ಬುಧವಾರ, ಏಪ್ರಿಲ್ 1, 2020
19 °C
ಶತಮಾನ ಪೂರೈಸಿರುವ ಮುನ್ಸಿಪಲ್‌ ಹೈಸ್ಕೂಲ್‌ : ಚಂಪಾರ ನೆಚ್ಚಿನ ಶಾಲೆ

ಓದಿಗೂ ಸೈ, ಕ್ರೀಡೆಗೂ ಜೈ

ಮಂಜುನಾಥ ಸಿ.ರಾಠೋಡ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಶತಮಾನ ಪೂರೈಸಿರುವ ನಗರದ ಮುನ್ಸಿಪಲ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯು ‘ಸ್ಮಾರ್ಟ್ ಶಾಲೆ’ ಎಂಬ ಹೆಗ್ಗಳಿಕೆ ಪಡೆದಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅಲ್ಲದೆ, ಗುಣಮಟ್ಟದ ಶಿಕ್ಷಣಕ್ಕೂ ಹಿರಿಮೆಯನ್ನು ಪಡೆದಿದೆ.

ಸಾಹಿತಿ ಚಂದ್ರಶೇಖರ ಪಾಟೀಲ ಅವರು 5 ರಿಂದ 10ನೇ ತರಗತಿಯವರೆಗೆ ತಮ್ಮ ಪ್ರಾಥಮಿಕ ಶಿಕ್ಷಣವನ್ನೂ ಇಲ್ಲೇ ಪೂರೈಸಿದ್ದಾರೆ. ಮಕ್ಕಳ ಸಾಹಿತ್ಯದ ಓದಿಗೆ 50ಕ್ಕೂ ಹೆಚ್ಚು ವಿವಿಧ ಪುಸ್ತಕವನ್ನು ನೀಡಿದ್ದಾರೆ ಎನ್ನುತ್ತಾರೆ ಶಿಕ್ಷಕರು.

ಶಾಲೆಯು 1892ರಂದು ಆರಂಭವಾಯಿತು.  ಆಗ ಸುಮಾರು 128 ಮಕ್ಕಳು ದಾಖಲಾಗಿದ್ದರು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿಯೂ ಪ್ರತಿ ವರ್ಷ ವಿದ್ಯಾರ್ಥಿಗಳು ಶಾಲೆಗೆ ಉತ್ತಮ ಫಲಿತಾಂಶ ತಂದು ಕೊಡುತ್ತಿದ್ದಾರೆ ಎನ್ನುತ್ತಾರೆ ಮುಖ್ಯಶಿಕ್ಷಕಿ ಶೋಭಾ ಜಾಗಟಗೇರಿ.

ಈ ಶಾಲೆಯು ನಗರಸಭೆ ಆಡಳಿತಕ್ಕೆ ಒಳಪಡುತ್ತಿದ್ದು, ದಾನಿಗಳು ಸಹ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಡೆಸ್ಕ್‌ಗಳನ್ನು ನೀಡಿದ್ದಾರೆ. ಶಾಲೆ ಆವರಣಕ್ಕೆ ನಗರ ಸಭೆಯಿಂದ ಪೇವರ್ಸ್‌, ಶೌಚಾಲಯಗಳ ನಿರ್ಮಾಣ ಸೇರಿದಂತೆ ಕೊಳವೆ ಬಾವಿಯನ್ನೂ ಹಾಕಿಸಿ ನೀರಿನ ಸೌಕರ್ಯಗಳನ್ನು ಒದಗಿಸಿದ್ದಾರೆ. ಅಲ್ಲದೆ ಶಾಲೆಯ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಪ್ರಭಾಕರ್ ‌ಮಂಗಳೂರ ಅವರು ವಿದ್ಯಾರ್ಥಿಗಳ ಏಳಿಗೆಗೆ ₹1 ಲಕ್ಷ ನೀಡಿ ಶಾಲೆಗೆ ಬೆನ್ನೆಲುಬಾಗಿದ್ದಾರೆ ಎಂದು ಶೋಭಾ ವಿವರಿಸಿದರು.

ಹಿಂದಿನ ವರ್ಷ ಇನ್‌ಸ್ಪೈರ್ ಅವಾರ್ಡ್‌ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಮಕ್ಕಳು ಆಯ್ಕೆಯಾಗಿದ್ದರು. ಈ ವರ್ಷವೂ ಉತ್ತಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದಾರೆ. ವಾಲಿಬಾಲ್, ಕಬಡ್ಡಿ, ಕೊಕ್ಕೊ ಆಟ ಸೇರಿದಂತೆ ಗುಂಡು ಎಸೆತ, ಓಟ, ಎತ್ತರ ಹಾಗೂ ಉದ್ದ ಜಿಗಿತದಲ್ಲಿಯೂ ಬಹುಮಾನವನ್ನು ಪಡೆದಿದ್ದಾರೆ ಎಂದು ವಿಜ್ಞಾನ ಶಿಕ್ಷಕಿ ಎನ್.ಪಿ.ವಿದ್ಯಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ಯತ್ನಳ್ಳಿ ಹೇಳಿದರು.

ಶಾಲೆಯ ನಂಟು ಬಿಡದ ಚಂಪಾ:

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಇಲ್ಲಿಯೇ ಪೂರೈಸಿದರು. ಆ ಬಳಿಕ ಆಗಾಗ ಶಾಲೆಗೆ ಭೇಟಿ ನೀಡುತ್ತಾರೆ. 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರನ್ನು ಶಾಲೆಗೆ ಕರೆಸಿ ಸನ್ಮಾನಿಸಲಾಗಿತ್ತು ಎಂದು ಮುಖ್ಯಶಿಕ್ಷಕಿ ಶೋಭಾ ಜಾಗಟಗೇರಿ ನೆನಪಿಸಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು