ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC-PUC: ಟೆನ್ಷನ್ ಮರೀರಿ, ಪರೀಕ್ಷೆ ಬರೀರಿ

ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಸೂತ್ರಗಳು, ಪೋಷಕರಿಗೆ ಕಿವಿಮಾತು
Last Updated 6 ಮಾರ್ಚ್ 2020, 8:35 IST
ಅಕ್ಷರ ಗಾತ್ರ

ಶಿಕ್ಷಣ ತಜ್ಞ ರೋಹಿಡೇಕರ್ ಮಾರ್ಚ್–ಏಪ್ರಿಲ್ ತಿಂಗಳ ಅವಧಿಯನ್ನು ಪರೀಕ್ಷಾಮಾಸ ಎನ್ನುತ್ತಿದ್ದರು. ಮಾರ್ಚ್ ಬಂತೆಂದರೆ ಪರೀಕ್ಷೆಗಳ ಭರಾಟೆ ಶುರು. ರಾಜ್ಯ, ಜಿಲ್ಲೆ, ತಾಲ್ಲೂಕುಗಳ ಶೈಕ್ಷಣಿಕ ವಾತಾವರಣದಲ್ಲಿ ಹಠಾತ್ ಬದಲಾವಣೆ ಕಂಡು ಬರುತ್ತದೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲಾ–ಕಾಲೇಜು ಉಪನ್ಯಾಸಕರುಗಳು ಯಶಸ್ವಿಯಾಗಿ ವಾರ್ಷಿಕ ಪರೀಕ್ಷೆ ನಡೆಸಲು ಬೇಕಾದ ಸಿದ್ಧತೆ ನಡೆಸುತ್ತಾರೆ. ರಾಜ್ಯದ ಸುಮಾರು ಒಂಬತ್ತು ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮತ್ತು ಆರೂವರೆ ಲಕ್ಷ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ಹಾಜರಾಗುವುದರಿಂದ ಈ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರತೀ ಸುದ್ದಿಯೂ ಹೆಚ್ಚು ಗಮನ ಸೆಳೆಯುತ್ತದೆ. ಈ ಪರೀಕ್ಷೆಗಳಿಂದ ಬರುವ ಫಲಿತಾ೦ಶದ ಪ್ರತಿಶತ ಯಶಸ್ಸಿನ ಮೇಲೆ ಆಯಾ ರಾಜ್ಯದಲ್ಲಿನ ಶಿಕ್ಷಣದ ಮಟ್ಟ ಮತ್ತು ಶೈಕ್ಷಣಿಕ ಪರಿಸರವನ್ನು ಗುರುತಿಸಲಾಗುತ್ತದೆ.

ಪೋಷಕ–ವಿದ್ಯಾರ್ಥಿಯನ್ನು ಕಾಡುವ ಫೋಬಿಯ

ಪರೀಕ್ಷೆ ಸಮೀಪಿಸಿದಂತೆಲ್ಲ ವಿದ್ಯಾರ್ಥಿಗಳೊಂದಿಗೆ ಪೋಷಕರೂ ಒತ್ತಡಕ್ಕೆ ಸಿಲುಕುತ್ತಾರೆ. ಒಂದು ಬಗೆಯ ಆತಂಕ, ಒತ್ತಡ ಭಯ ವಿದ್ಯಾರ್ಥಿಗಳನ್ನು ಆವರಿಸಿ ‘ಪರೀಕ್ಷಾ ಫೋಬಿಯ’ ಹರಡುತ್ತದೆ. ಪೋಷಕರು ಮಕ್ಕಳ ಓದಿಗೆ ನೆರವಾಗಲು ನಿದ್ದೆಗೆಟ್ಟು, ಆರೈಕೆ ಮಾಡಿ ಉತ್ತಮ ಅಂಕಗಳಿಸಲು ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ಹೆಚ್ಚು ಪರಿಶ್ರಮ ಪಡುವ ವಿದ್ಯಾರ್ಥಿಗಳು ನೋಟ್ಸ್, ಗೈಡ್, ಸಾಲ್ವಡ್ ಪೇಪರ್ಸ್‌, ಗ್ರೂಪ್ ಸ್ಟಡಿ, ಕೌನ್ಸೆಲಿಂಗ್ ಹೀಗೆ ವೈವಿಧ್ಯಮಯವಾಗಿ ತಯಾರಿ ನಡೆಸುತ್ತಾರೆ. ಆದರೂ ಕೆಲವೊಮ್ಮೆ ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ. ‘ನಾನು ಚೆನ್ನಾಗಿಯೇ ಬರೆದಿದ್ದೆ, ಮಾರ್ಕ್ಸ್ ಕೊಟ್ಟಿಲ್ಲ, ಆದ್ದರಿಂದ ಫೆಲಾದೆ. ನನಗೆ ನೂರು ಬರಬೇಕಿತ್ತು, ಎಪ್ಪತ್ತು ಬಂದಿದೆ, ನಾನು ರಿವ್ಯಾಲುಯೇಶನ್‌ಗೆ ಹಾಕ್ತೀನಿ. ಕೆಲವು ಪ್ರಶ್ನೆಗಳು ತಪ್ಪಾಗಿ ಮುದ್ರಿತಗೊಂಡಿವೆ, ನಮಗೆ ಗ್ರೇಸ್ ಮಾರ್ಕ್ ಬರಬೇಕು’ – ಹೀಗೆಲ್ಲ ದೂರುವ ವಿದ್ಯಾರ್ಥಿಗಳನ್ನು ನಾವು ಕಾಣುತ್ತೇವೆ. ಇವರ ಮಾತುಗಳಲ್ಲಿ ಸತ್ಯವಿಲ್ಲವೆಂದಲ್ಲ. ಆದರೆ ನಿಜವಾದ ಸಮಸ್ಯೆ ಇರುವುದು ವಿದ್ಯಾರ್ಥಿಗಳ ಪರೀಕ್ಷಾ ತಯಾರಿಯಲ್ಲಿ, ಓದುವ–ಬರೆಯುವ ಕ್ರಮದಲ್ಲಿ ಮತ್ತು ಪರೀಕ್ಷೆಗಳನ್ನು ನಿರ್ವಹಿಸುವ ರೀತಿಯಲ್ಲಿ.

ಪ್ರಶ್ನೆಗಳ ಮಹಾಪೂರ

ನಮ್ಮ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹೇಗೆ ತಯಾರಾಗಬೇಕು? ಯಾವೆಲ್ಲ ವಿಷಯಗಳ ಕುರಿತು ಗಮನ–ಜ್ಞಾನ ಹೊಂದಿರಬೇಕು? ಉತ್ತಮ ಅಂಕಗಳಿಸಲು ಇರುವ ಓದಿನ ಕ್ರಮಗಳೇನು? ಸೂತ್ರ, ಸಿದ್ಥಾಂತ, ವ್ಯಾಖ್ಯೆ, ಹಂತ, ಫಲಿತಾಂಶಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ? ಥಿಯರಿ ಮತ್ತು ಪ್ರಾಕ್ಟಿಕಲ್‌ಗಳಿಗೆ ಹೇಗೆಲ್ಲಾ ತಯಾರಾಗಬೇಕು? ಸಮಯ ನಿರ್ವಹಣೆ ಹೇಗೆ ಮಾಡಬೇಕು? ಪ್ರಶ್ನೆಯೊಂದರ ಉತ್ತರವನ್ನು ಪೂರ್ತಿಯಾಗಿ ಹೇಗೆ ನೆನಪಿನಲ್ಲಿಟ್ಟುಕೊಳ್ಳಬೇಕು? ಕಠಿಣ ಪಾಠಗಳನ್ನು ಓದಬೇಕೆ? ಬೇಡವೆ? ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳಿಂದ ಪ್ರಶ್ನೆಗಳು ಮರುಕಳಿಸುತ್ತವೆಯೆ? ಪ್ರಶ್ನೆ ಪತ್ರಿಕೆಯ ಮಾದರಿ ಬದಲಾಗಿದೆಯೆ? ಯಾವುದಾದರೂ ಪಾಠವನ್ನು ಬಿಡಲಾಗಿದೆಯೆ? ಉತ್ತರ ಪತ್ರಿಕೆಯ ಬುಕ್‌ಲೆಟ್‌ನಲ್ಲಿ ಹಿಂದಿದ್ದಷ್ಟೇ ಹಾಳೆಗಳು ಈ ಬಾರಿ ಇರುತ್ತವೆಯೆ? ಅಡಿಷನಲ್ ಶೀಟ್‌ಗೆ ಅವಕಾಶವಿದೆಯೆ? ಪರೀಕ್ಷೆ ಶುರುವಾಗುವ ಸಮಯ ಮತ್ತು ಅವಧಿಗಳಲ್ಲೇನಾದರೂ ಬದಲಾವಣೆಗಳಾಗಿವೆಯೆ? ಎಂಬೆಲ್ಲ ವಿಷಯಗಳೂ ಈಗ ಪ್ರಮುಖವಾಗಿರುತ್ತವೆ. ವಿದ್ಯಾರ್ಥಿ–ಪೋಷಕರು ಮತ್ತು ಅಧ್ಯಾಪಕರೆಲ್ಲರೂ ಇವುಗಳ ಕುರಿತು ಸರಿಯಾದ ತಿಳಿವಳಿಕೆ ಹೊಂದಿದ್ದರೆ ಮಾತ್ರ ಸುಲಭವಾಗಿ ಪರೀಕ್ಷೆಯನ್ನೆದುರಿಸಿ ಉತ್ತಮ ಅಂಕಗಳನ್ನು ಪಡೆಯಬಹುದು.

ವಸ್ತುಸ್ಥಿತಿ ಏನೆಂದರೆ, ಶೇ. 40ರಷ್ಟು ವಿದ್ಯಾರ್ಥಿಗಳು ಮಾತ್ರ ವಾರ್ಷಿಕ ಪರೀಕ್ಷೆಗಳ ಬಗ್ಗೆ ಆತ್ಮವಿಶ್ವಾಸದಿ೦ದಿರುತ್ತಾರೆ. ಇನ್ನುಳಿದ ಅರವತ್ತು ಜನರಿಗೆ ತಮ್ಮ ಶ್ರಮ ಮತ್ತು ತಯಾರಿಯ ಬಗ್ಗೆ ಅವರಿಗೇ ನ೦ಬಿಕೆಯಿರುವುದಿಲ್ಲ. ಕೆಲವರ ಬಳಿ ತಾವು ಆಯ್ಕೆಮಾಡಿಕೊಂಡಿರುವ ವಿಷಯಗಳ ಪಠ್ಯಪುಸ್ತಕಗಳೇ ಇರುವುದಿಲ್ಲ. ಇನ್ನೂ ಕೆಲವರು ಶಾಲೆ–ಕಾಲೇಜುಗಳಲ್ಲಿ ನಡೆಯುವ ಪಾಠ–ಕಿರು ಪರೀಕ್ಷೆಗಳಿಗೆ ಹಾಜರಾಗಿರುವುದಿಲ್ಲ. ಪ್ರತೀ ಬಾರಿ ಫಲಿತಾಂಶ ಬಂದು ಅದು ಕಡಿಮೆ ಎನ್ನಿಸಿದಾಗ ವರ್ಷವಿಡೀ ಕಲಿತ ಪಾಠ–ಪ್ರವಚನಗಳ ಬಗ್ಗೆ ಕೇವಲ ಮೂರು ಗ೦ಟೆಗಳಲ್ಲಿ ನೂರು ಅ೦ಕಗಳಿಗೆ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳ ಬೌದ್ಧಿಕಮಟ್ಟವನ್ನು ಆಳೆಯುವ ಕ್ರಮ ಆವೈಜ್ಞಾನಿಕ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತದೆ. ಸರ್ಕಾರ ಪ್ರತೀ ಬಾರಿ ಸಣ್ಣ–ಪುಟ್ಟ ಬದಲಾವಣೆ ಮಾಡಿ ಸುಮ್ಮನಾಗುತ್ತದೆ. ಈ ಪರೀಕ್ಷೆಗಳಲ್ಲಿ ನಮ್ಮ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟದ ನೈಜ ಪರಿಶೀಲನೆ ನಡೆಯುತ್ತದೆಯೇ? ವಿದ್ಯಾರ್ಥಿಗಳು ಜ್ಞಾನಸ೦ಪಾದನೆಗಾಗಿ ಓದುತ್ತಾರೆಯೋ ಆಥವಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊ೦ದಲು ಓದುತ್ತಾರೊ? ನಾವು ನೀಡುತ್ತಿರುವ ಶಿಕ್ಷಣ ವಿದ್ಯಾರ್ಥಿಗಳನ್ನು ಜ್ಞಾನಿಗಳನ್ನಾಗಿಸುತ್ತಿದೆಯೇ? ನಮ್ಮ ಪರೀಕ್ಷಾ ಕ್ರಮಗಳು ಸರಿಯಾಗಿವೆಯೆ? ಎ೦ಬ ಪ್ರಶ್ನೆಗಳು ಸಹಜವಾಗಿ ಏಳುತ್ತವೆ.

ಪರೀಕ್ಷೆಗಳು ಅಂದು–ಇಂದು

ತಾವು ಕಲಿಸಿದ ಪಾಠವನ್ನು, ವಿದ್ಯೆಗಳನ್ನು ವಿದ್ಯಾರ್ಥಿಗಳು ಎಷ್ಟರಮಟ್ಟಿಗೆ ಕಲಿತಿದ್ದಾರೆ ಎ೦ಬುದನ್ನು ಪರೀಕ್ಷಿಸುವ ಪರಿಪಾಠ ಪುರಾಣ ಕಾಲದಿ೦ದಲೂ ನಡೆದು ಬ೦ದಿದೆ. ಪಾ೦ಡವ ಕೌರವರಿಬ್ಬರಿಗೂ ವಿದ್ಯೆ ಕಲಿಸುತ್ತಿದ್ದ ದ್ರೋಣಾಚಾರ್ಯರು, ತಮ್ಮ ಶಿಷ್ಯರು ಪಾಠ, ಪ್ರವಚನಗಳನ್ನು ಎಷ್ಟರಮಟ್ಟಿಗೆ ಗ್ರಹಿಸಿದ್ದಾರೆ ಎ೦ದು ಸಮಗ್ರವಾಗಿ ಪರೀಕ್ಷಿಸುತ್ತಿದ್ದರು. ಬಿಲ್ವಿದ್ಯೆ, ಮಲ್ಲಯುದ್ಧ, ದೃಷ್ಟಿಯುದ್ಧಗಳ ಜೊತೆ ಧರ್ಮ, ಕರ್ಮ, ಪ್ರಾಮಾಣಿಕತೆ, ಕಷ್ಟಸಹಿಷ್ಣುತೆಗಳ ಬಗ್ಗೆಯೂ ಪರೀಕ್ಷೆ ಮಾಡಿ ಎಲ್ಲದಕ್ಕೂ ಸಮರ್ಪಕ ಉತ್ತರ ಪಡೆದ ನ೦ತರವೇ ಶಿಷ್ಯರ ವಿದ್ಯಾಭ್ಯಾಸ ಮುಗಿಯುತ್ತಿತ್ತು, ಗುರುದಕ್ಷಿಣೆ ಪಡೆಯುವ ಸ೦ದರ್ಭದಲ್ಲಿ ವಿದ್ಯಾರ್ಥಿ ತಾನು ಕಲಿತ ವಿದ್ಯೆಯನ್ನು ಲೋಕಕಲ್ಯಾಣಕ್ಕಾಗಿ ಮಾತ್ರ ಬಳಸಬೇಕೆ೦ದು ಪ್ರಮಾಣ ಪಡೆಯಲಾಗುತ್ತಿತ್ತು. ಇದು ಅ೦ದಿನ ಕಥೆ.

ಇ೦ದೂ ಪರೀಕ್ಷೆಗಳಿವೆ. ವೈವಿಧ್ಯಮಯ ವಿಷಯಗಳಿವೆ. ಗುರುಗಳಿದ್ದಾರೆ, ವಿದ್ಯಾರ್ಥಿಗಳಿದ್ದಾರೆ, ಶಿಕ್ಷಣದ ಹಲವು ಮಜಲುಗಳು ಆಸ್ತಿತ್ವದಲ್ಲಿವೆ. ವಿವಿಧ ವಿಷಯಗಳನ್ನು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ವೈವಿಧ್ಯದಿ೦ದ ಕೂಡಿದ ಪರೀಕ್ಷಾ ಪದ್ಧತಿಗಳಿವೆ, ನಿಯಮಗಳಿವೆ. ಸಾಮಾನ್ಯವಾಗಿ ತನ್ನ ನಾಲ್ಕನೆಯ ವಯಸ್ಸಿನಲ್ಲೇ ಶಾಲೆಯ ವಿದ್ಯೆ ಕಲಿಯಲಾರ೦ಭಿಸುವ ವಿದ್ಯಾರ್ಥಿ ಸುಮಾರು ಹತ್ತು ಹದಿನೈದು ವರ್ಷಗಳ ಸುದೀರ್ಘ ಕಲಿಕೆಯ ನ೦ತರ ಎಸ್ಸೆಸ್ಸೆಲ್ಸಿ, ಪಿ.ಯು.ಸಿ. ಮತ್ತು ಪದವಿಗಳನ್ನು ಪಡೆದು ಶಿಕ್ಷಣರ೦ಗದಿ೦ದ ಹೊರಬೀಳುತ್ತಾನೆ. ಅ೦ಕಪಟ್ಟಿ ನೋಡಿ ವಿದ್ಯಾರ್ಥಿಯ ಯೋಗ್ಯತೆಯನ್ನು ಅಳೆಯುವ ಪರಿಪಾಠ ನಮ್ಮಲ್ಲಿರುವುದರಿ೦ದ ವಿದ್ಯಾರ್ಥಿ ಜ್ಞಾನ ಸ೦ಪಾದನೆಗಿ೦ತ ಪರೀಕ್ಷೆ ಪಾಸು ಮಾಡುವ ಕಡೆ ಹೆಚ್ಚು ಗಮನಹರಿಸುತ್ತಾನೆ.

ಯಶಸ್ಸಿಗೆ ಬೇಕು ಅತ್ಮವಿಶ್ವಾಸ ಮತ್ತು ಕಾಮನ್‌ಸೆನ್ಸ್

ಪರೀಕ್ಷಾ ತಯಾರಿಗಿಂತ ಮುಂಚೆ, ಎಷ್ಟೋ ಪರೀಕ್ಷೆಗಳೆನ್ನುದುರಿಸಿ ಯಶಸ್ವಿಯಾಗಿ ಇಲ್ಲಿಯವರೆಗೂ ಬಂದಿದ್ದೇವೆ, ಇದನ್ನೂ ಸಹ ಹಾಗೆಯೇ ಎದುರಿಸುತ್ತೇವೆ ಎಂಬ ಆತ್ಮವಿಶ್ವಾಸ ವಿದ್ಯಾರ್ಥಿಗೆ ಅತ್ಯಗತ್ಯ. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ತೆಗೆದುಕೊಳ್ಳುವ ಪರೀಕ್ಷೆಯ ಪ್ರಕ್ರಿಯೆಯಲ್ಲಿ ನಾವೂ ಇದ್ದೇವೆ ಎಂದು ಹೆಮ್ಮೆ ಪಟ್ಟುಕೊಂಡು ಓದಲು ಶುರುಮಾಡಿ. ಬಹಳಷ್ಟು ಸ೦ದರ್ಭಗಳಲ್ಲಿ ವಿದ್ಯಾರ್ಥಿಯ ಆಸಮರ್ಪಕ ತಯಾರಿಯೇ ಆಪಯಶಸ್ಸಿಗೆ ಮೂಲಕಾರಣವಾಗಿರುತ್ತದೆ. ನಾವು ಪಡುವ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದಿದ್ದಾಗ ನಾವು ಕೆಲಸ ಮಾಡುವ ವೈಖರಿಯಲ್ಲೇ ದೋಷವಿರುವುದು ತಿಳಿಯುತ್ತದೆ. ಇ೦ದಿನ ನಮ್ಮ ವಿದ್ಯಾರ್ಥಿಗಳು ಕಾಳಿದಾಸನಂಥವರೆ. ತಾನು ನಿ೦ತಿದ್ದ ಮರದ ಕೊ೦ಬೆಯನ್ನೇ ಕಡಿಯುತ್ತಿದ್ದ ಆತನ ಪೂರ್ವಾಶ್ರಮದ ಕತೆ ಎಲ್ಲರಿಗೂ ಗೊತ್ತಿದೆ. ಪರೀಕ್ಷೆ ಪಾಸು ಮಾಡಲು ಕಠಿಣ ಶ್ರಮಪಡುವ ನಮ್ಮ ವಿದ್ಯಾರ್ಥಿಗಳೂ ಸಹ ಸಾಮಾನ್ಯಜ್ಞಾನದ (ಕಾಮನ್ ಸೆನ್ಸ್) ಕೊರತೆಯಿ೦ದಾಗಿ ಪರೀಕ್ಷೆಗಳಲ್ಲಿ ನಿರೀಕ್ಷಿತ ಯಶಸ್ಸು ಪಡೆಯುವುದಿಲ್ಲ ಎಂಬ ಮಾತಿದೆ.

ಪರೀಕ್ಷಾ ಪೂರ್ವ ತಯಾರಿ

ವರ್ಷದುದ್ದಕ್ಕೂ ಶಾಲೆ–ಕಾಲೇಜುಗಳಲ್ಲಿ ಮಾಡಿದ ಪಾಠ–ಪದ್ಯಗಳು, ಬರೆಸಿದ ಪ್ರಶ್ನೋತ್ತರಗಳು, ಪ್ರಯೋಗಾಲಯದಲ್ಲಿ ಕೈಗೊ೦ಡ ಪ್ರಯೋಗಗಳು, ಶೈಕ್ಷಣಿಕ ಪ್ರವಾಸದಲ್ಲಿ ಸ೦ದರ್ಶಿಸಿದ ವಿವಿಧ ಸ್ಥಳಗಳ ಬಗ್ಗೆ ಸ೦ಗ್ರಹಿಸಿದ ಮಾಹಿತಿಗಳು... ಇತ್ಯಾದಿಗಳನ್ನು ನೆನಪಿಟ್ಟುಕೊ೦ಡು ಕಲಿತ ವಿವಿಧ ವಿಷಯಗಳ ಪಾಠಗಳ ಮೇಲೆ ಕೇಳಲಾಗುವ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ಬರೆಯಬೇಕಾಗುತ್ತದೆ. ವಾರ್ಷಿಕ ಪರೀಕ್ಷೆಗಿ೦ತ ಮು೦ಚೆ ಶಾಲೆ–ಕಾಲೇಜುಗಳಲ್ಲಿ ಪ್ರತಿ ತಿ೦ಗಳೂ ಕಿರು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಜೊತೆಗೆ ಮಧ್ಯವಾರ್ಷಿಕ ಮತ್ತು ಪ್ರಿಪರೇಟರಿ ಪರೀಕ್ಷೆಗಳೂ ಇರುತ್ತವೆ. ಬರಲಿರುವ ಮುಖ್ಯ ಪರೀಕ್ಷೆ ಬರೆಯಲು ಆತ್ಮವಿಶ್ವಾಸದಿ೦ದ ಇರಲಿ ಎ೦ಬ ಉದ್ದೇಶದಿ೦ದ ಅನೇಕ ತರಗತಿ ಮಟ್ಟದ ಟಾಪಿಕ್ ವೈಸ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದು ಶಾಲೆಗಳು ನೀಡುವ ತಯಾರಿಯ ಭಾಗ. ವಿದ್ಯಾರ್ಥಿಯು ಸಹ ವಾರ್ಷಿಕ ಪರೀಕ್ಷೆ ಎದುರಿಸಲು ತನ್ನದೇ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಅದು ಹೀಗಿದ್ದರೆ ಸರಿ.

* ದಿನವೊ೦ದಕ್ಕೆ ಎಷ್ಟು ಗ೦ಟೆಗಳ ಕಾಲ ಯಾವ, ಯಾವ ವಿಷಯಗಳನ್ನು ಕಲಿಯಬೇಕೆ೦ಬುದರ ಬಗ್ಗೆ ವಿಷಯವಾರು ಸ್ಟಡೀ ಟೈಮ್ ಟೇಬಲ್‌ನ್ನು ತಯಾರಿಸಿಕೊ೦ಡು ಅದನ್ನು ತಪ್ಪದೆ ಅನುಸರಿಸಬೇಕು. ಈಗಾಗಲೇ ಲಭ್ಯವಿರುವ ನೋಟ್ಸ್, ಗೈಡ್ ಮತ್ತು ಪಠ್ಯಪುಸ್ತಕಗಳನ್ನೇ ಓದಬೇಕು.

* ಕಳೆದ ವರ್ಷಗಳ ಪ್ರಶ್ನೆಪತ್ರಿಕೆ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೂಲಂಕಷವಾಗಿ ನೋಡಿ ಯಾವ ವಿಷಯ/ ಪಾಠದ ಬಗ್ಗೆ ಹೆಚ್ಚಿನ ಪ್ರಶ್ನೆಗಳಿವೆ ಎಂಬುದನ್ನು ಮೊದಲು ಗಮನಿಸಿ. ನಂತರ ನಿಮಗೆ ಸುಲಭವನ್ನಿಸುವ ವಿಭಾಗಗಳ ಪ್ರಶ್ನೆಗಳಿಗೆ ಉತ್ತರ ಬರೆಯುವುದನ್ನು ಕಲಿಯಿರಿ.

* ಪಠ್ಯಪುಸ್ತಕದಲ್ಲಿ ಬಿಡಿಸಲಾದ ಪ್ರಶ್ನೆಗಳೇ ಪ್ರಶ್ನೆಪತ್ರಿಕೆಯಲ್ಲಿ ಬರುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಟೆಕ್ಸ್ಟ್ ಬುಕ್‌ನ ಎಲ್ಲಾ ವರ್ಕ್ಸ್‌ ಎಕ್ಸಾಂಪಲ್‌ಗಳನ್ನು ಪ್ರತ್ಯೇಕವಾಗಿ ಬರೆದುಕೊಂಡು ಅಭ್ಯಸಿಸಿರಿ.

* ಪ್ರಶ್ನೆಗಳಿಗೆ ಉತ್ತರ ಹುಡುಕುವ ಬದಲು, ಪಠ್ಯದಲ್ಲಿರುವ ಪಾಠವನ್ನು ಪೂರ್ಣವಾಗಿ ಓದಿದ ನ೦ತರ ಪ್ರಶ್ನೆಗಳ ಕಡೆ ಗಮನಹರಿಸಿ ಉತ್ತರಗಳನ್ನು ಕಲಿಯಬೇಕು.

* ಯಾವುದನ್ನೇ ಓದಿದರೂ ಆರ್ಥಮಾಡಿಕೊಳ್ಳುತ್ತ ಓದಬೇಕು. ಆರ್ಥಮಾಡಿಕೊ೦ಡದ್ದನ್ನು ಬರೆಯಬೇಕು. ನ೦ತರ ನೆನಪಿಟ್ಟುಕೊಳ್ಳುವ ಪ್ರಯತ್ನ ಮಾಡಬೇಕು.

* ಯಾವುದಾದರೂ ವಿಷಯ ಅರ್ಥವಾಗದಿದ್ದರೆ, ತಿಳಿದವರ ಬಳಿ ಅದನ್ನು ಹೇಳಿಸಿಕೊಳ್ಳಬೇಕು. ಮನೆಯಲ್ಲಿನ ಹಿರಿಯರಿ೦ದ ಅದು ಸಾಧ್ಯವಾಗದಿದ್ದರೆ, ಮನೆಯ ಬಳಿಯೇ ಇರುವ ಅಧ್ಯಾಪಕರ ನೆರವು ಪಡೆಯಬೇಕು.

* ವಿಶ್ರಾಂತಿಯಿಲ್ಲದೆ ದಿನಗಟ್ಟಲೇ ಓದಬೇಡಿ. ಗ೦ಟೆ ಎರಡು ಗ೦ಟೆಗಳಿಗೊಮ್ಮೆ ಮೆದುಳಿಗೆ ವಿಶ್ರಾ೦ತಿ ಕೊಡಿ. ಒತ್ತಡದ ಸಮಯದಲ್ಲಿ ಮೆದುಳಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಬೇಕಾಗುತ್ತದೆ. ಒ೦ದೆರಡು ಗ೦ಟೆ ಓದಿದ ನ೦ತರ ಕುಳಿತಲ್ಲಿ೦ದ ಎದ್ದು ಓಡಾಡಿ.

* ಮನೆಯ ಅ೦ಗಳ ವಿಶಾಲವಾಗಿದ್ದರೆ, ಶಬ್ದಮಾಲಿನ್ಯದಿ೦ದ ಮುಕ್ತವಾಗಿದ್ದರೆ ಅಲ್ಲಿ ತುಸು ಸಮಯ ಕಳೆಯಿರಿ. ಬಿಡುವಿನಲ್ಲಿ ದಿನಪತ್ರಿಕೆಗಳ ತಲೆಬರಹದ ಕಡೆ ಕಣ್ಣು ಹಾಯಿಸಿರಿ.

* ಟೀವಿಯಲ್ಲಿ ಪರೀಕ್ಷೆ ಕುರಿತು ಪ್ರಸಾರವಾಗುವ ಸಂವಾದ, ಚರ್ಚೆ, ಪ್ರಶ್ನೋತ್ತರಗಳನ್ನು ನೋಡಿರಿ. ಅನುಮಾನಗಳಿದ್ದರೆ ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳಿ.

* ಸ೦ಜೆಯ ವಾತಾವರಣ ಪ್ರಶಾ೦ತವಾಗಿದ್ದರೆ ಸ್ವಲ್ಪ ದೂರ ನಡೆದು ಹೊಸಗಾಳಿ ಸೇವಿಸಿದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಮೆದುಳಿಗೆ ವಿಶ್ರಾ೦ತಿ ದೊರೆತ ನ೦ತರ ಓದಿದ್ದು, ಬರೆದದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ.

* ಮೊಬೈಲ್ ಮತ್ತು X-ಬಾಕ್ಸ್‌ಗಳಲ್ಲಿ ಗೇಮ್ ಆಡುವ ಅಭ್ಯಾಸವಿದ್ದರೆ ದಿನದ ಅರ್ಧ ಗಂಟೆಯನ್ನು ಅದಕ್ಕಾಗಿ ಬಳಸಿ ರಿಫ್ರೆಶ್ ಆಗಿರಿ.

* ದಿನವಿಡೀ ಒ೦ದೇ ವಿಷಯವನ್ನು ಓದುತ್ತಾ ಕೂರಬೇಡಿ. ಬೇರೆ ಬೇರೆ ವಿಷಯಗಳನ್ನು ಓದುವುದರಿ೦ದ ಮನಸ್ಸಿನ ಏಕತಾನತೆ ದೂರವಾಗುತ್ತದೆ. ಮತ್ತೆ ಮತ್ತೆ ಓದಬೇಕೆನ್ನುವ ಆಸಕ್ತಿ ಮೂಡುತ್ತದೆ.

* ಊಟಕ್ಕೆ ಕುಳಿತಾಗ ಓದುವ ಹವ್ಯಾಸವಿದ್ದರೆ ಅದನ್ನು ತ್ಯಜಿಸಿ.

* ಮಲಗಿಕೊ೦ಡು ಓದುವುದರಿ೦ದ ಕಣ್ಣುಗಳಿಗೆ ಹೆಚ್ಚು ಶ್ರಮವಾಗಿ ಬೇಗ ನಿದ್ರೆಯಾವರಿಸುತ್ತದೆ. ಮಲಗಿಕೊ೦ಡು ಓದುವುದನ್ನು ಬಿಡಿ.

ವಿಷಯಾಧಾರಿತ ತಯಾರಿ ಹೇಗೆ?

ಪರೀಕ್ಷೆ ತೆಗೆದುಕೊಳ್ಳುವ ಎಲ್ಲ ವಿಷಯಗಳನ್ನು ಒಂದೇ ರೀತಿಯಲ್ಲಿ ಅಭ್ಯಸಿಸಲು ಸಾಧ್ಯವಿಲ್ಲ. ನೆನಪಿನ ಶಕ್ತಿ, ತರ್ಕ, ಚಿತ್ರ ಬಿಡಿಸುವ ಕಲೆ, ಹಂತ ಹಂತವಾಗಿ ಸಮಸ್ಯೆ ಬಿಡಿಸುವ ವಿಧಾನಗಳನ್ನು ಬಳಸಿ ವಿವಿಧ ವಿಷಯಗಳ ಪ್ರಾಯೋಗಿಕ ಹಾಗೂ ತಾತ್ವಿಕ ಪರೀಕ್ಷೆಗಳನ್ನು ಎದುರಿಸಬೇಕಾದ್ದರಿಂದ ಆಯಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.

ಉದಾಹರಣೆಗೆ ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ ಮು೦ತಾದ ವಿಷಯಗಳಲ್ಲಿ ಉತ್ತರಗಳ ಜೊತೆ ಚಿತ್ರಗಳನ್ನು ಬರೆದು ಅದರ ವಿವಿಧ ಭಾಗಗಳನ್ನು ಗುರುತಿಸಬೇಕಾಗುತ್ತದೆ. ಚಿತ್ರಗಳನ್ನು ಅ೦ದವಾಗಿ ಬರೆದು ಭಾಗಗಳನ್ನು ಸರಿಯಾಗಿ ಗುರುತಿಸಿದರೆ ಹೆಚ್ಚು ಅ೦ಕಗಳು ದೊರೆಯುವುದು ಖಚಿತ. ಇದಕ್ಕಾಗಿ ನಿರ೦ತರ ಅಭ್ಯಾಸಬೇಕು. ಚಿತ್ರ ಬರೆಯುವ ಮತ್ತು ಭಾಗಗಳನ್ನು ಗುರುತಿಸುವ ಕೆಲಸವನ್ನು ಪರೀಕ್ಷೆ ಸಮೀಪಿಸುವವರೆಗೂ ಮು೦ದೂಡಬಾರದು.

ಗಣಿತದ ವಿಷಯಕ್ಕೆ ಬ೦ದರೆ ವಿದ್ಯಾರ್ಥಿಗಳು ಆರ್ಧ ಧೈರ್ಯ ಕಳೆದುಕೊಳ್ಳುತ್ತಾರೆ. ಗಣಿತ ಬಹುಪಾಲು ವಿದ್ಯಾರ್ಥಿಗಳಿಗೆ ಪರಮ ಶತ್ರುವಾಗಿ ಪರಿಣಮಿಸಿದೆ. ಗಣಿತದ ಕಲಿಕಾಕ್ರಮಗಳು ಸ೦ಕೀರ್ಣವಾದರೂ ವಿಷಯ ಕಲಿಯಲಾಗದ್ದು, ಅರ್ಥವಾಗದ್ದು ಅಲ್ಲ. ಗಣಿತಕ್ಕೆ ಸ೦ಬ೦ಧಪಟ್ಟ ಉತ್ತರಗಳನ್ನು ಬರೆದೇ ಕಲಿಯಬೇಕು. ಅಲ್ಲಿ ಬರುವ ಅನೇಕ ಸೂತ್ರಗಳು, ನಿಯಮಗಳು, ಕ್ರಿಯೆಗಳು, ಸಮಸ್ಯೆಗಳು, ರಚನೆಗಳು ಕೆಲವೊಮ್ಮೆ ಎ೦ಥವರನ್ನೂ ಗೊ೦ದಲಗೊಳಿಸುತ್ತವೆ. ಆದರೆ ಹೆದರುವ ಅಗತ್ಯವಿಲ್ಲ. ಎಷ್ಟೇ ದೊಡ್ಡ ಉತ್ತರವಿರಲಿ, ಬರೆದೇ ಅಭ್ಯಸಿಸಬೇಕು. ನಿಮ್ಮ ಪಠ್ಯಕ್ರಮದಲ್ಲಿ ಅಡಕವಾಗಿರುವ ಮುಖ್ಯ ಸೂತ್ರಗಳನ್ನು ಒ೦ದು ಪಟ್ಟಿಯಲ್ಲಿ ಬರೆದು ಮನೆಯಲ್ಲಿ ನೀವು ಕುಳಿತುಕೊಳ್ಳುವ ಸ್ಥಳ, ಉಪಯೋಗಿಸುವ ಕ೦ಪಾಸ್ ಬಾಕ್ಸ್‌ನಲ್ಲಿ ಅಥವಾ ಕನ್ನಡಿಯ ಮಗ್ಗುಲಿನಲ್ಲಿ ಅ೦ಟಿಸಿದರೆ, ಅದನ್ನು ಪ್ರತಿನಿತ್ಯ ನೋಡುವ ನೀವು ಅವುಗಳನ್ನು ಹೆಚ್ಚು ಶ್ರಮಪಡದೆ ನೆನಪಿನಲ್ಲಿರಿಸಿಕೊಳ್ಳಬಹುದು.

ವಿಜ್ಞಾನದ ವಿಷಯಗಳ ಸೂತ್ರ, ಚಿತ್ರ, ಲೆಕ್ಕಗಳನ್ನೊಳಗೊಳ್ಳುವ ಬಹುತೇಕ ಉತ್ತರಗಳನ್ನು ಕಂಠಪಾಠ ಮಾಡಿ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅವುಗಳನ್ನು ಬರೆದೇ ಅಭ್ಯಸಿಸಿ.

ಗ್ರಾಫ್, ಹಿಸ್ಟೋಗ್ರಾಮ್, ಪೈಚಾರ್ಟ್, ಸ್ಟಾಟಿಸ್ಟಿಕ್ಸ್ ಮತ್ತು ರೇಖಾ ಗಣಿತದ ಬಹುತೇಕ ಪ್ರಶ್ನೆಗಳು ಸುಲಭವಾಗಿರುತ್ತವಾದ್ದರಿಂದ ಅವುಗಳನ್ನು ತಪ್ಪದೇ ಉತ್ತರಿಸಿ.

ಪಿಯುಸಿ ವಿದ್ಯಾರ್ಥಿಗಳಿಗೆ ಸಾಧಾರಣ ಕ್ಯಾಲ್ಕುಲೇಟರ್ ಬಳಕೆಗೆ ಅವಕಾಶವಿದೆ. ಅದರ ಸಮರ್ಥ ಉಪಯೋಗ ಪಡೆಯಿರಿ.

ಪಿಯುಸಿಯ ವಿಜ್ಞಾನ/ವಾಣಿಜ್ಯ ವಿಷಯಗಳ ಪ್ರಾಯೋಗಿಕ ಪರೀಕ್ಷೆಗೆ 30 ಅಂಕಗಳು ನಿಗದಿಯಾಗಿವೆ. ಕಲಿಸಿದ ಶಿಕ್ಷಕರೇ ಆಂತರಿಕ ಮಾಲ್ಯಮಾಪಕರಾಗಿದ್ದು, ರೆಕಾರ್ಡ್ ಬರಹ, ಪ್ರಯೋಗ ಸಿದ್ಧತೆ, ಮೌಖಿಕ ಪ್ರಶ್ನೋತರಗಳಿಗೆ ಅಂಕಗಳಿರುವುದರಿಂದ ವಿದ್ಯಾರ್ಥಿಗಳು ಸುಲಭವಾಗಿ ಇಪ್ಪತ್ತಕ್ಕೂ ಹೆಚ್ಚಿನ ಅಂಕಗಳಿಸುವ ಅವಕಾಶಗಳು ಹೆಚ್ಚು. ಅದರ ಸದುಪಯೋಗ ಪಡೆದುಕೊಳ್ಳಿ.

ನಿಮ್ಮ ನೋಟ್ಸ್ ಅಥವಾ ಪಠ್ಯಪುಸ್ತಕಗಳಲ್ಲಿ ಸಾಕಷ್ಟು ಸಂಖ್ಯೆಯ ಉದಾಹರಣೆಗಳಿರದಿದ್ದರೆ ಅಭ್ಯಾಸಕ್ಕಾಗಿ ‘ಗೂಗಲ್’ನಲ್ಲಿ ಹುಡುಕಿ.

ಇಲಾಖೆಯ ‘ಸಹಾಯವಾಣಿ’ಯನ್ನು ಸಂಪರ್ಕಿಸಿ ಅನುಮಾನಗಳನ್ನು ಬಗೆಹರಿಸಿಕೊಳ್ಳಿ.

ಪರೀಕ್ಷಾ ಕೊಠಡಿಯಲ್ಲೇನು ಮಾಡಬೇಕು?

* ಪರೀಕ್ಷಾ ಕೊಠಡಿಯಲ್ಲಿ ನೀವು ಕುಳಿತುಕೊಳ್ಳುವ ಬೆ೦ಚು, ಸ್ಥಳ ಶುಭ್ರವಾಗಿದೆಯೆ? ಅದು ಗಟ್ಟಿಮುಟ್ಟಾಗಿದೆಯೇ ಎ೦ಬುದನ್ನು ಪರೀಕ್ಷಿಸಿ ಕುಳಿತುಕೊಳ್ಳಿ.

* ನಿಮಗೆ ನೀಡಲಾಗಿರುವ ಪ್ರಶ್ನೆ ಪತ್ರಿಕೆ ಓಲ್ಡ್ ಸ್ಕೀಮ್‌ನದ್ದಾ ಅಥವಾ ನ್ಯೂ ಸ್ಕೀಮ್‌ನದ್ದಾ ಎಂದು ಖಚಿತ ಪಡಿಸಿಕೊಂಡು ನಂತರ ಉತ್ತರಿಸಲು ಪ್ರಾರಂಭಿಸಿ.

* ಉತ್ತರ ಬರೆಯಲು ಪ್ರಾರ೦ಭಿಸುವುದಕ್ಕಿ೦ತ ಮು೦ಚೆ ಪ್ರಶ್ನೆಪತ್ರಿಕೆಯನ್ನು ಪೂರ್ತಿಯಾಗಿ ನಿಧಾನವಾಗಿ ಓದಿಕೊಳ್ಳಿ, ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಸ್ಫುಟವಾಗಿ ಉತ್ತರ ಬರೆದ ನಂತರ ಯಾವ ಪ್ರಶ್ನೆಗಳಿಗೆ ಉತ್ತರ ಬರೆದಿಲ್ಲವೊ, ಯಾವುದನ್ನಾದರೂ ಅರ್ಧಕ್ಕೆ ನಿಲ್ಲಿಸಿದ್ದೀರೋ ಅದನ್ನು ಮುಂದುವರಿಸಲು ಪ್ರಯತ್ನಿಸಿ.

* ಉತ್ತರ ಬರೆಯುವಾಗ ಯಾವುದಾದರೂ ಪ್ರಶ್ನೆಗೆ ಉತ್ತರ ದೊರೆಯದಿದ್ದಾಗ ಅದರ ಬಗ್ಗೆಯೇ ಚಿ೦ತಿಸುತ್ತ ಸಮಯ ಕಳೆಯಬೇಡಿ. ಮು೦ದಿನ ಪ್ರಶ್ನೆಗೆ ಉತ್ತರ ಬರೆಯಲು ಪ್ರಾರ೦ಭಿಸಿ.

* ಪರೀಕ್ಷೆಯ ಕೊನೆಗೆ ಸಮಯ ಉಳಿದರೆ ಪ್ರತಿ ಉತ್ತರದ ನ೦ತರ ಗೆರೆ ಎಳೆಯಿರಿ. ಯಾವುದಾದರೂ ಪ್ರಶ್ನೆಗೆ ಅರ್ಧ ಅಥವ ಕಡಿಮೆ ಉತ್ತರ ಬರೆದಿದ್ದರೆ ತುಸು ಜಾಗ ಬಿಟ್ಟು ಮು೦ದಿನ ಉತ್ತರ ಬರೆಯಿರಿ.

* ಕೆಲವು ಪ್ರಶ್ನೆಗಳಿಗೆ ಇಂತಿಷ್ಟೇ ಪದಗಳಲ್ಲಿ ಉತ್ತರ ಬರೆಯಬೇಕೆಂಬ ನಿರ್ಬಂಧವಿರುತ್ತದೆ, ಅದನ್ನು ತಪ್ಪದೇ ಪಾಲಿಸಿ. ಉತ್ತರ ಬರೆಯುವಾಗ ಸಮಯದ ಬಗ್ಗೆ ಗಮನವಿರಲಿ.

* ಪ್ರತೀ ಗುಂಪಿನ ಪ್ರಶ್ನೆಗಳಲ್ಲೂ ಆಯ್ಕೆಗಳಿರುತ್ತವೆ. ಅದನ್ನು ಗಮನಿಸಿ, ಕೇಳಿದಷ್ಟು ಪ್ರಶ್ನೆಗಳಿಗೆ ಮಾತ್ರ ಉತ್ತರ ಬರೆಯಿರಿ.

* ನೂರು ಅಂಕದ ಪ್ರಶ್ನೆಗಳಿಗೆ ಉತ್ತರಿಸಿದ ಮೇಲೂ ಸಮಯವುಳಿದರೆ, ಇತರ ಪ್ರಶ್ನೆಗಳಿಗೂ ಉತ್ತರ ಬರೆಯಿರಿ.

ಉತ್ತರಿಸುವ ರೀತಿಯೂ ಮುಖ್ಯ

ಉತ್ತರಗಳನ್ನು ಸ್ಪಷ್ಟವಾಗಿ ಸಾಧ್ಯವಾದಷ್ಟೂ ಕಾಟು–ಚಿತ್ತುಗಳಿಲ್ಲದೆ ಅರ್ಥವಾಗುವಂತೆ ಬರೆಯಿರಿ.
ಚಿತ್ರ ಬರೆದು ಉತ್ತರಿಸುವ ಪ್ರಶ್ನೆಗಳನ್ನು ಸಾಧ್ಯವಾದಷ್ಟೂ ನೀಟಾಗಿ ಬರೆದು ಭಾಗಗಳನ್ನು ಗುರುತಿಸಿ.
ಗಣಿತದ ಲೆಕ್ಕಗಳ ಉತ್ತರ ಸರಿಯಾಗಿದೆಯೇ ಎಂಬುದನ್ನು ಪುನಃ ಪರೀಕ್ಷಿಸಲು ಉತ್ತರ ಪತ್ರಿಕೆಯ ಕೊನೆಯ ಹಾಳೆಯಲ್ಲಿ ಬರೆದು ಪರೀಕ್ಷಿಸಿ, ತಾಳೆ ಮಾಡಿಕೊಳ್ಳಿ.

ಉತ್ತರ ಬರೆಯುವಾಗ ಸಮಯ ನಿರ್ವಣೆ ಮುಖ್ಯ. ತಯಾರಿ ಸರಿಯಾಗಿದ್ದರೆ 100 ಅಂಕದ ಪ್ರಶ್ನೆಪತ್ರಿಕೆಯನ್ನು ಎರಡೂಕಾಲು ಗಂಟೆಗಳಲ್ಲಿ ಬರೆದು ಮುಗಿಸಿ ಉಳಿದ ಸಮಯದಲ್ಲಿ ಬರೆದ ಉತ್ತರಗಳನ್ನು ಪರಿಶೀಲಿಸಬಹುದು.
ಉತ್ತರ ಪತ್ರಿಕೆಯಲ್ಲಿ ಪ್ರಶ್ನೆಯ ಸಂಖ್ಯೆಯನ್ನು ಬರೆದರೆ ಸಾಕು. ಇಡೀ ಪ್ರಶ್ನೆಯನ್ನು ಬರೆಯುವ ಅವಶ್ಯಕತೆ ಇಲ್ಲ.
ಅವಶ್ಯಕತೆ ಇದ್ದಲ್ಲಿ ಉತ್ತರದ ಕೆಲವು ಪದ, ಅಂಕಿ–ಅಂಶಗಳನ್ನು ಅಂಡರ್‌ಲೈನ್ ಮಾಡಿ.

ಪರೀಕ್ಷೆ ತಯಾರಿಗೆ ಹೊತ್ತು–ಗೊತ್ತು.

ವಿದ್ಯಾರ್ಥಿಯು ಯಾವ ಹೊತ್ತಿನಲ್ಲಿ ಓದಬೇಕು? ಬೆಳಗಿನ ಜಾವ ಓದಿದರೆ ಚೆನ್ನಾಗಿ ತಲೆಗೆ ಹತ್ತುತ್ತದೆ. ರಾತ್ರಿ ನಿದ್ದೆಗೆಟ್ಟು ಓದಿದರೆ ಬರುವುದೂ ಮರೆತು ಹೋಗುತ್ತದೆ ಎ೦ಬ ಅಪನ೦ಬಿಕೆ ಅನೇಕರಲ್ಲಿದೆ. ಇದಕ್ಕೆ ಯಾವ ವೈಜ್ಞಾನಿಕ ಆಧಾರವೂ ಇಲ್ಲ. ಒಟ್ಟಿನಲ್ಲಿ ವಿದ್ಯಾರ್ಥಿ ಓದಲು ಕುಳಿತುಕೊಳ್ಳುವ ಸ್ಥಳ ಪ್ರಶಾ೦ತವಾಗಿದ್ದು, ಸರಿಯಾದ ಬೆಳಕಿನ ವ್ಯವಸ್ಥೆ ಹೊ೦ದಿದ್ದರೆ ಸಾಕು. ಸಮಯದ ಆಯ್ಕೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾತ೦ತ್ರ್ಯವಿದೆಯಾದರೂ, ತಜ್ಞರ ಪ್ರಕಾರ ಬೆಳಗಿನ ಜಾವ ಎಲ್ಲಾ ಯಾ೦ತ್ರಿಕ ಚಟುವಟಿಕೆಗಳಿ೦ದ ಮುಕ್ತವಾಗಿರುವುದರಿ೦ದ ಪರಿಸರ ಶಾ೦ತವಾಗಿರುತ್ತದೆ. ಮನೆಯ ಟೀವಿ, ರೇಡಿಯೋ, ವೀಡಿಯೊ ಎಲ್ಲ ಮನರ೦ಜನಾ ಸಾಧನಗಳು ಸುಮ್ಮನಿರುತ್ತವೆ. ಅ೦ಥ ಮೇಳೆಯಲ್ಲಿ ಗಮನವಿಟ್ಟು ಓದುವ ವಿದ್ಯಾರ್ಥಿ ಹೆಚ್ಚು ಹೆಚ್ಚು ವಿಷಯಗಳನ್ನು ನೆನಪಿಟ್ಟುಕೊಳ್ಳಬಹುದು. ಆದರೆ ವೈದ್ಯಕೀಯ ವಿಜ್ಞಾನದ ಪ್ರಕಾರ ಓದಲು ಇ೦ತಹ ವೇಳೆ ಶ್ರೇಷ್ಠ, ಮತ್ತೊ೦ದು ನಿಕೃಷ್ಠ ಎನ್ನುವುದು ಇಲ್ಲವೇ ಇಲ್ಲ. ಯಾವ ಪರಿಸರದಲ್ಲಿ ಓದುತ್ತಿದ್ದಾನೆ ಮತ್ತು ಎಷ್ಟರಮಟ್ಟಿಗೆ ಗಮನವಿಟ್ಟು ಓದುತ್ತಿದ್ದಾನೆ ಎನ್ನುವುದು ಮುಖ್ಯ.

ಗ್ರೂಪ್ ಸ್ಟಡೀ ಮತ್ತು ನೈಟ್‌ಔಟ್

ನಮ್ಮ ಬಹುತೇಕ ತಾಲ್ಲೂಕು, ಪಟ್ಟಣ ಕೇಂದ್ರಗಳ ವಿದ್ಯಾರ್ಥಿ ಸಮುದಾಯಕ್ಕೆ ಅಂಟಿಕೊಂಡಿರುವ ಹೊಸ ಕಾಯಿಲೆಯೆ೦ದರೆ ಗ್ರೂಪ್ ಸ್ಟಡಿ ಅಥವಾ ಗು೦ಪು ಅಧ್ಯಯನದ್ದು. ಇದರಿ೦ದಾಗುವ ಲಾಭಕ್ಕಿ೦ತ ನಷ್ಟವೇ ಹೆಚ್ಚು. ಒಟ್ಟಿಗೆ ಓದುತ್ತೇವೆ೦ದು ಒ೦ದೆಡೆ ಸೇರುವ ವಿದ್ಯಾರ್ಥಿಗಳು ಹರಟುತ್ತಾ ಅಮೂಲ್ಯ ಸಮಯವನ್ನು ಕಳೆದು, ರಾತ್ರಿ ಹೊತ್ತಾದ ನ೦ತರ ಮಲಗಿ, ಮರುದಿನ ಪೂರ್ತಿ ನಿದ್ದೆಯ ಮಬ್ಬಿನಲ್ಲೇ ಇರುವುದರಿ೦ದ ಏನನ್ನೋದಿದರೂ ಅರ್ಥವಾಗುವುದಿಲ್ಲ. ಆದ್ದರಿ೦ದ ‘ಗ್ರೂಪ್ ಸ್ಟಡಿ’‌ಯ ಪ್ರಯತ್ನ ಮಾಡದಿರುವುದೇ ಒಳ್ಳೆಯದು. ಪರೀಕ್ಷೆಯ ಹಿಂದಿನ ರಾತ್ರಿ ಪೂರ್ತಿ ಓದುವ ‘ನೈಟ್‌ಔಟ್’ನಿಂದಾಗಿ ಹೆಚ್ಚಿನ ಮಾನಸಿಕ ಒತ್ತಡಕೊಳಗಾಗುವ ಸಾಧ್ಯತೆಗಳಿರುತ್ತವೆ. ಆ ರೀತಿ ನಿದ್ದೆಗೆಟ್ಟು ಓದಬೇಡಿ. ಪರೀಕ್ಷಾ ಕೊಠಡಿಯ ಶಬ್ದ ಮಾಲಿನ್ಯರಹಿತ ವಾತಾವರಣ ಅನೇಕ ವಿದ್ಯಾರ್ಥಿಗಳನ್ನು ನಿದ್ದೆಗೆ ದೂಡಿದ ಉದಾಹರಣೆಗಳಿವೆ.

ಪೋಷಕರ ಜವಾಬ್ದಾರಿ

ಮಕ್ಕಳ ಬೆಳವಣಿಗೆಯ ಹ೦ತದಲ್ಲಿ ಯಶಸ್ಸನ್ನು ನಿರೀಕ್ಷಿಸುವುದು ಪೋಷಕರ ಸಹಜಗುಣ. ಮಕ್ಕಳ ಯಶಸ್ಸಿಗೆ ಬೇಕಾದ ಶಿಕ್ಷಣ ಕೊಡಿಸುವುದರ ಜೊತೆ ಉತ್ತಮ ಅ೦ಕ ಗಳಿಸಲು ಉತ್ತೇಜನ ನೀಡಿ. ಆದರೆ ಇಂತಿಷ್ಟೇ ಅಂಕಗಳಿಸಬೇಕು, ರ‍್ಯಾ೦ಕ್ ಗಳಿಸಲೇಬೇಕು, ಶಾಲೆಗೆ ಫಸ್ಟ್ ಬರಬೇಕೆಂಬ ಒತ್ತಾಯ ಹೇರಬೇಡಿ. ಇನ್ನೊಬ್ಬ ವಿದ್ಯಾರ್ಥಿಯೊ೦ದಿಗೆ ಹೋಲಿಸಿ ನಿಮ್ಮ ಮಗನನ್ನು ಅಥವಾ ಮಗಳನ್ನು ಹೀಯಾಳಿಸಬೇಡಿ. ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗದಿದ್ದರೆ ಮತ್ತೊಮ್ಮೆ ಪ್ರಯತ್ನಿಸುವ೦ತೆ ಧೈರ್ಯ ತು೦ಬಿರಿ.

ಮಕ್ಕಳು ಮನೆಯಲ್ಲಿ ಓದುತ್ತಿದ್ದಾಗ ನಿಮ್ಮ ದಿನನಿತ್ಯದ ಹವ್ಯಾಸಗಳಾದ ಟೀವಿ ನೋಡುವುದು, ರೇಡಿಯೋ ಆಲಿಸುವುದು, ದೊಡ್ಡ ದನಿಯಲ್ಲಿ ಇತರರೊ೦ದಿಗೆ ಚರ್ಚಿಸುವುದನ್ನು ಕಡಿಮೆ ಮಾಡಿರಿ.

ನಿನ್ನ ಓದಿಗಾಗಿ, ಟ್ಯೂಷನ್‌ಗಾಗಿ ಎಷ್ಟೊಂದು ಖರ್ಚು ಮಾಡಿದ್ದೇವೆ, ಅದು ನೆನಪಿರಲಿ ಎಂದು ಚುಚ್ಚಬೇಡಿ.
ಹೀಗೆಯೇ ಓದು, ಇಷ್ಟು ಹೊತ್ತೇ ಓದು, ಎದನ್ನೇ ಓದು ಎಂದು ಒತ್ತಾಯಿಸಬೇಡಿ.

ಮಕ್ಕಳ ಕಲಿಕೆಯ ಎಲ್ಲ ಹ೦ತಗಳಲ್ಲಿ ಸೂಕ್ತ ಸಲಹೆ ಸೂಚನೆ ನೀಡುವುದರೊ೦ದಿಗೆ ಮುಕ್ತ ಮನಸ್ಸಿನ ಪ್ರೋತ್ಸಾಹ ನೀಡಿದರೆ ಯಶಸ್ಸು ನಿಮ್ಮ ಮಕ್ಕಳನ್ನೇ ಹುಡುಕಿಕೊ೦ಡು ಬರುತ್ತದೆ.

ಆರೋಗ್ಯ ಕಾಪಾಡಿಕೊಳ್ಳಿ

1. ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವಿಸಿ. ಹೊಟ್ಟೆಕೆಡಿಸುವ ಕರಿದ ತಿಂಡಿ, ಅತಿಯಾದ ಮಸಾಲೆಯುಕ್ತ ಜಂಕ್ ಫುಡ್ ನಿಂದ ದೂರವಿರಿ. ಬೀದಿ ಬದಿಯ ಆಹಾರಕ್ಕೆ ತಾತ್ಕಾಲಿಕವಾಗಿಯಾದರೂ ಗುಡ್‌ಬೈ ಹೇಳಿರಿ.

2. ದಿನಕ್ಕೆ ಕನಿಷ್ಠ ಏಳು ಗಂಟೆಗಳ ನಿದ್ದೆ ಮಾಡಿ, ಹಾಸಿಗೆಯ ಮೇಲೆ ಮಲಗಿಕೊಂಡು ಓದಬೇಡಿ.

3. ಒಂದೇ ಸ್ಥಳದಲ್ಲಿ ಕುಳಿತು ತಾಸುಗಟ್ಟಲೇ ಓದಬೇಡಿ. ಪ್ರತೀ ಗಂಟೆ, ಎರಡು ಗಂಟೆಗೊಮ್ಮೆ ಮನೆಯಲ್ಲೇ ಓಡಾಡಿರಿ.

4. ಸಾಕಷ್ಟು ನೀರು ಕುಡಿದು ದೇಹವನ್ನು ತಂಪಾಗಿರಿಸಿಕೊಳ್ಳಿ.

5. ಮಲಗುವ ಮುನ್ನ ಮೊಬೈಲ್ ವೀಕ್ಷಣೆ, ಚಾಟಿಂಗ್, ಗೇಮಿಂಗ್ ತ್ಯಜಿಸಿರಿ.

6. ಮೊಬೈಲ್/ಟ್ಯಾಬ್/ಲ್ಯಾಪ್‌ಟಾಪ್ ಬಳಸಿಯೇ ಓದುತ್ತೇವೆನ್ನುವವರ ಸ್ಕ್ರೀನ್‌ನ ಬ್ರೈಟ್‌ನೆಸ್‌ ಅನ್ನು ಕಡಿಮೆ ಮಾಡಿಕೊಂಡು ಓದಿರಿ.

‘ಪ್ರಶ್ನೆ ಪತ್ರಿಕೆ ಲೀಕ್’ ಆಗುತ್ತಾ?

ಇದರ ಬಗ್ಗೆ ಯಾವುದೇ ಊಹೆ, ಲೆಕ್ಕಾಚಾರ ಬೇಡ. ಕೆಲವು ಕಿಡಿಗೇಡಿಗಳು ಬೇಕೆಂದೇ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಕಂಪ್ಯೂಟರ್ ತಂತ್ರಜ್ಞಾನ ಬಳಸಿ ಕ್ರಾಪ್ ಮಾಡಿ ‘ಇದು ಈ ವರ್ಷದ್ದೇ’ ಎಂದು ಜಾಲತಾಣಗಳಲ್ಲಿ ಹರಿಬಿಟ್ಟು ನಿಮ್ಮನ್ನು ದಾರಿ ತಪ್ಪಿಸುತ್ತಾರೆ. ವರ್ಷವಿಡೀ ಓದಿದ್ದನ್ನೆಲ್ಲಾ ಬದಿಗಿರಿಸಿ, ಸಿಕ್ಕಿರುವ ನಕಲಿ ಪ್ರಶ್ನೆಗಳಿಗೆ ತಯಾರಾಗುವ ವಿದ್ಯಾರ್ಥಿಗಳು ಮೋಸ ಹೋಗಿರುವ ಉದಾಹರಣೆಗಳೇ ಹೆಚ್ಚು. ಈಗ್ಗೆ 4 ವರ್ಷಗಳ ಹಿಂದೆ ಪಿಯುಸಿ ಪ್ರಶ್ನೆಪತ್ರಿಕೆಗಳ ಸೋರಿಕೆ ಆಗಿದ್ದು ನಿಜವಾದರೂ ಅದು ನಡೆಯದಂತೆ ತಡೆಯಲು ‘ಕರ್ನಾಟಕ ಸೆಕ್ಯೂರ್ಡ್‌ ಎಕ್ಸಾಮಿನೇಶನ್ ಸಿಸ್ಟಮ್’ (KSES) ಅನ್ನು ಜಾರಿಗೆ ತಂದಿರುವ ಇಲಾಖೆ ಈಗಾಗಲೇ ಮೂರು ವರ್ಷ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಎಸ್ಸೆಮ್ಮೆಸ್, ವಾಟ್ಸ್‌ಪ್‌ನಲ್ಲಿ ಹರಿದಾಡುವ ಮಾಹಿತಿ, ವದಂತಿಗಳಿಗೆ ಕಿವಿಗೊಡಬೇಡಿ.

ಪತ್ರಿಕೆಯಲ್ಲಿ ಪ್ರಶ್ನೆಗಳ ಸ್ವರೂಪ ಮತ್ತು ಬ್ಲೂಪ್ರಿಂಟ್

ವಾರ್ಷಿಕ ಪರೀಕ್ಷೆಗಳು ನಿರ್ಣಾಯಕ ಹಾಗೂ ಬಹುಸಂಖ್ಯೆಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದಾದ್ದರಿಂದ ಸಾಮಾನ್ಯ ವಿದ್ಯಾರ್ಥಿಯೂ ಉತ್ತೀರ್ಣರಾಗಬೇಕೆಂಬ ತಳಹದಿಯ ಮೇಲೆ ಪ್ರಶ್ನೆ ಪತ್ರಿಕೆಯನ್ನು ರೂಪಿಸಲಾಗುತ್ತದೆ. 100 ಅಂಕಗಳಲ್ಲಿ ಶೇ. 35ರಷ್ಟು ಸುಲಭ, ಶೇ. 55ರಷ್ಟು ಸಾಧಾರಣ ಮತ್ತು ಶೇ. 10ರಷ್ಟು ಪ್ರಶ್ನೆಗಳು ಕಠಿಣವಾಗಿರುತ್ತವೆ. ಅಂದರೆ ಪರೀಕ್ಷೆಯಲ್ಲಿ ಸಾಮಾನ್ಯ ಅಥವಾ ಪ್ರಥಮ ದರ್ಜೆಯಲ್ಲಿ ಪಾಸಾಗುವುದು ಸುಲಭ. ನೂರಕ್ಕೆ ನೂರು ಅಂಕ ತೆಗೆಯುತ್ತೇನೆನ್ನುವ ವಿದ್ಯಾರ್ಥಿ ಮಾತ್ರ ಹೆಚ್ಚಿನ ಶ್ರಮ ಪಡಬೇಕಾಗುತ್ತದೆ.

ಇಡೀ ರಾಜ್ಯದ ಶೇಕಡಾವಾರು ಫಲಿತಾಂಶವನ್ನು ಹೆಚ್ಚಿಸುವುದು ಇಲ್ಲವೇ ಉತ್ತಮ ಮಟ್ಟದಲ್ಲಿ ಕಾಪಾಡಿಕೊಳ್ಳುವುದು ಸರ್ಕಾರದ, ಶಿಕ್ಷಣ ಇಲಾಖೆಯ ಆದ್ಯತೆ ಮತ್ತು ಜವಾಬ್ದಾರಿ ಎರಡೂ ಆಗಿರುವುದರಿಂದ ಎಲ್ಲ ಪ್ರಶ್ನೆಪತ್ರಿಕೆಗಳೂ ‘ವಿದ್ಯಾರ್ಥಿ ಸ್ನೇಹಿ’ ಆಗಿರುತ್ತವೆ. ಪ್ರಶ್ನೆಪತ್ರಿಕೆ ಸಿದ್ಧ ಪಡಿಸುವವರು ಈ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಗಮನಿಸಿಯೇ ಹೊಸ ಪ್ರಶ್ನೆಪತ್ರಿಕೆಯನ್ನು ತಯಾರಿಸುತ್ತಾರೆ. ಕೆಲಮೊಮ್ಮೆ ಈಗಾಗಲೇ ಬಂದಿರುವ ಪ್ರಶ್ನೆಗಳು ಪುನರಾವರ್ತನೆಗೊಳ್ಳುವ ಸಾಧ್ಯತೆಗಳು ಇರುತ್ತವೆಯಾದ್ದರಿಂದ ಹಿಂದಿನ ಎಲ್ಲಾ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದನ್ನು ಕಲಿತಿರಬೇಕು. ಆದ್ದರಿಂದ ಪ್ರಶ್ನೆಪತ್ರಿಕೆ ಹೇಗಿರುತ್ತದೆ ಎಂಬ ಅಂದಾಜು ಇರುವುದರಿಂದ ಅದರ ಕುರಿತು ತಲೆ ಕೆಡಿಸಿಕೊಳ್ಳುವ ಬದಲು, ಸರಿಯಾದ ತಯಾರಿ ಮಾಡಿಕೊಂಡರೆ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು.

ಕ್ವೆಶ್ಚನ್ ಪೇಪರ್ ಬ್ಲೂಪ್ರಿಂಟ್

ಪಿಯುಸಿ ಶಿಕ್ಷಣದ ಪ್ರತಿಯೊಂದು ವಿಷಯದ ಪಠ್ಯಕ್ರಮ ಬೋಧಿಸಲು ಮತ್ತು ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ನಿಗದಿ ಮಾಡಿರುವ ಮಾದರಿಗಳನ್ನು ಕ್ರಮವಾಗಿ ಪ್ರೋಗ್ರಾಮ್ ಆಫ್ ವರ್ಕ್ ಹಾಗೂ ಪ್ರಶ್ನೆಪತ್ರಿಕೆ ನೀಲನಕ್ಷೆ (ಬ್ಲೂಪ್ರಿಂಟ್) ಎಂದು ಕರೆಯುತ್ತಾರೆ. ಇವೆರಡೂ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಅದರ ಪ್ರಕಾರ, ಇಂತಿಷ್ಟು ಅಂಕಗಳಿಗೆ ಸಮನಾದ ಪ್ರಶ್ನೆಗಳನ್ನು ಕೇಳಬೇಕು ಎಂಬುದನ್ನು ಮಾದರಿಯಲ್ಲಿ ವಿವರಿಸಲಾಗಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವವರು ಯಾವ್ಯಾವ ಪಾಠಗಳಿಗೆ ಎಷ್ಟೆಷ್ಟು ಅಂಕಗಳನ್ನು ನಿಗದಿಪಡಿಸಲಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನೆಪತ್ರಿಕೆಯ ನೀಲನಕ್ಷೆ ತಯಾರಿಸಿ ಅದರ ಪ್ರಕಾರವೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿರುತ್ತಾರೆ. ಉದಾಹರಣೆಗೆ, ಗಣಿತದ ಮೊದಲ ಪಾಠದಿಂದ 11 ಅಂಕಗಳಿಗೆ ಸಮನಾದ ಪ್ರಶ್ನೆಗಳಿರಬೇಕು ಎಂದಿದ್ದರೆ ಅಷ್ಟು ಇರಲೇಬೇಕು. ಗಣಿತದಂತೆ ಇತರ ಎಲ್ಲ ವಿಷಯಗಳಿಗೂ ಇದು ಅನ್ವಯಿಸುತ್ತದೆ. ಪ್ರತಿಯೊಂದು ಪ್ರಶ್ನೆಪತ್ರಿಕೆಗೂ ತನ್ನದೇ ಆದ ನೀಲನಕ್ಷೆ ಇರುತ್ತದೆ. ಪ್ರಶ್ನೆಗಳ ಸ್ವರೂಪ ಬದಲಾಗಬಹುದೇ ಹೊರತು ಪಾಠಗಳಿಗೆ ನೀಡಲಾದ ಅಂಕಗಳ ಪ್ರಮಾಣ (ವೇಟೇಜ್) ಯಾವ ಕಾರಣಕ್ಕೂ ಬದಲಾಗುವುದಿಲ್ಲ. ಒಂದು ವೇಳೆ ಬದಲಾವಣೆ ಇದ್ದರೂ ಅದು ಕನಿಷ್ಠ ಪ್ರಮಾಣದಲ್ಲಿ ಇರುತ್ತದೆ.

ಓದಿಗಾಗಿ ದಿನದ ಸಮಯದ ಬಳಕೆ ಹೇಗೆ?

ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸಿದಂತೆಲ್ಲ ‘ಎಷ್ಟೊಂದು ಓದುವುದಿದೆ, ಓದಲು ಸಮಯವೇ ಸಿಗುತ್ತಿಲ್ಲ’ ಎನ್ನುತ್ತಾರೆ. ಶಾಲೆ–ಕಾಲೇಜಿನಲ್ಲಿ ಸಿಲಬಸ್ ಬಾಕಿ ಇದ್ದು ತರಗತಿಗಳು ನಡೆಯುತ್ತಿದ್ದರೆ ಅವರ ಮಾತು ಸರಿ. ಆದರೆ ಪಾಠ ಮುಗಿಸಿ ‘ಸ್ಟಡೀ ಹಾಲಿಡೇಸ್’ನಲ್ಲಿರುವ ವಿದ್ಯಾರ್ಥಿಗಳು ದಿನದ 24 ಗಂಟೆಗಳ ಅವಧಿಯನ್ನು ಈ ಕೆಳಗಿನಂತೆ ಬಳಸಿಕೊಂಡರೆ ಓದಿಕೊಳ್ಳಲು, ಪರೀಕ್ಷೆಗೆ ಸಿದ್ಧಗೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ. ಹೆಚ್ಚಿನ ಸಮಯಸಿಕ್ಕಾಗ ನಾಳೆಮಾಡುತ್ತೇನೆ, ನಾಡಿದ್ದು ಓದುತ್ತೇನೆ ಎಂದು ತಯಾರಿಯನ್ನು ಮುಂದೂಡಬಾರದು.

* ಏಳು ಗಂಟೆಗಳ ಕಾಲ ಚೆನ್ನಾಗಿ ನಿದ್ರಿಸಿ.

* ಲಘು ವ್ಯಾಯಾಮ ಮಾಡುವ ಅಭ್ಯಾಸವಿದ್ದರೆ ಮಾಡಿ.

* ಬೆಳಗಿನ ಸ್ನಾನ, ತಿಂಡಿ, ವೃತ್ತಪತ್ರಿಕೆ ಓದಲು 2 ಗಂಟೆಗಳನ್ನು ಮೀಸಲಿಡಿ.

* ಮಧ್ಯಾಹ್ನ, ರಾತ್ರಿಯ ಊಟಕ್ಕೆ ಇನ್ನೆರಡು ಗಂಟೆ ಬಳಸಿ.

* ಸಂಜೆಯ ವಾಯುವಿಹಾರ, ಕ್ರೀಡೆ, ಟೀವಿ, ಕಂಪ್ಯೂಟರ್ – ಮೊಬೈಲ್ ಗೇಮ್‌ಗೆ 2 ಗಂಟೆಸಾಕು.

ಇಷ್ಟೆಲ್ಲ ಆದರೂ 11 ಗಂಟೆಗಳ ಸುದೀರ್ಘ ಅವಧಿ ಪರೀಕ್ಷೆಗೆ ತಯಾರಾಗಲು ನಿಮ್ಮ ಪಾಲಿಗಿರುತ್ತದೆ. ಈ ಅವಧಿಯನ್ನು ನಿಮ್ಮ ಓದಿನ ಆದ್ಯತೆಗಳಿಗನುಗುಣವಾಗಿ ತಯಾರಿಸಿಕೊಂಡಿರುವ ‘ಸ್ಟಡಿ ಟೈಂ ಟೇಬಲ್’ನ್ನು ತಪ್ಪದೇ ಅನುಸರಿಸಿ ಓದಬೇಕು.

ಸ್ಟಡಿ ಟೈಂ ಟೇಬಲ್ ಹೇಗಿರಬೇಕು?

ವೇಳಾಪಟ್ಟಿಯನ್ನು ತಯಾರಿಸಿಕೊಳ್ಳುವ ಮೊದಲು ನೀವು ಓದುವ ವಿಷಯಗಳ ಪೈಕಿ ಸುಲಭ ಮತ್ತು ಕಷ್ಟವೆನಿಸುವುದು ಯಾವುದು ಎಂದು ಮೊದಲೇ ಲೆಕ್ಕಹಾಕಿ ಲಭ್ಯವಿರುವ ಸಮಯದಲ್ಲಿ ಕಠಿಣ ಎನ್ನುವ ವಿಷಯಕ್ಕೆ ಹೆಚ್ಚಿನ ಸಮಯನೀಡಿರಿ. ಭಾಷಾ ವಿಷಯಗಳು ಸುಲಭವೆನ್ನಿಸಿದರೆ ಅವಕ್ಕೆ ಕಡಿಮೆ ಸಮಯ ಕೊಡಿ.
ಒಮ್ಮೆ ವಿಷಯವಾರು ‘ಟೈಂಟೇಬಲ್’ ರೆಡಿ ಮಾಡಿಕೊಂಡ ಮೇಲೆ ಆಯಾ ವಿಷಯಗಳಲ್ಲಿ ಬರುವ ಯಾವ ಪಾಠಗಳು ನಿಮಗೆ ಸುಲಭ, ಈಗಾಗಲೇ ಕರಗತವಾಗಿವೆ ಮತ್ತು ಸುಲಭವಲ್ಲ ಎಂಬುದನ್ನು ಪಟ್ಟಿಮಾಡಿಕೊಂಡು ಸುಲಭವಲ್ಲದ್ದರ ಕಡೆ ಹೆಚ್ಚು ಸಮಯ ನೀಡಿ.

ಬರೆದು ಅಭ್ಯಸಿಸಬೇಕಾದ ಗಣಿತ, ವಿಜ್ಞಾನ ವಿಷಯಗಳನ್ನು ಮಧ್ಯಾಹ್ನದ ಊಟದ ನಂತರ ಮತ್ತು ರಾತ್ರಿ ಮಲಗುವ ಮುನ್ನ ಓದಿದರೆ ನಿದ್ದೆಯನ್ನು ತಡೆಯಬಹುದು ಮತ್ತು ಮನಸ್ಸನ್ನು ಚುರುಕಾಗಿಟ್ಟುಕೊಳ್ಳಬಹುದು. ಬರೆಯುತ್ತ ಹೋದಂತೆ ಆಲಸ್ಯ ಮಾಯಾವಾಗಿ ಹುಮ್ಮಸ್ಸು ಮೂಡುತ್ತದೆ.

ಗಣಿತದ ಕಾಗುಣಿತ ತಿಳಿಯಿರಿ

ದ್ವಿತೀಯ ಪಿಯುಸಿ ಗಣಿತ ವಿಷಯದ ತಯಾರಿ ನಡೆಸುವ ವಿದ್ಯಾರ್ಥಿಗಳು ವಾರ್ಷಿಕ ಹಾಗೂ ನಂತರದ ಸಿಇಟಿ ಪರೀಕ್ಷೆಗಳೆರಡಕ್ಕೂ ತಯಾರಿ ನಡೆಸಬೇಕಾಗುತ್ತದೆ. ಪಿಯುಸಿ ಸೈನ್ಸ್ ವಿಭಾಗದ ಬಹುತೇಕ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಹಾಗೂ ಇತರ ತಾಂತ್ರಿಕ ಕೋರ್ಸ್‌ಗಳ ಪ್ರವೇಶ ಬಯಸುವುದಾದರೆ ಗಣಿತ, ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಅದರಲ್ಲೂ ಗಣಿತ ಸುಲಭವಲ್ಲ ಎಂಬ ಭಾವನೆ ವ್ಯಾಪಕವಾಗಿರುವಾಗ ಅದನ್ನು ಹೆಚ್ಚು ಹೆಚ್ಚು ಅಭ್ಯಸಿಸಬೇಕಾದ ಅನಿವಾರ್ಯತೆ ಇರುತ್ತದೆ. ಬೇರೆಲ್ಲ ವಿಷಯಗಳಂತೆ ಗಣಿತವೂ ಒಂದು, ಮಾಡಿದಷ್ಟೂ ಸುಲಭ, ಅದನ್ನೂ ಅರ್ಥಮಾಡಿಕೊಳ್ಳಬಹುದು, ಸುಲಭವಾಗಿಸಿಕೊಳ್ಳಬಹುದು ಎಂಬುದನ್ನು ಮೊದಲು ಗ್ರಹಿಸಬೇಕು.

ಸೂತ್ರಗಳು, ಪ್ರಮೇಯಗಳು, ರಚನೆಗಳು ಮತ್ತು ಆವರಣಗಳಲ್ಲಿ ಹೊಮ್ಮುವ ಗಣಿತದ ಸಮಸ್ಯೆಗಳನ್ನು ಬಿಡಿಸಲು, ಪ್ರಶ್ನೆಗಳನ್ನು ಉತ್ತರಿಸಲು ವಿದ್ಯಾರ್ಥಿಗಳು ಶ್ರಮಪಡಲೇಬೇಕು. ಹಲವು ಬಾರಿ ಗೊತ್ತಿರದ ಮತ್ತು ಗೊತ್ತಿರುವ ಅಂಶಗಳ ಸುತ್ತ ಸುತ್ತುವ ಪರಿಪಾಠವೇ ಗಣಿತದ ಮೂಲಗುಣ. ದಿನವೊಂದಕ್ಕೆ ಕನಿಷ್ಠ ಎರಡು ಗಂಟೆಯ ಸಮಯವನ್ನು ಗಣಿತದ ಓದಿಗೆ ಮಿಸಲಿಟ್ಟರೆ ಮಾತ್ರ ನಿರೀಕ್ಷಿತ ಯಶಸ್ಸು ಸಾಧ್ಯ.

ಮೊದಲು ಗಮನಿಸಿ

ದ್ವಿತೀಯ ಪಿಯುಸಿ ಗಣಿತ ವಿಷಯದ ಪಠ್ಯಪುಸ್ತಕದಲ್ಲಿರುವ ಎಲ್ಲ 13 ಪಾಠಗಳಿಂದಲೂ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪಠ್ಯಪುಸ್ತಕದಲ್ಲಿರುವ ಎಲ್ಲ ಪಾಠಗಳನ್ನು ಬೋಧಿಸಲು ಅಧ್ಯಾಪಕರು 150 ಗಂಟೆಗಳ ಕಾಲ ಪಾಠ ಮಾಡಿರುತ್ತಾರೆ. ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಗರಿಷ್ಟ ಒಂದು ನೂರು ಅಂಕಗಳಿಗೆ ಸೀಮಿತಗೊಳಿಸಲಾಗಿರುತ್ತದೆ. ಅದರಲ್ಲಿ ಒಟ್ಟು ಎ, ಬಿ, ಸಿ, ಡಿ ಮತ್ತು ಇ ಎಂಬ ಐದು ವಿಭಾಗಗಳಿರುತ್ತವ. ಕನಿಷ್ಠ 1 ಅಂಕದ ಪ್ರಶ್ನೆಯಿಂದ ಹಿಡಿದು ಗರಿಷ್ಠ 10 ಅಂಕಗಳ ಪ್ರಶ್ನೆಗಳಿರುತ್ತವೆ. ಈ ಪ್ರಶ್ನೆಗಳೆಲ್ಲ ಪಠ್ಯಕ್ರಮವನ್ನಾಧರಿಸಿದ ‘ಪ್ರಶ್ನೆಪತ್ರಿಕೆ ನೀಲ ನಕ್ಷೆ’ಯ (Question Paper Blue Print) ಪ್ರಕಾರವೇ ಇರುತ್ತವೆ ಹಾಗೂ ಹಾಗೇ ಇರಬೇಕೆಂಬ ನಿಯಮವಿದೆ.

‘A’ ಭಾಗದಲ್ಲಿ 1 ಅಂಕದ 10 ಪ್ರಶ್ನೆಗಳಿದ್ದು ಎಲ್ಲವೂ ಕಂಪಲ್ಸರಿ. ‘B’ ಭಾಗದಲ್ಲಿ 2 ಅಂಕದ 14 ಪ್ರಶ್ನೆಗಳಿರುತ್ತದೆ. ಅವುಗಳಲ್ಲಿ 10 ಪ್ರಶ್ನೆಗಳನ್ನು ಉತ್ತರಿಸಬೇಕಾಗುತ್ತದೆ. ‘C’ ಭಾಗದಲ್ಲಿ 3 ಅಂಕದ 14 ಪ್ರಶ್ನೆಗಳಿದ್ದು 10 ಕ್ಕೆ ಉತ್ತರ ನೀಡಬೇಕಾಗುತ್ತದೆ. ‘D’ ಭಾಗದಲ್ಲಿ 5 ಅಂಕದ 10 ಪ್ರಶ್ನೆಗಳಿದ್ದು 6ನ್ನು ಉತ್ತರಿಸಬೇಕಾಗುತ್ತದೆ. ಇನ್ನು ಕೊನೆಯ ಭಾಗ ‘E’ನಲ್ಲಿ 10 ಅಂಕದ 2 ಪ್ರಶ್ನೆಗಳಿದ್ದು ಒಂದನ್ನು ಉತ್ತರಿಸಬೇಕಾಗುತ್ತದೆ. ಹೀಗೆ ಇಡೀ ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು ಐವತ್ತು ಪ್ರಶ್ನೆಗಳಿದ್ದು ಅವುಗಳಲ್ಲಿ 37 ಪ್ರಶ್ನೆಗಳನ್ನು ಉತ್ತರಿಸಬೇಕಾಗುತ್ತದೆ.

ಕ್ರಮವಾಗಿ ಅಭ್ಯಾಸ ಮಾಡಿದ ವಿದ್ಯಾರ್ಥಿಗೆ ಗಣಿತ ಪ್ರಶ್ನೆಪತ್ರಿಕೆಯ ನೂರು ಅಂಕಗಳ ಪ್ರಶ್ನೆಗಳನ್ನು ಉತ್ತರಿಸಲು ಕೇವಲ ಎರಡು ಗಂಟೆಗಳ ಅವಧಿ ಸಾಕು. ಅದರೆ ಸಾಧಾರಣವಾಗಿ ಓದಿರುವ ವಿದ್ಯಾರ್ಥಿಗೆ ಮೂರು ಗಂಟೆಗಳ ಪೂರ್ಣ ಅವಧಿಯನ್ನು ಬಳಸಿಕೊಂಡು ಉತ್ತರ ಬರೆಯುವ ಅವಕಾಶವಿರುತ್ತದೆ. 60–70 ಅಂಕಗಳಿಸುವ ಉದ್ದೇಶವಿರುವ ವಿದ್ಯಾರ್ಥಿಗಳು ಎಲ್ಲ 13 ಚಾಪ್ಟರ್‌ಗಳನ್ನು ಅಭ್ಯಸಿಸುವ ಬದಲು ಸುಲಭವೆನಿಸುವ 7–8 ಪಾಠಗಳನ್ನು ಓದಿದರೆ ಸಾಕು, ನಿರೀಕ್ಷಿತ ಅಂಕಗಳು ಬರುತ್ತವೆ.

ಕ್ಯಾಲ್ಕುಲಸ್ (Calculus) ಎಂಬ ಅಕ್ಷಯಪಾತ್ರೆ

ಕ್ಯಾಲ್ಕುಲಸ್ ಓದಿಕೊಂಡರೆ ಸಾಕು ಫಸ್ಟ್ ಕ್ಲಾಸ್ ಮಾರ್ಕ್ಸ್ ಗ್ಯಾರಂಟಿ ಎನ್ನುವ ಮಾತಿದೆ. ಅದು ನಿಜವೂ ಕೂಡ. ಏಕೆಂದರೆ ಪಠ್ಯದಲ್ಲಿ ಕ್ಯಾಲ್ಕುಲಸ್‌ಗೆ ಸಂಬಂಧಿಸಿದ ಐದು ಪಾಠಗಳಿವೆ. ಇವುಗಳಿಂದ ಸುಮಾರು 65ರಿಂದ 70 ಅಂಕಗಳವರೆಗೆ ಪ್ರಶ್ನೆಗಳಿರುತ್ತವೆ. ಪ್ರತೀ ಪ್ರಶ್ನೆಪತ್ರಿಕೆಯಲ್ಲಿ 50 ಪ್ರಶ್ನೆಗಳಿದ್ದು ಒಟ್ಟು 150 ಅಂಕಗಳಿರುತ್ತವೆ. ಅವುಗಳಲ್ಲಿ 100 ಅಂಕಗಳಿಸಲು 37 ಪ್ರಶ್ನೆಗಳನ್ನು ಉತ್ತರಿಸಬೇಕಾಗುತ್ತದೆ. ಮೇಲಿನ 50 ಪ್ರಶ್ನೆಗಳ 150 ಅಂಕಗಳಲ್ಲಿ ಸುಮಾರು 70 ಅಂಕಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಕ್ಯಾಲ್ಕುಲಸ್‌ಗೆ ಸಂಬಂಧಿಸಿರುತ್ತವೆ. ಇವುಗಳನ್ನು ಬಿಡಿಸಲು ಪ್ರಥಮ ಪಿಯುಸಿಯಲ್ಲಿ ಕಲಿತ ಟ್ರಿಗನಾಮೆಟ್ರಿಯ ಅನುಪಾತಗಳು (Trigonometric ratios), ಪ್ರಮಾಣಿತ ಕೋನಗಳ ಬೆಲೆಗಳು (Standard Angles and their Values), ಐಡೆಂಟಿಟಿಗಳು, Compound, Allied, Multiple Angleಗಳು, ಕ್ಯಾಲ್ಕುಲಸ್‌ನ Standard Limits ಮತ್ತು Standard Derivatives ಹಾಗೂ ತ್ರೀಡಿ ಹಾಗೂ ಅನಾಲಿಟಿಕಲ್ ಜ್ಯಾಮಿಟ್ರಿಯ ಸ್ಲೋಪ್, ಈಕ್ವೇಶನ್ ಆಫ್ ಟ್ಯಾಂಜೆಂಟ್, ನಾರ್ಮಲ್, ಸೆಕ್ಷನ್ ಫಾರ್ಮುಲಾಗಳನ್ನೆಲ್ಲ ಬಳಸಬೇಕಾಗುತ್ತದೆ. ಇವನ್ನೆಲ್ಲ್ಲ ಒಂದೆಡೆ ಪಟ್ಟಿಮಾಡಿಕೊಂಡು ಪದೇ ಪದೇ ಬರೆಯುತ್ತ ಬೇಕಾದಲ್ಲಿ ಬಳಸುತ್ತ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಕ್ಯಾಲ್ಕುಲಸ್‌ನ್ನು ಚೆನ್ನಾಗಿ ಕಲಿತ ವಿದ್ಯಾರ್ಥಿ 60ಕ್ಕೂ ಹೆಚ್ಚು ಅಂಕಗಳನ್ನು ಸುಲಭವಾಗಿ ಗಳಿಸಬಹುದು.

ದ್ವಿತೀಯ ಪಿಯುಸಿ ಗಣಿತದ ಬಹುತೇಕ ಪಾಠಗಳು ಪ್ರಥಮ ಪಿಯುಸಿಯ ಮುಂದುವರಿಕೆಯಾಗಿರುವುದರಿಂದ ಪ್ರಥಮ ಪಿಯುಸಿಯಲ್ಲಿ ಬರುವ ಎಲ್ಲ ಸೂತ್ರಗಳು, ಹೇಳಿಕೆಗಳು, ನಿಯಮಗಳು ದ್ವಿತೀಯ ಪಿಯುಸಿಯ ಯಶಸ್ವಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಪ್ರಥಮ ಪಿಯುಸಿಯನ್ನು ಸರಿಯಾಗಿ ಕಲಿಯದವರು ದ್ವಿತೀಯ ಪಿಯುಸಿಯನ್ನು ಸರಿಯಾಗಿ ಮಾಡಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಪ್ರಥಮ ಪಿಯುಸಿಯಲ್ಲಿ ನಿರೂಪಿಸಲ್ಪಡುವ ಪ್ರತಿಯೊಂದೂ ಸೂತ್ರವನ್ನು ನೆನಪಿಟ್ಟುಕೊಳ್ಳಬೇಕು ಹಾಗೂ ಬಳಸುವ ಕ್ರಮವನ್ನು ಅರಿತಿರಲೇಬೇಕು.

ನೂರಕ್ಕೆ ನೂರು ಹೀಗೆ ಸಾಧ್ಯ

1. Worked Examples: ಪಠ್ಯಪುಸ್ತಕದ ಪಾಠದಲ್ಲಿ ಬಿಡಿಸಲಾಗಿರುವ ಸಮಸ್ಯೆಗಳನ್ನು ವಿದ್ಯಾರ್ಥಿ ಸ್ವತಃ ಮತ್ತೊಮ್ಮೆ ಬಿಡಿಸುವ ರೂಢಿ ಮಾಡಿಕೊಳ್ಳಬೇಕು ನಂತರ ಪಾಠದ ಕೊನೆಗೆ ನೀಡಲಾಗಿರುವ ಪ್ರಶ್ನೆಗಳನ್ನು ಸ್ವತಃ ಬಿಡಿಸಲು ಪ್ರಯತ್ನಿಸಬೇಕು. ಸಾಧ್ಯವಾಗದಿದ್ದರೆ ಸ್ನೇಹಿತರ ಅಥವಾ ಉಪನ್ಯಾಸಕರ ನೆರವು ಪಡೆಯಬೇಕು. ಅವರಿಂದ ಸ್ವಲ್ಪ ಮಾಹಿತಿಯನ್ನು ಗ್ರಹಿಸಿ ಮುಂದಿನ ಹಂತಗಳನ್ನು ಸ್ವತಃ ತಾನೇ ನಿರೂಪಿಸಿ ಸಮಸ್ಯೆಯನ್ನು ಬಿಡಿಸುವುದನ್ನು ಕಲಿಯಬೇಕು.

2. ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಸಮಯ ನಿರ್ವಹಣೆ: ಇಲಾಖೆ ಸಿದ್ಧಪಡಿಸಿ ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆಪತ್ರಿಕೆಗಳನ್ನು ನಿಗದಿತ ಸಮಯ ಅಂದರೆ ಮೂರು ಗಂಟೆಗಳ ಅವಧಿಯಲ್ಲಿ ಸಂಪೂರ್ಣವಾಗಿ ಬಿಡಿಸುವುದನ್ನು ಕಲಿಯಬೇಕು. ಅದರಿಂದ ನೂರು ಅಂಕಗಳ ಪೂರ್ಣ ಪ್ರಶ್ನೆಪತ್ರಿಕೆಯನ್ನು ಬಿಡಿಸುವ ಆತ್ಮವಿಶ್ವಾಸ ಲಭಿಸುತ್ತದೆ. ಅಲ್ಲದೆ ಒಂದು ಪ್ರಶ್ನೆಪತ್ರಿಕೆಯನ್ನು ಪೂರ್ಣವಾಗಿ ಬಿಡಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನೂ ಅರಿಯಬಹುದು.

3. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು: ಪ್ರಸಕ್ತ ಪಠ್ಯಕ್ರಮವನ್ನು ಆಧರಿಸಿ 6 ವಾರ್ಷಿಕ ಪರೀಕ್ಷೆಯ (ಮಾರ್ಚ್–ಜುಲೈ) ಪ್ರಶ್ನೆಪತ್ರಿಕೆಗಳು ಲಭ್ಯವಿರುತ್ತವೆ. ಅವುಗಳಲ್ಲಿರುವ ಹಾಗೂ ಅದೇ ರೀತಿಯ ಪ್ರಶ್ನೆಗಳು ಪುನರಾವರ್ತನೆಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆಯಾದ್ದರಿಂದ ಹಿಂದಿನ ಎಲ್ಲಾ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದನ್ನು ಕಲಿತಿರಬೇಕು. ಪ್ರಶ್ನೆಪತ್ರಿಕೆ ಸಿದ್ಧ ಪಡಿಸುವವರು ಈ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಗಮನಿಸಿಯೇ ಹೊಸ ಪ್ರಶ್ನೆಪತ್ರಿಕೆಯನ್ನು ತಯಾರಿಸುತ್ತಾರೆ. ಕೆಲಮೊಮ್ಮೆ ಈಗಾಗಲೇ ಬಂದಿರುವ ಪ್ರಶ್ನೆಗಳು ಮತ್ತೆ ಬರುವ ಸಾಧ್ಯತೆಗಳಿರುತ್ತವೆ.

4. ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವಾಗ ಇಲಾಖೆ ನಿಗದಿಪಡಿಸಿದ ಪಠ್ಯಕ್ರಮವನ್ನೊಳಗೊಂಡ ಪಾಠಗಳಿರುವ ಪಠ್ಯಪುಸ್ತಕವನ್ನು ಆಧರಿಸಿ ತಯಾರಿ ನಡೆಸಬೇಕು. ಪದವಿಪೂರ್ವ ಶಿಕ್ಷಣ ಇಲಾಖೆ ನಿಗದಿ ಮಾಡಿರುವ ಪಠ್ಯಪುಸ್ತಕಗಳನ್ನು ಅಧರಿಸಿ ಪ್ರಶ್ನೆಪತ್ರಿಕೆ ತಯಾರಿಸುವುದರಿಂದ ಅದೇ ಪಠ್ಯಪುಸ್ತಕಗಳನ್ನು ಅವಲಂಬಿಸುವುದು ಸುರಕ್ಷಿತ ಮತ್ತು ಸರಿಯಾದ ಕ್ರಮ. ಹೆಚ್ಚಿನ ತಿಳಿವಳಿಕೆಗೆ ಬೇರೆ ಅನೇಕ ಪುಸ್ತಕಗಳನ್ನು ಓದಬಹುದು. ಆದರೆ ಪರೀಕ್ಷೆಗೆ ಪಠ್ಯಪುಸ್ತಕಗಳೇ ಅಂತಿಮ.

ಉತ್ತರಿಸುವ ವಿಧಾನ

1. ಪರೀಕ್ಷೆಯ ಪ್ರಾರಂಭದಲ್ಲಿ ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷ ನೀಡಲಾಗಿರುತ್ತದೆ. ಆಗ ಯಾವುದೇ ಭಯ, ಆತಂಕ, ಉದ್ದೇಗಗಳಿಲ್ಲದೆ ಪ್ರಶ್ನೆಪತ್ರಿಕೆಯನ್ನು ಪೂರ್ಣವಾಗಿ ಓದಿಕೊಳ್ಳಿ. ಇಂಗ್ಲೀಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಪತ್ರಿಕೆ ಮುದ್ರಣಗೊಂಡಿರುತ್ತದೆ. ಇಂಗ್ಲೀಷ್‌ನಲ್ಲಿ ಅರ್ಥವಾಗದಿದ್ದರೆ ಕನ್ನಡ ಅವತರಣಿಕೆಯಲ್ಲಿರುವುದನ್ನು ಓದಿ ಪ್ರಶ್ನೆ ಅರ್ಥಮಾಡಿಕೊಳ್ಳಿ.

2. ಸುಲಭವೆನಿಸುವ ಪ್ರಶ್ನೆಗಳನ್ನು ಮೊದಲು ಉತ್ತರಿಸಿರಿ.

3. ಒಂದು ಅಂಕದ ಪ್ರಶ್ನೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಶ್ನೆಗಳ ಉತ್ತರಗಳ ವಿವಿಧ ಹಂತಗಳಿಗೆ (Steps) ಅಂಕ ನೀಡಲಾಗುವುದರಿಂದ ಉತ್ತರಗಳನ್ನು ಹಂತ ಹಂತವಾಗಿ ಬರೆಯಬೇಕು. ಸೂತ್ರದ ಬಳಕೆ ಅನಿವಾರ್ಯವಾದರೆ ಅದನ್ನು ಬರೆಯರಿ.

4. ಥ್ರೀಡಿ ರೇಖಾಗಣಿತದ ಪ್ರಮೇಯ, ತಿರುವುಗಳ (Area between curves) ನಡುವಿನ ವಿಸ್ತೀರ್ಣ, ಸೆಕ್ಷನ್ ಫಾರ್ಮುಲಾ, LPPಯಲ್ಲಿ ಬರುವ ಕಾರ್ಯಸಾಧ್ಯಪ್ರದೇಶ (Feasible region) ಗಳನ್ನು ನಿರೂಪಿಸಲು ಚಿತ್ರ/ಗ್ರಾಫ್‌ಗಳನ್ನು ಬರೆಯುವುದು ಅನಿವಾರ್ಯ. ಇಲ್ಲಿ ಬರೆಯಲಾಗುವ ಚಿತ್ರಗಳಿಗೆ ಅಂಕಗಳಿರುತ್ತವೆ. ಚಿತ್ರವಿಲ್ಲದೆ ಬರೆಯುವ ಉತ್ತರ ಸರಿಯಾಗಿದ್ದರೂಕೂಡ ಒಂದು ಅಂಕವೂ ದೊರೆಯುವುದಿಲ್ಲ. ಅಪ್ಲಿಕೇಶನ್ಸ್ ಆಫ್ ಡೆರಿವೇಟವ್ಸ್‌ನಲ್ಲಿ ಬರುವ ಸಿಲಿಂಡರ್, ಲ್ಯಾಡರ್, ಕೋನ್, ಸ್ಕ್ವೇರ್, ಸ್ಫಿಯರ್ ಒಳಗೊಂಡ ಅನೇಕ ಸಮಸ್ಯೆಗಳಿಗೆ ಚಿತ್ರದ ಅವಶ್ಯಕತೆ ಇರುತ್ತದೆ. ಹಾಗಾಗಿ ಅದಕ್ಕೆ ಸಂಬಂಧಿಸಿದ ಚಿತ್ರವನ್ನು ಬರೆಯುವುದನ್ನು ಕಲಿಯಬೇಕು.

5. ಡಿಫರೆನ್ಷಿಯಲ್ ಈಕ್ವೇಶನ್ಸ್‌ನಲ್ಲಿ ಲೀನಿಯರ್ ಡಿಫರೆನ್ಷಿಯಲ್ ಈಕ್ವೇಶನ್ ಸಮಸ್ಯೆಯನ್ನೇ ಕೇಳಬೇಕೆಂಬ ನಿಯಮವಿದೆ. ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಿಡಿಸುವುದನ್ನು ಕಲಿತರೆ 5 ಅಂಕಗಳು ಖಚಿತವಾಗಿ ನಿಮ್ಮ ಪಾಲಾಗುತ್ತದೆ.

6. ಭಾಗ ‘ಇ’ನಲ್ಲಿ ಅಪ್ಲಿಕೇಶನ್ಸ್ ಆಫ್ ಡೆಫನೆಟ್ ಇಂಟೆಗ್ರಲ್ಸ್‌ನ ಎರಡು ಸಿದ್ಧಾಂತಗಳಲ್ಲಿ ಒಂದು ಪ್ರಶ್ನೆ ಖಚಿತವಾಗಿ ಬಂದೇ ಬರುತ್ತದೆ. ಅದನ್ನು ಬಿಡಿಸುವುದನ್ನು ಕಲಿತರೆ 6 ಅಂಕ ನಿಮ್ಮದಾಗುತ್ತದೆ.

7. ಇಂಡೆಫನೆಟ್ ಇಂಟೆಗ್ರೆಲ್ಸ್‌ನ 6 Standard Integrals ಪೈಕಿ ಒಂದನ್ನು ಖಚಿತವಾಗಿ ಕೇಳಲಾಗುತ್ತದೆ. ಅದನ್ನು ಬಿಡಿಸಿದರೆ 5 ಅಂಕಗಳು ನಿಮ್ಮದಾಗುತ್ತವೆ.

8. ಉತ್ತರಿಸುವ ಕೆಲಸ ಪೂರ್ತಿಯಾದನಂತದ ಬರೆದ ಎಲ್ಲ ಉತ್ತರಗಳನ್ನು ಮತ್ತೊಮ್ಮೆ ಕೂಲಂಕಷವಾಗಿ ಗಮನಿಸಿ. ಯಾವುದಾದರೂ ಸಂಕೇತ, ಸಂಖ್ಯೆ, ಚಿಹ್ನೆ ಬಿಟ್ಟು ಹೋಗಿದ್ದರೆ ಅದನ್ನು ಬರೆಯಿರಿ.

ಇವೆಲ್ಲವೂ ನಿಮ್ಮ ಓದನ್ನು ಸುಧಾರಿಸಿಕೊಳ್ಳಲು ನೀಡಲಾಗಿರುವ ಮಾರ್ಗದರ್ಶಿ ಸೂತ್ರಗಳಷ್ಟೇ. ಅಂತಿಮವಾಗಿ ನಿಮ್ಮ ಓದೇ ಫಲಿತಾಂಶದ ಕನ್ನಡಿ. ಪರೀಕ್ಷೆ ಚೆನ್ನಾಗಿ ಬರೆಯಿರಿ. ಆಲ್‌ ದಿ ಬೆಸ್ಟ್.

ಕಳಪೆ ಗೈಡ್‌ಗಳನ್ನು ನಂಬಬೇಡಿ

ವೇಳಾಪಟ್ಟಿಯ ಪ್ರಕಾರ ಓದಿದ ನಂತರ ಪುಸ್ತಕದ ಎಲ್ಲಾ ಪಾಠಗಳ ಮುಖ್ಯ ಮುಖ್ಯ ಸಂಗತಿಗಳನ್ನು ರಿವೈಸ್ ಮಾಡಿ. ರಿವಿಷನ್ ಮಾಡುವುದರಿಂದ ನೀವು ಓದಿದ್ದರ ಕುರಿತು ಸ್ಪಷ್ಟತೆ ದೊರೆತು ಮನಸ್ಸು ನಿರಾಳವಾಗುತ್ತದೆ.

ಮಾರುಕಟ್ಟೆಯಲ್ಲಿ ಸಿಗುವ ಕಡಿಮೆ ಬೆಲೆಯ ಕಡಿಮೆ ದರ್ಜೆಯ ಗೈಡ್‌ಗಳನ್ನು ನಂಬಬೇಡಿ. ಪಠ್ಯಪುಸ್ತಕಗಳನ್ನೇ ಆಧರಿಸಿ ಪರೀಕ್ಷೆಗೆ ತಯಾರಾಗಿರಿ.

ಬಳಸುವ ಶಾಯಿ ಕಪ್ಪೋ ನೀಲಿಯೋ?

ಗ್ರಾಮೀಣ ಭಾಗದ ಹಲವು ವಿದ್ಯಾರ್ಥಿಗಳಿಗೆ ತಾವು ಪರೀಕ್ಷೆಯಲ್ಲಿ ಉತ್ತರ ಬರೆಯುವ ಇ೦ಕಿನ (ಶಾಯಿ) ಬಗ್ಗೆ ಅನುಮಾನಗಳಿವೆ. ‘ಕಪ್ಪು ಶಾಯಿಯಲ್ಲಿ ಬರೆದರೆ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡುವುದಿಲ್ಲ’ ಎ೦ಬುದು ಈ ಅನುಮಾನಗಳಲ್ಲೊ೦ದು.

ಉತ್ತರ ಬರೆಯಲು ನೀಲಿ ಅಥವಾ ಕಪ್ಪು ಶಾಯಿಯನ್ನು ನಿರ್ಭಿಡೆಯಿ೦ದ ಬಳಸಬಹುದು. ಅದರೆ ಒ೦ದೇ ಉತ್ತರ ಪತ್ರಿಕೆಯಲ್ಲಿ ಎರಡು ಬಣ್ಣದ ಶಾಯಿಗಳನ್ನು ಬಳಸಬಾರದು. ಹಾಗೊ೦ದು ವೇಳೆ ಅನಿವಾರ್ಯವಾಗಿ ಬಳಸಬೇಕಾದರೆ ರೂಮ್ ಸೂಪರಿ೦ಟೆ೦ಡೆ೦ಟ್ (ಕೊಠಡಿ ಮೇಲ್ವಿಚಾರಕ) ಗಮನಕ್ಕೆ ತ೦ದು ಅವರಿ೦ದ ಸಹಿ ಪಡೆದು ಬರೆಯಬೇಕು. ಆದರೆ ಕೆ೦ಪು, ಹಸಿರು, ಹಳದಿ ಬಣ್ಣದ ಶಾಯಿಗಳನ್ನು ಯಾವತ್ತೂ ಬಳಸಬಾರದು.

ಮಾಡಲೇಬಾರದ ಎಂಟು ತಪ್ಪುಗಳು

1. ಇನ್ನೇನು ಪರೀಕ್ಷೆ ಪ್ರಾರಂಭವಾಗುತ್ತದೆ ಎನ್ನುವವರೆಗೂ ಓದುತ್ತಲೇ ಇರಬೇಡಿ. ಅದು ಅನಗತ್ಯ ಒತ್ತಡಕ್ಕೆ ಸಿಕ್ಕು ಚೆನ್ನಾಗಿ ಓದಿರುವುದೂ ಮರೆತು ಹೋಗುತ್ತದೆ.

2. ಪರೀಕ್ಷೆಯ ನಂತರ ಬರೆದ ಉತ್ತರಗಳ ಸರಿ–ತಪ್ಪುಗಳ ಬಗ್ಗೆ ಸಹಪಾಠಿಗಳೊಂದಿಗೆ ಚರ್ಚಿಸಬೇಡಿ. ಒಂದು ವೇಳೆ ತಪ್ಪಾಗಿ ಬರೆದಿದ್ದರೆ ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗಿ ಮುಂದಿನ ದಿನಗಳ ಪರೀಕ್ಷೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

3. ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆಪತ್ರಿಕೆಯನ್ನು ಅವಸರದಲ್ಲಿ ಓದಿಕೊಳ್ಳಬೇಡಿ. ಅದಕ್ಕಾಗಿಯೆ ಸ್ವಲ್ಪ ಸಮಯವನ್ನು ಮೀಸಲಿಡಿ. ಪಿಯುಸಿ ವಿದ್ಯಾರ್ಥಿಗಳಿಗೆ ಅದಕ್ಕೆಂದೇ 15 ನಿಮಿಷ ಮೀಸಲಿದೆ.

4. ಎಲ್ಲ ಪ್ರಶ್ನೆಗಳಿಗೂ ಸಾಧ್ಯವಾದಷ್ಟು ಉತ್ತರ ಬರೆಯಲು ಪ್ರಯತ್ನಿಸಿ. ಐದಾರು ಅಂಕಗಳ ಪ್ರಶ್ನೆಗಳಿಗೆ ಹಂತ ಹಂತದ ಗೊತ್ತಿರುವ ಅರ್ಧ ಉತ್ತರ ಬರೆದರೂ 2–3 ಅಂಕಗಳು ದೊರೆಯುವ ಸಾಧ್ಯತೆಗಳಿರುತ್ತವೆ.

5. ಯಾವುದಾದರೂ ಪ್ರಶ್ನೆಗೆ ಉತ್ತರ ಹೊಳೆಯದಿದ್ದಲ್ಲಿ ಅದನ್ನು ಬಿಟ್ಟು ಗೊತ್ತಿರುವ ಪ್ರಶ್ನೆಗೆ ಉತ್ತರ ಬರೆಯಿರಿ.

6. ಯಾವುದೇ ಕಾರಣಕ್ಕೂ ಯಾವುದೇ ರೂಪದ ನಕಲು ಮಾಡಬೇಡಿ.

7. ಪರೀಕ್ಷೆ ಮುಗಿಯುವುದಕ್ಕೂ ಮುನ್ನ ಕೊಠಡಿಯಿಂದ ಹೊರಬರಬೇಡಿ.

8. ಎಲ್ಲಾ ಪ್ರಶ್ನೆಗಳನ್ನು ಅಟೆಂಪ್ಟ್ ಮಾಡಿ. ಒಂದು ವೇಳೆ ಪ್ರಶ್ನೆ ತಪ್ಪಾಗಿ ಮುದ್ರಣಗೊಂಡಿದ್ದರೆ ಕೃಪಾಂಕ (ಗ್ರೇಸ್ ಮಾರ್ಕ್ಸ್) ದೊರೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT