ಗುರುವಾರ , ಆಗಸ್ಟ್ 11, 2022
21 °C

ಗಣಿತ, ವಿಜ್ಞಾನ ಶಿಕ್ಷಕರ ಕೊರತೆಯೇಕೆ?

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

ಕರ್ನಾಟಕದ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ಶಿಕ್ಷಕರ ಕೊರತೆ ತೀವ್ರವಾಗಿದೆ. ಬಹುತೇಕ ಈ ಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ಈ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಗ್ರಾಮೀಣ ಭಾಗದ ಹಲವು ಶಾಲೆಗಳಲ್ಲಿ ಈ ವಿಷಯಗಳಿಗೆ ಅತಿಥಿ ಶಿಕ್ಷಕರೂ ಇಲ್ಲ!

ರಾಜ್ಯ ಸರ್ಕಾರ 2017ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಂದ ಬದಲಾವಣೆಯ ಪರಿಣಾಮ ಇದು ಎನ್ನುತ್ತಾರೆ ಶಿಕ್ಷಕರು.

ಮೊದಲು 1ರಿಂದ 7ನೇ ತರಗತಿಯವರೆಗೆ ಟಿ.ಸಿ.ಎಚ್‌ ಅಥವಾ ಡಿ.ಇಡಿ ಆದ ಶಿಕ್ಷಕರೇ ಬೋಧಿಸುತ್ತಿದ್ದರು. 2017ರಲ್ಲಿ ಸರ್ಕಾರ 6ರಿಂದ 8ನೇ ತರಗತಿಯ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ (ಜಿಪಿಟಿ) ಎಂದು ಉಲ್ಲೇಖಿಸಿ, ಬೋಧನಾ ವಿಷಯದಲ್ಲಿ ಪದವಿಯ ಜತೆಗೆ ಬಿ.ಇಡಿ ಅಥವಾ ಡಿ.ಇಡಿ ಕೋರ್ಸ್‌ ಓದಿದವರನ್ನು ಈ ಹುದ್ದೆಗೆ ಅರ್ಹರೆಂದಿತು.

ಪದವಿಯಲ್ಲಿ ಗಣಿತ ವಿಷಯದೊಂದಿಗೆ ಭೌತವಿಜ್ಞಾನ, ರಸಾಯನ ವಿಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಅಧ್ಯಯನ ಮಾಡಿರುವವರಿಗೆ ಅವಕಾಶ ಕಲ್ಪಿಸಲಾಯಿತು. ಈ ನಿಯಮವು ಬಿ.ಎಸ್ಸಿಯಲ್ಲಿ ಗಣಿತದೊಂದಿಗೆ ಕಾಂಬಿನೇಷನ್‌ ಹೊಂದಿರುವ ಪಿಸಿಎಂ (ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ) ಅಭ್ಯರ್ಥಿಗಳಿಗಷ್ಟೇ ಅನುಕೂಲವಾಯಿತು (ಪಿಸಿಎಂ ಬಿಟ್ಟು ಹೆಚ್ಚಿನ ಸಂಯೋಜನೆಯಲ್ಲಿ ಗಣಿತ ಇಲ್ಲ ಎಂಬುದು ಇದಕ್ಕೆ ಕಾರಣ). ಉಳಿದಂತೆ ಬಿ.ಎಸ್ಸಿಯಲ್ಲಿ ರಸಾಯನ ವಿಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ (ಸಿಬಿಜಡ್‌) ಕಲಿತವರೂ ಸೇರಿದಂತೆ ಇತರ ಬಿ.ಎಸ್ಸಿ ಪದವಿ ಹೊಂದಿರುವವರು ಅವಕಾಶ ವಂಚಿತರಾದರು. 

ಸಿಬಿಜಡ್‌ ಅಲ್ಲದ ಇತರ ಸಂಯೋಜನೆಯಲ್ಲಿ ಬಿ.ಎಸ್ಸಿ ಪದವಿ ಪಡೆದು, ಬಿ.ಇಡಿಯಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಐಚ್ಛಿಕವಾಗಿ ಅಧ್ಯಯನ ಮಾಡಿ, ಬಳಿಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ತೇರ್ಗಡೆ ಆಗಿದ್ದವರೂ ಈ ಶಿಕ್ಷಕ ಹುದ್ದೆಗಳಿಗೆ ಅರ್ಹರಲ್ಲದಂತಾಯಿತು. 

ಕೊರತೆಯ ನಿದರ್ಶನ: ರಾಮನಗರ ಜಿಲ್ಲೆಯಲ್ಲಿ 2017–18ರಲ್ಲಿ ವಿಜ್ಞಾನ, ಗಣಿತ ವಿಷಯಗಳ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 64 ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗಿತ್ತು. ಆದರೆ ಕೇವಲ 10 ಹುದ್ದೆಗಳು ಭರ್ತಿಯಾದವು. 2019ರಲ್ಲಿ ಪುನಃ ನಡೆದ ನೇಮಕಾತಿಯಲ್ಲಿ ಭರ್ತಿಯಾದದ್ದು ಕೇವಲ ಎರಡು ಹುದ್ದೆಗಳು! ಅದೇ ರೀತಿ ಮಂಡ್ಯ ಜಿಲ್ಲೆಯಲ್ಲಿ 2017ರಲ್ಲಿ 158 ಶಿಕ್ಷಕ ಹುದ್ದೆಗಳ ಪೈಕಿ ಭರ್ತಿಯಾಗಿದ್ದು 37 ಮಾತ್ರ. 2019ರಲ್ಲಿ 130 ಹುದ್ದೆಗಳ ಪೈಕಿ ಭರ್ತಿಯಾದದ್ದು ಒಂದು ಮಾತ್ರ! ಇದೇ ಸ್ಥಿತಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿದೆ.

ರಾಜ್ಯದಲ್ಲಿ 2017–18ನೇ ಸಾಲಿನಲ್ಲಿ ಒಟ್ಟಾರೆ 10 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಭಾಷೆ, ಸಮಾಜ ವಿಜ್ಞಾನ, ಗಣಿತ, ವಿಜ್ಞಾನ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅದರಲ್ಲಿ ಭರ್ತಿಯಾಗಿದ್ದು 3,389 ಹುದ್ದೆಗಳಷ್ಟೆ. 2018–19ರಲ್ಲಿ 10,611 ಹುದ್ದೆಗಳ ಪೈಕಿ ನೇಮಕವಾದದ್ದು 1,994 ಮಾತ್ರ. ಈ ಎರಡೂ ಪ್ರಕ್ರಿಯೆಯಲ್ಲಿ ವಿಜ್ಞಾನ, ಗಣಿತ ಶಿಕ್ಷಕರು ನೇಮಕವಾದದ್ದು ಶೇ 10ರಷ್ಟು ಮಾತ್ರ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಸಾಮಾನ್ಯವಾಗಿ ಸರ್ಕಾರಿ ಕೆಲಸ ಎಂದರೆ ಪೈಪೋಟಿ ಹೆಚ್ಚು. ಆದರೆ ರಾಜ್ಯದಲ್ಲಿ 6ರಿಂದ 8ನೇ ತರಗತಿಯ ಶಿಕ್ಷಕರ (ಗಣಿತ, ವಿಜ್ಞಾನ) ನೇಮಕಾತಿ ಇದಕ್ಕೆ ಅಪವಾದ. ಪರಿಷ್ಕರಿಸಿದ ನಿಯಮಾವಳಿಗಳಿಂದಾಗಿ ಬಿ.ಎಸ್ಸಿ, ಬಿ.ಇಡಿ (ಪಿಸಿಎಂ ಹೊರತುಪಡಿಸಿ) ಪದವೀಧರರು ಉದ್ಯೋಗ ವಂಚಿತರಾಗಿದ್ದಾರೆ. ವಿಪರ್ಯಾಸ ಎಂದರೆ ಕಾಯಂ ಕೆಲಸಕ್ಕೆ ಅನರ್ಹರಾದ ಈ ಅಭ್ಯರ್ಥಿಗಳು ಅದೇ ವಿಷಯವನ್ನು ಅತಿಥಿ ಶಿಕ್ಷಕರಾಗಿ ಬೋಧಿಸಲು ಅರ್ಹರಾಗಿದ್ದಾರೆ!

ಬಿ.ಎಸ್ಸಿ (ಸಿಬಿಜಡ್)‌ ಪದವೀಧರರು, ಟಿಇಟಿ ಆಗದವರೂ ಹಲವು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ತಿಂಗಳಿಗೆ ₹7,500ಕ್ಕಿಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ಕ್ಲಸ್ಟರ್‌ವೊಂದರ ಸಿಆರ್‌ಪಿ.

ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ: ಆದರೆ, ಸಮಾಜ ವಿಜ್ಞಾನ ವಿಷಯದಲ್ಲಿ ಈ ರೀತಿಯ ನಿಯಮವಿಲ್ಲ. ಪಿಯುಸಿ, ಪದವಿ ಮತ್ತು ಬಿ.ಇಡಿಯಲ್ಲಿ ಭೂಗೋಳ ವಿಜ್ಞಾನವನ್ನು ಓದದವರು 6ರಿಂದ 8ನೇ ತರಗತಿಗೆ ಸಮಾಜ ವಿಜ್ಞಾನ ವಿಷಯದಲ್ಲಿನ ಭೂಗೋಳ ವಿಜ್ಞಾನ ಬೋಧಿಸುತ್ತಾರೆ. ಆದರೆ ಬಿ.ಎಸ್ಸಿ ಪದವೀಧರರಿಗೆ ಇಂತಹ ಅವಕಾಶವಿಲ್ಲ ಎಂದು ಆರೋಪಿಸುತ್ತಾರೆ ಮಾಧ್ಯಮಿಕ ಶಿಕ್ಷಕ ಸಂಘದ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿ.ವಿ.ಜಯಣ್ಣ.

‘ಈ ವಿಷಯವನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದೆವು. ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತಂದು ಸಿಬಿಜಡ್‌ ನವರಿಗೂ ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳಲ್ಲಿ ಎಂಜಿನಿಯರಿಂಗ್‌ ಪದವೀಧರರಿಗೂ ಬಿ.ಇಡಿ ಬಳಿಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು ಅವಕಾಶ ಕಲ್ಪಿಸಲಾಗಿದೆ. ಅದೇ ನಿಯಮವನ್ನು ರಾಜ್ಯದಲ್ಲೂ ಅನುಸರಿಸಲು ಸರ್ಕಾರ ಮುಂದಾದಂತಿದೆ. ಈ ಪ್ರಯತ್ನದಿಂದಾದರೂ ಗ್ರಾಮೀಣ ಶಾಲೆಗಳಿಗೆ ಗಣಿತ, ವಿಜ್ಞಾನ ಶಿಕ್ಷಕರು ಬರುವಂತಾಗಲಿ’ ಎನ್ನುತ್ತಾರೆ ಅವರು.

ಟಿಇಟಿಯಲ್ಲೇ ‘ಫಿಲ್ಟರ್‌’
ರಾಜ್ಯದಲ್ಲಿ ಶಿಕ್ಷಕರಾಗಲು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಅರ್ಹತೆ ಪಡೆಯಬೇಕು. ಬಳಿಕ ಅವರು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಯ್ಕೆ ಆಗಬೇಕು. ಆದರೆ ಟಿಇಟಿಯಲ್ಲಿ ಅರ್ಹತೆ ಪಡೆಯುವವರೇ ಕಡಿಮೆ. ಕಳೆದ ವರ್ಷ ಟಿಇಟಿ ಬರೆದ 2.03 ಲಕ್ಷ ಅಭ್ಯರ್ಥಿಗಳ ಪೈಕಿ ಅರ್ಹತೆ ಪಡೆದವರು 7,890 (ಶೇ 3.93). 2018ರಲ್ಲಿ ಶೇ 12.62 ಹಾಗೂ 2016ರಲ್ಲಿ ಶೇ 5.6ರಷ್ಟು ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದಿದ್ದರು. ವಿಜ್ಞಾನ, ಗಣಿತ ವಿಷಯದಲ್ಲಿ ಅರ್ಹತೆ ಪಡೆದವರ ಪ್ರಮಾಣ ಇನ್ನೂ ಕಡಿಮೆ. ಈ ಕೊರತೆಯನ್ನು ಎಂಜಿನಿಯರಿಂಗ್‌ ಪದವೀಧರರು ನೀಗಿಸುತ್ತಾರೆಯೇ ಎಂಬುದನ್ನು ಹೊಸ ನಿಯಮಗಳು ಜಾರಿಯಾದ ನಂತರ ಕಾದು ನೋಡಬೇಕು.

ನೇಮಕಾತಿ ಮಾಡಿ
ಹೊಸ ನಿಯಮಗಳನ್ನು ಬೇಗ ಅಂತಿಮಗೊಳಿಸಿ, ಶೀಘ್ರವೇ ನೇಮಕಾತಿ ಮಾಡಿಕೊಳ್ಳಿ. ಇದರಿಂದ ಸಿಬಿಜಡ್‌ ಮತ್ತು ಇತರ ಕಾಂಬಿನೇಷನ್‌ಗಳಲ್ಲಿ ಬಿ.ಎಸ್ಸಿ ಪದವಿ ಪಡೆದು, ಬಿ.ಇಡಿ, ಟಿಇಟಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ. ಎಂಜಿನಿಯರಿಂಗ್‌ ಪದವೀಧರರು ಬಿ.ಇಡಿ ಅಥವಾ ಡಿ.ಇಡಿ ಪೂರೈಸಲು ಎರಡು ವರ್ಷಗಳು ಬೇಕಾಗುತ್ತವೆ. ಬಳಿಕ ಅವರು ಟಿಇಟಿ ಅರ್ಹತೆ ಪಡೆಯಬೇಕು. ಅಷ್ಟರೊಳಗೆ ನಮಗೆ ಅವಕಾಶ ಕಲ್ಪಿಸಿಕೊಡಿ ಎಂಬುದು ಶಿಕ್ಷಕ ಹುದ್ದೆಯ ಆಕಾಂಕ್ಷಿ ಬೆಂಗಳೂರಿನ ದಿವ್ಯಾ ಅವರ ಮನವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು