ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನೆರಳಲ್ಲಿ ಶಾಲೆ: ಈ ಎಚ್ಚರಿಕೆ ಅನುಸರಿಸಿದರೆ ಮಕ್ಕಳ ಜೊತೆ ಮನೆಮಂದಿ ಕ್ಷೇಮ

Last Updated 4 ಜನವರಿ 2021, 19:30 IST
ಅಕ್ಷರ ಗಾತ್ರ

ಹೊಸ ವರ್ಷದ ಮೊದಲ ದಿನದಂದೇ ಮತ್ತೆ ಶುರುವಾಗಿವೆ ಶಾಲಾ ತರಗತಿಗಳು. ಆನ್‌ಲೈನ್‌ನಲ್ಲಿ ಜೋತು ಬಿದ್ದು ಶಿಕ್ಷಕರು, ಗೆಳೆಯರ ಮುಖ ಕಾಣದ ವಿದ್ಯಾರ್ಥಿ ಖುಷಿಯಿಂದ ಮತ್ತೆ ಶಾಲೆಯತ್ತ ಮುಖ ಮಾಡಿದ್ದಾನೆ. ಸದ್ಯ ಹೈಸ್ಕೂಲ್‌ ಮತ್ತು ಮೇಲ್ಪಟ್ಟ ತರಗತಿಗಳು ಆರಂಭವಾಗಿವೆ. ಶಾಲಾ ಆವರಣದಲ್ಲೇನೋ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಬಹುದು. ಆದರೆ, ಮನೆಯಿಂದ ಶಾಲೆಗೆ ಹೋಗುವುದು ಮತ್ತು ಶಾಲೆಯಿಂದ ಮನೆಗೆ ಬಂದಾಗ ಕೆಲವು ಎಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಮಕ್ಕಳಿಗಷ್ಟೇ ಅಲ್ಲ, ಮನೆಮಂದಿಗೂ ಕ್ಷೇಮ.

ಮಕ್ಕಳು ಕೋವಿಡ್‌ಗೆ ತುತ್ತಾಗುವ ಸಾಧ್ಯತೆ ಕಡಿಮೆ. ಆದರೆ, ಅವರು ಸೋಂಕು ವಾಹಕರಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ. ಆದ್ದರಿಂದ ಆ ಸೋಂಕು ವಾಹಕರಾಗುವ ಸನ್ನಿವೇಶವನ್ನು ಎಚ್ಚರಿಕೆಯ ಕ್ರಮದಿಂದ ತಪ್ಪಿಸಬಹುದು. ಅಂತಹ ಕೆಲವು ವಿಷಯಗಳತ್ತ ಗಮನಹರಿಸೋಣ.

ಒಮ್ಮೆ ಧರಿಸಿದ ಬಟ್ಟೆಯನ್ನು ಅಂದೇ ತೊಳೆಯಲು ಹಾಕಿ. ಶಾಲೆಗೆ ಹೋಗುವಾಗ ಸ್ವಚ್ಛಗೊಳಿಸಿದ ಬಟ್ಟೆಗಳನ್ನಷ್ಟೇ ಧರಿಸಲಿ. ಮಾಸ್ಕ್‌, ಸಾಕ್ಸ್‌, ಕೈಗವಸುಗಳಿಗೂ ಇದೇ ಕ್ರಮ ಅನುಸರಿಸಿ. ಬಟ್ಟೆ ಸ್ವಚ್ಛಗೊಳಿಸುವಾಗ ಸೋಂಕು ನಿವಾರಕಗಳನ್ನು ಬಳಸುವುದು ಒಳ್ಳೆಯದು. ಪುಟ್ಟ ಸ್ಯಾನಿಟೈಸರ್‌ ಬಾಟಲಿಯನ್ನು ಶಾಲಾ ಬ್ಯಾಗ್‌ನ ಒಳಗಿಡಿ. ಅದರ ಬಳಕೆಯ ಬಗೆಗೂ ಹೇಳಿಕೊಡಿ. ಹಾಗೆಂದು ವಿನಾಕಾರಣ ಹೆದರಿಸಬೇಡಿ. ಪ್ರೀತಿಯಿಂದ ತಿಳಿಹೇಳಿ. ಪದೇ ಪದೇ ಕೊರೊನಾ ‘ಭೂತ’ವನ್ನು ಮುಂದಿಟ್ಟು ಹೆದರಿಸುತ್ತಿದ್ದರೆ ಪಾಠದ ಮೇಲಿನ ಗಮನ ಕಡಿಮೆಯಾದೀತು.

ಶಾಲಾ ವಾಹನದಲ್ಲಿಯೂ ಶಿಸ್ತು ಪಾಲನೆ ಅಗತ್ಯ. ಹಿಡಿಕೆ, ರಾಡ್‌ನಲ್ಲಿ ನೇತಾಡುವುದು, ಸಿಕ್ಕಸಿಕ್ಕಲ್ಲಿ ಮುಟ್ಟುವುದು, ಅಂತರ ಮರೆಯುವುದು ಮಾಡಬಾರದು. ಅದಕ್ಕೆ ಶಾಲಾ ವಾಹನ ಸಿಬ್ಬಂದಿಯೂ ಎಚ್ಚರ ವಹಿಸಬೇಕು.

ಕ್ರಿಡಾಪರಿಕರಗಳನ್ನು ಬಳಸುವಾಗಲೂ ಈ ಎಲ್ಲಾ ಮುನ್ನೆಚ್ಚರಿಕೆಗಳು ಇರಲಿ. ಬಳಕೆಯ ಬಳಿಕ ತಪ್ಪದೇ ಕ್ರೀಡಾ ಪರಿಕರ ಹಾಗೂ ಕೈಕಾಲು ಸ್ವಚ್ಛಗೊಳಿಸುವುದನ್ನು ಮರೆಯಬಾರದು. ಗುಂಪು ಆಟಗಳನ್ನು ಅಥವಾ ಪರಸ್ಪರ ಸ್ಪರ್ಶಿಸಲೇಬೇಕಾದ (ಕಬಡ್ಡಿ, ಕುಸ್ತಿ...) ಆಟಗಳನ್ನು ಸದ್ಯಕ್ಕೆ ದೂರವಿಡಬಹುದು. ಆಟದಲ್ಲಿ ಸೋಲು–ಗೆಲುವುಗಳಾದಾಗ ಸಂಭ್ರಮಿಸಲು ಒಮ್ಮೆಲೇ ಗುಂಪು ಸೇರುವುದನ್ನು ತಪ್ಪಿಸಿ. ಒಳಾಂಗಣ ಆಟಗಳಲ್ಲಿ ಇನ್ನೂ ಹೆಚ್ಚು ಕಾಳಜಿ ಅಗತ್ಯ. ಈಜುಕೊಳ ಬಳಸಬೇಕಾದರೆ ಪರಿಣತರ ಮಾರ್ಗದರ್ಶನ ಇರಲಿ. ಈಜುಕೊಳ ಬಳಕೆಯ ನಂತರ ಅನುಸರಿಸಬೇಕಾದ ಸ್ವಚ್ಛತಾ ಕ್ರಮಗಳ ಬಗೆಗೂ ಮಕ್ಕಳಿಗೆ ಗೊತ್ತಿರಲಿ. ತರಗತಿ ತಪ್ಪಿಸಿ ಅಲೆದಾಡದಂತೆ ತಿಳಿಹೇಳಿ. ಸದ್ಯದ ಸಂದರ್ಭದಲ್ಲಿ ಹೆಚ್ಚು ನಿಗಾ ಅಗತ್ಯ.

ಶಾಲೆಯಿಂದ ಬಂದ ಬಳಿಕ ಶೂ, ಸಾಕ್ಸ್‌, ಬ್ಯಾಗ್‌ ಅನ್ನು ಎಲ್ಲೆಂದರಲ್ಲಿ ಎಸೆಯದಂತೆ ತಿಳಿಹೇಳಿ. ಬಂದ ತಕ್ಷಣ ಸಂಪೂರ್ಣ ಸ್ವಚ್ಛತಾ ಕ್ರಮ ಅನುಸರಿಸದೆ ಆಹಾರ ಸೇವನೆಯೂ ಬೇಡ. ಸಾಕಷ್ಟು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನೇ ಹೆಚ್ಚು ನೀಡಿ. ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸುತ್ತೀರಾದರೆ ಆ ಕೇಂದ್ರಕ್ಕೆ ಆಗಾಗ ಭೇಟಿ ನೀಡಿ. ಎಷ್ಟೋ ಟ್ಯೂಷನ್‌ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಸ್ಥಳವೇ ಇರುವುದಿಲ್ಲ. ಇಕ್ಕಟ್ಟಿನ ಜಾಗಗಳಲ್ಲಿ ಅಂತರ ಕಾಪಾಡುವುದು ಕಷ್ಟ. ಈ ಬಗೆಗೂ ಗಮನ ಇರಲಿ. ಒಟ್ಟಿನಲ್ಲಿ ಶಾಲಾ ಪುನರಾರಂಭ ಮಕ್ಕಳ ಬದುಕಿನಲ್ಲೂ ಖುಷಿ ತರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT