ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾದ ತಜ್ಞ

Last Updated 6 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಟೂಥ್‌ಪೇಸ್ಟ್‌ನಿಂದ ಐಸ್‌ಕ್ರೀಂವರೆಗೂ ಪ್ರತಿಯೊಂದು ಉತ್ಪನ್ನವೂ ಸುವಾಸನೆಯುಕ್ತವಾಗಿರುತ್ತದೆ. ಜೊತೆಗೆ ಅದರದ್ದೇ ಆದ ರುಚಿಯೂ ಇರುತ್ತದೆ. ಈ ಸ್ವಾದ ಎಲ್ಲಿಂದ ಬರುತ್ತದೆ ಎಂಬುದು ಗೊತ್ತೇ? ಹಲವು ಸಾವಯವ ಅಥವಾ ರಾಸಾಯನಿಕ ಮಿಶ್ರಣಗಳನ್ನು ಮಾಡಿ, ಪರಿಶೀಲಿಸಿ, ಹಲವು ಪ್ರಕ್ರಿಯೆಗಳನ್ನು ಹಾದು ಬಂದ ನಂತರ ಒಂದು ಖಚಿತವಾದ ಪರಿಮಳವನ್ನು ಉತ್ಪನ್ನಕ್ಕೆ ನೀಡಲಾಗುತ್ತದೆ.

ಹೌದು, ಇಂತಹ ಸುವಾಸನೆಯನ್ನು, ರುಚಿಯನ್ನು ಸೃಷ್ಟಿಸುವ ಹಿಂದಿನ ಕೈಚಳಕ ಅಥವಾ ಬುದ್ಧಿವಂತಿಕೆ ಒಬ್ಬ ಸ್ವಾದ ತಜ್ಞ ಅಥವಾ ಸ್ವಾದ ರಸಾಯನ ತಜ್ಞನದ್ದು. ಆಹಾರೋತ್ಪನ್ನಗಳಿರಲಿ ಅಥವಾ ಇತರ ಉತ್ಪನ್ನಗಳಿರಲಿ, ಅದರ ಪರಿಮಳವನ್ನು ಹೆಚ್ಚಿಸುವ, ಆಹ್ಲಾದಕರವಾಗುವಂತೆ ಮಾಡುವ ಕಲೆ ಸ್ವಾದ ತಜ್ಞನಿಗೆ ತಿಳಿದಿರುತ್ತದೆ. ಆಹಾರೋತ್ಪನ್ನಗಳ ಉದ್ಯಮದಲ್ಲಿ ಇದು ಹೆಚ್ಚು ಬೇಡಿಕೆ ಇರುವ ಉದ್ಯೋಗವಾಗಿ ಹೊರಹೊಮ್ಮಿದೆ.

ಸುಗಂಧ ಮತ್ತು ರುಚಿಯ ಬಗ್ಗೆ ನಿಮಗೆ ಹೆಚ್ಚು ಆಸಕ್ತಿ ಇದ್ದರೆ, ಹೊಸ ಹೊಸ ಕ್ಷೇತ್ರಗಳಲ್ಲಿ ನಿಮ್ಮ ಅದೃಷ್ಟ ಪರೀಕ್ಷಿಸುವ ಮನಸ್ಸಿದ್ದರೆ ಈ ಉದ್ಯೋಗಕ್ಕೆ ಸೇರಲು ಯತ್ನಿಸಬಹುದು. ಜೊತೆಗೆ ತಾತ್ವಿಕವಾಗಿ ಆಲೋಚನೆ ಮಾಡುವ ಬುದ್ಧಿವಂತಿಕೆ ಇರಬೇಕು. ಈ ಕ್ಷೇತ್ರದಲ್ಲಾಗುತ್ತಿರುವ ಆವಿಷ್ಕಾರಗಳ ಕುರಿತು ಒಂದು ಕಣ್ಣಿಟ್ಟಿರಬೇಕು. ವಿವರಗಳನ್ನು ಅಪ್‌ಡೇಟ್‌ ಮಾಡಿಕೊಳ್ಳುವ ಚಾಕಚಕ್ಯತೆ ಇರಬೇಕು.

ಸ್ವಾದ ತಜ್ಞರಾಗಲು ಪರಿಮಳವನ್ನು, ರುಚಿಯನ್ನು ಆಸ್ವಾದಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಆಹಾರ ಸಾಮಗ್ರಿಗಳು, ಅವುಗಳ ಗುಣವಿಶೇಷಗಳು ಮೊದಲಾದ ವಿವರಗಳ ಬಗ್ಗೆ ಜ್ಞಾನ ಹೊಂದಿರಬೇಕು. ಪ್ರಮುಖವಾದ ಸಸ್ಯಮೂಲದ ಹಾಗೂ ಕೃತಕ ತೈಲ, ಸುವಾಸನಾ ದ್ರವ್ಯಗಳ ಬಗ್ಗೆ ತಿಳಿವಳಿಕೆ ಹಾಗೂ ಅಪರೂಪದ ಪರಿಮಳ ಸೃಷ್ಟಿಸುವ ಸೃಜನಶೀಲತೆ ಇರಬೇಕು. ಒಂದಲ್ಲ, ಹತ್ತಾರು ಬಾರಿ ವಿವಿಧ ಹಂತಗಳಲ್ಲಿ ಇದನ್ನು ಪರೀಕ್ಷಿಸುವ ತಾಳ್ಮೆ ಇರಬೇಕು.

ಇದನ್ನು ಶಾಸ್ತ್ರೀಯವಾಗಿ ಕಲಿಯಲು ಬೇಕಾದಷ್ಟು ಅವಕಾಶಗಳಿವೆ. ರಸಾಯನ ವಿಜ್ಞಾನ, ಜೀವವಿಜ್ಞಾನ, ಜೀವರಸಾಯನ ವಿಜ್ಞಾನದಲ್ಲಿ ಪದವಿ ಪಡೆದವರು ಈ ಕಲೆಯನ್ನು ಬೆಳೆಸಿಕೊಳ್ಳಬಹುದು.

ಮುಂಬೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಭಾರತೀಯ ಹಾಸ್ಪಿಟಾಲಿಟಿ ಅಂಡ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ, ಗಾಝಿಯಾಬಾದ್‌ನ ಆಹಾರ ಸಂಸ್ಕರಣ ಎಂಜಿನಿಯರಿಂಗ್‌ ವಿಭಾಗ, ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಮೊದಲಾದ ಕಡೆ ಶಿಕ್ಷಣ ಪಡೆಯಬಹುದು.

ಆಹಾರ ಸಂಸ್ಕರಣೆ ಮತ್ತು ಲಘು ಪಾನೀಯ ಉದ್ಯಮದಲ್ಲಿ ಮಾತ್ರವಲ್ಲದೇ ಸೌಂದರ್ಯವರ್ಧಕಗಳು ಹಾಗೂ ಇತರ ಗ್ರಾಹಕ ಸಾಮಗ್ರಿಗಳ ಕ್ಷೇತ್ರದಲ್ಲೂ ಉದ್ಯೋಗಾವಕಾಶಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT