ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಐ: ಕೌಶಲ, ವ್ಯಾಸಂಗದ ಸಮ್ಮಿಲನ

Last Updated 7 ಮೇ 2019, 19:30 IST
ಅಕ್ಷರ ಗಾತ್ರ

ದೇಶದ ಆರ್ಥಿಕ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಕೈಗಾರಿಕಾ ಕ್ಷೇತ್ರದಲ್ಲಿ ಐಟಿಐ ಓದಿದವರಿಗೆ ಹೆಚ್ಚಿನ ಉದ್ಯೋಗಾವಕಾಶಗಳಿವೆ. ಕೈಗಾರಿಕಾ ಕೌಶಲ, ವೃತ್ತಿ ಕೌಶಲಗಳನ್ನು ಕಲಿತು ಬದುಕು ಕಟ್ಟಿಕೊಳ್ಳಲು ಯುವ ಸಮುದಾಯ ಆಸಕ್ತಿ ತೋರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲಾಭಿವೃದ್ಧಿಗೆ ಒತ್ತು ನೀಡಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವುದು ಯುವ ಸಮುದಾಯಕ್ಕೆ ವರದಾನವಾಗಿದೆ.

ದೇಶದಲ್ಲಿ 1951ರಲ್ಲಿ ಡಿಪಾರ್ಟ್‌ಮೆಂಟ್‌ ಜನರಲ್ ಆಫ್ ಟ್ರೈನಿಂಗ್ (ಡಿಜಿಟಿ) ಆರಂಭವಾಯಿತು. ಅದು ಕೈಗಾರಿಕೆಗಳಿಗೆ ಕೌಶಲಭರಿತ ಮಾನವ ಸಂಪನ್ಮೂಲ ಒದಗಿಸುವ ಉದ್ದೇಶವನ್ನು ಹೊಂದಿ, ದೇಶದಾದ್ಯಂತ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳ ಆರಂಭಕ್ಕೆ ಮುನ್ನುಡಿ ಬರೆಯಿತು.

ಸದ್ಯ ದೇಶದಾದ್ಯಂತ 15,144 ಐಟಿಐಗಳಿವೆ. ಅವುಗಳಲ್ಲಿ 2289 ಸರ್ಕಾರಿ ಐಟಿಐಗಳಾದರೆ, ಉಳಿದವರು ಖಾಸಗಿಯವು. ದೇಶದಾದ್ಯಂತ ಪ್ರತಿ ವರ್ಷ ಸುಮಾರು 16 ಲಕ್ಷ ವಿದ್ಯಾರ್ಥಿಗಳು ಐಟಿಐ ತರಬೇತಿ ಪಡೆಯುತ್ತಿದ್ದಾರೆ.

ಕರ್ನಾಟಕದಲ್ಲಿ 1,552 ಐಟಿಐಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ 258 ಸರ್ಕಾರಿ, 198 ಅನುದಾನಿತ ಸಂಸ್ಥೆಗಳಾಗಿವೆ. ಉಳಿದವು ಖಾಸಗಿ ಐಟಿಐಗಳು. ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 82 ಸಾವಿರ ವಿದ್ಯಾರ್ಥಿಗಳು ಐಟಿಐ ತರಬೇತಿ ಪಡೆಯುತ್ತಿದ್ದಾರೆ.

126 ಬಗೆಯ ಕೋರ್ಸ್‌ (ಟ್ರೇಡ್‍)ಗಳು

ಐಟಿಐನಲ್ಲಿ ವೆಲ್ಡಿಂಗ್, ಫಿಟ್ಟರ್, ಎಲೆಕ್ಟ್ರಾನಿಕ್, ಮೆಕ್ಯಾನಿಕ್, ಏರ್ ಕಂಡಿಷನ್ ಸೇರಿದಂತೆ 126 ಬಗೆಯ ಟ್ರೇಡ್‍ಗಳಿವೆ. ಇವುಗಳಲ್ಲಿ 76 ಎಂಜಿನಿಯರಿಂಗ್ ಟ್ರೇಡ್‍ಗಳಾಗಿದ್ದರೆ, 48 ನಾನ್ ಎಂಜಿನಿಯರಿಂಗ್ ಟ್ರೇಡ್‍ಗಳು. ನಾನ್ ಎಂಜಿನಿಯರಿಂಗ್ ಟ್ರೇಡ್‍ನಲ್ಲಿ ಮುಖ್ಯವಾಗಿ ಸರ್ವೆ, ಡ್ರಾಯಿಂಗ್, ಕ್ರಾಫ್ಟ್, ಕಾರ್ಪೆಂಟರಿ ಸೇರಿದಂತೆ ಹಲವು ಕಸುಬುಗಳ ತರಬೇತಿ ಇರುತ್ತವೆ. ಇವೇ ಅಲ್ಲದೆ ಅಂಗವಿಕಲರಿಗಾಗಿಯೇ ಐದು ಟ್ರೇಡ್‍ಗಳೂ ಇವೆ.

ವಾರ್ಷಿಕ, ದ್ವೈವಾರ್ಷಿಕ ಕೋರ್ಸ್‌ಗಳು

ಐಟಿಐನಲ್ಲಿ ಒಂದು ವರ್ಷ ಮತ್ತು ಎರಡು ವರ್ಷದ ಪ್ರತ್ಯೇಕ ಕೋರ್ಸ್‌ಗಳಿರುತ್ತವೆ. ಜತೆಗೆ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಕೂಡ ಇರುತ್ತದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವವರು ಐಟಿಐನ ಒಂದು ಮತ್ತು ಎರಡು ವರ್ಷದ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು. ಈ ಮೊದಲು 10ನೇ ತರಗತಿ ಫೇಲ್ ಆದವರಿಗೆ ಒಂದು ವರ್ಷದ ಐಟಿಐ ಕೋರ್ಸ್ ಪ್ರವೇಶಿಸಲು ಅವಕಾಶ ಇತ್ತು. ಆದರೆ ಆ ಸೌಲಭ್ಯವನ್ನೀಗ ನಿಲ್ಲಿಸಲಾಗಿದೆ. ಆದರೆ ಮೂರು ತಿಂಗಳು, ಆರು ತಿಂಗಳ ಕೆಲವು ವೃತ್ತಿಯಾಧಾರಿತ ಕೌಶಲ ತರಬೇತಿಗಳಿಗೆ ಅವರು ಪ್ರವೇಶ ಪಡೆಯಬಹುದು.

ದೇಶದಾದ್ಯಂತ 2013ರಿಂದ ಐಟಿಐಗೆ ಸೆಮಿಸ್ಟರ್ ವ್ಯವಸ್ಥೆ ಜಾರಿಗೆ ತರಲಾಯಿತು. ಒಂದು ವರ್ಷದ ಐಟಿಐಗೆ ಎರಡು ಸೆಮಿಸ್ಟರ್, ಎರಡು ವರ್ಷದ ಐಟಿಐಗೆ ನಾಲ್ಕು ಸೆಮಿಸ್ಟರ್‌ಗಳು ಇದ್ದವು. ಆದರೆ 2018ನೇ ಸಾಲಿನಿಂದ ಸರ್ಕಾರ ಐಟಿಐಗೆ ಸೆಮಿಸ್ಟರ್ ವ್ಯವಸ್ಥೆಯನ್ನು ಬದಲಿಸಿ, ಮೊದಲು ಜಾರಿಯಲ್ಲಿದ್ದ ವಾರ್ಷಿಕ ಪರೀಕ್ಷಾ ವಿಧಾನವನ್ನೇ ಅನುಷ್ಠಾನಗೊಳಿಸಿದೆ. ಅದರ ಜತೆಗೆ ಈ ವರ್ಷದಿಂದ ಆನ್‍ಲೈನ್ ಪರೀಕ್ಷಾ ವ್ಯವಸ್ಥೆಯನ್ನೂ ಸರ್ಕಾರ ಅಳವಡಿಸಿದೆ. ಈ ವರ್ಷದ ಜೂನ್ 10ರಿಂದ ಆರಂಭವಾಗುವ ಐಟಿಐ ಪರೀಕ್ಷೆ ಆನ್‍ಲೈನ್ ವಿಧಾನದಲ್ಲಿಯೇ ನಡೆಯಲಿದೆ.

ಸಂಸ್ಥೆಗಳಿಗೆ ಮಾನ್ಯತೆ ಮುಖ್ಯ

ಐಟಿಐ ಪ್ರವೇಶಿಸುವ ವಿದ್ಯಾರ್ಥಿಗಳು ಮೊದಲಿಗೆ ಐಟಿಐ ಸಂಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕು. ಈ ಸಂಸ್ಥೆಗಳು ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ (ಎನ್‍ಸಿವಿಟಿ) ಅಥವಾ ರಾಜ್ಯ ವೃತ್ತಿಪರ ತರಬೇತಿ ಮಂಡಳಿಯಿಂದ (ಎಸ್‍ಸಿವಿಟಿ) ಮಾನ್ಯತೆ ಪಡೆದಿವೆಯಾ ಎಂಬುದನ್ನು ಪರಿಶೀಲಿಸಿಕೊಂಡು ಪ್ರವೇಶ ಪಡೆಯುವುದು ಉತ್ತಮ.

ಉನ್ನತ ವ್ಯಾಸಂಗಕ್ಕೂ ಅವಕಾಶ

ಐಟಿಐ ಕೋರ್ಸ್ ಅನ್ನು ಪಿಯುಸಿಗೆ ಸಮಾನ ಎಂದು ಸರ್ಕಾರ ಪರಿಗಣಿಸಿದೆ. ಇದರಿಂದಾಗಿ ಎರಡು ವರ್ಷದ ಐಟಿಐ ಕೋರ್ಸ್ ಪೂರ್ಣಗೊಳಿಸಿದವರು ಬಿ.ಎ, ಬಿ.ಕಾಂ, ಬಿ.ಸಿ.ಎ, ಬಿ.ಬಿ.ಎ ಕೋರ್ಸ್‌ಗಳ ಪ್ರವೇಶ ಪಡೆದು ಉನ್ನತ ಶಿಕ್ಷಣ ಪ್ರವೇಶಿಸಬಹುದು. ಒಂದು ವೇಳೆ ಉನ್ನತ ಶಿಕ್ಷಣದಲ್ಲಿ ಯಶಸ್ಸು ಸಿಗದಿದ್ದರೆ, ಐಟಿಐನಲ್ಲಿ ಕಲಿತಿರುವ ಕೈಗಾರಿಕಾ ಕೌಶಲ ಅವರನ್ನು ಕೈ ಹಿಡಿದು ಕಾಪಾಡುತ್ತದೆ. ಸ್ವಂತ ಉದ್ಯೋಗ ಕೈಗೊಳ್ಳಬಹುದು. ಸರ್ಕಾರಿ ಮತ್ತು ಖಾಸಗಿ ಉದ್ಯಮ ಕ್ಷೇತ್ರದಲ್ಲಿಯೂ ಹೇರಳ ಉದ್ಯೋಗಾವಕಾಶಗಳು ಇವೆ.

ತಾಂತ್ರಿಕ ಶಿಕ್ಷಣ ಮುಂದುವರಿಸಲು ಐಟಿಐ ವಿದ್ಯಾರ್ಥಿಗಳಿಗೆ ಅವಕಾಶ ಇದೆ. ಎರಡು ವರ್ಷದ ಐಟಿಐ ಪೂರ್ಣಗೊಳಿಸಿದವರು ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೊಮ ಎರಡನೇ ವರ್ಷಕ್ಕೆ ನೇರವಾಗಿ ಪ್ರವೇಶ ಪಡೆಯಬಹುದು. ಅಂತೆಯೇ ಡಿಪ್ಲೊಮ ನಂತರ ಲ್ಯಾಟರಲ್ ಎಂಟ್ರಿ ಮೂಲಕ ಬಿ.ಇ ಪ್ರವೇಶಿಸಬಹುದು. ಬಳಿಕ ಎಂ.ಇ, ಎಂ.ಟೆಕ್ ಪದವಿ ವ್ಯಾಸಂಗಕ್ಕೂ ಅವಕಾಶಗಳಿವೆ.

ಎಲ್ಲೆಲ್ಲಿ ಉದ್ಯೋಗಾವಕಾಶ?

ರಕ್ಷಣಾ ಇಲಾಖೆ, ರೈಲ್ವೆ, ವಿದ್ಯುತ್ ಸರಬರಾಜು ಕಂಪನಿ, ಬಿಎಂಆರ್‌ಸಿಎಲ್‌, ಬಿಇಎಂಎಲ್, ಎಚ್‍ಎಎಲ್, ಎನ್‍ಎಎಲ್, ಇಸ್ರೊ, ಬಿಎಚ್‍ಇಎಲ್‍ಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ. ಜತೆಗೆ ವಾಹನ ತಯಾರಿಕೆ, ವಾಹನಗಳ ಬಿಡಿಭಾಗಗಳ ತಯಾರಿಕಾ ಕಂಪನಿ, ವಾಹನ ಜೋಡಿಸುವ ಕಂಪನಿಗಳೂ ಸೇರಿದಂತೆ ಆಟೊಮೊಬೈಲ್, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ ಕ್ಷೇತ್ರದ ಕೈಗಾರಿಕೆಗಳಲ್ಲಿ ಹೇರಳ ಉದ್ಯೋಗಾವಕಾಶಗಳು ಇರುತ್ತವೆ. ಪೊಲೀಸ್ ಕಾನ್‍ಸ್ಟೆಬಲ್ ಹುದ್ದೆಗೂ ಇವರು ಅರ್ಜಿ ಸಲ್ಲಿಸಲು ಅವಕಾಶ ಇದೆ.

ಅಲ್ಲದೆ ವೆಲ್ಡಿಂಗ್, ಬೈಕ್ ರಿಪೇರಿ, ಲೇಥ್, ನೆಟ್ಟು ಬೋಲ್ಟ್ ಅಂಗಡಿ ಸೇರಿದಂತೆ ವಿವಿಧ ಬಗೆಯ ಆಟೊಮೊಬೈಲ್ ಅಂಗಡಿಗಳನ್ನು ಇಟ್ಟುಕೊಂಡು ಸ್ವಯಂ ಉದ್ಯೋಗ ಕಂಡುಕೊಳ್ಳಲೂಬಹುದು.

ಸರ್ಕಾರದಿಂದ ಟೂಲ್ ಕಿಟ್ ವಿತರಣೆ

2015ನೇ ಸಾಲಿನಿಂದ ಐಟಿಐ ತರಬೇತಿ ಪಡೆಯುತ್ತಿರುವ ಎಸ್.ಸಿ., ಎಸ್.ಟಿ. ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯು ಎಸ್‍ಟಿಪಿ ಕಾರ್ಯಕ್ರಮದಡಿ ಪುಸ್ತಕ, ಸಮವಸ್ತ್ರ, ಟೂಲ್ ಕಿಟ್, ಲ್ಯಾಪ್‍ಟಾಪ್ ಅನ್ನು ಉಚಿತವಾಗಿ ವಿತರಿಸುತ್ತಿದೆ.

***

ಬೇಡಿಕೆ ಇರುವ ಐಟಿಐ ಕೋರ್ಸ್‍ಗಳು

ಎರಡು ವರ್ಷದ ಕೋರ್ಸ್‌ಗಳು: ಫಿಟ್ಟರ್, ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್, ಮೆಕ್ಯಾನಿಕ್, ಟರ್ನರ್, ರೆಫ್ರಿಜರೇಷನ್- ಏರ್ ಕಂಡೀಷನ್ ವರ್ಕ್, ಡ್ರಾಫ್ಟ್ಸ್‌ಮೆನ್‌ ಸಿವಿಲ್, ಡ್ರಾಫ್ಟ್ಸ್‌ಮೆನ್‌ ಮೆಕ್ಯಾನಿಕಲ್, ರೇಡಿಯೊ- ಟಿ.ವಿ ಟೆಕ್ನೀಷಿಯನ್, ವೈರ್‌ಮೆನ್‌ ಸೇರಿದಂತೆ ಹಲವು ಟ್ರೇಡ್‍ಗಳಿವೆ.

ಒಂದು ವರ್ಷದ ಕೋರ್ಸ್‌ಗಳು: ಆಟೊ ಎಲೆಕ್ಟ್ರೀಷಿಯನ್, ಕಾರ್ಪೆಂಟರ್, ಮೆಕ್ಯಾನಿಕ್ ಡಿಸೆಲ್, ಪ್ಲಂಬರ್, ಶೀಟ್ ಮೆಟಲ್ ವರ್ಕ್, ಸ್ಟೀಲ್ ಫ್ಯಾಬ್ರಿಕೇಟರ್, ಕಂಪ್ಯೂಟರ್, ಹಾರ್ಡ್‍ವೇರ್, ಸ್ಕೂಟರ್ ಅಂಡ್ ಆಟೊ ಮೆಕ್ಯಾನಿಕ್ ಸೇರಿದಂತೆ ಹಲವು ಟ್ರೇಡ್‍ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT