ರಜೆಯಲ್ಲೂ ಓದ್ಬೇಕಾ?

ಶನಿವಾರ, ಏಪ್ರಿಲ್ 20, 2019
31 °C

ರಜೆಯಲ್ಲೂ ಓದ್ಬೇಕಾ?

Published:
Updated:
Prajavani

ಬೇಸಿಗೆಯ ರಜಾ ದಿನಗಳು ಆರಂಭವಾಗಿವೆ. ಮಕ್ಕಳ ಪಾಲಿಗೆ ಶಾಲೆ ಒಂದೆರೆಡು ತಿಂಗಳುಗಳ ಕಾಲ ಬಂದ್! ಪೋಷಕರೊಂದಿಗೆ ಕಾಲ ಕಳೆಯುವ ಅವಕಾಶ. ಇವುಗಳ ಮಧ್ಯೆಯೂ ಕೆಲವು ಪೋಷಕರು ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ತಳ್ಳಿ ಕೈ ತೊಳೆದುಕೊಂಡು ಬಿಡುತ್ತಾರೆ. ಅವುಗಳು ಎಷ್ಟರಮಟ್ಟಿಗೆ ಉಪಯೋಗವಾಗುತ್ತಿವೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇನ್ನು ಶಾಲೆಯ ವಿಚಾರಕ್ಕೆ ಬರುವುದಾದರೆ ರಜೆ ಪೂರ್ತಿ ಮಾಡಬೇಕಾದ ಹೋಂವರ್ಕ್ ನೀಡಲಾಗುತ್ತದೆ. ಅದು ಸರಿ. ಆದರೂ ಅವರು ನೀಡಿರುವ ಹೊಂವರ್ಕ್ ನೋಡಿದರೆ ಆಶ್ಚರ್ಯವೂ, ಭಯವೂ ಆಗುತ್ತದೆ. ನಿತ್ಯ ಒಂದು ಪುಟ ಪಾಠ, ಮಗ್ಗಿ, ಕಾಪಿರೈಟಿಂಗ್, ಕಳೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಿಡಿಸುವುದು, ಕಾಗುಣಿತ ಇಂಥವೇ ಆಗಿರುತ್ತವೆ.

ಪ್ರತಿ ವರ್ಷ ಇಂತಹ ಹೊಂವರ್ಕ್ ನೀಡಲಾಗುತ್ತದೆಯಾದರೂ ಶಾಲೆ ಶುರುವಾದ ಬಳಿಕ ಮಕ್ಕಳು ನಿರೀಕ್ಷಿಸಿದ ಮಟ್ಟಕ್ಕೆ ಸುಧಾರಿಸಿದೇ ಇರುವುದು ಕಂಡು ಬಂದಿದೆ. ಕೆಲವು ಶಾಲೆಯ ಮಕ್ಕಳು ಮನೆಯ ಪಾಠಕ್ಕೆ ಹೋಗಿ ಮುಂದಿನ ವರ್ಷದ ಓದಿನ ತಯಾರಿ ನಡೆಸುತ್ತಾರೆ.

‘ಸಮ್ಮರ್‌ ಸ್ಲೈಡ್‌’: ಓದಿನಿಂದ ದೂರ
ರಜೆಯಲ್ಲೂ ಓದ್ಬೇಕಾ ಎಂಬ ಪ್ರಶ್ನೆಗೆ ನೇರವಾದ ಉತ್ತರವೆಂದರೆ ಹೌದು. ಅದಕ್ಕೆ ಕಾರಣಗಳಿವೆ. ಸುಮಾರು 50 ದಿನಗಳಷ್ಟು ಅವರಿಗೆ ರಜೆ ಸಿಕ್ಕಿರುತ್ತದೆ. ಅಷ್ಟು ದಿನಗಳ ಕಾಲ ಅವರು ಶಾಲೆಯಿಂದ ಸಂಪೂರ್ಣ ವಿಮುಕ್ತರು. ಶಾಲೆಯಲ್ಲಿ ಕಲಿಯುವ ಮಕ್ಕಳು 6–14 ವರ್ಷದೊಳಗಿನವರೇ ಆಗಿರುತ್ತಾರೆ. ಎಳೆ ವಯಸ್ಸಿನ ಮನಸ್ಸೇ ಹಾಗೆ, ನಿರಂತರತೆ ಇಲ್ಲದಿದ್ದರೆ ಬೇಗ ಮರೆವಿಗೆ ಜಾರುತ್ತದೆ. ಹಲವು ಅಧ್ಯಯನಗಳು ಹೊರಹಾಕಿರುವ ಸತ್ಯವೆಂದರೆ ಎರಡು ತಿಂಗಳುಗಳ ಕಾಲ ಓದಿನ ಹತ್ತಿರವೇ ಸುಳಿಯದ ವಿದ್ಯಾರ್ಥಿಗಳು ತಾವಾಗಲೇ ಕಲಿತಿರುವುದಕ್ಕಿಂತ ಸಾಕಷ್ಟು ಹಿಂದೆ ಸಾಗುತ್ತಾರೆ. ಇದು ನಮ್ಮ ಸರ್ಕಾರಿ ಶಾಲೆಯ, ಹಳ್ಳಿ ಮಕ್ಕಳ ಮಟ್ಟಿಗೆ ಸತ್ಯವೇ ಆಗಿದೆ. ಪರಿಸರ, ಮನೆಯ ಸ್ಥಿತಿಗತಿಯ ಕಾರಣದಿಂದ ಮಕ್ಕಳು ಪುಸ್ತಕವನ್ನು ಹಿಡಿಯಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮದ ಅರಿವು ಸರ್ಕಾರಿ ಶಾಲೆಯ ಶಿಕ್ಷಕರಿಗೆ ಸಾಕಷ್ಟಿದೆ. ಪ್ರತಿ ವರ್ಷ ಶಾಲೆಗಳು ಆರಂಭವಾದ ಮೇಲೆ ಒಂದು ತಿಂಗಳ ಕಾಲ ಮಕ್ಕಳನ್ನು ಮೊದಲ ಸ್ಥಿತಿಗೆ ತರಲು ಶಿಕ್ಷಕರು ಸಾಕಷ್ಟು ಹೆಣಗಬೇಕಾಗುತ್ತದೆ. ಕಲಿಕೆಯ ವಿಷಯದಲ್ಲಿ ಒಂದು ದೀರ್ಘವಾದ ಅಂತರ ಎಂತಹ ಕಲಿಕೆಯನ್ನೂ ಕುಂಠಿತಗೊಳಿಸಬಹದು.

ಹೀಗೆ ರಜೆ ಅವಧಿಯಲ್ಲಿ ಮಗುವು ಓದಿನಿಂದ ದೂರ ಉಳಿಯುವುದನ್ನು ಶಿಕ್ಷಣ ತಜ್ಞರು ‘ಸಮ್ಮರ್ ಸ್ಲೈಡ್’ ಅಂತ ಕರೆಯುತ್ತಾರೆ. ಅದರ ಅರ್ಥವಿಷ್ಟೇ, ಹಿಂದಿನ ಕಲಿಕೆಯ ನಿರಂತರತೆಯನ್ನು ಉಳಿಸಿಕೊಳ್ಳಲಾಗದೆ ಅದರಿಂದ ದೂರವಿದ್ದು ಕಳೆದುಕೊಳ್ಳುವುದೇ ಆಗಿದೆ. ಇದು ಕಡಿಮೆ ಆದಾಯದ ಕುಟುಂಬಗಳಲ್ಲೇ ಜಾಸ್ತಿ ಕಂಡು ಬರುತ್ತದೆ. ತಿಳಿವಳಿಕೆಯ ಕೊರತೆ ಮತ್ತು ಆರ್ಥಿಕ ಸ್ಥಿತಿ ಅವರನ್ನು ಹಾಗೆ ಮಾಡಬಹುದು! ಕಲಿಕೆಗೆ ನೀಡುವ ಒಂದು ದೀರ್ಘವಾದ ಅಂತರದ ಪರಿಣಾಮ ಏನು ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ಕೊಡಬೇಕೆಂದರೆ ಒಂದು ಸಂಗೀತ ವಾದ್ಯ ನುಡಿಸುವುದನ್ನು ಕಲಿಯುವ ವ್ಯಕ್ತಿ ಏಕಾಏಕಿ 3–4 ತಿಂಗಳುಗಳ ಕಾಲ ನಿಲ್ಲಿಸಿ ಬಿಟ್ಟರೆ ಆತ ಅದನ್ನು ಸುಧಾರಿಸಿಕೊಳ್ಳಲು ಮತ್ತೆ ಸಾಕಷ್ಟು ದಿನಗಳನ್ನು ತಗೆದುಕೊಳ್ಳಬೇಕಾಗುತ್ತದೆ. ನಿತ್ಯ ವ್ಯಾಯಾಮ ಮಾಡುವವನು ಒಮ್ಮೆಲೆ ನಿಲ್ಲಿಸಿ, ಮತ್ತೆಂದೋ ಅರಂಭಿಸಿದಾಗ ದೇಹ ಮತ್ತೆ ಸ್ಪಂದಿಸಲು ಸಮಯ ತೆಗೆದುಕೊಳ್ಳುತ್ತದೆ.

ಏನು ಓದಬೇಕು?
ಅನೇಕ ಸಮೀಕ್ಷೆಗಳು ಒಂದು ಸತ್ಯವನ್ನು ಹೊರ ಹಾಕಿವೆ. ಬಹುತೇಕ ಮಕ್ಕಳು ಸಾಮಾನ್ಯ ಕಲಿಕಾ ಮಟ್ಟಕ್ಕಿಂತ ಕೆಳಗಿದ್ದಾರೆ ಎಂಬುದನ್ನು! ಅಂದರೆ ಗಣಿತದ ಮೂಲ ಕ್ರಿಯೆಗಳು, ವಾಕ್ಯರಚನೆ, ಪದ ಬಳಕೆ, ವ್ಯಾಕರಣ ಇತ್ಯಾದಿ. ಇಂತಹವುಗಳನ್ನು ಕಲಿತುಕೊಳ್ಳಲು ಇದು ಸರಿಯಾದ ಸಮಯ. ರಜೆ ಅವಧಿಯಲ್ಲಿಯೇ ಕಲಿತುಕೊಂಡರೆ ಶಾಲಾ ಅವಧಿಯಲ್ಲಿ ಸಾಮಾನ್ಯ ಓದಿನೊಂದಿಗೆ ಹೊಂದಿಕೊಳ್ಳಬಹುದು.

ಕೇವಲ ಶಾಲಾ ಪಠ್ಯಗಳನ್ನು ಓದಬೇಕಾಗಿಲ್ಲ! ಆದರೆ ಓದು ನಿರಂತರವಾಗಿರಬೇಕು. ನಿಮಗೆ ಕುತೂಹಲವೆನಿಸಿದ, ಆಸಕ್ತಿಯ ಪುಸ್ತಕಗಳನ್ನು ಶಾಲಾ ಶಿಕ್ಷಕರ ಬಳಿ, ಗ್ರಂಥಾಲಯಗಳಿಂದ ಕೇಳಿ ತಂದು ಓದಬಹುದು. ನಿತ್ಯ ಗ್ರಂಥಾಲಯಕ್ಕೆ ಹೋಗುವ ಅಭ್ಯಾಸ ರೂಢಿಸಿಕೊಂಡರೆ ಜ್ಞಾನ ವೃದ್ದಿಗೆ ಬೇಕಾದ ಅನೇಕ ವಿಚಾರಗಳು ಅಲ್ಲಿ ಸಿಗುತ್ತವೆ. ಸೃಜನಶೀಲ ಬರವಣಿಗೆಯಲ್ಲಿ ತೊಡಗಿಕೊಳ್ಳಬಹುದು! ನೀವು ಓದಿದ ವಿಷಯವಾಗಲಿ, ಅನುಭವಕ್ಕೆ ಬಂದ ವಿಷಯವಾಗಲಿ ನಿಮ್ಮದೇ ಪದಗಳಲ್ಲಿ ಬರೆಯುವ ಅಭ್ಯಾಸವಾಗಬೇಕು. ಆಗ ಭಾಷೆಯ ಮೇಲೆ ಹಿಡಿತ ಸಿಗುತ್ತದೆ. ಶಾಲಾ ಕಲಿಕೆಯಲ್ಲಿ ಯಾವ ವಿಷಯದಲ್ಲಿ ಕಠಿಣ ಅಂಶಗಳನ್ನು ಎದುರಿಸುತ್ತೀರೊ ಆ ವಿಷಯಗಳ ಕಡೆ ಗಮನಹರಿಸುವುದು ಸೂಕ್ತ.‌

ಓದನ್ನು ಹೀಗೆ ರೂಢಿಸಿ
* ಮನೆಯ ಹಿರಿಯರು, ಪೋಷಕರು ಕೂಡ ಪುಸ್ತಕ ಹಿಡಿದು ಮಕ್ಕಳೊಂದಿಗೆ ದಿನದಲ್ಲಿ ಒಂದಿಷ್ಟು ಹೊತ್ತು ಕಳೆಯಿರಿ.

* ಮಕ್ಕಳನ್ನು ನಿತ್ಯ ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ, ಒಂದೊಳ್ಳೆ ಅಭ್ಯಾಸವನ್ನು ಅವರಲ್ಲಿ ರೂಢಿಸಿ.

*ಮನೆಯಲ್ಲಿ ಪತ್ರಿಕೆಗಳನ್ನು, ನಿಯತಕಾಲಿಕಗಳನ್ನು, ಪುಸ್ತಕಗಳನ್ನು ಎಲ್ಲೆಂದರಲ್ಲಿ ಕಾಣುವಂತೆ, ಅವರಿಗೆ ಸಿಗುವಂತೆ ವ್ಯವಸ್ಥೆ ಮಾಡಿ.

* ಅವರ ಓದಿನ ಬಗೆಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಿರಿ. ಸರಿ ಉತ್ತರಕ್ಕೆ ಅಭಿನಂದಿಸಿ.

* ಮಕ್ಕಳು ದಿನಪೂರ್ತಿ ಓದುತ್ತಲೇ ಇರಬೇಕೆಂದು ಬಯಸಬೇಡಿ, ಇದು ರಜೆಯ ಸಮಯ. ಒಂದೆರಡು ಗಂಟೆಗಳ ಓದಿನ ನಂತರ ಅವರ ಆಟ ಇತ್ಯಾದಿಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಿ.

* ಮಕ್ಕಳನ್ನು ಮನೆಪಾಠಕ್ಕೆ ಅಟ್ಟಿ, ಅದಕ್ಕೂ ನಿಮಗೂ ಸಂಬಂಧವಿಲ್ಲದಂತೆ ಕೂರಬೇಡಿ. ಅಲ್ಲೇನು ಕಲಿಕೆಯಾಗುತ್ತಿದೆ ಎಂಬುದನ್ನು ನಿತ್ಯ ಗಮನಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !