ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವಿಜ್ಞಾನ ಮಂಥನ

Last Updated 13 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳಲ್ಲಿ ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಕಾಳಜಿ ಮೂಡಿಸಿ ಹೊಸ ಆವಿಷ್ಕಾರಗಳನ್ನು ಮಾಡಲು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರದ ಸಹಕಾರದಲ್ಲಿ ಕೆಲವು ವಿಜ್ಞಾನ ಸಂಸ್ಥೆಗಳು ‘ವಿದ್ಯಾರ್ಥಿ ವಿಜ್ಞಾನ ಮಂಥನ’ ಹೆಸರಿನಲ್ಲಿ ಪ್ರತಿಭಾನ್ವೇಷಣೆ ಪರೀಕ್ಷೆಗಳನ್ನು ಒಟ್ಟಾಗಿ ನಡೆಸುತ್ತಿವೆ.

ವೈಜ್ಞಾನಿಕ ಮನೋಭಾವ, ಸಂಶೋಧನಾ ಪ್ರವೃತ್ತಿ ಇರುವಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದಕ್ಕಾಗಿ ಈ ಪರೀಕ್ಷೆಗಳನ್ನು ನಿರ್ವಹಿಸಲಾಗುತ್ತಿದೆ. ಶಾಲಾ ಹಂತದಿಂದ ಹಿಡಿದು ರಾಷ್ಟ್ರೀಯ ಮಟ್ಟದವರೆಗೆ ಒಟ್ಟು ನಾಲ್ಕು ಹಂತಗಳಲ್ಲಿ ನಡೆಯುವ ಈ ಪರೀಕ್ಷೆಗಳನ್ನು 6ನೇ ತರಗತಿಯಿಂದ 11ನೇ ತರಗತಿಯೊಳಗಿನ ವಿದ್ಯಾರ್ಥಿಗಳು ಬರೆಯ
ಬಹುದು. ಆಯಾ ಶಾಲೆಗಳ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಇದರ ಬಗೆಗಿನ ಮತ್ತಷ್ಟು ವಿವರಗಳು ಇಲ್ಲಿವೆ.

ನೋಂದಣಿ ಹೇಗೆ?

ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 15ರಿಂದ ವಿದ್ಯಾರ್ಥಿಗಳ ವಿವರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳು ₹100 ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಪರೀಕ್ಷೆ ಕೂಡ ಆನ್‌ಲೈನ್‌ನಲ್ಲೇ ನಡೆಯುತ್ತದೆ. ಈ ಪರೀಕ್ಷೆ ನಡೆಸಲು ನೋಂದಣಿ ಮಾಡಿಕೊಂಡಿರುವ ಶಾಲೆಗಳಲ್ಲೇ ತಜ್ಞರ ಮೇಲ್ವಿಚಾರಣೆಯಲ್ಲಿ ಪರೀಕ್ಷೆಗಳು ನಡೆಯುತ್ತವೆ.

ಏನು ಓದಬೇಕು?

ಎನ್‌ಸಿಆರ್‌ಟಿ ಪಠ್ಯವಿರುವ ಆಯಾ ತರಗತಿಗಳ ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ 50 ಪ್ರಶ್ನೆಗಳನ್ನು ಕೇಳಲಾಗುತ್ತದೆ. ವಿಜ್ಞಾನಕ್ಕೆ ಭಾರತೀಯರ ಕೊಡುಗೆ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ 20 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಜಗದೀಶ್ ಚಂದ್ರಬೋಸ್‌ ಮತ್ತು ಜಾನಕಿ ಅಮ್ಮಾಳ್‌ ಅವರ ಜೀವನಚರಿತ್ರೆ ಕುರಿತು 10 ಪ್ರಶ್ನೆಗಳಿರುತ್ತವೆ. ಇದರ ಜೊತೆಗೆ ತರ್ಕಕ್ಕೆ (ಲಾಜಿಕ್ ಆ್ಯಂಡ್ ರೀಸನಿಂಗ್‌) ಸಂಬಂಧಿಸಿದ 10 ಪ್ರಶ್ನೆಗಳಿದ್ದು, ಪ್ರತಿಯೊಂದಕ್ಕೂ 1 ಅಂಕವಿರುತ್ತದೆ. ವಿದ್ಯಾರ್ಥಿ ವಿಜ್ಞಾನ ಮಂಥನ್ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿ ಪಠ್ಯವೂ ದೊರೆಯುತ್ತದೆ.ಹೆಚ್ಚಿನ ಮಾಹಿತಿಗೆ: vvm.org.in

ಪರೀಕ್ಷೆಯ ಸ್ವರೂಪ

ಇಂಗ್ಲಿಷ್‌, ಹಿಂದಿ ಮತ್ತು ಒಂಬತ್ತು ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಶಾಲೆ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ. ಶಾಲಾ ಹಂತದ ಪರೀಕ್ಷೆಗೆ 2 ಗಂಟೆ ಕಾಲಾವಕಾಶವಿರುತ್ತದೆ. ಈ ಪರೀಕ್ಷೆಯಲ್ಲಿ ಬಹು ಆಯ್ಕೆಗಳಿರುವ 100 ಪ್ರಶ್ನೆಗಳಿರುತ್ತವೆ. ಪ್ರಶ್ನೆಗಳಿಗೆ 120 ನಿಮಿಷಗಳಲ್ಲಿ ಉತ್ತರಿಸಬೇಕಾಗುತ್ತದೆ.

ಉತ್ತಮ ಅಂಕ ಪಡೆದ 18 ಮಕ್ಕಳನ್ನು (ತರಗತಿಗೆ ಮೂವರಂತೆ) ಆಯ್ಕೆ ಮಾಡಲಾಗುತ್ತದೆ. ನಂತರ ಅವರಿಗೆ ಜಿಲ್ಲಾ ಮಟ್ಟದ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಪ್ರತಿ ತರಗತಿಯಿಂದ 20 ಮಕ್ಕಳನ್ನು ರಾಜ್ಯ ಮಟ್ಟದ ಪರೀಕ್ಷೆಗಳಿಗೆ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ಶಿಬಿರ ಏರ್ಪಡಿಸಿ ತರಬೇತಿ ನೀಡಲಾಗುತ್ತದೆ.

ತರಬೇತಿ ನಂತರ ಪ್ರತಿ ತರಗತಿಯಿಂದ ಮೂವರು ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದವರನ್ನು ಗುರುತಿಸಿ ಪ್ರಶಸ್ತಿ, ನಗದು ಬಹುಮಾನ ನೀಡಿ ಸಂಶೋಧನೆಗೆ ಪ್ರೋತ್ಸಾಹಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT