ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ನೀತಿಯ ಆಶಯಕ್ಕೆ ಪೆಟ್ಟು

ಎಂಜಿನಿಯರಿಂಗ್‌ ಪದವಿ ಪಡೆದವರಿಗೂ ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಅವಕಾಶ
Last Updated 14 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""
""
""

ಪ್ರಾಥಮಿಕ ಶಾಲೆಗಳಲ್ಲಿನ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಎಂಜಿನಿಯರಿಂಗ್‌ ಪದವೀಧರರಿಗೂ ಶಿಕ್ಷಕರ ನೇಮಕಾತಿಯಲ್ಲಿ ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ಇದು ಕೇಂದ್ರ ಸರ್ಕಾರ ಈಚೆಗೆ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯ ಆಶಯಕ್ಕೆ ವಿರುದ್ಧವಾಗಿದೆ.

ಶಿಕ್ಷಕರ ಶಿಕ್ಷಣದಲ್ಲಿ ಸಮಗ್ರವಾದ ಬದಲಾವಣೆ ತಂದು ಬಿ.ಇಡಿ ಕೋರ್ಸ್ ಅನ್ನು ಪುನರ್‌ರೂಪಿಸುವ ಬಗ್ಗೆ ಹೊಸ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಅದಕ್ಕೆ ಅನುಗುಣವಾಗಿ ಪಿಯುಸಿ ನಂತರದ ನಾಲ್ಕು ವರ್ಷಗಳ ಇಂಟಿಗ್ರೇಟೆಡ್‌ ಬಿ.ಇಡಿ ಕೋರ್ಸ್‌ ರೂಪಿಸಲು ಸಿದ್ಧತೆಗಳು ನಡೆದಿದ್ದು, ಒಂದೆರಡು ವರ್ಷಗಳಲ್ಲಿ ಇದು ಜಾರಿಗೆ ಬರುವ ಸಾಧ್ಯತೆಗಳಿವೆ.

ಶಿಕ್ಷಕರಿಗೆ ಇರಬೇಕಾದ ಅರ್ಹತೆ, ಕೌಶಲ, ಅನುಭವ ಇತ್ಯಾದಿಗಳನ್ನುಹೊಸ ನೀತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಪ್ರತಿಭಾವಂತರು, ವಿಷಯದ ಬಗ್ಗೆ ಆಳವಾದ ಜ್ಞಾನ ಹೊಂದಿರುವವರು ಶಿಕ್ಷಕ ವೃತ್ತಿಗೆ ಬರಬೇಕು. ಇದಕ್ಕೆ ಪೂರಕವಾಗಿ ಶಿಕ್ಷಕರ ಶಿಕ್ಷಣದ ಸ್ವರೂಪ ಬದಲಾಗಬೇಕು ಎಂಬುದು ಹೊಸ ನೀತಿಯ ತಿರುಳು.

ಆದರೆ, ಇವೆಲ್ಲವನ್ನು ಸಮಗ್ರವಾಗಿ ಪರಿಗಣಿಸದೆ ತರಾತುರಿಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಎಂಜಿನಿಯರಿಂಗ್‌ ಪದವಿ ಪಡೆದವರಿಗೂ ಶಿಕ್ಷಕರ ನೇಮಕಾತಿಯಲ್ಲಿ ಅವಕಾಶ ನೀಡುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಇಲಾಖೆಯಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿರುವ ನಿವೃತ್ತ ಅಧಿಕಾರಿಗಳಿಂದ ವ್ಯಕ್ತವಾಗಿದೆ.

‘ಗಣಿತ, ವಿಜ್ಞಾನವೇ ಶಿಕ್ಷಣ ಅಲ್ಲ, ಈ ಎರಡೂ ವಿಷಯಗಳು ಶಿಕ್ಷಣದ ಒಂದು ಭಾಗ ಅಷ್ಟೆ. ಕಲಿಕಾ ವಿಧಾನವನ್ನು ಮಾನವಿಕ ನೆಲೆಗಟ್ಟಿನಲ್ಲಿ ನೋಡಬೇಕಾಗುತ್ತದೆ. ಸಂವಿಧಾನದ ಮೌಲ್ಯಗಳು, ಸಾಮಾಜೀಕರಣ, ತರಗತಿ ಪ್ರಕ್ರಿಯೆ, ಮಕ್ಕಳ ಮನೋಭಾವ ಅರಿತು ಬೋಧನೆ ಮಾಡಬೇಕಾಗುತ್ತದೆ. ಎಂಜಿನಿಯರಿಂಗ್‌ ಪದವಿ ಪಡೆದವರಿಂದ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅವರ ಯೋಚನಾ ರೀತಿಯೇ ಬೇರೆಯಾಗಿರುತ್ತದೆ. ಇದು ಕಾರ್ಯಸಾಧುವಾದ ಯೋಜನೆ ಅಲ್ಲ. ಇದೊಂದು ಕೆಟ್ಟ ನಿರ್ಧಾರ. ಇದು ರದ್ದಾಗಬೇಕು ಎನ್ನುತ್ತಾರೆ’ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ.

‘ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡುವುದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ. ಅರ್ಹ ಅಭ್ಯರ್ಥಿಗಳು ಸಿಗುತ್ತಾರೆ ಎಂದು ನಿರೀಕ್ಷಿಸುವುದು ಮೂರ್ಖತನ. ಬಿಎಸ್ಸಿ ಪದವಿ ಪಡೆದವರಿಗಿಂತ, ಬಿ.ಇ ಪದವಿ ಪಡೆದವರು ಹೆಚ್ಚು ಬುದ್ಧಿವಂತರು. ಅವರು ಬೋಧನಾ ವೃತ್ತಿಗೆ ಬರುವುದರಿಂದ ಗುಣಮಟ್ಟ ಸುಧಾರಣೆಯಾಗುತ್ತದೆ ಎನ್ನುವವರಿಗೆ ಕನಿಷ್ಠ ಜ್ಞಾನವೂ ಇಲ್ಲ’ ಎಂಬುದು ನಿವೃತ್ತ ಅಧಿಕಾರಿಯೊಬ್ಬರ ಅಭಿಪ್ರಾಯ.

ಉದಾಹರಣೆಗೆ ಹೇಳುವುದಾದರೆ ಬಿಎಸ್ಸಿಯಲ್ಲಿ ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ (ಪಿಸಿಎಂ) ಆಯ್ಕೆ ಮಾಡಿಕೊಂಡವರು ಮೂರು ವರ್ಷ ಎಲ್ಲ ವಿಷಯಗಳನ್ನೂ ವ್ಯಾಸಂಗ ಮಾಡುತ್ತಾರೆ. ನಿರ್ದಿಷ್ಟವಾಗಿ ಒಂದು ವಿಷಯದ ಪರಿಣತಿಗಾಗಿಯೇ ಪಠ್ಯಕ್ರಮ ರೂಪಿಸಲಾಗಿರುತ್ತದೆ. ಆದರೆ, ಬಿ.ಇ.ನಲ್ಲಿ ನಾಲ್ಕು ವರ್ಷ ಒಂದೇ ವಿಷಯವನ್ನು ಓದುವುದಿಲ್ಲ. ಬಿ.ಇ.ನಲ್ಲಿ ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಸೈನ್ಸ್‌, ಮೆಕ್ಯಾನಿಕಲ್‌, ಮಾಹಿತಿ ತಂತ್ರಜ್ಞಾನ ಸೇರಿದಂತೆ ಯಾವುದೇ ವಿಭಾಗವನ್ನು ಆಯ್ಕೆ ಮಾಡಿಕೊಂಡರೂ, ಭೌತವಿಜ್ಞಾನ, ರಸಾಯನವಿಜ್ಞಾನವನ್ನು ಒಂದು ವರ್ಷ, ಗಣಿತವನ್ನು ಎರಡು ವರ್ಷ ಕಲಿಸಲಾಗುತ್ತದೆ.

ಅಲ್ಲದೆ ಬಿ.ಇ.ನಲ್ಲಿ ಭೌತವಿಜ್ಞಾನ, ರಸಾಯನವಿಜ್ಞಾನ ಹಾಗೂ ಗಣಿತವನ್ನು ಬೇಸಿಕ್‌ ಆಗಿ ಕಲಿಯುತ್ತಾರೆಯೇ ಹೊರತು, ಮುಖ್ಯ ವಿಷಯವಾಗಿ ವ್ಯಾಸಂಗ ಮಾಡುವುದಿಲ್ಲ. ಹೀಗಾಗಿ ಅವರ ಜ್ಞಾನ ‘ಬೇಸಿಕ್‌ ನಾಲೆಜ್‌‌’ಗಿಂತ ಹೆಚ್ಚಿಗೆ ಇರುವುದಿಲ್ಲ. ಬದಲಾಗಿ ಅವರು ಯಾವ ವಿಭಾಗವನ್ನು (ಉದಾಹರಣೆಗೆ ಎಲೆಕ್ಟ್ರಾನಿಕ್ಸ್‌) ಆಯ್ಕೆ ಮಾಡಿಕೊಂಡಿರುತ್ತಾರೊ, ಆ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಜ್ಞಾನ ಹೊಂದಿರುತ್ತಾರೆ. ಇದು ವಾಸ್ತವ. ಹೀಗಿರುವಾಗ ಬಿ.ಇ ಆದವರು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರಾಗಿ ಆಯ್ಕೆಯಾಗಿ ಗುಣಮಟ್ಟದ ಬೋಧನೆ ಮಾಡಲು ಸಾಧ್ಯವೇ? ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುವುದು ಸರಿಯೇ ಎಂಬುದು ಅವರ ಪ್ರಶ್ನೆ.

‘ವಾಸ್ತವವಾಗಿ ನೋಡುವುದಾದರೆ ಬಿ.ಇ ಪದವಿ ಪಡೆದವರಿಗಿಂತ ಬಿ.ಎಸ್ಸಿ ಪಡೆದವರು ವಿಷಯದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುತ್ತಾರೆ. ನಿಯಮಗಳಿಗೆ ತಿದ್ದುಪಡಿ ತಂದು, ಬಿ.ಇ ಪದವೀಧರರಿಗೂ ಶಿಕ್ಷಕರಾಗಲು ಅವಕಾಶ ನೀಡುವುದರಿಂದ ಶಿಕ್ಷಣದ ಗುಣಮಟ್ಟ ಸುಧಾರಣೆ ಆಗುವುದಿಲ್ಲ. ನಾವು ಎಲ್ಲಿ ಎಡವಿದ್ದೇವೆ, ಅದಕ್ಕೆ ಕಾರಣ ಏನು ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಬಳಿಕ ಸುಧಾರಣೆಯತ್ತ ಹೆಜ್ಜೆ ಇಡಬೇಕು’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಟಿ.ಎಂ.ಕುಮಾರ್‌.

35–40 ವರ್ಷಗಳ ಹಿಂದೆ ಪದವಿ ಪಡೆದವರಿಗೆ ಈಗಿನ ವಾತಾವರಣಕ್ಕೆ ಹೊಂದಿಕೊಂಡು ಪಾಠ ಮಾಡುವುದು ಕಷ್ಟವಾಗಬಹುದು. ಬದಲಾದ ಪಠ್ಯಕ್ರಮಕ್ಕೆ ಅನುಗುಣವಾಗಿ ನಿರಂತರವಾಗಿ ತರಬೇತಿ ನೀಡುವುದು, ಆರು ತಿಂಗಳು ಅಥವಾ ಒಂದು ವರ್ಷದ ಕೋರ್ಸ್‌ ರೂಪಿಸಿ, ಅವರ ಬೋಧನೆಯ ಗುಣಮಟ್ಟ ಹೆಚ್ಚಿಸುವ ಕೆಲಸ ಆಗಬೇಕು. ಆದರೆ, ಈ ಕಾರ್ಯ ಪರಿಣಾಮಕಾರಿಯಾಗಿ ಆಗುತ್ತಿಲ್ಲ.ಗುಣಮಟ್ಟದ ಬೋಧನೆ ಆಗುತ್ತಿಲ್ಲ ಎಂಬುದಕ್ಕೆ ಮಾನದಂಡ ಏನು? 200–300 ಶಿಕ್ಷಕರ ಸಮೀಕ್ಷೆ ಮಾಡಿ, ಅದರ ಆಧಾರದ ಮೇಲೆ ಎಲ್ಲ ಶಿಕ್ಷಕರ ಬೋಧನಾ ಮಟ್ಟವನ್ನು ನಿರ್ಧರಿಸುವುದು ಅಥವಾ ಎಸ್ಸೆಸ್ಸೆಲ್ಸಿ ಫಲಿತಾಂಶ ಆಧರಿಸಿ, ತೀರ್ಮಾನಕ್ಕೆ ಬರುವುದು ಸರಿಯಲ್ಲ. 10ನೇ ತರಗತಿವರೆಗೆ ನಮ್ಮಲ್ಲಿ ಸಾಮಾನ್ಯ ಶಿಕ್ಷಣ ವ್ಯವಸ್ಥೆ ಇದೆ. ಇದನ್ನು ಕಲಿಸಲು ತಾಂತ್ರಿಕ ಶಿಕ್ಷಣ ಪಡೆದವರಿಗಿಂತ, ಸಾಮಾನ್ಯ ಪದವಿ ಪಡೆದವರೇ ಬೇಕು. ತಾಂತ್ರಿಕ ಶಿಕ್ಷಣ ಪಡೆದವರ ಗೊತ್ತು ಗುರಿಗಳೇ ಬೇರೆಯಾಗಿರುತ್ತವೆ ಎನ್ನುತ್ತಾರೆ ಕುಮಾರ್‌.

ಎಲ್ಲಿಯೂ ಸಲ್ಲದವರ ಆಯ್ಕೆ ಶಿಕ್ಷಕ ವೃತ್ತಿ: ಬಿ.ಇ ಆದವರಿಗೆ ಬಿ.ಇಡಿ ಪಡೆದು, ಬಳಿಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ತೇರ್ಗಡೆಯಾಗಿ ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಅವಕಾಶ ನೀಡಿರುವುದರಿಂದ ಅರ್ಹ ಅಭ್ಯರ್ಥಿಗಳ ಕೊರತೆ ನೀಗಲಿದೆ ಎಂಬುದು ದೂರದ ಮಾತು.

ಬಿ.ಇ.ನಲ್ಲಿ ಉತ್ತಮ ಅಂಕಗಳನ್ನು ಪಡೆದವರು ಕ್ಯಾಂಪಸ್‌ ಸಂದರ್ಶನ ಮೂಲಕವೇ ಅಧಿಕ ಸಂಬಳದ ಉದ್ಯೋಗ ಪಡೆದುಕೊಳ್ಳುತ್ತಾರೆ. ಕೆಲವರು ಉನ್ನತ ವ್ಯಾಸಂಗ, ಸ್ವಂತ ಉದ್ಯೋಗ ಮೊದಲಾದ ಕ್ಷೇತ್ರಗಳತ್ತ ಗಮನಹರಿಸುತ್ತಾರೆ. ಬಿ.ಇ.ನಲ್ಲಿ ಕಡಿಮೆ ಅಂಕಗಳು ಇರುವುದರಿಂದ ತಾಂತ್ರಿಕ ಕ್ಷೇತ್ರದಲ್ಲಿ ತಮಗೆ ಭವಿಷ್ಯ ಇಲ್ಲ ಎಂದು ಭಾವಿಸಿ ಕೆಲವರು ಬಿ.ಇಡಿ ಮಾಡಲು ಮುಂದೆ ಬರಬಹುದು. ಆದರೆ, ಅವರು ಟಿಇಟಿ, ಸಿಇಟಿಯಲ್ಲಿ ಅರ್ಹತೆ ಗಳಿಸುವ ಖಾತರಿ ಇಲ್ಲ. ಹೀಗಾಗಿ ಸರ್ಕಾರದ ಉದ್ದೇಶ ಈಡೇರುವ ಸಾಧ್ಯತೆ ತುಂಬಾ ಕಡಿಮೆ ಎಂಬುದು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಎಂಜಿನಿಯರಿಂಗ್‌ ಪದವೀಧರ ಮಹೇಶ್‌ ಅವರ ಅನಿಸಿಕೆ.

ನಿರುದ್ಯೋಗ ಸಮಸ್ಯೆ ಇರುವುದರಿಂದ, ಯಾವುದಾದರೂ ಒಂದು ಉದ್ಯೋಗ ಸಿಕ್ಕಿದರೆ ಸಾಕು ಎಂಬ ಭಾವನೆಯಿಂದ ಕೆಲವರು ಬಿ.ಇ ಬಳಿಕ ಬಿ.ಇಡಿ ಮಾಡಬಹುದು. ಆದರೆ, ಅವರೆಲ್ಲ ಗುಣಮಟ್ಟದ ಶಿಕ್ಷಕರಾಗುತ್ತಾರೆ ಎಂದು ಭಾವಿಸಲಾಗದು. ಎಲ್ಲೂ ಸಲ್ಲದವರು ಶಿಕ್ಷಕರಾದರೆ ಅವರು ಕಾಳಜಿ, ಬದ್ಧತೆಯಿಂದ ಬೋಧನೆ ಮಾಡುತ್ತಾರಾ ಎಂಬ ಪ್ರಶ್ನೆಯೂ ಇದೆ. ಹೀಗಾಗಿ ಎಂಜಿನಿಯರಿಂಗ್‌ ಪದವೀಧರರ ಬದಲು ಆಯಾ ವಿಷಯದಲ್ಲಿ ಪರಿಣತಿ ಇರುವವರನ್ನೇ ಶಿಕ್ಷಕರನ್ನಾಗಿ ನೇಮಕ ಮಾಡುವುದು ಒಳ್ಳೆಯದು ಎಂಬುದು ಅವರ ಅಭಿಪ್ರಾಯ.

**

ಪ್ರಾಧಿಕಾರದಲ್ಲಿ ಚರ್ಚೆಯಾಗಬೇಕು
ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಶಿಕ್ಷಣ ಕ್ಷೇತ್ರದಲ್ಲಿ ಏನೇ ಬದಲಾವಣೆಗಳನ್ನು ತರುವುದಾದರೆ ಮೊದಲು ಶೈಕ್ಷಣಿಕ ಪ್ರಾಧಿಕಾರದಲ್ಲಿ ಚರ್ಚೆಯಾಗಬೇಕು. ಆದರೆ, ಆ ರೀತಿಯ ಚರ್ಚೆಗಳು ಆಗುತ್ತಿಲ್ಲ. ಶಿಕ್ಷಣ ತಜ್ಞರ ಅಭಿಪ್ರಾಯಗಳಿಗೆ ಮನ್ನಣೆಯೇ ಇಲ್ಲ. ತಜ್ಞರ ಸಮಿತಿಯು ತನಗೆ ಬೇಕಾದ ರೀತಿಯಲ್ಲಿ ವರದಿ ನೀಡಬೇಕು ಎಂದು ಸರ್ಕಾರ ಬಯಸುತ್ತದೆ. ಅಲ್ಲದೆ ಬಹಳಷ್ಟು ಸಂದರ್ಭಗಳಲ್ಲಿ ಹೇಳಿದಂತೆ ಕೇಳುವ ವ್ಯಕ್ತಿಗಳೇ ಸಮಿತಿಯಲ್ಲಿ ಇರುವ ಹಾಗೆ ನೋಡಿಕೊಳ್ಳಲಾಗುತ್ತದೆ. ಇದು ಸರಿಯಲ್ಲ. ಸರ್ಕಾರ ಈಗ ತೆಗೆದುಕೊಂಡಿರುವ ನಿರ್ಧಾರದಿಂದ ದೂರಗಾಮಿ ಪರಿಣಾಮಗಳಾಗುತ್ತವೆ. ತಾಂತ್ರಿಕ ಕ್ಷೇತ್ರದವರನ್ನು ಪ್ರಾಥಮಿಕ ಶಾಲಾ ಶಿಕ್ಷಕರನ್ನಾಗಿ ನೇಮಿಸಿದ ಉದಾಹರಣೆ ಯಾವುದೇ ದೇಶದಲ್ಲಿ ಇಲ್ಲ.
–ಟಿ.ಎಂ.ಕುಮಾರ್‌, ನಿವೃತ್ತ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

**

ಕಡಿಮೆ ಅಂಕ ಪಡೆದವರು ಶಿಕ್ಷಕರಾದರು!
15 ವರ್ಷಗಳ ಹಿಂದೆಯೇ, ಬಿ.ಇ.ನಲ್ಲಿ ಕಡಿಮೆ ಅಂಕಗಳನ್ನು ಪಡೆದವರು, ಡಿ.ಇಡಿ ಮಾಡಿ ಕಲಬುರ್ಗಿ ವಲಯದಲ್ಲಿ ಶಿಕ್ಷಕರ ಹುದ್ದೆಗಳಿಗೆ ಆಯ್ಕೆಯಾದ ಉದಾಹರಣೆಗಳಿವೆ. ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಸಲ್ಲದವರು ಶಿಕ್ಷಕರಾಗಲು ಮುಂದೆ ಬರಬಹುದು. ಅಂತಹವರಿಂದ ಗುಣಮಟ್ಟದ ಬೋಧನೆ ಆಗುತ್ತದೆ ಎಂದು ನಿರೀಕ್ಷೆ ಮಾಡಲು ಆಗುವುದಿಲ್ಲ.ಬಹಳಷ್ಟು ಖಾಸಗಿ ಶಾಲೆಗಳು ಬಿ.ಇಡಿ, ಡಿ.ಇಡಿ ಪಡೆಯದ ಪದವೀಧರರನ್ನು ಶಿಕ್ಷಕರನ್ನಾಗಿ ನೇಮಕ ಮಾಡಿಕೊಂಡಿವೆ. ಸರ್ಕಾರದ ಈ ನಿರ್ಧಾರದಿಂದ ಅಂತಹ ಶಾಲೆಗಳಿಗೆ ಅನುಕೂಲವಾಗಲಿದೆ. ಹೇಗಿದ್ದರೂ, ಅಂತಹ ಶಾಲೆಗಳ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣ ಇಲ್ಲ.
–ಡಿ. ಜಗನ್ನಾಥ ರಾವ್‌, ನಿವೃತ್ತ ನಿರ್ದೇಶಕರು, ಡಿಎಸ್‌ಇಆರ್‌ಟಿ

**

ಸರ್ಕಾರಕ್ಕೆ ತಜ್ಞರು ಬೇಕಾಗಿಲ್ಲ

ಸರ್ಕಾರಕ್ಕೆ ತಜ್ಞರ ಸಲಹೆಗಳು ಬೇಕಾಗಿಲ್ಲ. ಬೋಧನೆಯ ಗಂಧಗಾಳಿಯೇ ಗೊತ್ತಿಲ್ಲದ ಅಧಿಕಾರಿಗಳ ಸಲಹೆಗಳನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಸಮಿತಿಗಳಿಗೆ ನೇಮಕ ಮಾಡಿಕೊಂಡರೆ ಉತ್ತಮ ಸಲಹೆಗಳು ಬರುತ್ತವೆ. ಸೈದ್ಧಾಂತಿಕವಾಗಿ, ಪ್ರಾಯೋಗಿಕವಾಗಿ ಕೆಲಸ ಮಾಡಿದವರಿಂದ ಸಲಹೆಗಳನ್ನು ಪಡೆಯಬೇಕು. ಆಗ ಈ ರೀತಿಯ ಎಡವಟ್ಟುಗಳು ಆಗುವುದಿಲ್ಲ. ಖಾಸಗಿಯವರ ಪರ ಲಾಬಿ ಮಾಡುವ ಇಲ್ಲವೆ ಖಾಸಗಿ ವಿಶ್ವವಿದ್ಯಾಲಯದ ಕುಲಪತಿಯಿಂದ ಸಲಹೆ ಪಡೆದರೆ, ಅದರಿಂದ ಸಾರ್ವಜನಿಕ ಶಿಕ್ಷಣ ಸುಧಾರಣೆಯನ್ನು ನಿರೀಕ್ಷಿಸಲು ಸಾಧ್ಯವೇ? ಶಿಕ್ಷಣದ ಜೀವಾಳವೇ ಶಿಕ್ಷಕರ ಶಿಕ್ಷಣ. ಇದರಲ್ಲಿ ಏನೇ ಬದಲಾವಣೆ ಮಾಡುವುದಾದರೆ ಸಮಿತಿಯಲ್ಲಿ ನಿರ್ಧಾರವಾಗಬೇಕು. ಈಗ ಮಾಡಿರುವ ತಿದ್ದುಪಡಿ ಶಿಕ್ಷಣದ ಗುರಿ ಮತ್ತು ಉದ್ದೇಶಕ್ಕೆ ವಿರುದ್ಧವಾಗಿದೆ. ವಾಮ ಮಾರ್ಗದಿಂದ ಈ ರೀತಿ ತಿದ್ದುಪಡಿ ಜಾರಿ ಮಾಡುವುದನ್ನು ಮೊದಲು ನಿಲ್ಲಿಸಬೇಕು.
–ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT