ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಶಿಕ್ಷಣಕ್ಕೆ ಪರಿಸರ ಪಾಠ

Last Updated 1 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮಗು ಯಾವುದೇ ವಿಷಯದ ಕಲಿಕೆಯಲ್ಲಿ ತೊಡಗಿರಲಿ ಅಥವಾ ಶಿಕ್ಷಕ ಆ ಮಗುವಿಗೆ ನಿಗದಿತ ಶಿಕ್ಷಣದ ಪ್ರಕ್ರಿಯೆಯಲ್ಲಿ ತೊಡಗಿಸಿರಲಿ, ಅದು ಕೇವಲ ಉದ್ಯೋಗ ವಲಯದಲ್ಲಿ ಅನುಕೂಲವಾದರೆ ಮಾತ್ರ ಸಾಕು ಎಂಬ ಮನೋಭಾವ ಸಲ್ಲದು. ಶಾಲೆಯ ಒಳಗೆ ಮತ್ತು ಹೊರಗೆ ವ್ಯವಸ್ಥಿತವಾದ ಮತ್ತು ಅಸಂಘಟಿತ ಚಟುವಟಿಕೆಗಳ ಮೂಲಕ ಕಲಿಕೆಯ ಅನುಭವಗಳನ್ನು ಮಗು ತನ್ನದಾಗಿಸಿಕೊಳ್ಳಬೇಕು ಎಂಬುದನ್ನು ಪಠ್ಯಕ್ರಮ ಕೂಡ ಸೂಚಿಸುತ್ತದೆ.

ಪಠ್ಯಕ್ರಮ ಬಯಸುವುದು ಗುಣಾತ್ಮಕ ಕಲಿಕೆಯನ್ನೇ ವಿನಃ ಪರಿಮಾಣಾತ್ಮಕ ಕಲಿಕೆಯನ್ನಲ್ಲ ಎಂದು ಎನ್.ಸಿ.ಎಫ್- 2005 ಕೂಡ ಹೇಳುತ್ತದೆ. ಈ ನಿಟ್ಟಿನಲ್ಲಿ ಆಲೋಚಿಸಿದರೆ ಮಕ್ಕಳು ತಮ್ಮ ಪ್ರಾಥಮಿಕ ಅನುಭವಗಳನ್ನು ಮತ್ತು ಜೀವನದ ಅನುಭವಗಳನ್ನು ಸುತ್ತಲಿನ ಪರಿಸರಕ್ಕೆ ಜೋಡಿಸುವಂತಹ ಅವಕಾಶಗಳನ್ನು ನಮ್ಮ ಪಠ್ಯಕ್ರಮ ಒದಗಿಸುತ್ತಿದೆಯೇ ಎಂಬ ಜಿಜ್ಞಾಸೆ ಮೂಡುವುದು ಸಹಜ.

ಶಾಲೆಯ ಅರ್ಥವತ್ತಾದ ಪಠ್ಯಕ್ರಮವು ಮಕ್ಕಳು ಯಾವ ಆಲೋಚನೆಗಳನ್ನು ಹೊಂದಲು ಸಹಕರಿಸಬೇಕು?

ತಾನು ಕಲಿಯುವುದನ್ನು ಇತರರಿಗೆ ಕಲಿಸಲು

ನವ ಶತಮಾನದ ಸವಾಲುಗಳನ್ನು ಎದುರಿಸಲು

ಮಕ್ಕಳ ಆರೋಗ್ಯ ಮತ್ತು ನಡವಳಿಕೆಯನ್ನು ಸುಧಾರಿಸಲು

ಸಂವೇದನಾಶೀಲ ಮತ್ತು ಜವಾಬ್ದಾರಿಯುತ ಮನೋಭಾವಗಳನ್ನು ಉತ್ತೇಜಿಸಲು ಮತ್ತು ಅಪೇಕ್ಷಿತ ಮೌಲ್ಯಗಳು, ವರ್ತನೆಗಳು, ಹವ್ಯಾಸಗಳನ್ನು ಬೆಳೆಸಿಕೊಳ್ಳಲು

ವ್ಯತ್ಯಾಸಗಳನ್ನು ಗೌರವಿಸಲು ಮತ್ತು ವೈವಿಧ್ಯತೆಗಳನ್ನು ಆಚರಿಸಲು

ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ಕಾರ್ಯನಿರತರಾಗಲು; ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು

ಯಾವುದೇ ರೀತಿಯ ಹಿಂಸೆ ಮತ್ತು ದುರುಪಯೋಗಗಳ ವಿರುದ್ಧ ಸಂವೇದನಾಶೀಲತೆ ಹೆಚ್ಚಿಸಿಕೊಳ್ಳಲು

ಶಿಕ್ಷಣಕ್ಕಾಗಿ ಸಮುದಾಯದ ಸಹಭಾಗಿತ್ವವನ್ನು ತಮ್ಮದಾಗಿಸಿಕೊಳ್ಳಲು

ಈ ನಿಟ್ಟಿನಲ್ಲಿ ಸುಸ್ಥಿರ, ಅಭಿವೃದ್ಧಿ ಹೊಂದುವ, ಪರಿಸರವನ್ನು ರಕ್ಷಿಸುವ ಆಲೋಚನೆಗಳನ್ನು ಮಾಡುವ ಅವಕಾಶಗಳು, ಚರ್ಚೆಗಳು, ವಿಶ್ಲೇಷಣೆಗಳು ನಡೆಯುವ ಅವಕಾಶಗಳುಳ್ಳ ಪರಿಸರ ಸೃಷ್ಟಿಸುವುದೇ ಕಲಿಕೆಯ ಪ್ರಕ್ರಿಯೆಯನ್ನು ಹಸಿರಾಗಿಸುತ್ತದೆ ಎನ್ನಬಹುದು.

ಹಸಿರು ಪಠ್ಯಕ್ರಮವು ಮಕ್ಕಳು ಈ ಆಲೋಚನೆಗಳನ್ನು ಹೊಂದಲು ಮತ್ತು ಅನುಸರಿಸಲು ಮಕ್ಕಳಿಗೆ ಸಹಕರಿಸುತ್ತದೆ.

ನೀರುಳಿಸುವ ಪಾಠ

ಕೆಲಸ ಮುಗಿದ ತಕ್ಷಣ ನಲ್ಲಿಗಳನ್ನು ಸರಿಯಾಗಿ ನಿಲ್ಲಿಸಿ. ಕೈ ತೊಳೆದ ಮೇಲೆ, ಬ್ರಷ್‌ ಮಾಡಿದ ಮೇಲೆ.. ಇತ್ಯಾದಿ

ಸ್ನಾನಕ್ಕೆ ಕಡಿಮೆ ನೀರು ಬಳಸಲಿ. ಚಿಕ್ಕ ಬಕೆಟ್ ಮತ್ತು ಸಣ್ಣ ಮಗ್ ಬಳಸಿದರೆ ನೀರು ಉಳಿತಾಯವಾಗುತ್ತದೆ.

ನಲ್ಲಿಯಿಂದ ನೀರು ಸೋರುತ್ತಿದ್ದರೆ, ಸುಮ್ಮನೇ ಸುರಿಯುತ್ತಿದ್ದರೆ ನಲ್ಲಿಯನ್ನು ನಿಲ್ಲಿಸಲಿ.

ನಲ್ಲಿ, ಪೈಪ್‌ ಸೋರುತ್ತಿದ್ದರೆ ಹಿರಿಯರಿಗೆ ಸರಿಪಡಿಸಲು ವಿನಂತಿಸಲಿ.

ಒಂದೊಂದೇ ಪಾತ್ರೆ ತೊಳೆಯದೇ, ಎಲ್ಲಾ ಪಾತ್ರೆಗಳನ್ನು ಉಜ್ಜಿದ ನಂತರ ನಲ್ಲಿ ಪ್ರಾರಂಭಿಸಿ ತೊಳೆಯಿರಿ.

ಕುಡಿಯಲು ನೀರು ಎಷ್ಟು ಬೇಕೋ ಅಷ್ಟು ನೀರನ್ನು ತೆಗೆದುಕೊಳ್ಳಿ.

ಬಳಸಿದ ನೀರನ್ನು ಮರುಬಳಿಸಲಿ.

ಕಾರ್ ಬೈಕ್ ತೊಳೆಯುವಾಗ ಪೈಪ್ ಬಳಸುವ ಬದಲು ಬಕೆಟ್‌ನಲ್ಲಿ ನೀರನ್ನು ಇಟ್ಟುಕೊಳ್ಳಲಿ.

ಅಂಗಳವನ್ನು ಪೈಪ್ ಮೂಲಕ ನೀರು ಬಿಟ್ಟು ಸ್ವಚ್ಛಗೊಳಿಸುವ ಬದಲು ನೀರು ಚಿಮುಕಿಸಿ ಪೊರಕೆಯಿಂದ ಗುಡಿಸಿ.

ಮಳೆ ನೀರನ್ನು ಸಂಗ್ರಹಿಸಿ ಬಳಸಲಿ.

ನೀರಿನಿಂದ ಹೊಡೆದಾಟುವ ಆಟವನ್ನು ಆಡುವುದು ಬೇಡ.

ತನ್ನ ಕುಟುಂಬ, ನೆರೆಹೊರೆಯವರು ಮತ್ತು ಸ್ನೇಹಿತರಿಗೂ ಸಹ ನೀರು ಉಳಿಸಲು ಪ್ರೇರೇಪಿಸಿ.

ವಾಯುಮಾಲಿನ್ಯ ತಡೆಗಟ್ಟುವ ಅಭ್ಯಾಸಗಳು

ಸೈಕಲ್ ಬಳಕೆಗೆ ಪ್ರೇರೇಪಿಸುವುದು.

ಎಲ್.ಪಿ.ಜಿಯ ಸುಸ್ಥಿರ, ಸುರಕ್ಷಿತ ಬಳಕೆಯನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಯುವುದು.

ಸರಳ ಪ್ರಯೋಗಗಳ ಮೂಲಕ ವಾಯುಮಾಲಿನ್ಯದ ಪರಿಣಾಮಗಳನ್ನು ಮನವರಿಕೆ ಮಾಡುವುದು.

ಹೊಗೆ ಪರೀಕ್ಷಕರನ್ನು ಕರೆಸಿ ಪ್ರಾತ್ಯಕ್ಷಿಕೆ ಮಾಡುವುದು.

ವಾಹನಗಳಿಂದ ಬರುವ ಹೊಗೆಯನ್ನು ಪ್ರಾತ್ಯಕ್ಷಿಕವಾಗಿ ಕೊಳವೆಗೆ ಪೇಪರ್ ಹಿಡಿದು ತೋರಿಸುವುದು.

ಪ್ಲಾಸ್ಟಿಕ್ ಸುಡುವುದರಿಂದ ಹೊರಬರುವ ವಾಸನೆ, ವಿಷಾನಿಲಗಳನ್ನು ಅವುಗಳ ಪರಿಣಾಮಗಳ ಬಗ್ಗೆ ಮಾಹಿತಿ ನೀಡುವುದು.

ಜಾಸ್ತಿ ಹೊಗೆ ಬರುವ ಉರುವಲು ಉರಿಸಿದರೆ ಆಗುವ ಪರಿಣಾಮಗಳನ್ನು ತಿಳಿಸುವುದು.

ಶಕ್ತಿ ಬಳಕೆ ಮಿತಗೊಳಿಸುವ ಹವ್ಯಾಸಗಳು

ಟಿ.ವಿ, ಕಂಪ್ಯೂಟರ್‌ನಂತಹ ಉಪಕರಣ ಬಳಸದಿದ್ದಾಗ ವಿದ್ಯುತ್ ಸ್ವಿಚ್ ಆಫ್ ಮಾಡುವುದು.

ನೈಸರ್ಗಿಕ ಗಾಳಿ, ಬೆಳಕನ್ನು ಬಳಸಲು ಚಿಂತಿಸುವುದು.

ಅನಗತ್ಯವಾಗಿ ವಿದ್ಯುತ್ ದೀಪ, ಫ್ಯಾನ್‌ಗಳನ್ನು ಬಳಸಬೇಡಿ.

ಎಲ್.ಇ.ಡಿ. ದೀಪ ಬಳಸಲು ಪೋಷಕರಿಗೆ ಸಲಹೆ ನೀಡುವುದು.

ಲಿಫ್ಟ್, ಎಸ್ಕಲೇಟರ್ ಬದಲಾಗಿ ಮೆಟ್ಟಿಲುಗಳನ್ನು ಬಳಸಿ.

ಕಿಟಕಿಗಳನ್ನು ತೆರೆದು ಎ.ಸಿ. ಸ್ವಿಚ್ ಆಫ್ ಮಾಡಿ.

ಪದೇ ಪದೇ ಆಹಾರ ಬಿಸಿ ಮಾಡದಿರಿ.

ಮಣ್ಣಿನ ಸತ್ವ ಕಾಪಾಡಲು ಚಟುವಟಿಕೆಗಳು

ಎರೆಹುಳು ತೊಟ್ಟಿಗಳ ನಿರ್ಮಾಣ

ಸಾವಯವ ಗೊಬ್ಬರದ ನಿರ್ಮಾಣ ತಿಳಿವಳಿಕೆ

ನೈಸರ್ಗಿಕ ಕೃಷಿ ವಿಧಾನ ಪರಿಚಯ

ಪ್ಲಾಸ್ಟಿಕ್ ಬಳಕೆಯ ಫಲಿತಾಂಶವನ್ನು ಅರಿಯುವಂತೆ ಮಾಡುವುದು

ರಾಸಾಯನಿಕ ಗೊಬ್ಬರಗಳ ಬಳಕೆ

ಶಾಲಾ ಆವರಣದಲ್ಲಿ ನಿರ್ಧಾರಿತ ಅಳತೆಯ ಭೂಮಿಯಲ್ಲಿ ಜೀವವೈವಿಧ್ಯತೆ ಮತ್ತು ಅವುಗಳ ಸಹಬಾಳ್ವೆ ಗುರುತಿಸುವುದು.

ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ ಶ್ರಮದಾನ, ಸ್ವಚ್ಛತೆಯನ್ನು ಮಕ್ಕಳು ಎಳವೆಯಲ್ಲೇ ರೂಢಿಸಿಕೊಳ್ಳಲು ಈ ಹಸಿರಿನ ಪಾಠ ಒಳ್ಳೆಯ ಮುನ್ನುಡಿಯಾಗಬಲ್ಲದು.

ಕಲಿಕಾ ಪ್ರಕ್ರಿಯೆ ಹಸಿರಾಗಿಸುವುದು ಎಂದರೇನು?

ಪರಿಸರದ ಜೀವನವು ಗಾಳಿ, ನೀರು, ಮಣ್ಣು, ಶಕ್ತಿ, ನೈರ್ಮಲ್ಯ, ಜಾನಪದ ವೈವಿಧ್ಯ ಮತ್ತು ಜಾನಪದ ಆಚರಣೆಗಳಿಂದ ಕೂಡಿದೆ. ಇವುಗಳ ಬಗ್ಗೆ ಅರಿಯಬೇಕಾದರೆ ಅದು ನಮ್ಮ ಕಲಿಕಾ ಪ್ರಕ್ರಿಯೆಯ ಮೂಲಕವೇ ಸಾಗಬೇಕು. ಕಲಿಕಾ ತರಗತಿಗಳಿಂದ ಹೊರಬಂದು ಪರಿಸರದಲ್ಲಿ ವಿಸ್ತರಿಸಲು ಕೂಡ ಹಲವು ಕಾರ್ಯತಂತ್ರಗಳನ್ನು ಅನುಸರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT