ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ: ಅಶ್ವತ್ಥನಾರಾಯಣ

Last Updated 7 ಫೆಬ್ರುವರಿ 2020, 18:01 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಶೈಕ್ಷಣಿಕ ಸಾಲಿನಿಂದಲೇ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ರಾಜ್ಯದಲ್ಲೂ ಜಾರಿಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ವಿಕಾಸಸೌಧದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕಾರ್ಯಪಡೆಯನ್ನೂ ರಚಿಸಲಾಗಿದೆ’ ಎಂದು ಅವರು ತಿಳಿಸಿದರು.

ಒಂದೇ ವೇದಿಕೆಗೆ: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳನ್ನು ಒಂದೇ ವೇದಿಕೆಗೆ ತಂದು, ‘ಏಕರೂಪ ವ್ಯವಸ್ಥೆ’ ಜಾರಿಗೊಳಿಸಲಾಗುವುದು. ವಿ.ವಿ.ಗಳ ಪ್ರವೇಶ ಪ್ರಕ್ರಿಯೆ, ಪರೀಕ್ಷೆ, ಆಡಳಿತ ಸ್ವರೂಪ ಏಕ ರೀತಿಯಲ್ಲಿ ಇರುತ್ತದೆ. ಇದರಿಂದ ಒಂದೆಡೆ ಮಾಹಿತಿ ಲಭ್ಯವಾಗಲಿದ್ದು, ಪಾರದರ್ಶಕ ಆಡಳಿತ ಸಾಧ್ಯವಾಗಲಿದೆ ಎಂದು ಹೇಳಿದರು.

ಹೊಸ ಕಾಲೇಜುಗಳಿಗೆ ಅನುಮೋದನೆ, ಹೊಸ ಕೋರ್ಸ್‌ಗಳಿಗೆ ಸಂಯೋಜನೆ ನೀಡುವ ಮುನ್ನ ಕನಿಷ್ಠ ಮೂಲ ಸೌಕರ್ಯಗಳ ಬಗ್ಗೆ
ಗಮನ ಹರಿಸಬೇಕು. ಈ ವಿಚಾರದಲ್ಲಿ ಲೋಪಗಳಾಗಿದ್ದರೆ ಸಂಬಂಧಿಸಿದ ವಿ.ವಿ ಕುಲಪತಿ, ಕುಲಸಚಿವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಕೆಇಎ ನೇಮಕಾತಿ ಮಾಡಲ್ಲ: ವಿ.ವಿ.ಗಳಲ್ಲಿ ಖಾಲಿ ಇರುವಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ನೇಮಕಾತಿ ಮಾಡುವುದಿಲ್ಲ. ಕೇವಲ ಅರ್ಜಿ ಆಹ್ವಾನಿಸಿ, ಅವುಗಳನ್ನು ವಿಂಗಡಿಸಿ, ಮೌಲ್ಯಮಾಪನ ಮಾಡಲಾಗುತ್ತದೆ. ಒಂದು ಹುದ್ದೆಗೆ ಮೂವರು ಅಭ್ಯರ್ಥಿಗಳನ್ನು ಆಯ್ಕೆಮಾಡಿ ವಿವರಗಳ ಪಟ್ಟಿಯನ್ನು ಸಂಬಂಧಿಸಿದ ವಿ.ವಿ.ಗೆ ನೀಡಲಾಗುತ್ತದೆ. ನಂತರ ವಿ.ವಿ.ಗಳು ಈ ಪಟ್ಟಿಯಲ್ಲಿ ಇರುವ ಅರ್ಹರನ್ನು ನೇಮಕಾತಿ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ವಿ.ವಿ.ಗಳ ಅಧಿಕಾರಕ್ಕೆ ಕತ್ತರಿ ಹಾಕುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಾಂಶುಪಾಲರ ನೇಮಕ: ಪದವಿ ಕಾಲೇಜುಗಳ 400 ಪ್ರಾಂಶುಪಾಲರು, 1600 ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

‘ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಲಿಖಿತ ಪರೀಕ್ಷೆ ನಡೆಸಲಿದ್ದು, ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ಸಂದರ್ಶನ ಇರುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT