿದೆ’ ಎಂದು ಐಜೂರು ನಿವಾಸಿ ಚೇತನ್‌ ಅಭಿಪ್ರಾಯ ಪಡುತ್ತಾರೆ.

ಹಾರೋಹಳ್ಳಿ, ಮರಳವಾಡಿ ನಿರ್ಣಾಯಕ: ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹಾಗೂ ಮರಳವಾಡಿ ಹೋಬಳಿಗಳು 2008ರ ಕ್ಷೇತ್ರ ವಿಂಗಡನೆಯ ಬಳಿಕ ರಾಮನಗರ ಕ್ಷೇತ್ರವನ್ನು ಸೇರಿಕೊಂಡಿವೆ. ಇದಕ್ಕೂ ಮುನ್ನ ಇವು ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು ಅಲ್ಲಿ ಜನತಾ ದಳದವರೇ ಆದ ಪಿಜಿಆರ್‌ ಸಿಂಧ್ಯಾ ಅಧಿಪತ್ಯ ಸ್ಥಾಪಿಸಿದ್ದರು. ಬಳಿಕ ಕುಮಾರಸ್ವಾಮಿಗೆ ಜನಬೆಂಬಲ ಮುಂದುವರಿದಿದೆ. ಕಳೆದ ಚುನಾವಣೆಗಳಲ್ಲಿಯೂ ಇಲ್ಲಿನ ಜನತೆ ಜೆಡಿಎಸ್‌ಗೆ ಮುನ್ನಡೆ ನೀಡಿದ್ದಾರೆ.

ಆದರೆ, ಈಚೆಗೆ ಇಲ್ಲಿ ಕಾಂಗ್ರೆಸ್‌ ವರ್ಚಸ್ಸು ಹೆಚ್ಚಿಸಲು ಡಿಕೆಎಸ್‌ ಸಹೋದರರು ಪ್ರಯತ್ನಿಸುತ್ತಲೇ ಇದ್ದಾರೆ. ಈ ಬಾರಿ ಕನಕಪುರದವರೇ ಅಭ್ಯರ್ಥಿ ಆಗಿದ್ದು, ಜನಸಾಮಾನ್ಯರ ಕೈಗೆ ಸಿಕ್ಕುವ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ಪ್ರಚಾರ ಮಾಡುತ್ತಾ ಬಂದಿದ್ದಾರೆ. ಯಾವುದೇ ಅಭ್ಯರ್ಥಿಯ ಗೆಲುವಿನಲ್ಲಿ ಈ ಹೋಬಳಿಗಳು ನಿರ್ಣಾಯಕವಾಗಿವೆ.

‘ಕುಮಾರಸ್ವಾಮಿ ನಮ್ಮ ಭಾಗಕ್ಕೆ ಒಂದಿಷ್ಟು ಕೆಲಸ ಮಾಡಿದ್ದಾರೆ. ಮಾಡಬೇಕಾದದ್ದು ಇನ್ನೂ ಬಹಳ ಇದೆ. ಅದರ ಬಗ್ಗೆ ನಾವೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾರಿಗೆ ಮತ ಹಾಕುತ್ತೇವೆ ಎಂಬ ಗುಟ್ಟನಂತೂ ನಿಮಗೆ ಬಿಟ್ಟುಕೊಡಲಾರೆವು’ ಎಂಬುದು ಹಾರೋಹಳ್ಳಿ ಹೋಬಳಿಯ ಮೇಡಮಾರನಹಳ್ಳಿಯ ಗ್ರಾಮಸ್ಥರ ಅಂತರಂಗದ ಮಾತು.

ಕ್ಷೇತ್ರದ ಬಹುತೇಕ ಮತದಾರರ ಮಾತೂ ಇದೇ ಆಗಿದೆ. ಎಲ್ಲರ ಗುಟ್ಟು ಇದೇ ತಿಂಗಳ 15ಕ್ಕೆ ರಟ್ಟಾಗಲಿದೆ. ಇವರೊಟ್ಟಿಗೆ ಬಿಜೆಪಿಯ ಎಚ್‌.ಲೀಲಾವತಿ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕ್ಷೇತ್ರ ವಿಶೇಷಗಳು

* ಕ್ಷೇತ್ರವು ಎರಡು ಉಪ ಚುನಾವಣೆಗಳು ಸೇರಿದಂತೆ ಒಟ್ಟು 15 ಚುನಾವಣೆಗಳನ್ನು ಕಂಡಿದೆ
* ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾದ ಕೆಂಗಲ್ ಹನುಮಂತಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ವಿಧಾನಸೌಧದ ನಿರ್ಮಾತೃ ಎನಿಸಿಕೊಂಡರು
* ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಇಲ್ಲಿಂದಲೇ ಶಾಸಕರಾಗಿ ಆಯ್ಕೆಯಾಗಿ ಮುಖ್ಯಮಂತ್ರಿ ಆದವರು
* ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಸ್ಪರ್ಧಿಸಿದ ಕೀರ್ತಿ ಕಾಂಗ್ರೆಸ್‌ನ ಸಿ.ಎಂ. ಲಿಂಗಪ್ಪ ಅವರದ್ದು. 7 ಚುನಾವಣೆಗಳನ್ನು ಎದುರಿಸಿರುವ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ

**
ನಮ್ಮೂರಿನಲ್ಲಿ ಒಂದಿಷ್ಟು ಕೆಲಸ ಆಗಿದೆ. ಇನ್ನೊಂದಿಷ್ಟು ಬಾಕಿ ಉಳಿದಿದೆ. ಹೀಗಾಗಿ ಯಾರಿಗೆ ಮತ ಹಾಕಬೇಕು ಎಂದು ಇನ್ನೂ ನಿರ್ಧಾರ ಮಾಡಿಲ್ಲ
 – ಚಿಕ್ಕಣ್ಣ, ಮೇಡಮಾರನಹಳ್ಳಿ

**
ರಾಮನಗರ ಪಟ್ಟಣದಲ್ಲಿ ಸದ್ಯಕ್ಕೆ ಜೆಡಿಎಸ್ ಅಲೆ ಇದೆ. ಕಾಂಗ್ರೆಸ್ ಕೂಡ ಉತ್ತಮ ಪ್ರಚಾರ ನಡೆಸಿದೆ. ಚುನಾವಣೆಯ ಬಳಿಕವಷ್ಟೇ ಅಂತಿಮ ನಿರ್ಧಾರ ಹೊರಬೀಳಲಿದೆ
– ಎಂ. ಲೋಕೇಶ್‌. ರಾಮನಗರ ನಿವಾಸಿ

**
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಬಗ್ಗೆ ಒಲವು ಇದೆ. ಕ್ಷೇತ್ರದಲ್ಲಿಯೂ ಕುಮಾರಸ್ವಾಮಿ ಪರ ಅಲೆ ಇದೆ. ಮತದಾರರ ನಿರ್ಣಯದ ಬಗ್ಗೆ ಕುತೂಹಲ ಇದೆ
– ಜಿ.ಟಿ. ಕೃಷ್ಣ, ಗೌಡಯ್ಯನದೊಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT