ಬುಧವಾರ, ಜನವರಿ 22, 2020
26 °C
ಐಎಎಸ್‌, ಐಪಿಎಸ್‌ ಕನಸಿನ ದೋಣಿಯಲ್ಲಿ ತಾಂತ್ರಿಕ ಪದವೀಧರರ ಪಯಣ

ಹೊಸ ಟ್ರೆಂಡ್ | ನಾಗರಿಕ ಸೇವೆಯತ್ತ ಎಂಜಿನಿಯರ್‌ಗಳ ಒಲವು: ಐಎಎಸ್ ಕನಸು

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

ದಾವಣಗೆರೆ: ಆಡಳಿತದಲ್ಲಿ ಸಂಚಲನ ಮೂಡಿಸುತ್ತಿರುವ ಐಎಎಸ್‌, ಐಪಿಎಸ್‌ ಅಧಿಕಾರಿಗಳ ‘ಗ್ಲಾಮರಸ್‌’ (ಮೋಹಕ) ಬದುಕಿಗೆ ಮಾರುಹೋಗುತ್ತಿರುವ ಹಲವು ಎಂಜಿನಿಯರಿಂಗ್‌ ಪದವೀಧರರು ‘ನಾಗರಿಕ ಸೇವೆ’ಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ.

ಖಾಸಗಿ ಕಂಪನಿಗಳಲ್ಲಿ ಕೈತುಂಬಾ ಸಂಬಳ ಎಣಿಸುತ್ತಿರುವ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಸಹ ಸೇವಾ ವಲಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬ ಹಂಬಲದಿಂದ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ.

2017ನೇ ಸಾಲಿನ ಕೆಪಿಎಸ್‌ಸಿ ಪರೀಕ್ಷೆ ಫಲಿತಾಂಶ ಆಧರಿಸಿ ಈಚೆಗೆ ಪ್ರಕಟಗೊಂಡ ಪ್ರೊಬೆಷನರಿ ಅಧಿಕಾರಿಗಳ ಪಟ್ಟಿಯಲ್ಲೂ ಹಲವು ಎಂಜಿನಿಯರ್‌ಗಳು ಸ್ಥಾನ ಪಡೆದುಕೊಂಡಿದ್ದಾರೆ.

ಜಿಲ್ಲೆಯಿಂದ ಪ್ರೊಬೆಷನರಿ ಅಧಿಕಾರಿಗಳಾಗಿ ಆಯ್ಕೆಯಾದ ಸಂತೇಬೆನ್ನೂರಿನ ಜಿ. ಮಂಜುನಾಥ (ಡಿವೈಎಸ್‌ಪಿ ಹುದ್ದೆ), ದಾವಣಗೆರೆಯ ಮಿರ್ಜಾ ಖಾದರ್‌ ಬೇಗ್‌, ರಾಹುಲ್‌ ರಂಗನಾಥ ಪಟೇಲ್‌ ಹಾಗೂ ಹೊನ್ನಾಳಿಯ ಸುನಿಲ್ ಪವಾರ್ ನಾಯ್ಕ್ (ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ), ಸಂತೇಬೆನ್ನೂರಿನ ವಿನಾಯಕ ಸಾಗರ ಪಿ.ವಿ. ಹಾಗೂ ಜಗಳೂರಿನ ಜಿ.ಎನ್. ಸಂಧ್ಯಾ (ತಹಶೀಲ್ದಾರ್‌ ಗ್ರೇಡ್‌–2), ದೊಡ್ಡ ಓಬಜ್ಜಿಹಳ್ಳಿಯ ಎಲ್‌.ಆರ್‌. ದರ್ಶನ್‌ ನಾಯ್ಕ (ವಾಣಿಜ್ಯ ತೆರಿಗೆ ಅಧಿಕಾರಿ), ದಾವಣಗೆರೆ ಮೂಲದ ಸೋನಿಯಾ ವೆರ್ಣೇಕರ್‌ ಯು. (ಜಿಲ್ಲಾ ಹಿಂದುಳಿದ ವರ್ಗ ಅಧಿಕಾರಿ) ಅವರೆಲ್ಲರೂ ಎಂಜಿನಿಯರ್‌ ಪದವೀಧರರೇ ಎಂಬುದು ವಿಶೇಷ.

ಮಂಜುನಾಥ್‌, ವಿನಾಯಕ ಸಾಗರ ಪಿ.ವಿ ಅವರು ಐಟಿ ಕಂಪನಿಯ ಕೆಲಸಕ್ಕೆ ‘ಗುಡ್‌ಬೈ’ ಹೇಳಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದರು. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಮೂರು ವರ್ಷ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿದ್ದ ಮೊಳಕಾಲ್ಮುರಿನ ಕೋನಸಾಗರದ ಶ್ವೇತಶ್ರೀ ಎಸ್‌.ಸಿ. (ವಾಣಿಜ್ಯ ತೆರಿಗೆ ಅಧಿಕಾರಿ) ಅವರು ಚೆನ್ನೈನಲ್ಲಿ ನೆಲೆಸಿಕೊಂಡೇ ಕೆಪಿಎಸ್‌ಸಿ ಪರೀಕ್ಷೆ ಬರೆದು ಸಾಧನೆ ಮಾಡಿದ್ದಾರೆ.

‘ಎಸ್ಸೆಸ್ಸೆಲ್ಸಿ ಮುಗಿಯುತ್ತಿದ್ದಂತೆ ಹೆಚ್ಚಿನ ಪೋಷಕರು ಮಕ್ಕಳನ್ನು ಪಿಯು ಕಾಲೇಜಿಗೆ ಸೇರಿಸುವಾಗ ವಿಜ್ಞಾನ ವಿಭಾಗಕ್ಕೆ ಹಾಕುತ್ತಾರೆ. ಮೆಡಿಕಲ್‌ ಸೀಟು ಸಿಗದೇ ಹೆಚ್ಚಿನ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ಗೆ ಸೇರಿಕೊಳ್ಳುತ್ತಿದ್ದಾರೆ. ಮೊದಲಿಗೆ ಹೋಲಿಸಿದರೆ ಈಗ ಎಂಜಿನಿಯರ್‌ಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಹೀಗಾಗಿ ಎಂಜಿನಿಯರಿಂಗ್‌ ಪದವೀಧರರಲ್ಲಿ ಶೇ 50ರಷ್ಟು ಮಂದಿ ಸ್ಪರ್ಧಾತ್ಮಕ ಪರೀಕ್ಷೆಯನ್ನೂ ತೆಗೆದುಕೊಳ್ಳುತ್ತಿದ್ದಾರೆ’ ಎಂದು ನಗರದ ವಿನ್ನರ್ಸ್‌ ಕರಿಯರ್‌ ಅಕಾಡೆಮಿಯ ಸಂಸ್ಥಾಪಕ ಶಿವರಾಜ್‌ ಕಬ್ಬೂರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗುವ ಕನಸು ಹೊತ್ತು ಹಲವು ಎಂಜಿನಿಯರ್‌ಗಳು ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಇದರ ಜೊತೆಯಲ್ಲೇ ಕೆಪಿಎಸ್‌ಸಿ ಪರೀಕ್ಷೆಯನ್ನೂ ತೆಗೆದುಕೊಳ್ಳುತ್ತಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಎಂಜಿನಿಯರ್‌ಗಳ ಆಯ್ಕೆ ಪ್ರಮಾಣ ಕಡಿಮೆ ಇದ್ದರೂ ಕೆಪಿಎಸ್‌ಸಿಯಲ್ಲಿ ಬಹುಪಾಲು ಎಂಜಿನಿಯರ್‌ಗಳೇ ಆಯ್ಕೆಯಾಗುತ್ತಿದ್ದಾರೆ’ ಎಂದು ಕಬ್ಬೂರು ತಿಳಿಸಿದರು.

ಖಾಸಗಿ ವಲಯದಲ್ಲಿ ಎಂಜಿನಿಯರ್‌ಗಳಿಗೆ ಉದ್ಯೋಗಾವಕಾಶ ಹಾಗೂ ವೇತನ ಶ್ರೇಣಿ ಕಡಿಮೆಯಾಗುತ್ತಿದೆ. ಹೀಗಾಗಿ ಎಂಜಿನಿಯರ್‌ಗಳು ಉದ್ಯೋಗ ಭದ್ರತೆ, ಅಧಿಕಾರಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

‘2016, 2017ರ ಕೆಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಗಮನಿಸಿದಾಗ ಹೆಚ್ಚಿನ ಹುದ್ದೆಗಳು ಎಂಜಿನಿಯರ್‌ಗಳ ಪಾಲಾಗುತ್ತಿವೆ. ಬ್ಯಾಂಕಿಂಗ್‌ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಎಂಜಿನಿಯರ್‌ಗಳು ತೆಗೆದುಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಎಂಜಿನಿಯರ್‌ ಪದವೀಧರರು ಕಲಾ ವಿಭಾಗದ ಪದವೀಧರರಿಗೆ ಪ್ರಬಲ ಸ್ಪರ್ಧೆ ಒಡ್ಡುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಶಿಕ್ಷಣ ಹಾಗೂ ಅರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ನಾಲ್ಕೈದು ವರ್ಷಗಳಿಂದ ಗ್ರಾಮೀಣ ಭಾಗದ ಪೋಷಕರೂ ತಮ್ಮ ಮಕ್ಕಳನ್ನು ಐಎಎಸ್‌, ಕೆಎಎಸ್‌ ಅಧಿಕಾರಿಗಳನ್ನಾಗಿ ಮಾಡಬೇಕು ಎಂಬ ಕನಸು ಕಾಣುತ್ತಿದ್ದಾರೆ. ಜೊತೆಗೆ ಈಗ ಯುವಕರಲ್ಲೂ ಸಮಾಜ ಸೇವೆ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಮೊದಲಿಗಿಂತಲೂ ಹೆಚ್ಚಾಗುತ್ತಿರುವುದರಿಂದ ಎಂಜಿನಿಯರ್‌ಗಳೂ ನಾಗರಿಕ ಸೇವಾ ವಲಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ದೆಹಲಿಗೆ ತೆರಳಿ ಐಎಎಸ್‌ ತರಬೇತಿ ಪಡೆಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ’ ಎಂಬುದು ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ (ಐಎಸ್‌ಟಿಇ) ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಬಿ.ಇ. ರಂಗಸ್ವಾಮಿ ಅವರ ಅನುಭವದ ಮಾತು.

ಪ್ರಾಯೋಗಿಕ ಅಧ್ಯಯನದಿಂದಾಗಿ ಆಪ್ಟಿಟ್ಯೂಡ್‌ ಹಾಗೂ ಕಲಿಕಾ ಸಾಮರ್ಥ್ಯ ಎಂಜಿನಿಯರ್‌ಗಳಲ್ಲಿ ಹೆಚ್ಚಿರುತ್ತದೆ. ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎಂಜಿನಿಯರ್‌ಗಳು ಹೆಚ್ಚು ಆಯ್ಕೆಯಾಗುತ್ತಿದ್ದಾರೆ ಎನ್ನುತ್ತಾರೆ ಅವರು.

ಬಾಲ್ಯದಿಂದಲೂ ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸಿತ್ತು. ಎಂಜಿನಿಯರಿಂಗ್‌ ಓದಿದ್ದರೂ ಈಗ ಕುಟುಂಬದವರು ನೀಡಿದ ಪ್ರೋತ್ಸಾಹದಿಂದ ಸಮಾಜ ಸೇವೆ ಸಲ್ಲಿಸುವ ಅವಕಾಶ ಲಭಿಸಿದೆ ಎನ್ನುತ್ತಾರೆ ಪ್ರೊಬೆಷನರಿ ವಾಣಿಜ್ಯ ತೆರಿಗೆ ಅಧಿಕಾರಿ ಶ್ವೇತಶ್ರೀ ಎಸ್‌.ಸಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು