ಬುಧವಾರ, ಡಿಸೆಂಬರ್ 8, 2021
18 °C

ಪ್ರಾಮಾಣಿಕತೆಯ ರೂಪ ಲಾಲ್‌ ಬಹದ್ದೂರ್‌ ಶಾಸ್ತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


ಅಕ್ಟೋಬರ್‌ 2ರಂದು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮದಿನವೂ ಹೌದು. ತಾವು ನಂಬಿದ ತತ್ವಾದರ್ಶಗಳಿಗಾಗಿಯೇ ಬದುಕನ್ನು ಗಂಧದ ಕೊರಡಿನಂತೆ ತೇಯ್ದ ಶಾಸ್ತ್ರಿ ಅವರು ದೇಶದ ಎರಡನೇ ಪ್ರಧಾನಿಯಾಗಿ ಗಮನ ಸೇವೆ ಸಲ್ಲಿಸಿದರು. ಹೊಟ್ಟೆಗೆ ಅನ್ನ ನೀಡುವ ರೈತ, ದೇಶ ಕಾಯುವ ಯೋಧರಿಬ್ಬರೂ ದೇಶದ ಬೆನ್ನೆಲಬು ಎಂದು ನಂಬಿಕೊಂಡಿದ್ದ ಅವರ ‘ಜೈ ಜವಾನ್‌, ಜೈ ಕಿಸಾನ್‌’ ಘೋಷಣೆ ಪ್ರಸಿದ್ಧಿ ಪಡೆದಿತ್ತು. ಅವರ ಬಗ್ಗೆ ಕೆಲವು ಅಪರೂಪದ ಸಂಗತಿಗಳು ಇಲ್ಲಿವೆ. 

* ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದ ‌ ಲಾಲ್‌ ಬಹದ್ದೂರ್‌  ಶಾಸ್ತ್ರಿ ಜಾತಿವ್ಯವಸ್ಥೆಯು ಸಮಾಜದಲ್ಲಿ ಒಡಕು ಉಂಟುಮಾಡುತ್ತದೆ ಎಂದು ಬಲವಾಗಿ ನಂಬಿದ್ದರು. ಇದಕ್ಕಾಗಿ  ಅವರು ಎಳವೆಯಲ್ಲಿ ತಮ್ಮ ಮನೆತನದ ಹೆಸರನ್ನು ( ಸರ್‌ನೇಮ್‌)  ತ್ಯಜಿಸಿದ್ದರು. ಕಾಶಿವಿದ್ಯಾಪೀಠಕ್ಕೆ ಸೇರ್ಪಡೆಯಾಗಿ ತತ್ವಜ್ಞಾನದಲ್ಲಿ ಪದವಿ ಪಡೆದ ನಂತರ ಗುಣವಿಶೇಷಣವಾಗಿ ಶಾಸ್ತ್ರಿ ಎಂಬ ಹೆಸರು ಬಂತು. 

* ಆಗಿನ ಕಾಲದಲ್ಲಿ ದೊಡ್ಡ ಸಾಮಾಜಿಕ ಪಿಡುಗಾಗಿದ್ದ ವರದಕ್ಷಿಣೆಯನ್ನು ಕಟುವಾಗಿ ವಿರೋಧಿಸಿದ್ದರು. ತಮ್ಮ ಮದುವೆಯಲ್ಲಿ ಪತ್ನಿಯ ಮನೆಯಿಂದ ಏನನ್ನೂ ಸ್ವೀಕರಿಸಲು ಇಷ್ಟಪಟ್ಟಿರಲಿಲ್ಲ. ಶಾಸ್ತ್ರಿ ಅವರ ಮಾವನವರು ಹಲವು ಬಾರಿ ಮನವಿ ಮಾಡಿದ ಮೇಲೆ ಕೆಲವು ಮೀಟರ್‌ ಖಾದಿ ಬಟ್ಟೆಯನ್ನು ಮದುವೆಯ ಉಡುಗೊರೆಯಾಗಿ ಪಡೆದಿದ್ದರು. 

* ಮಹಾತ್ಮ ಗಾಂಧಿ ಹಾಗೂ ಬಾಲ ಗಂಗಾಧರ ತಿಲಕ್‌ ಅವರಿಂದ ಪ್ರೇರಣೆಗೊಂಡು ಶಾಸ್ತ್ರಿ ಅವರು ತಮ್ಮ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಟ್ಟು, 1921ಕ್ಕೆ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. 

* ಸ್ವಾತಂತ್ರ್ಯ ಸಿಕ್ಕಿದ ಮೇಲೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಗೋವಿಂದ ವಲ್ಲಭ ಪಂತ್‌ ಅವರ ಆಡಳಿತದಲ್ಲಿ ಶಾಸ್ತ್ರಿ ಅವರು ಪೊಲೀಸ್‌ ಮತ್ತು ಸಾರಿಗೆ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಸಾರಿಗೆ ಇಲಾಖೆಯಲ್ಲಿ ಬಹುದೊಡ್ಡ  ಬದಲಾವಣೆ ತಂದರು. ಮೊದಲ ಬಾರಿಗೆ ಹೆಣ್ಣುಮಕ್ಕಳನ್ನು ಬಸ್‌ ನಿರ್ವಾಹಕರಾಗಿ ನೇಮಕ ಮಾಡಿದರು. 

* ಪ್ರಧಾನಿಯಾಗಿದ್ದಾಗಲೂ ಶಾಸ್ತ್ರಿ ಅವರ ಬಳಿ ಓಡಾಡಲು ಸ್ವಂತ ಕಾರು ಇರಲಿಲ್ಲ. ಮನೆಯ ಸದಸ್ಯರ ಒತ್ತಾಯ ಹೆಚ್ಚಾದಾಗ, ಫಿಯೆಟ್‌ ಕಾರೊಂದನ್ನು ಖರೀದಿಸಲು ನಿರ್ಧರಿಸಿದರು. ಆದರೆ, ಅದರ ಬೆಲೆ ₹12 ಸಾವಿರ ಇತ್ತು. ಶಾಸ್ತ್ರಿ ಅವರ ಬಳಿ ₹5 ಸಾವಿರ  ಕಡಿಮೆಯಿತ್ತು. ಇದಕ್ಕಾಗಿ ಅವರು ಬ್ಯಾಂಕ್‌ ಒಂದಕ್ಕೆ  ವಾಹನ ಸಾಲದ ಅರ್ಜಿ ಗುಜರಾಯಿಸಿದರು. ತಕ್ಷಣ ಸಾಲವೇನೂ ಸಿಕ್ಕಿತು. ಆದರೆ, ಬ್ಯಾಂಕ್‌ ಅಧಿಕಾರಿಯನ್ನು ಕರೆದು ಇಷ್ಟೇ ಕ್ಷಿಪ್ರವಾಗಿ ಎಲ್ಲ ಗ್ರಾಹಕರಿಗೂ ಸಾಲ ಸೌಲಭ್ಯ ಸಿಗುತ್ತಿದೆಯೇ? ಎಂದು ವಿಚಾರಿಸಿಕೊಂಡಿದ್ದರು.

ಇದನ್ನೂ ಓದಿ: ಲಾಲ್ ಬಹದ್ದೂರ್ ಶಾಸ್ತ್ರಿ: ಸ್ಮರಣೆಯ ರಾಜಕಾರಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು