ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ– ಗ್ರಂಥಾಲಯ ವಿದ್ಯಾರ್ಥಿಗಳ ವಿಸ್ಮಯಲೋಕ

Last Updated 23 ಜುಲೈ 2019, 19:30 IST
ಅಕ್ಷರ ಗಾತ್ರ

ಪುಸ್ತಕದ ಪ್ರಪಂಚವೇ ಒಂದು ವಿಸ್ಮಯ ಲೋಕ. ಪುಸ್ತಕ ಸಂಸ್ಕೃತಿ ಉಳಿಯಬೇಕಾದರೆ ನೂತನ ತಂತ್ರಜ್ಞಾನ ಅಗತ್ಯ ಎಂಬುದು ನಾವು ಕಂಡ ಸತ್ಯ. ಇತ್ತೀಚಿನ ಮಾಹಿತಿ ವಿಜ್ಞಾನದ ರಭಸದಲ್ಲಿ ಪುಸ್ತಕದ ಓದುಗರಿಗೆ ಆಧುನಿಕ ಸ್ಪರ್ಶ ಸಿಗದಿದ್ದರೆ ಓದುಗನ ಕೊರತೆ ಗ್ರಂಥಾಲಯಕ್ಕೆ ಮಾತ್ರವಲ್ಲದೇ, ಪುಸ್ತಕ ಪ್ರೇಮಿಗಳಿಗೂ ಅಮೂಲ್ಯವಾದ ಸಮಯ ವ್ಯರ್ಥವಾಗಬಹುದು.

ಹೀಗಾಗಿ ಪುಸ್ತಕ ಪ್ರಪಂಚ ತನ್ನ ಲೇಖಕರಿಂದ, ಪ್ರಕಾಶಕರಿಂದ ಓದುಗರಿಗೆ ಸೇವೆಯನ್ನು ಕೊಡಲು ಡಿಜಿಟಲ್ ಯುಗಕ್ಕೆ ಕಾಲಿಟ್ಟಿದೆ. ಅದರ ರೂವಾರಿ ಜರ್ಮನಿಯ ಯೋಹಾನೆಸ್ ಗುಟೆನ್‌ಬರ್ಗ್‌. ಆತ ಇಂಟರ್‌ನೆಟ್‌ ಮೂಲಕ ಪುಸ್ತಕದ ಭೌತಿಕ ಸ್ವರೂಪ ಉಳಿಸಿಕೊಂಡು ಅದರ ಮೂಲ ಪ್ರತಿಗಳಿಗೆ ಯಾವುದೇ ಧಕ್ಕೆ ಬಾರದಂತೆ ಓದುಗನಿಗೆ ಕಾಗದರಹಿತ ಪುಸ್ತಕವನ್ನು ಅದರ ಛಾಯಾಪ್ರತಿಯ ಮೂಲಕ ಓದಲು ಅನುಕೂಲ ಮಾಡಿಕೊಟ್ಟ. ಈ ಕೆಲಸ ಡಿಜಿಟಲ್ ಲೈಬ್ರರಿಯಲ್ಲಿ ವಿಶೇಷ ಕ್ರಾಂತಿಯನ್ನು ಉಂಟು ಮಾಡಿತು. ಈ ಕ್ರಾಂತಿಯ ಫಲವೇ ಇ-ಪುಸ್ತಕ, ಇ -ಲೈಬ್ರರಿ.

ಪುಸ್ತಕಗಳು ಗ್ರಂಥಾಲಯಗಳ ಕಪಾಟಿನಲ್ಲಿ ಇರದೆ ಕಂಪ್ಯೂಟರ್‌ ಒಳಗಿರುತ್ತವೆ. ಕಂಪ್ಯೂಟರ್ ಮಾತ್ರವಲ್ಲ, ಆಧುನಿಕ ಜಗತ್ತಿನ ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್‌ನಲ್ಲಿ ಕೂಡ ನೋಡಬಹುದು.

ಗುಟೆನ್‌ಬರ್ಗ್‌ ಯೋಜನೆಯ ಅಡಿಯಲ್ಲಿ ಮೊದಲು 50 ಸಾವಿರ ಪುಸ್ತಕಗಳನ್ನು ಡಿಜಿಟಲ್ ಮಾಡಿದರೂ ಮುಂದೆ ಇದರ ತಂತ್ರಜ್ಞಾನ ಬೆಳೆದು ಪುಸ್ತಕದ ಸ್ವರೂಪ ಬದಲಾಯಿತು. ಇ– ಪುಸ್ತಕ, ಇ– ಸಂಪನ್ಮೂಲ ಬೆಳೆದು ಲಕ್ಷಾಂತರ ಕೃತಿಗಳನ್ನು ಡಿಜಿಟಲ್ ಸ್ವರೂಪಕ್ಕೆ ತಂದು ಓದುಗರಿಗೆ ಒದಗಿಸಿದ ಅವರ ಶ್ರಮ ಸಾರ್ಥಕ.

ಇ– ಪುಸ್ತಕವೆಂದರೇನು?

ಇ– ಪುಸ್ತಕ ಎನ್ನುವುದು ಪುಸ್ತಕದ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡು ಅದರ ಭೌತಿಕ ರೂಪವನ್ನು ಮಾತ್ರ ವಿದ್ಯುನ್ಮಾನ ಮಾಧ್ಯಮಕ್ಕೆ ಬದಲಿಸುವ ಕ್ರಮ. ನೂರಾರು ಪುಸ್ತಕಗಳನ್ನು, ಕೃತಿಗಳನ್ನು ಒಂದು ಸಣ್ಣ ಪೆನ್‌ ಡ್ರೈವ್‌ನಲ್ಲಿ ಇರಿಸಬಹುದು. ಧೂಳು ಹಿಡಿಯದ, ಕೊಳೆಯಾಗದ, ಹರಿಯದ, ಕಳೆದುಹೋಗದ ಪುಸ್ತಕವಿದು! ಲಕ್ಷಾಂತರ ಜನ ಏಕಕಾಲಕ್ಕೆ ಒಂದೇ ಪುಸ್ತಕವನ್ನು ಅಂಗೈ ಅಗಲದ ಮೊಬೈಲ್‌ನಲ್ಲಿ ಓದುವ ತಂತ್ರಜ್ಞಾನ ರೋಚಕ ಅಲ್ಲವೇ?

ಇ– ಕಲಿಕಾ ಸಾಮಗ್ರಿ

ಸರ್ಕಾರವು ಮಕ್ಕಳಿಗೆ ಶಾಲಾ ಪುಸ್ತಕಗಳನ್ನು ಡಿಜಿಟಲ್ ರೂಪಕ್ಕೆ ತಂದಿದೆ. ಪಠ್ಯಪುಸ್ತಕಗಳನ್ನು ಡೌನ್‌ಲೋಡ್ ಮಾಡಿ ಓದಬಹುದು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ‘ಕನ್ನುಡಿ’ ದ್ವಿಭಾಷಾ ಜಾಲತಾಣವು ಕನ್ನಡ, ಕನ್ನಡ ಭಾಷೆಯ ಪರಿಕರಗಳು, ಕನ್ನಡದಲ್ಲಿನ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪರಿಕರಗಳು, ಸಾಹಿತ್ಯ, ಕಲೆ, ದೇವಾಲಯ, ಜನಪದ, ಇತಿಹಾಸ, ಕನ್ನಡದ ಬಗ್ಗೆ ಜ್ಞಾನ ಪ್ರಸರಣ ಮಾಡುವ ಜಾಲತಾಣವಾಗಿದ್ದು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಅಗತ್ಯವಿರುವ ಮಾಹಿತಿಯನ್ನು ಒದಗಿಸುವ ಇ– ಸಂಪನ್ಮೂಲ ಕೇಂದ್ರವಾಗಿದೆ. ಬೋಧನಾಭಾರತಿ ವಿಭಾಗದಲ್ಲಿ ಕನ್ನಡದಲ್ಲಿ ಬಹುಮಾಧ್ಯಮಗಳ ಬಳಕೆಯಿಂದ ಇ-ಬೋಧನಾ ಮತ್ತು ಇ-ಕಲಿಕಾ ಸಾಮಗ್ರಿಗಳು ದೊರೆಯುತ್ತವೆ.

ಕರ್ನಾಟಕದ ಪಠ್ಯಪುಸ್ತಕ ನಿರ್ದೇಶನಾಲಯದ ಪ್ರಥಮ ಭಾಷೆ ಕನ್ನಡ ಭಾರತಿ, 7-ಕನ್ನಡ ಭಾರತಿ -10ರ ಪೂರಕ ವಿಷಯಿಕ -ಭೋಧನಾಭಾರತಿ ಶೈಕ್ಷಣಿಕ ಕ್ಷೇತ್ರದ ಮೈಲುಗಲ್ಲಾಗಿವೆ. ಕೃತಿಗಳ ಕರ್ತೃ, ಅವರ ಛಾಯಾಚಿತ್ರಗಳು, ಲೇಖಕರ ವಿವರ, ಪಾಠದ ಹಿನ್ನೆಲೆ, ಪದ್ಯಗಳ ಆಯಾಯ ಶೈಲಿಯಲ್ಲಿ ಗಮಕ, ಜನಪದ ಸುಗಮ ಸಂಗೀತ.. ಹೀಗೆ ನಾನಾರೂಪದಲ್ಲಿ ಹಾಡಿಸಿ, ಧ್ವನಿಯನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಇದನ್ನು ತಮ್ಮ ವಿದ್ಯಾರ್ಜನೆಗೆ ಬಳಸಬಹುದು.

ವಿದ್ಯಾರ್ಥಿಗಳಿಗೆ ಹೇಗೆ ಅನುಕೂಲ?

ಇ– ಲೈಬ್ರರಿಯ ವಿಶೇಷತೆಗಳು ಕಾಲೇಜು ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ವರದಾನವಾಗಿವೆ.

ಉಪಯುಕ್ತ ಮಾಹಿತಿ: ಪುಸ್ತಕದ ವಿಚಾರಕ್ಕೆ ಬಂದಾಗ ಪುಸ್ತಕವನ್ನು ಗ್ರಂಥಾಲಯದ ಕಪಾಟುಗಳಲ್ಲಿ ಹುಡುಕಬೇಕು. ಆದರೆ ಇ– ಲೈಬ್ರರಿಯ ವಿವರ ತಕ್ಷಣ ಲಭ್ಯವಿದ್ದು ಕಂಪ್ಯೂಟರ್, ಲ್ಯಾಪ್‌ಟ್ಯಾಪ್ ತೆರೆದಾಕ್ಷಣ ಸಿಗುವುದು.

ಲಭ್ಯ ಮಾಹಿತಿ: ನಿಮ್ಮ ಅಸೈನ್‌ಮೆಂಟ್‌ಗೆ ಬೇಕಾದ ವಿವರಗಳು, ಪಾಠಗಳು, ಚಿತ್ರಗಳ ವಿವರಗಳು ತಕ್ಷಣ ವೆಬ್‌ಸೈಟ್‌ನಲ್ಲಿ ಸಿದ್ಧವಿರುವುದರಿಂದ ಕ್ಲಿಕ್ ಬಟನ್ ಒತ್ತಿ ನೋಡಬಹುದು.

ಅವಶ್ಯಕತೆಗೆ ತಕ್ಕ ಮಾಹಿತಿ ಸೌಲಭ್ಯ: ವಿದ್ಯಾರ್ಥಿಗಳಿಗೆ ಬೇಕಾದ ರೀತಿಯ ಅಸೈನ್‌ಮೆಂಟ್, ಪ್ರಾಜೆಕ್ಟ್ ವರ್ಕ್‌ ಇತ್ಯಾದಿಗಳಿಗೆ ಅವರಿಗೆ ಬೇಕಾದ ವಿಷಯ ಸಂಪನ್ಮೂಲಗಳು ಇ– ಲೈಬ್ರರಿಯಲ್ಲಿ ಸಿಗುತ್ತವೆ. ವಿದ್ಯಾರ್ಥಿಗಳು ಇಂತಹ ಸೌಲಭ್ಯವನ್ನು ಕಾಲೇಜಿನ ಸಮಯದಲ್ಲಿ ಮಾತ್ರವಲ್ಲ, ಮನೆಯ ಕಂಪ್ಯೂಟರ್‌ನಲ್ಲಿ, ಹೊರಗಡೆ ಹೋದಾಗ ಮೊಬೈಲ್‌ನಲ್ಲಿರುವ ಆ್ಯಪ್‌ಗಳಲ್ಲಿ ಪಡೆಯಬಹುದು. ಇದರಿಂದ ಮಾಹಿತಿಗಾಗಿ ಕಾಯಬೇಕಾಗಿಲ್ಲ, ಸಮಯದ ಉಳಿತಾಯವಾಗುತ್ತದೆ.

ಚಿತ್ರಗಳು ಮತ್ತು ಧ್ವನಿ ಮುದ್ರಿತ ವಿಡಿಯೋಗಳು ಲಭ್ಯ: ಶಾಲಾ– ಕಾಲೇಜಿನ ವೇಳೆ ಬಿಟ್ಟು ಶಿಕ್ಷಕರು, ಉಪನ್ಯಾಸಕರು ನಮಗೆ ಮನೆಯಲ್ಲಿ ಸಿಗುವುದಿಲ್ಲ. ಆದರೆ ಇಲ್ಲಿ ಬೇಕಾದಾಗ ಪಾಠ, ಪ್ರಾಜೆಕ್ಟ್‌ ವಿವರಗಳು ಮುದ್ರಿತ ಆಡಿಯೊ, ವಿಡಿಯೊ ರೂಪದಲ್ಲಿ ಸಿಗುತ್ತವೆ. ಆನ್‌ಲೈನ್ ಸೌಲಭ್ಯದಿಂದ ಸಂಭಾಷಣೆ ನಡೆಸಿ ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗೆ ಉತ್ತರ ಪಡೆಯಬಹುದು ಮತ್ತು ಪಾಠದ ಕಲಿಕೆ ನಡೆಸಬಹುದು.

ಉತ್ತಮ ಪಲಿತಾಂಶಕ್ಕೆ ಮನ್ನಣೆ: ವಿದ್ಯಾರ್ಥಿಗಳಿಗೆ ಯಾವಾಗಲೂ ತಾನು ಉತ್ತಮ ದರ್ಜೆಯಲ್ಲಿ ಉತ್ತೀರ್ಣನಾಗುವುದು ಹೆಮ್ಮೆಯ ವಿಚಾರ. ಇ– ಲೈಬ್ರರಿಯ ಅನುಕೂಲ ಪಡೆದ ವಿದ್ಯಾರ್ಥಿ ಪರೀಕ್ಷೆಯ ಹಿಂದಿನ ದಿನದವರೆಗೂ ಆನ್‌ಲೈನ್ ಪಾಠದ ಸಂಪರ್ಕದಲ್ಲಿದ್ದು, ಪರೀಕ್ಷೆಯ ದಿನ ಉತ್ತಮವಾಗಿ ಬರೆದು ಒಳ್ಳೆಯ ಅಂಕ ಪಡೆಯಲು ಸಹಾಯವಾಗುತ್ತದೆ.

ನೈಜ ಸಂಗತಿಗಳು / ನಿಖರ ವಿಷಯಗಳು: ಇ–ಲೈಬ್ರರಿಯಲ್ಲಿ ಪಡೆದ ವಿಷಯ ನಿಖರವಾಗಿದ್ದು ವಿದ್ಯಾರ್ಥಿಗಳಿಗೆ ನೈಜ ಸಂಗತಿಗಳು ಅರಿವಾಗುತ್ತವೆ ಮತ್ತು ಅವರ ಪಾಠದ ವಿಷಯವಲ್ಲದೆ ಆಟೋಟಗಳು, ಜನಪರ ವಿಚಾರ, ಜನಪ್ರಿಯ ವ್ಯಕ್ತಿಗಳ ವೈಯಕ್ತಿಕ ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಇರುವುದನ್ನು ಬಿಟ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದು ಜ್ಞಾನ ಹೆಚ್ಚಿಸಿಕೊಳ್ಳಬಹುದು.

ಆನ್‌ಲೈನ್ ಬಳಕೆಯಿಂದ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಸೌಲಭ್ಯದ ಬಳಕೆ, ಅದರ ಉಪಯೋಗ ಮತ್ತು ಸಿಗಬಹುದಾದ ಉಪಯುಕ್ತ ಮಾಹಿತಿ ಮತ್ತು ಇತ್ತೀಚೀನ ವಿಜ್ಞಾನ– ತಂತ್ರಜ್ಞಾನದ ಅರಿವನ್ನು ಪಡೆಯಬಹುದು.

ಎಲ್ಲ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಕಂಪ್ಯೂಟರ್, ಇಂಟರ್‌ನೆಟ್ ಸೌಲಭ್ಯ ಇರುವುದಿಲ್ಲ. ಹೀಗಾಗಿ ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ಇ-ಲೈಬ್ರರಿ-ಇಂಟರ್‌ನಟ್ ಸೌಲಭ್ಯ ಪಡೆಯಲೆಂದೇ ಇತ್ತೀಚಿಗೆ ಸಾರ್ವಜನಿಕ ಗ್ರಂಥಾಲಯ ಕಂಪ್ಯೂಟರ್‌ ಸೇವೆ ಒದಗಿಸಿದೆ.

ಸಾಹಿತ್ಯ ಪ್ರೇಮಿಗಳಿಗೆ..

ಸಾಹಿತ್ಯ ಆಭಿರುಚಿ ಇರುವವರು ನಿರಾಶೆಪಡುವುದು ಬೇಡ! ಕೆಲವು ಪ್ರಕಾಶಕರ ವೆಬ್‌ಸೈಟ್‌ಗಳಿಗೆ ಪ್ರವೇಶ ಮಾಡಿದರೆ ಇಡೀ ಪುಸ್ತಕವನ್ನು ಓದಬಹುದು.

ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್‌ಜಾಲವಾದ ಕಣಜ. ಡೈಲಿಹಂಟ್, ನವಕರ್ನಾಟಕ ಪ್ರಕಾಶನ, ಅಮೆಜಾನ್ ಮತ್ತು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ, ಉಸ್ಮಾನಿಯಾ ವಿಶ್ವವಿದ್ಯಾಲಯದ ಡಿಜಿಟಲ್ ಲೈಬ್ರರಿ ಜಾಲತಾಣಗಳನ್ನು ಓದುಗರು ಉಪಯೋಗಿಸಬಹುದು. ಕೆಲವು ಇ-ಪುಸ್ತಕಗಳು ಉಚಿತವಾಗಿ ಓದಲು ಸಿಗಬಹುದು. ಮತ್ತೆ ಕೆಲವಕ್ಕೆ ನಾವು ಆ ಸಂಸ್ಥೆಯ ಸದಸ್ಯರಾಗಬೇಕು. ಕೆಲವು ಪುಸ್ತಕಗಳನ್ನು ಓದಲು ನಾವು ಬೆಲೆ ನೀಡಬೇಕಾಗುತ್ತದೆ. ಅಂದರೆ
ಇ–ಪೇಮೆಂಟ್ ಮೂಲಕ ನಿರ್ವಹಿಸಬಹುದು.

ಡಿಜಿಟಲ್ ಸೌಲಭ್ಯ ನೀಡುವ ಮೊಬೈಲ್ ಆ್ಯಪ್‌ಗಳು

* ಡೈಲಿಹಂಟ್. ಕೈಬುಕ್ಸ್

* ಇ-ಪುಸ್ತಕ. ವಿವಿಧಲಿಪಿ

* ಮೇರಾಲೈಬ್ರರಿ. ಗೂಗಲ್‌ಬುಕ್ಸ್

* ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ

* ನ್ಯಾಶನಲ್ ಡಿಜಿಟಲ್ ಲೈಬ್ರರಿ

* ವಿಕಿಪೀಡಿಯದ ವಿಕಿಸೋರ್ಸ್‌

* ಕಣಜ ಇ-ಪುಸ್ತಕ/ ಇ– ಬುಕ್‌‌

(ಲೇಖಕರು ಗ್ರಂಥಪಾಲಕರು, ಶೇಷಾದ್ರಿಪುರಂ ಸಂಯುಕ್ತ ಪದವಿ ಪೂರ್ವ ಕಾಲೇಜು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT