ಗುರುವಾರ , ಏಪ್ರಿಲ್ 2, 2020
19 °C

ಸೈಕಾಲಜಿ: ಸಾಧನೆಗೆ ಸಾಕಷ್ಟು ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನನಗೆ ಮನಃಶಾಸ್ತ್ರಜ್ಞೆ ಆಗಬೇಕೆಂಬ ಆಸೆಯಿದೆ. ಈಗಾಗಲೇ ಬಿ.ಎ.ನಲ್ಲಿ ಸೈಕಾಲಜಿಯನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡಿದ್ದೇನೆ. ಮನಃಶಾಸ್ತ್ರಜ್ಞರಿಗೆ ಭಾರತದಲ್ಲಿ ಬೇಡಿಕೆ ಇದೆಯೇ? ಇದನ್ನು ಬಿಟ್ಟರೆ ಬೇರೆ ಯಾವ ಒಳ್ಳೆಯ ಉದ್ಯೋಗಗಳಿವೆ?

- ಭಾಗ್ಯ ಗಾಣಿಗ, ಊರು ಬೇಡ

ಭಾಗ್ಯ, ಮನಃಶಾಸ್ತ್ರ ಕ್ಷೇತ್ರದಲ್ಲಿ ಮುಂದುವರೆಯಲು, ನಿಮ್ಮ ಪದವಿ ಶಿಕ್ಷಣದ ನಂತರ ಉತ್ತಮ ಶಿಕ್ಷಣಸಂಸ್ಥೆಯಲ್ಲಿ ಮನಃಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಬೇಕು. ಸದ್ಯದ ನಿಯಮಾವಳಿಗಳ ಪ್ರಕಾರ ಸೈಕಾಲಜಿಸ್ಟ್ ಎಂದು ದೃಢೀಕರಿಸಿಕೊಳ್ಳಲು ಮನಃಶಾಸ್ತ್ರದಲ್ಲಿ ಎಂ.ಫಿಲ್. ಪದವಿಯನ್ನು ಹೊಂದಿರಬೇಕು ಮತ್ತು ಆರ್.ಸಿ.ಐ. ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆದರೆ ಮನಃಶಾಸ್ತ್ರದ ಕ್ಷೇತ್ರದಲ್ಲಿ ಕೆಲಸ ಮಾಡಲು ಎಂ.ಎ. ಅಥವಾ ಎಂ.ಎಸ್‌ಸಿ. ಮನಃಶಾಸ್ತ್ರ ಓದಿರಬೇಕು.

ನೀವು ಮನಃಶಾಸ್ತ್ರ ಅಧ್ಯಯನ ಮಾಡುವಾಗ ಈ ಕ್ಷೇತ್ರದಲ್ಲಿರುವ ಬೇರೆ ಬೇರೆ ವಿಭಾಗಗಳ ಬಗ್ಗೆ ಓದುತ್ತಿರುತ್ತೀರಿ. ಉದಾಹರಣೆಗೆ, ಮಕ್ಕಳ ಮನಃಶಾಸ್ತ್ರ, ಹದಿಹರೆಯದ ಮನಃಶಾಸ್ತ್ರ, ವಯಸ್ಕ ಮತ್ತು ಹಿರಿಯರ ಮನಃಶಾಸ್ತ್ರ, ಮನೋವೈದ್ಯಕೀಯ ಶಾಸ್ತ್ರ (ಸೈಕಿಯಾಟ್ರಿ), ಶಿಕ್ಷಣ ಮನಃಶಾಸ್ತ್ರ, ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್ ಮನಃಶಾಸ್ತ್ರ, ಕೌನ್ಸೆಲಿಂಗ್, ಕ್ಲಿನಿಕಲ್, ಇಂಡಸ್ಟ್ರಿಯಲ್ ಇತ್ಯಾದಿ. ಆಗ ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು ಎಂದು ಗುರುತಿಸಿಕೊಂಡು ಆ ಕ್ಷೇತ್ರದಲ್ಲಿ ಮುಂದುವರೆಯುವುದು ಹೇಗೆ ಎಂದು ತಿಳಿದುಕೊಂಡು ಅದೇ ಕ್ಷೇತ್ರದಲ್ಲಿ ಮುಂದಿನ ಶಿಕ್ಷಣ ಕೈಗೊಳ್ಳಬಹುದು.

ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಅನೇಕ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗ ಅವಕಾಶಗಳಿರುತ್ತವೆ. ನಿಮ್ಮ‌ ಆಸಕ್ತಿಗೆ ಅನುಸಾರವಾಗಿ ಆಯ್ಕೆ ಮಾಡಿಕೊಂಡು ಕೆಲಸ ಮಾಡಬಹುದು. ಕ್ಲಿನಿಕಲ್ ಸೈಕಾಲಜಿ ಓದಿದರೆ, ಮಾನಸಿಕ ಆರೋಗ್ಯದ ಸಂಸ್ಥೆಗಳಲ್ಲಿ, ಆಸ್ಪತ್ರೆ, ಮಕ್ಕಳ ಸಲಹಾ ಕೇಂದ್ರ, ಪಾನ ಮುಕ್ತಿ ಕೇಂದ್ರಗಳಲ್ಲಿ ಮನಃಶಾಸ್ತ್ರಜ್ಞರಾಗಿ ಅಥವಾ ಕೌನ್ಸೆಲರ್ ಆಗಿ ಕೆಲಸ ನಿರ್ವಹಿಸಬಹುದು. 
ಕೌನ್ಸೆಲಿಂಗ್ ಮನಃಶಾಸ್ತ್ರ ಓದಿದಲ್ಲಿ ಶಾಲಾ ಕಾಲೇಜುಗಳಲ್ಲಿ ಆಪ್ತ ಸಮಾಲೋಚಕರಾಗಿ, ಯುವಕ, ಯುವತಿ ಮತ್ತು ಮಕ್ಕಳೊಂದಿಗೆ ಕೆಲಸ ಮಾಡುವ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಬಹುದು. 

ಇಂಡಸ್ಟ್ರಿಯಲ್ ಸೈಕಾಲಜಿ ಓದಿದಲ್ಲಿ ಕಂಪನಿಗಳಲ್ಲಿ ಮನಃಶಾಸ್ತ್ರಜ್ಞ ಹಾಗೂ ಆಪ್ತಸಲಹೆಗಾರರಾಗಿ ಕಾರ್ಯನಿರ್ವಹಿಸಬಹುದು. 

ಫಾರೆನ್ಸಿಕ್ ಸೈಕಾಲಜಿ ಮತ್ತು ಕ್ರಿಮಿನಾಲಜಿ ಓದಿದಲ್ಲಿ ಅಪರಾಧ ಕುರಿತಾದ ತನಿಖೆ, ಜೈಲುಗಳಲ್ಲಿ ಕೌನ್ಸೆಲರ್ ಆಗಿ ಕಾರ್ಯನಿರ್ವಹಿಸಬಹುದು. ಅದಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಮನೋವಿಜ್ಞಾನದ ತಜ್ಞರಾಗಿ, ವೃತ್ತಿ ಮಾರ್ಗದರ್ಶಕರಾಗಿ, ವಿಶೇಷ ಮಕ್ಕಳ ಶಾಲೆಗಳಲ್ಲಿ ವ್ಯಕ್ತಿತ್ವ ವಿಕಸನ, ಆರೋಗ್ಯ ಮತ್ತು ಜೀವನ ಕೌಶಲದಂತಹ ವಿಚಾರಗಳ ತರಬೇತುದಾರರಾಗಿಯೂ ಕೆಲಸ ನಿರ್ವಹಿಸಬಹುದು. ಮನಃಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನ ಸಂಸ್ಥೆಗಳಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ ಸಂಶೋಧನ ಚಟುವಟಿಕೆಗಳಲ್ಲಿ ಅನುಭವ ಪಡೆದುಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಕೌನ್ಸೆಲಿಂಗ್ ಅವಕಾಶಗಳು ಹೆಚ್ಚುತ್ತಿದ್ದು, ಅನೇಕ ಆನ್‌ಲೈನ್ ವೇದಿಕೆಗಳಲ್ಲಿ ಹದಿಹರೆಯದ ಆರೋಗ್ಯ, ವೃತ್ತಿ ಮತ್ತು ಸಂಬಂಧ, ಆಪ್ತಸಲಹೆ ಇತ್ಯಾದಿ ಸೇವೆಗಳಲ್ಲಿ ಉದ್ಯೋಗ ಅವಕಾಶಗಳಿವೆ. ಅದಲ್ಲದೆ, ಸಾಮಾಜಿಕ ಕಾರ್ಯ ಮಾಡುವ ಸಂಸ್ಥೆಗಳಲ್ಲಿ ಅನೇಕ ಕಾರ್ಯಕ್ರಮಗಳ ಯೋಜನೆ, ಸಂಯೋಜನೆ, ಕಂಟೆಂಟ್ ಅಥವಾ ವಿಷಯಗಳ ಬರವಣಿಗೆ, ಮಾಡ್ಯೂಲ್ ತಯಾರಿ, ಮೌಲ್ಯಮಾಪನ ಇತ್ಯಾದಿ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಕಾರ್ಪೊರೇಟ್ ಸಂಸ್ಥೆಗಳ ಲರ್ನಿಂಗ್ ಮತ್ತು ಡೆವಲಪ್‌ಮೆಂಟ್, ಸಂಶೋಧನೆ, ತರಬೇತಿ ಇತ್ಯಾದಿ ವಿಭಾಗಗಳಲ್ಲಿಯೂ ಕೆಲಸ ಮಾಡಬಹುದು.

ನಿಮ್ಹಾನ್ಸ್ ಅಥವಾ ಅಂತಹ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ, ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್. ಅಥವಾ ಪಿಎಚ್.ಡಿ. ಮಾಡಿ ಉನ್ನತ ಶಿಕ್ಷಣ ಪಡೆದು ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿಯೂ ಕೆಲಸ ನಿರ್ವಹಿಸಬಹುದು. ಆಲ್ ದಿ ಬೆಸ್ಟ್.

***

ನಾನು ಗಣಿತದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದು, ಶೇ 69ರಷ್ಟು ಅಂಕ ಗಳಿಸಿದ್ದೇನೆ. ಈ ಕ್ಷೇತ್ರದಲ್ಲಿರುವ ವಿವಿಧ ಉದ್ಯೋಗಗಳ ಬಗ್ಗೆ ಹೇಳಿ.

- ಕಿರಣ್‌, ಮೈಸೂರು

ಕಿರಣ್, ಸಾಮಾನ್ಯವಾಗಿ ಗೊತ್ತಿರುವಂತೆ ಗಣಿತ ಮತ್ತು ಸಂಖ್ಯಾಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡಬಹುದು. ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ಜೆಇಇ, ನೀಟ್, ಬ್ಯಾಂಕಿಂಗ್, ಯುಪಿಎಸ್‌ಸಿ, ಕೆಪಿಎಸ್‌ಸಿ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಸಂಸ್ಥೆಗಳಲ್ಲಿ ತರಬೇತುದಾರರಾಗಿ ಕೆಲಸ ಮಾಡಬಹುದು. ಇತ್ತೀಚಿಗೆ ಆನ್‌ಲೈನ್ ಶಿಕ್ಷಣ ಕುರಿತ ಕಂಪನಿಗಳು ನೀವು ಮನೆಯಲ್ಲಿಯೇ ಇದ್ದು ಗಣಿತದ ಟ್ಯೂಟರ್ ಆಗಿ ಕೆಲಸ ಮಾಡುವ ಅವಕಾಶಗಳನ್ನು ಕಲ್ಪಿಸಿವೆ. ಹಾಗಾಗಿ ಕಂಪ್ಯೂಟರ್ ಮತ್ತು ಇಂಟರ್‌ನೆಟ್‌ನ ಸಹಾಯದಿಂದ ಮನೆಯಲ್ಲೆ ಇದ್ದುಕೊಂಡು ಟ್ಯೂಟರ್ ಆಗಿ ಕೆಲಸ ಮಾಡಬಹುದು.

ಅನೇಕ ಕಂಪನಿಗಳಲ್ಲಿ ಲಭ್ಯವಿರುವ ಬ್ಯುಸಿನೆಸ್ ರಿಸರ್ಚ್ ಅನಾಲಿಟಿಕ್ಸ್ ಸಂಬಂಧಿಸಿದ ಹುದ್ದೆಗಳಿಗೆ ಪ್ರಯತ್ನಿಸಬಹುದು. ಗಣಿತ ಮತ್ತು ಸಂಖ್ಯಾಶಾಸ್ತ್ರ ಆಧಾರಿತ ಅನಾಲಿಟಿಕ್ಸ್ ಕೆಲಸಗಳನ್ನು ಮಾಡಬೇಕಾಗುತ್ತದೆ. ರಾಷ್ಟ್ರೀಕೃತ ಮತ್ತು ಇತರ ಬ್ಯಾಂಕ್‌ಗಳಲ್ಲಿ ಗಣಿತ ಸ್ನಾತಕೋತ್ತರ ಪದವಿ ಮೇಲೆ ಕರೆಯಲಾಗುವ ವಿಶೇಷ ಅಧಿಕಾರಿ ಹುದ್ದೆಗಳು ಕೂಡ ಲಭ್ಯ. ಖಾಸಗಿ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ, ಐಸಿಐಸಿಐ, ಸಿಟಿ ಬ್ಯಾಂಕ್ ಇತ್ಯಾದಿಗಳು ಕೂಡ ಗಣಿತದ ಪದವೀಧರರನ್ನು ನೇಮಕಾತಿ ಮಾಡಿಕೊಳ್ಳುತ್ತವೆ. ಹಾಗೆಯೇ, ವಿಮಾ ಕಂಪನಿಗಳು ಕೂಡ ಅನಾಲಿಸ್ಟ್‌ಗಳನ್ನು ನೇಮಕಾತಿ ಮಾಡಿಕೊಳ್ಳುತ್ತವೆ.

ಅಂತರ್ಜಾಲ ಮತ್ತು ಉದ್ಯೋಗ ಪೋರ್ಟಲ್‌ಗಳಲ್ಲಿ ನೋಂದಣಿ ಮಾಡಿಕೊಳ್ಳಿ. ಈ ಪೋರ್ಟಲ್‌ಗಳು, ನಿಮ್ಮ ವೈಯಕ್ತಿಕ ಸಂಪರ್ಕ ಇತ್ಯಾದಿಗಳನ್ನು ಬಳಸಿಕೊಂಡು ಸೂಕ್ತ ಕೆಲಸವನ್ನು ಹುಡುಕಿಕೊಳ್ಳಿ. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು