ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಕಲೆಯ ಕ್ರಮಬದ್ಧ ಕಲಿಕೆ ಹೇಗೆ?

Last Updated 15 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಜಾನಪದ ಕಲೆ ನಮ್ಮ ಪಾರಂಪರಿಕ ಜ್ಞಾನದಿಂದ ಹೊರಹೊಮ್ಮಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಪಸರಿಸುತ್ತ ಬೆಳೆದು ಬಂದಿರುವಂತಹದ್ದು. ಆದರೆ ಅದಕ್ಕೀಗ ಸಾಂಪ್ರದಾಯಕ ಶಿಕ್ಷಣದ ಸ್ಪರ್ಶ ಸಿಕ್ಕಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಕೌಶಲವನ್ನು ಬಳಸಿಕೊಂಡು ಆ ಕ್ಷೇತ್ರದಲ್ಲಿ ಮುಂದುವರಿಯಲು ಬೇಕಾದಷ್ಟು ಅವಕಾಶಗಳಿವೆ.

ಯಾವುದೇ ಸಮಾಜವಿರಲಿ, ಪಾರಂಪರಿಕ ಜ್ಞಾನವೆಂಬುದು ಬಹು ಮುಖ್ಯ. ಈ ಜ್ಞಾನದ, ಅನುಭವದ ಹಿನ್ನೆಲೆಯಲ್ಲಿ ರೂಪುಗೊಳ್ಳುತ್ತಾ ಸಮಾಜವೆಂಬುದು ಸೃಷ್ಟಿಯಾಗಿದೆ. ಈ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಕ ಮೌಲ್ಯವನ್ನು ಕಾಪಾಡಿಕೊಳ್ಳುವಲ್ಲಿ ನಮ್ಮ ಹಿರಿಕರು ತಮ್ಮದೆ ಆದಂತಹ ಶಿಕ್ಷಣವನ್ನು ರೂಪಿಸಿಕೊಂಡಿದ್ದರು. ತಾವು ಕಂಡುಕೊಂಡ ಜ್ಞಾನವನ್ನು ತಮ್ಮ ಪೀಳಿಗೆಗೆ ತಿಳಿಸಲು ಸಂಪ್ರದಾಯ- ಆಚರಣೆಗಳೊಂದಿಗೆ ಗುಡಿ ಕೈಗಾರಿಕೆ, ಹಾಡು, ಕುಣಿತಗಳಂಥ ಕಲಾಮಾದರಿಗಳನ್ನೇ ಬಳಸಿಕೊಂಡು ಶಿಕ್ಷಣವನ್ನು ನೀಡಿದರು. ಇದರಲ್ಲಿ ಪಳಗಿದವರು ಮುಂದೆ ಇದನ್ನೇ ತಮ್ಮ ವೃತ್ತಿ ಬದುಕನ್ನಾಗಿಸಿಕೊಂಡು ಶ್ರೇಷ್ಠ ಕಲಾವಿದರಾದರು. ಮತ್ತೆ ತಮ್ಮ ಶಿಷ್ಯಪರಂಪರೆಯನ್ನು ಕಟ್ಟಿ ನಮ್ಮ ಸಂಸ್ಕೃತಿ, ಪರಂಪರೆಯ ಕಲಾ ಮಾದರಿಗಳನ್ನು ಬೆಳೆಸಿಕೊಂಡು ಬಂದರು.

ಪ್ರಸಕ್ತ ಸಂದರ್ಭದಲ್ಲಿ ಪದವಿಯನ್ನು ಪಡೆಯುವುದು, ಅದರ ಆಧಾರದ ಮೇಲೆ ಉದ್ಯೋಗ ಪಡೆಯುವುದು ಒಂದು ಕಡೆ. ಆದರೆ ಈ ಸ್ಪರ್ಧಾತ್ಮಕ ಯುಗದಲ್ಲಿ ಅದು ಸಿಗದೇ ಇದ್ದಾಗ ಅದನ್ನೇ ಯೋಚಿಸುತ್ತಾ, ನೊಂದುಕೊಳ್ಳುತ್ತಾ ಜೀವನ ಹಾಳು ಮಾಡಿಕೊಳ್ಳುವುದರ ಬದಲು, ತಮ್ಮಲ್ಲಿರುವ ಕಲಾ ಪ್ರತಿಭೆಯನ್ನು, ಕೌಶಲವನ್ನು ಬಳಸಿಕೊಂಡು ಅಂದುಕೊಂಡಿದ್ದನ್ನು ಸಾಧಿಸಬಹುದಲ್ಲವೇ!

ಶಿಸ್ತುಬದ್ಧ ಚೌಕಟ್ಟು

ಈ ಜಾನಪದ ಕಲೆಗೆ ಸಾಂಪ್ರದಾಯಕ ಶಿಕ್ಷಣದ ಹಂಗೇಕೆ ಎನ್ನುವವರೂ ಇದ್ದಾರೆ. ಅಂದರೆ ಹಾಡು, ನೃತ್ಯ, ವಿವಿಧ ಜಾನಪದ ಕಲೆಗಳು ಇವನ್ನೆಲ್ಲ ಕೌಶಲದಿಂದಲೇ ಕಲಿಯಬೇಕಲ್ಲವೆ ಎಂದು ಪ್ರಶ್ನಿಸುವವರೂ ಇದ್ದಾರೆ. ಅವುಗಳನ್ನು ಮನೆ, ಬೀದಿ, ವೇದಿಕೆಯಲ್ಲಿ ಕಲಿತರೆ ಸಾಕೇ ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ. ಆದರೆ ಈ ಕಾಲಘಟ್ಟದಲ್ಲಿ ಎಲ್ಲವನ್ನೂ ಒಂದು ಕ್ರಮಬದ್ಧವಾಗಿ ಕಲಿತರೆ, ಒಂದು ಶಿಸ್ತುಬದ್ದ ಚೌಕಟ್ಟಿನೊಳಗೆ ತಂದರೆ ಮಾತ್ರ ಅದನ್ನು ಸಮರ್ಥವಾಗಿ ಬಳಸಿಕೊಂಡು ಭವಿಷ್ಯ ಕಟ್ಟಿಕೊಳ್ಳಬಹುದು. ಅದಕ್ಕೊಂದು ಮೌಲ್ಯ ತಂದುಕೊಡುವುದೇ ಈ ಸಾಂಪ್ರದಾಯಕ ಶಿಕ್ಷಣ.

ಇಂತಹ ಸಂದರ್ಭದಲ್ಲಿ ನಮ್ಮ ದೇಸೀ ಜ್ಞಾನ ಪರಂಪರೆಯನ್ನು ಕಲಿಸುತ್ತಿರುವ ವಿವಿಧ ಶಾಖೆಗಳ ಕಾರ್ಯ ಬಹಳ ಮುಖ್ಯವೆನಿಸುತ್ತದೆ. ನಮ್ಮ ರಾಜ್ಯವನ್ನೇ ತೆಗೆದುಕೊಂಡರೆ ಹಲವು ನಗರ, ಪಟ್ಟಣಗಳಲ್ಲಿ ಹಾಡು-ಕುಣಿತಗಳಂತಹ ದೇಸೀ ಜ್ಞಾನಗಳನ್ನು ಕಲಿಸುತ್ತಿರುವ ಗುರುಕುಲ ಪದ್ಧತಿಯ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಉದಾಹರಣೆಗೆ ಶಿವರಾಮ ಕಾರಂತರು ಸ್ಥಾಪಿಸಿದ ಯಕ್ಷಗಾನ ಕಲಿಕಾ ಕೇಂದ್ರ, ಉಜಿರೆಯ ಶ್ರೀ ಸಿದ್ಧವನ ಗುರುಕುಲ ಪದ್ಧತಿ, ರಾಮನಗರದ ಜಾನಪದ ಲೋಕ, ನೀನಾಸಂ, ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘ, ಕರ್ನಾಟಕ ಸಂಸ್ಕೃತಿಕ ಕಲಾ ಪ್ರತಿಷ್ಠಾನ ಬೆಂಗಳೂರು, ಜನಪದ ಸಂಶೋಧನಾ ಕೇಂದ್ರ ಧಾರವಾಡ, ರಂಗ ಬುಗಡಿದಂಗಳ ಸಂಘ ಕಲಬುರ್ಗಿ, ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಜಿಲ್ಲೆಗಳ ರಂಗಾಯಣಗಳು, ಜಾನಪದ, ಯಕ್ಷಗಾನ, ನಾಟಕ, ಶಿಲ್ಪಕಲಾ ಮುಂತಾದ ಅಕಾಡೆಮಿಗಳ ವಿಶೇಷ ತರಬೇತಿ ಶಿಬಿರಗಳನ್ನು ಹೆಸರಿಸಬಹುದು. ಇಷ್ಟೇ ಅಲ್ಲದೇ ಕರ್ನಾಟಕ ಸರ್ಕಾರವು ಬಹುಮುಖಿ ಜಾನಪದಕ್ಕೆ ಒಂದು ವಿಶ್ವವಿದ್ಯಾಲಯವನ್ನೇ ಸ್ಥಾಪನೆ ಮಾಡಿ ಅದರ ಅಧ್ಯಯನ, ಸಂಶೋಧನೆ ಮತ್ತು ಕಲಿಕೆಗೆ ಅವಕಾಶ ಮಾಡಿ ಕೊಟ್ಟಿದೆ.

ಜಾನಪದ ವಿಶ್ವವಿದ್ಯಾಲಯ

ಈ ವಿಶ್ವವಿದ್ಯಾಲಯವನ್ನೇ ತೆಗೆದುಕೊಂಡರೆ ನಮ್ಮ ಪಾರಂಪರಿಕ ಜ್ಞಾನ ಶಾಖೆಗಳಾದ ಹಾಡು, ಕುಣಿತ, ಕಲೆ, ಗುಡಿ ಕೈಗಾರಿಕೆಗಳಂತಹ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ (ಎರಡು ವರ್ಷದ ಅವಧಿ), ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ (ಒಂದು ವರ್ಷದ ಅವಧಿ), ಸರ್ಟಿಫಿಕೇಟ್ ಕೋರ್ಸ್ (ಒಂದು ವರ್ಷದ ಅವಧಿ)ಗಳನ್ನು ಆರಂಭಿಸಿದೆ. ಅಲ್ಲದೆ ಕರ್ನಾಟಕದ ಎಂಟು ಕಡೆ ಪ್ರಾದೇಶಿಕ ಕೇಂದ್ರ
ಗಳನ್ನು ಪ್ರಾರಂಭಿಸಿ ಅಲ್ಲಲ್ಲಿಯ ಪ್ರಾದೇಶಿಕ ಕಲೆಗಳನ್ನು ಕಲಿಸಲು ಡಿಪ್ಲೋಮಾ ಕೋರ್ಸ್‌ಗಳನ್ನು ನಡೆಸುತ್ತಿದೆ.

ವಿದ್ಯಾರ್ಥಿಗಳು ಜಾನಪದದ ವಿಷಯಗಳ ಸೈದ್ಧಾಂತಿಕ ಪಠ್ಯ ಅಧ್ಯಯನದ ಜೊತೆಗೆ ಪ್ರಾಯೋಗಿಕವಾಗಿಯೂ ಕಲಿಯಲು ಬಹಳಷ್ಟು ಕಡೆಗಳಲ್ಲಿ ಅವಕಾಶಗಳಿವೆ. ಅನುಭವವುಳ್ಳ ಹಾಗೂ ಕಲಾ ಪ್ರಕಾರಗಳಲ್ಲಿ ಪರಿಣತರಾದ ಜಾನಪದ ಕಲಾವಿದರಿಂದ ಪಾಠ ಹೇಳಿಸಿಕೊಳ್ಳಬಹುದು. ಇಷ್ಟೇ ಅಲ್ಲದೇ ಯಾವುದಾದರೂ ಸಂಘ– ಸಂಸ್ಥೆ ಮತ್ತು ಅಕಾಡೆಮಿಯವರು ಏರ್ಪಡಿಸುವ ವಿಶೇಷ ಶಿಬಿರಗಳಲ್ಲಿ ಪ್ರಾತ್ಯಕ್ಷಿಕ ಅನುಭವ ಪಡೆಯಬಹುದು. ಈ ಹಿನ್ನೆಲೆಯಲ್ಲಿ ಕಲೆಗಳನ್ನು ಜೀವಂತವಾಗಿಡುವುದರ ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಸಮಾಜದಲ್ಲಿ ಸಾಧನೆ ಮಾಡಬಹುದು.

ಪ್ರವೇಶ ಪಡೆಯಲು ಅರ್ಹತೆ

ರಾಜ್ಯದಲ್ಲಿ ವಿವಿಧ ಸಂಘ– ಸಂಸ್ಥೆಗಳು ನಡೆಸುತ್ತಿರುವ ಕೆಲವು ಕಲಿಕಾ ಕೇಂದ್ರಗಳಿಗೆ ಏಳನೇ ತರಗತಿ ಮತ್ತು ಎಸ್.ಎಸ್.ಎಲ್.ಸಿ. ಪಾಸಾಗಿದ್ದರೆ ಸಾಕು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯಲು ಮೂರು ಹಂತಗಳ ಅವಕಾಶವಿದೆ. ಸ್ನಾತಕೋತ್ತರ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್‌ಗೆ ಯಾವುದಾದರೂ ಸ್ನಾತಕ ಪದವಿ, ಡಿಪ್ಲೋಮಾ ಕೋರ್ಸ್‌ಗೆ ಪಿಯುಸಿ, ಸರ್ಟಿಫಿಕೇಟ್ ಕೋರ್ಸ್‌ಗೆ ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು.

ವೃತ್ತಿ ಜೊತೆ ಖ್ಯಾತಿ

ಸರ್ಕಾರಿ ಉದ್ಯೋಗವನ್ನು ನೆಚ್ಚದೆ, ಮತ್ತೊಬ್ಬರ ಅಡಿಯಾಳಾಗಿ ಜೀವನ ಸಾಗಿಸದೇ ತಮ್ಮ ಸ್ವಂತ ಪ್ರತಿಭೆಯ ಮೂಲಕ ಹೊರಹೊಮ್ಮಿ ಬಾಳುವುದನ್ನು ಕಲಿಸುವುದೇ ಇವುಗಳ ಮೂಲ ತತ್ವ. ಈಗೀಗ ಜಾನಪದದ ಪ್ರಕಾರಗಳಾದ ಯಕ್ಷಗಾನ, ದೊಡ್ಡಾಟ, ಗೊಂಬೆಯಾಟ, ಡೊಳ್ಳುಕುಣಿತಗಳಂತಹ ಕಲೆಗಳು ದೇಶ-ವಿದೇಶಗಳಲ್ಲಿ ಪ್ರಚಾರ ಪಡೆಯುತ್ತಿವೆ. ಯಕ್ಷಗಾನ ಕಲಾವಿದರಂತೂ ಇದರಲ್ಲಿಯೇ ನೆಮ್ಮದಿಯ ಬದುಕನ್ನು ಕಟ್ಟಿಕೊಂಡು ಹೆಸರುವಾಸಿಯಾಗಿದ್ದಾರೆ. ಈಗೀಗ ಜನಪದ ಸಾಹಿತ್ಯವೂ ಹೆಚ್ಚು ಮನಸ್ಸುಗಳನ್ನು ಗೆಲ್ಲುತ್ತಿದೆ, ಅದರ ದೇಸೀ ಕಂಠಸಿರಿಗೆ ಜನ ಮಾರುಹೋಗುತ್ತಿದ್ದಾರೆ.

ರಂಗಾಯಣ, ನೀನಾಸಂ ಮತ್ತು ಸಾಣೇಹಳ್ಳಿಯಲ್ಲಿ ಕಲಿತಂತಹ ರಂಗಕಲಾವಿದರು ತಮ್ಮದೇ ಆದ ಕಲಾ ಫ್ರೌಡಿಮೆಯಲ್ಲಿ ಹೆಸರು ಮಾಡಿ ನಾಡಿನಾದ್ಯಂತ ಕಲಾ ಸೇವೆ ಸಲ್ಲಿಸುತ್ತಾ ನೆಮ್ಮದಿಯ ಬದುಕನ್ನು ನಡೆಸುತ್ತಿದ್ದಾರೆ. ನಗರ- ಪಟ್ಟಣದ ಗುರುಕುಲ ಪದ್ಧತಿಯಲ್ಲಿ ಕಲಿತಂತಹ ವಿದ್ಯಾರ್ಥಿಗಳು ವಿವಿಧ ಸಣ್ಣ-ಪುಟ್ಟ ವೇದಿಕೆಗಳಲ್ಲಿ ತಮ್ಮ ಕಲೆಯನ್ನು ಪ್ರಸ್ತುತ ಪಡಿಸುತ್ತಾ ಬೆಳೆಯುತ್ತಿದ್ದಾರೆ. ಇಂತಹದರ ಮೂಲಕ ಓದುಗ ವರ್ಗದ ಪ್ರತಿಭಾನ್ವಿತ ಯುವಕರು ಸಹ ತಮ್ಮ ಪ್ರತಿಭೆಯನ್ನು ಒಂದಕ್ಕೆ ಮಾತ್ರ ಸೀಮಿತಗೊಳಸಿಕೊಳ್ಳದೇ ಭಿನ್ನ ಭಿನ್ನ ಪ್ರತಿಭೆಗಳನ್ನು ಹೊರಹೊಮ್ಮಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT