ಶುಕ್ರವಾರ, ಫೆಬ್ರವರಿ 21, 2020
25 °C
ಮುಂದಿನ ತಿಂಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಅನುಕೂಲ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕ್ಯೂಆರ್‌ ಕೋಡ್‌ ಪ್ರಶ್ನೋತ್ತರ ಬ್ಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂದಿನ ತಿಂಗಳು ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಕ್ಯೂಆರ್‌ ಕೋಡ್‌ ಆಧಾರಿತ ಪ್ರಶ್ನೋತ್ತರ ಬ್ಯಾಂಕ್‌ ಬಳಕೆಗೆ ತಂದಿದೆ.

ಲಭ್ಯ ಇರುವ ಕ್ಯೂಆರ್ ಕೋಡ್‌ ಸ್ಕ್ಯಾನರ್‌ನಿಂದ diksha.gov.in/explore ನಲ್ಲಿ ಸ್ಕ್ಯಾನ್‌ ಮಾಡಿದಾಗ ವಿದ್ಯಾರ್ಥಿಗಳು ಪ್ರತಿ ಅಧ್ಯಾಯದಲ್ಲಿ 40ರಿಂದ 50 ಪ್ರಶ್ನೆಗಳು, ಜತೆಗೆ ಉತ್ತರಗಳು ಹಾಗೂ ವಿಡಿಯೊ ತುಣುಕುಗಳನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ತಮ್ಮ ಪಠ್ಯಪುಸ್ತಕದಲ್ಲಿರುವ ಕ್ಯೂಆರ್‌ ಕೋಡ್‌ನ ಮೇಲೆ ಮೊಬೈಲ್‌ ಫೋನ್‌ನಿಂದ ಸ್ಕ್ಯಾನ್‌  ಮಾಡಿದರೂ ಈ ‍ಪ್ರಶ್ನೋತ್ತರಗಳನ್ನು ಪಡೆಯಬಹುದಾಗಿದೆ. ತಂತ್ರಜ್ಞಾನಕ್ಕೆ ಹೆಚ್ಚು ಮಹತ್ವ ಕೊಟ್ಟಿರುವ ವಿದ್ಯಾರ್ಥಿಗಳಿಗೆ ಇದು ವರವಾಗಿ ಪರಿಣಮಿಸಲಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ 2019–20ರಿಂದ ಪ್ರಥಮ ಬಾರಿಗೆ 6 ಮತ್ತು 10ನೇ ತರಗತಿಗಳ ಇಂಗ್ಲಿಷ್‌, ಗಣಿತ ಮತ್ತು ವಿಜ್ಞಾನ ವಿಷಯಗಳ ಪಠ್ಯಪುಸ್ತಕಗಳಲ್ಲಿ ಕ್ಯೂಆರ್‌ ಕೋಡ್‌ ಜಾರಿಗೆ ತಂದಿದೆ. ಇದೇ ವ್ಯವಸ್ಥೆಯನ್ನು ಮುಂದುವರಿಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇದೀಗ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ.

‘ಈ ಯೋಜನೆಯನ್ನು ಆರಂಭಿಸುವ ಮೊದಲಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವುದು ಅಥವಾ ನೀಡಲಾಗಿರುವ ಲಿಂಕ್‌ಗಳನ್ನು ಲಾಗಿನ್‌ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಇದಕ್ಕೆ ‘ಎಕ್ಸಾಂ ಪ್ರೆಪ್‌/ ಫೋಕಸ್‌ 10’ ಎಂದು ಹೆಸರಿಡಲಾಗಿತ್ತು’ ಎಂದು ಡಿಎಸ್‌ಇಆರ್‌ಟಿ ಅಧಿಕಾರಿಯೊಬ್ಬರು ತಿಳಿಸಿದರು.

‘ಇತರ ವಿಷಯಗಳಿಗೂ ಕ್ಯೂಆರ್ ಕೋಡ್ ಸೌಲಭ್ಯ ವಿಸ್ತರಿಸಬೇಕೆಂದು ಹಲವು ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ. ಸದ್ಯ ಇದು ಇಂಗ್ಲಿಷ್‌, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಮಾತ್ರ ಲಭ್ಯ ಇದೆ’ ಎಂದು ಅವರು ಹೇಳಿದರು.

ಈ ವಿಧಾನ ಅನುಸರಿಸಿ

*www.diksha.gov.in/explore ಲಾಗಿನ್‌ ಆಗಿ

*ನೀವು ವ್ಯಾಸಂಗ ಮಾಡುವ ಮಂಡಳಿ ಕ್ಲಿಕ್‌ ಮಾಡಿ (ಸ್ಟೇಟ್‌ ಬೋರ್ಡ್‌)

*ಮಾಧ್ಯಮವನ್ನು ಕ್ಲಿಕ್‌ ಮಾಡಿ (ಕನ್ನಡ/ಇಂಗ್ಲಿಷ್‌)

*ನಿಮಗೆ ಬೇಕಾದ ವಿಷಯವನ್ನು ಕ್ಲಿಕ್‌ ಮಾಡಿ (ಗಣಿತ, ಇಂಗ್ಲಿಷ್‌, ವಿಜ್ಞಾನ)

*ಗ್ರೇಡ್ ಆಯ್ಕೆ ಮಾಡಿ (10ನೇ ತರಗತಿ/ಎಸ್‌ಎಸ್‌ಎಲ್‌ಸಿ)

*10ನೇ ತರಗತಿ ಪಠ್ಯದಲ್ಲಿ ನೀಡಲಾಗಿರುವ ಕ್ಯೂಆರ್‌ ಕೋಡ್‌ ಅನ್ನು ಮೊಬೈಲ್‌ನಲ್ಲಿ ಸ್ಕ್ಯಾನ್‌ ಮಾಡಿ ಈ ಮೇಲಿನ ಪದ್ಧತಿಯನ್ನೇ ಅನುಸರಿಸಬಹುದು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು