ಶುಕ್ರವಾರ, ಫೆಬ್ರವರಿ 21, 2020
28 °C

ಮಕ್ಕಳ ಕಲ್ಪನೆಗೆ ರೆಕ್ಕೆ ಹಚ್ಚಿ

ಶ್ರೀಲತ ಎಸ್. Updated:

ಅಕ್ಷರ ಗಾತ್ರ : | |

Prajavani

ಆರು ತಿಂಗಳೂ ತುಂಬಿರದ ಮಗುವಿಗೆ ಘನ ಆಹಾರವನ್ನು ತಿನ್ನಿಸಲು ಪೂಸಿ ಮಾಡುವ ಸಲುವಾಗಿಯೋ, ಔಷಧಿ ಕುಡಿಸುವ ಸಲುವಾಗಿಯೋ ಅಥವಾ ತಾನು ಧಾರಾವಾಹಿ ನೋಡುವಾಗ ತೊಂದರೆ ಮಾಡದಿರಲೆಂದೋ ಪೋಷಕರು ಮೊಬೈಲ್‌ನಲ್ಲಿ ಯಾವುದಾದರೂ ವಿಡಿಯೊ ಹಾಕುವುದು ಸಾಮಾನ್ಯವಾಗಿಬಿಟ್ಟಿದೆ. ಮೊಬೈಲ್‌ಗೆ ಅಂಟಿಕೊಳ್ಳುವ ಮಗು ತಾಯಿಯ ಯಾವ ನಿರ್ದೇಶನ ಪಾಲಿಸಬೇಕಾದರೂ ಮೊಬೈಲ್ ಬೇಕೆಂದು ಹಟ ಮಾಡುತ್ತದೆ. ಇದರಿಂದಾಗಿ ಮಗುವಿನ ಬೆಳವಣಿಗೆ ಮೊಬೈಲ್‌ನ ಪರದೆಗೆ ಮಾತ್ರ ಸೀಮಿತವಾಗುತ್ತದೆ. ಅದರ ದೃಷ್ಟಿ ಹಾಳುಗುವುದರ ಜೊತೆಗೆ ಯೋಚನಾ ಶಕ್ತಿಯೂ ಕುಂಠಿತವಾಗುತ್ತದೆ.

ವಾಸ್ತವವಾಗಿ ಮಗು ಆಕರ್ಷಿತವಾಗುವುದು ಬಣ್ಣ, ಚಲನೆ ಹಾಗೂ ಸಂಗೀತಕ್ಕೆ. ಪ್ರಕೃತಿಯ ವೈವಿಧ್ಯತೆಯ ಮಡಿಲಲ್ಲಿ ಚಲನೆ, ಸಂಗೀತ, ಬಣ್ಣಗಳ ಸಂಯೋಜನೆಯನ್ನು ಮಗುವಿಗೆ ಊಡಿಸಲು, ಸಂಜೆ ಪ್ರಾಮ್‌ನಲ್ಲಿ ವಿಹಾರಕ್ಕೆ ಕರೆದೊಯ್ದರೆ ಅದರ ದೃಷ್ಟಿ ವ್ಯಾಪಕವಾಗುತ್ತದೆ. ತಾಯಿ ಮಗುವಿಗೆ ಹಾರುತ್ತಿರುವ ಹಸಿರು ಬಣ್ಣದ ಗಿಣಿಯನ್ನು ತೋರಿಸಿ ‘ಅಲ್ಲಿ ನೋಡು ಗಿಣಿ ಹಾರುತ್ತಿದೆ, ನಾಯಿ ಬೌ ಬೌ ಎನ್ನುತ್ತಿದೆ’ ಎಂದು ಹೇಳುತ್ತಿದ್ದರೆ, ಅರಳುತ್ತಿರುವ ಹೂವಿನ ಪರಿಮಳ, ಬಣ್ಣಕ್ಕೆ ಅದರ ಮನಸ್ಸನ್ನು ತೆರೆಸಿದರೆ, ಮಗುವಿನ ಗಮನ ತಕ್ಷಣಕ್ಕೆ ಅದರೆಡೆಗೆ ತಿರುಗುತ್ತದೆ. ಅದಕ್ಕೆ ಅರ್ಥವಾಗುವುದು ಮುಖ್ಯವಲ್ಲ. ಕೆಲವು ದಿನಗಳ ನಂತರ ಅದಕ್ಕೆ ಇನ್ನೊಂದು ಪಕ್ಷಿ ಅಥವಾ ಪ್ರಾಣಿ ಅಥವಾ ಹೂವಿನ ಪರಿಚಯವಾದಾಗ ಕುತೂಹಲ ಮೊಳೆಯುತ್ತದೆ. ಕುತೂಹಲ ಮೂಡಿಸುವುದು ಕಲಿಕೆಯ ಮೊದಲ ಮೆಟ್ಟಿಲು. 

ಕಲಿಕೆ ಎರಡು ಹಂತದಲ್ಲಿ ನಡೆಯುತ್ತದೆ. ಒಂದು ಮನಸ್ಸಿನಲ್ಲಿ ಅರ್ಥಾತ್ ಕಲ್ಪನೆಯಲ್ಲಿ, ಎರಡನೆಯದು ವಾಸ್ತವದಲ್ಲಿ. ಕಲ್ಪನೆಯಲ್ಲಿ ತಾರೆಗಳ ತೋಟದಲ್ಲಿ ವಿಹರಿಸಿ ಬಂದ ಮಗು ಅದರ ಸಾಕಾರಕ್ಕಾಗಿ ಹತ್ತು ಹಲವು ಸಂದಿಗ್ಧಗಳನ್ನು ಮನೆಯವರ ಮುಂದಿಡುತ್ತದೆ. ಅದರ ಯಾವುದೇ ಸಂದೇಹ, ಅನುಮಾನ ಅಥವಾ ಅನಿಸಿಕೆಗಳನ್ನು ಬೇಡದ, ಸಮಯ ಹಾಳು ಮಾಡುವ ಪ್ರಶ್ನೆಯೆಂದು ಅಲ್ಲಗಳೆಯದೆ, ಮಗುವಿನ ಅರಿವಿನ ವ್ಯಾಪ್ತಿಯಲ್ಲೇ ಅದಕ್ಕೆ ಸಮಂಜಸವಾದ ಉತ್ತರ ನೀಡಬೇಕು. ಇದು ಕಲಿಕೆಯ ಎರಡನೆಯ ಮೆಟ್ಟಿಲು. ಮಕ್ಕಳಿಗೆ ಕಥೆ ಹೇಳುವುದು ಕೂಡ ಇದರಲ್ಲಿ ಸೇರುತ್ತದೆ. ಅವುಗಳು ದಿನ ನಿತ್ಯ ನೋಡುವ, ಕೇಳುವ ವಸ್ತುಗಳನ್ನೊಳಗೊಂಡ ಕಥೆಗಳು ಮಕ್ಕಳ ಮನಸ್ಸಿಗೆ ನೇರವಾಗಿ ಇಳಿಯುತ್ತವೆ. ಅದರೊಂದಿಗೆ ಮೌಲ್ಯಗಳನ್ನು ಹೆಣೆಯುತ್ತಾ ಹೋಗಬೇಕು. ಮಕ್ಕಳಿಗೆ ಕಥೆ ಕೇಳುವುದು ಕಾತುರದಿಂದ ಕಾಯುವ ಸಂಗತಿಯಾಗಬೇಕು. ಕಥೆ ಮಗುವಿನ ಆಲಿಸುವ ಸಾಮರ್ಥ್ಯ ಹಾಗೂ ನೈತಿಕ ತಳಹದಿಯ ಮಜಲಾಗಬೇಕು.

ಮಕ್ಕಳಿಗೆ ಗೀಚುವುದು ಬಹಳ ಪ್ರಿಯವಾದ ಕೆಲಸ. ಮನೆಯ ಗೋಡೆಗಳೇ ಕಪ್ಪುಹಲಗೆ ಆಗುವುದು ಸರ್ವೇ ಸಾಮಾನ್ಯ. ಅದಕ್ಕೆ ಬದಲು ಮಗುವಿಗೆ ಕಾಗದ, ಬಣ್ಣದ ಪೆನ್ಸಿಲ್ ಕೊಟ್ಟು ಅದಕ್ಕೆ ಮನಬಂದಂತೆ ಗೀಚಲು ಬಿಡಬೇಕು. ನಂತರ ಅದನ್ನೇ ‘ನೀನು ಎಷ್ಟು ಚೆನ್ನಾಗಿ ಚಿತ್ರ ಬಿಡಿಸಿದ್ದೀಯ. ಇದು ಏನು?’ ಎಂದು ಕೇಳಿದರೆ ಅದರ ಅನಿಸಿಕೆ, ಕಲ್ಪನೆಯಂತೆ ಚಿತ್ರವನ್ನು ವಿವರಿಸುತ್ತದೆ. ಅದನ್ನೇ ಬಂಡವಾಳ ಮಾಡಿಕೊಂಡು ಅದನ್ನು ವಿಸ್ತರಿಸುವ ಪ್ರಯತ್ನ ಮನೆಯವರದ್ದಾಗಬೇಕು. ಇದು ಅಷ್ಟು ಸುಲಭವಲ್ಲ ಎನ್ನುವುದು ನಿಜವಾದರೂ ತಾಳ್ಮೆಯಿಂದ ಮಗುವಿನ ಜೊತೆ ಕುಳಿತು ಅದರೊಂದಿಗಿದ್ದರೆ ಅದರ ಆಲೋಚನೆ ನಿಖರವಾಗುತ್ತದೆ. ಇದು ಕಲಿಕೆಯ ಮೂರನೇ ಮೆಟ್ಟಿಲು.

ಹಿಂದೆ ಆಡುತ್ತಿದ್ದ ಜೂಟಾಟ, ಕುಂಟೆಬಿಲ್ಲೆ, ಲಗೋರಿ ಆಟಗಳು ಮರೆಯಾಗಿವೆ. ಈಗ ಏನಿದ್ದರೂ ಮಕ್ಕಳಿಗೆ ಮನರಂಜನೆ ಬೇಕಿದ್ದರೆ ವಿಡಿಯೊ ಗೇಮ್ಸ್ ಅಥವಾ ಯಾವುದಾದರೂ ಮಾಲ್‌ನಲ್ಲಿ ಸ್ವಲ್ಪ ಹೊತ್ತು ಜಾರುವ ಬಂಡೆ. ಮಕ್ಕಳಿಗೆ ತಂತಾನೇ ದೊರೆಯುತ್ತಿದ್ದ ವ್ಯಾಯಾಮ, ಆರೋಗ್ಯ, ದೇಹದಾರ್ಢ್ಯತೆ ಕಾಣೆಯಾಗುತ್ತಿದೆ. ಮಕ್ಕಳಿಗೆ ಸಂಜೆ ಬಯಲಿನಲ್ಲಿ ಆಟವಾಡಲು ಬಿಡುವುದು ಕಲಿಕೆಯ ನಾಲ್ಕನೇ ಮೆಟ್ಟಿಲು. ಏಕೆಂದರೆ ಮಕ್ಕಳಿಗೆ ಏಕಾಗ್ರತೆ, ಚುರುಕುತನ, ಸಹಜೀವನ ಕಲಿಸುವುದೇ ಆಟಗಳು.

ತಂದೆ ತಾಯಿಯರು ಮೊದಲು ಶಿಸ್ತನ್ನು ಪಾಲಿಸಿ ಮಕ್ಕಳಿಗೆ ಅದನ್ನು ಅನುಸರಿಸುವಂತೆ ಮಾಡುವುದು ಯಾವುದೇ ಕಲಿಕೆಗೂ ಪೂರಕ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)