ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಕೋವಿಡ್‌: ವೈದ್ಯಕೀಯ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಏರು–ಪೇರು

Last Updated 20 ಅಕ್ಟೋಬರ್ 2020, 6:56 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ನಿಂದಾಗಿ ಪ್ರಸಕ್ತ ವರ್ಷದ ವೈದ್ಯಕೀಯ ಶಿಕ್ಷಣದ ಶೈಕ್ಷಣಿಕ ವೇಳಾಪಟ್ಟಿಯಲ್ಲೂ ಸಾಕಷ್ಟು ವ್ಯತ್ಯಾಸಗಳಾಗಿವೆ. ಇದು ವೈದ್ಯರನ್ನು ಸೃಷ್ಟಿಸುವ ವೈದ್ಯಕೀಯ ಶಿಕ್ಷಣ ವ್ಯವಸ್ಥೆಗೆ ಪೆಟ್ಟು ನೀಡಿದೆ. ಇಷ್ಟೊತ್ತಿಗಾಗಲೇ ದೇಶದಾದ್ಯಂತ ಒಂದು ಬ್ಯಾಚ್‌ನವರು ಎಂಬಿಬಿಎಸ್‌ ಪದವಿ ಪೂರ್ಣಗೊಳಿಸಬೇಕಿತ್ತು. ಮೊದಲ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಎರಡನೇ ವರ್ಷಕ್ಕೆ, ಎರಡನೇ ವರ್ಷದ ವಿದ್ಯಾರ್ಥಿಗಳು ಮೂರನೇ ವರ್ಷಕ್ಕೆ ಹಾಗೂ ಮೂರನೇ ವರ್ಷದವರು‌ ಅಂತಿಮ ವರ್ಷಕ್ಕೆ ಕಾಲಿರಿಸಬೇಕಿತ್ತು. ಆದರೆ ಅದು ಆಗಿಲ್ಲ.

ಮೊದಲೇ ವೈದ್ಯರ ಕೊರತೆಯನ್ನು ರಾಜ್ಯ ಮತ್ತು ದೇಶ ಎದುರಿಸುತ್ತಿದೆ. ಕೋವಿಡ್‌ನಿಂದಾಗಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಸಾಕಷ್ಟು ಏರು–ಪೇರು ಆಗಿರುವುದರಿಂದ ಈ ಕೊರತೆ ಇನ್ನಷ್ಟು ಹೆಚ್ಚಾಗುವುದು ಗೋಚರಿಸುತ್ತಿದೆ.

ಎಂಜಿನಿಯರಿಂಗ್‌ ಸೇರಿದಂತೆ ಬಹುತೇಕ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ (ಅಂತಿಮ ವರ್ಷ ಹೊರತುಪಡಿಸಿ) ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸದೆ ಮುಂದಿನ ವರ್ಷಕ್ಕೆ ಬಡ್ತಿ ನೀಡಲಾಗಿದೆ. ಆದರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆ ಅವಕಾಶ ದೊರೆತಿಲ್ಲ. ಇತರ ಪದವಿ ಕೋರ್ಸ್‌ಗಳಿಗೆ ಇರುವಂತೆ ವೈದ್ಯಕೀಯ ಪದವಿ ಕೋರ್ಸ್‌ಗೆ ಸೆಮಿಸ್ಟರ್‌ ಪರೀಕ್ಷಾ ವ್ಯವಸ್ಥೆ ಇಲ್ಲ. ಇಲ್ಲಿರುವುದು ವಾರ್ಷಿಕ ಪರೀಕ್ಷಾ ವಿಧಾನ. ಇಲ್ಲಿಯವರೆಗೆ ವಾರ್ಷಿಕ ಪರೀಕ್ಷೆಗಳೂ ನಡೆದಿಲ್ಲ. ಹೀಗಾಗಿ ಈ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಆತಂಕ ಆವರಿಸಿದೆ.

ಕೋವಿಡ್‌ ವಾರಿಯರ್‌ಗಳು

ಕೋವಿಡ್‌ನಿಂದಾಗಿ ಬಹುತೇಕ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಅದರೊಂದಿಗಿನ ಆಸ್ಪತ್ರೆಗಳು ಕೋವಿಡ್‌ ಆಸ್ಪತ್ರೆಗಳಾಗಿ ಪರಿವರ್ತಿತವಾಗಿವೆ. ಅಲ್ಲಿನ ಬೋಧಕ ಸಿಬ್ಬಂದಿ ಕೋವಿಡ್‌ ವಾರಿಯರ್‌ಗಳಾಗಿ ದುಡಿಯುತ್ತಿದ್ದಾರೆ. ಅಂತಿಮ ವರ್ಷದ ವೈದ್ಯಕೀಯ ಪದವಿ ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಕೋವಿಡ್‌ ಸೇನಾನಿಗಳಾಗಿ ಸೇವೆಯಲ್ಲಿ ತೊಡಗಿದ್ದಾರೆ. ಇವುಗಳ ಕಾರಣ ಆರು–ಏಳು ತಿಂಗಳಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಮರ್ಪಕ ಬೋಧನಾ ತರಗತಿಗಳು, ಪ್ರಾಯೋಗಿಕ ತರಗತಿಗಳು ನಡೆದಿಲ್ಲ.

ಆನ್‌ಲೈನ್‌ ತರಗತಿಗಳನ್ನು ತೆಗೆದುಕೊಂಡು ಪಠ್ಯ ಪೂರ್ಣಗೊಳಿಸುವಂತೆ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಸೂಚಿಸಿದ್ದರೂ, ಹಲವು ಕಾಲೇಜುಗಳಲ್ಲಿ ಅದು ಸಮರ್ಪಕ ಅನುಷ್ಠಾನವಾಗಿಲ್ಲ ಎಂಬ ದೂರು ಇದೆ.

‘ಬಹುತೇಕ ಸಿಬ್ಬಂದಿ ಕೋವಿಡ್‌ ವಾರಿಯರ್‌ ಆಗಿರುವುದರಿಂದ ಆನ್‌ಲೈನ್‌ ತರಗತಿಗಳು ಸರಿಯಾಗಿ ನಡೆದಿಲ್ಲ. ಕೆಲ ಖಾಸಗಿ ಕಾಲೇಜುಗಳಲ್ಲಿ ಆನ್‌ಲೈನ್‌ ತರಗತಿಗಳು ನಡೆದಿವೆ. ಆದರೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇದು ಅಷ್ಟಾಗಿ ನಡೆದಿಲ್ಲ’ ಎನ್ನುತ್ತಾರೆ ಸರ್ಕಾರಿ ವೈದ್ಯಕೀಯ ಕಾಲೇಜೊಂದರ ವಿದ್ಯಾರ್ಥಿ.

‘ಮೊದಲ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ 2019ರ ಆಗಸ್ಟ್‌ನಲ್ಲಿ ತರಗತಿಗಳು ಆರಂಭವಾದವು. ಮೊದಲ ತಿಂಗಳು ಫೌಂಡೇಷನ್‌ ಕೋರ್ಸ್‌ ನಡೆಯಿತು. ಸೆಪ್ಟೆಂಬರ್‌ನಿಂದ 2020ರ ಮಾರ್ಚ್‌ ಮೊದಲ ವಾರದವರೆಗೆ ತರಗತಿಗಳು ನಡೆದಿದ್ದವು. ಬಳಿಕ ಲಾಕ್‌ಡೌನ್‌ ಘೋಷಣೆಯಾಯಿತು. ಕೆಲ ವಾರಗಳ ನಂತರ ಆನ್‌ಲೈನ್‌ ತರಗತಿಗಳು ಆರಂಭವಾದವು. ಆದರೆ ಜೂನ್‌ ಬಳಿಕ ಅದೂ ಸ್ಥಗಿತವಾಯಿತು. ಒಟ್ಟಾರೆ ಶೇ 70ರಿಂದ 75ರಷ್ಟು ಪಠ್ಯ ಮುಗಿದಿದೆ. ಇನ್ನೂ ಪ್ರಾಯೋಗಿಕ ತರಗತಿಗಳು ಬಾಕಿ ಇವೆ’ ಎನ್ನುತ್ತಾರೆ ಬೆಂಗಳೂರು ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳು. ಇದೇ ಸ್ಥಿತಿ ನಮಗೂ ಬಂದಿದೆ ಎನ್ನುತ್ತಾರೆ ಮೈಸೂರು, ಹುಬ್ಬಳ್ಳಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು. ಎರಡು, ಮೂರನೇ ವರ್ಷದ ವಿದ್ಯಾರ್ಥಿಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ನೀಟ್‌ ಫಲಿತಾಂಶವೂ ಬಂತು

ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಸಂಬಂಧಿಸಿದಂತೆ ರಾಷ್ಟ್ರದಾದ್ಯಂತ ನಡೆದಿದ್ದ ‘ನೀಟ್‌’ ಪರೀಕ್ಷೆಯ ಫಲಿತಾಂಶ ಅ. 16ರಂದು ಬಂದಿದೆ. ಇನ್ನೇನು ಅದರ ಹಿಂದೆಯೇ ದೇಶದಾದ್ಯಂತ ಇರುವ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳ ಭರ್ತಿಗೆ ಮೀಸಲಾತಿ ಅನ್ವಯ ಕೌನ್ಸೆಲಿಂಗ್‌ ಪ್ರಕ್ರಿಯೆಗೂ ಚಾಲನೆ ದೊರೆಯುತ್ತದೆ. ಈ ಪ್ರಕ್ರಿಯೆ ಎರಡು–ಮೂರು ತಿಂಗಳು ನಡೆದರೂ ಡಿಸೆಂಬರ್‌ ಅಥವಾ ಜನವರಿ ವೇಳೆಗೆ ಪೂರ್ಣಗೊಳ್ಳುತ್ತದೆ. ಇಷ್ಟು ಅವಧಿಯಲ್ಲಿ ವಿಶ್ವವಿದ್ಯಾಲಯ ಮತ್ತು ಸ್ವಾಯತ್ತ ವೈದ್ಯಕೀಯ ಕಾಲೇಜುಗಳು ಹಾಲಿ ಇರುವ ಮೊದಲ, ಎರಡನೇ, ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ತ್ವರಿತವಾಗಿ ಪಠ್ಯ ಮತ್ತು ಪ್ರಾಯೋಗಿಕ ತರಗತಿಗಳನ್ನು ಪೂರ್ಣಗೊಳಿಸಿ, ಪರೀಕ್ಷೆ ನಡೆಸಿ, ಅವರಿಗೆ ಮುಂದಿನ ವರ್ಷಕ್ಕೆ ಪ್ರವೇಶ ಕಲ್ಪಿಸಬೇಕು. ಇಲ್ಲದಿದ್ದರೆ, ಮೊದಲ ವರ್ಷದ ವಿದ್ಯಾರ್ಥಿಗಳು ಮೊದಲ ವರ್ಷದಲ್ಲಿ ಇದ್ದಾಗಲೇ, ಮತ್ತೊಂದು ಹೊಸ ಬ್ಯಾಚ್‌ನ ವಿದ್ಯಾರ್ಥಿಗಳು ಮೊದಲ ವರ್ಷಕ್ಕೆ ಪ್ರವೇಶ ಪಡೆಯುತ್ತಾರೆ!

‘ಹೀಗಾದರೆ, ಆಗ ಪ್ರತಿ ಕಾಲೇಜಿನಲ್ಲೂ ಮೊದಲ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗುತ್ತದೆ. ಮೊದಲ ವರ್ಷದಲ್ಲಿಯೇ ಕಿರಿಯ, ಹಿರಿಯ ವಿದ್ಯಾರ್ಥಿಗಳೂ ಇರುವಂತಾಗುತ್ತದೆ. ಕಾಲೇಜುಗಳಲ್ಲಿ ಕೊಠಡಿಗಳ ಸಮಸ್ಯೆ, ಬೋಧಕರ ಕೊರತೆ, ಮೂಲ ಸೌಕರ್ಯದ ಕೊರತೆ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳು, ಗೊಂದಲಗಳು ತಲೆದೂರುತ್ತವೆ. ಇದಕ್ಕೆ ಆಸ್ಪದ ನೀಡದಂತೆ, ವಿಶ್ವವಿದ್ಯಾಲಯ ಮತ್ತು ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ನಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎನ್ನುತ್ತಾರೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಪೋಷಕರಾದ ವಿ. ಲಕ್ಷ್ಮಿ.

ಆರೋಗ್ಯ ವಿ.ವಿ ಕುಲಪತಿ ಹೇಳುವುದೇನು

‘ಕೋವಿಡ್‌ನಿಂದ ವೈದ್ಯಕೀಯ ಶಿಕ್ಷಣದ ಶೈಕ್ಷಣಿಕ ವರ್ಷದಲ್ಲಿ ಏರುಪೇರಾಗಿರುವುದು ನಿಜ. ಸುಮಾರು ಆರು–ಏಳು ತಿಂಗಳು ವ್ಯತ್ಯಾಸವಾಗಿದೆ. ವಿದ್ಯಾರ್ಥಿಗಳಿಗೂ ನಷ್ಟವಾಗಿದೆ. ನಿಗದಿತ ಸಮಯದಲ್ಲಿ ಪರೀಕ್ಷೆಗಳನ್ನು ನಡೆಸಲೂ ಆಗಿಲ್ಲ. ಆದರೆ ಈಗಷ್ಟೇ ಅಂತಿಮ ವರ್ಷದ ಪರೀಕ್ಷೆಗಳಿಗೆ ವಿಶ್ವವಿದ್ಯಾಲಯ ಚಾಲನೆ ನೀಡಿದೆ. ನಂತರ ಹಂತ ಹಂತವಾಗಿ ಮೊದಲ, ಎರಡನೇ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳ ಪರೀಕ್ಷೆಗಳನ್ನೂ ನಡೆಸುತ್ತೇವೆ’ ಎನ್ನುತ್ತಾರೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್‌. ಸಚ್ಚಿದಾನಂದ.

‘ಈ ವಿದ್ಯಾರ್ಥಿಗಳಿಗೆ ವಾರ್ಷಿಕ ಲಿಖಿತ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಬೇಕಿದೆ. ನೀಟ್‌ ಫಲಿತಾಂಶ ಈಗಷ್ಟೇ ಬಂದಿದೆ. ಮೊದಲ ವರ್ಷದ ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲ ತಿಂಗಳು ಬೇಕಾಗುತ್ತದೆ. ಅಷ್ಟರಲ್ಲಿ ಯಾವುದೇ ಗೊಂದಲ, ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ವಿಶ್ವವಿದ್ಯಾಲಯದ್ದಾಗಿದೆ. ಅದನ್ನು ವಿ.ವಿ ಸಮರ್ಪಕವಾಗಿ ನಿಭಾಯಿಸುತ್ತದೆ. ಈ ವಿಷಯದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಗೊಂದಲ ಬೇಡ’ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT