ಬುಧವಾರ, ಡಿಸೆಂಬರ್ 11, 2019
22 °C

ಶಿಕ್ಷಕರು ವಿದ್ಯಾರ್ಥಿಗಳ ಶಿಲ್ಪಿಗಳು

Published:
Updated:

ವಿದ್ಯಾರ್ಥಿಗಳೇ, ನಿಮ್ಮ ಜೀವನದ ಈ ಹಂತದಲ್ಲಿ ಪ್ರತಿನಿತ್ಯ ನಿಮ್ಮ ಮನೆಯನ್ನು ಹೊರತುಪಡಿಸಿ, ನೀವು ಅತಿ ಹೆಚ್ಚು ಸಮಯ ಕಳೆಯುವ ತಾಣವೆಂದರೆ ಶಾಲೆ ಅಲ್ಲವೇ? ರಜಾದಿನಗಳನ್ನು ಉಳಿದು, ಶಾಲೆಯು ಕೆಲಸ ಮಾಡುವ ದಿನಗಳಲ್ಲಿ ಪ್ರತಿ ದಿನ ಕನಿಷ್ಠ ಆರು ಅಥವಾ ಏಳು ಗಂಟೆಗಳ ಕಾಲ ನೀವು ಶಾಲೆಯಲ್ಲಿರುತ್ತೀರಿ. ನಿಮ್ಮ ಕಲಿಕೆಯ ಹಾಗೂ ವೈಯುಕ್ತಿಕ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ನಿಮ್ಮ ಶಾಲಾಜೀವನದ ಅವಧಿ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಶಾಲೆಯಲ್ಲಿ ಕಳೆಯುವ ಸಮಯವನ್ನು ಕಲಿಕೆಯ ಪ್ರಕ್ರಿಯೆಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ನಿಮ್ಮ ಜ್ಞಾನದಾಹವನ್ನು ಇಂಗಿಸಿಕೊಳ್ಳಬೇಕು. ಜೊತೆಗೆ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ನಿಮ್ಮ ಪೋಷಕರು ನಿಮ್ಮ ಬಗ್ಗೆ ಇಟ್ಟಿರುವ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳಬೇಕು, ಅಲ್ಲವೆ? ಇದಕ್ಕೆ ನೀವೇನು ಮಾಡಬೇಕು? ಈ ನಿಟ್ಟಿನಲ್ಲಿ ನಿಮ್ಮ ಸಹಾಯಕ್ಕೆ ಯಾರನ್ನು ನಿರೀಕ್ಷಿಸುತ್ತೀರಿ?

ನಿಮ್ಮ ಪೋಷಕರ ನಂತರ ನಿಮ್ಮ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವವರೆಂದರೆ ನಿಮ್ಮ ಶಿಕ್ಷಕರು ಅಲ್ಲವೇ? ನಮ್ಮ ಸಮಾಜವು ತಾಯಿ, ತಂದೆಯರ ನಂತರದ ಪೂಜ್ಯ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಹಿತವನ್ನು ಬಯಸುತ್ತಾರೆ. ತಮ್ಮ ಎಲ್ಲ ವಿದ್ಯಾರ್ಥಿಗಳ ಏಳಿಗೆಯನ್ನು ನಿರೀಕ್ಷೆಯಲ್ಲಿಟ್ಟುಕೊಂಡಿರುತ್ತಾರೆ. ವಿದ್ಯಾರ್ಥಿಗಳು ಅಪೇಕ್ಷಿತ ಗುರಿಯನ್ನು ತಲುಪಿದಾಗ ಅವರ ಪೋಷಕರಿಗಿಂತ ಹೆಚ್ಚು ಶಿಕ್ಷಕರೇ ಸಂಭ್ರಮಿಸುತ್ತಾರೆ. ಹೌದಲ್ಲವೇ?. ನಿಮ್ಮ ವಿದ್ಯಾರ್ಥಿಜೀವನದಲ್ಲಿ ನಿಮ್ಮ ಮೇಲೆ ಶಿಕ್ಷಕರ ಪ್ರಭಾವ ಗಾಢವಾಗಿರುತ್ತದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ನಿಮ್ಮ ಶೈಕ್ಷಣಿಕ ಉನ್ನತಿಯನ್ನು ಸಾಧಿಸುವುದು ಹೇಗೆ ಎಂಬ ಬಗ್ಗೆ ಬೆಳಕು ಚೆಲ್ಲುವುದು ಈ ಲೇಖನದ ಉದ್ದೇಶ.

ಪಾಠವನ್ನು ಏಕಾಗ್ರತೆಯಿಂದ ಕೇಳಿಸಿಕೊಳ್ಳಿ
ತರಗತಿಯಲ್ಲಿ ಯಾವುದೇ ವಿಷಯದ ಶಿಕ್ಷಕರು ಪಾಠ ಮಾಡುವಾಗ ಏಕಾಗ್ರತೆಯಿಂದ ಅದನ್ನು ಕೇಳಿಸಿಕೊಳ್ಳಿ. ಪಾಠದ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಳ್ಳಿ. ಈ ಅಂಶಗಳನ್ನು ನಿಮ್ಮ ಶಿಕ್ಷಕರು ಪಾಠದ ನಂತರ ಕೊಡುವ ನೋಟ್ಸ್‌ನ ಜೊತೆಗೆ ತಾಳೆ ಮಾಡಿ ನೋಡಿ. ಮನೆಯಲ್ಲಿ ಅಧ್ಯಯನ ಮಾಡುವಾಗಲೂ ಇವುಗಳನ್ನು ಬಳಸಿಕೊಳ್ಳಿ. ವಿಷಯವನ್ನು ನೆನಪಿಟ್ಟುಕೊಳ್ಳುವುದಕ್ಕೆ ಇದು ನೆರವಾಗುತ್ತದೆ. ಪಾಠವನ್ನು ಕೇಳುತ್ತಿದ್ದಂತೆ ನಿಮಗೆ ಅರ್ಥವಾಗದ ಭಾಗಗಳನ್ನು ಬೇರೆಯಾಗಿಯೇ ಗುರುತು ಹಾಕಿಕೊಳ್ಳಿ. ನಿಮ್ಮ ಸಂದೇಹಗಳನ್ನೂ ಪಟ್ಟಿ ಮಾಡಿಕೊಳ್ಳಿ. ನಿಮ್ಮ ಶಿಕ್ಷಕರು ಪ್ರತಿ ಬಾರಿ ತರಗತಿಯಲ್ಲಿ ಪಾಠ ಮಾಡುವ ಮುನ್ನ ಅದಕ್ಕಾಗಿ ನಡೆಸುವ ತಯಾರಿ ಹಾಗೂ ವಹಿಸುವ ಶ್ರಮಕ್ಕೆ ನಿಜವಾದ ಬೆಲೆ ಸಿಗುವುದು ನೀವು ಆ ಪಾಠವನ್ನು ಏಕಾಗ್ರತೆಯಿಂದ ಕೇಳಿ ಅರ್ಥ ಮಾಡಿಕೊಂಡಾಗ ಮಾತ್ರ ಎಂಬುದು  ಯಾವಾಗಲೂ ನಿಮ್ಮ ನೆನಪಿನಲ್ಲಿರಬೇಕು.

ತರಗತಿಯಲ್ಲಿ ಶಿಕ್ಷಕರು ಮಾಡಿ ತೋರಿಸುವ ಪ್ರಯೋಗಗಳನ್ನೂ ಎಚ್ಚರಿಕೆಯಿಂದ ಗಮನಿಸಿ. ಪ್ರಯೋಗದ ಹಿಂದಿರುವ ತತ್ವ, ಅದರ ಉದ್ದೇಶ ಮತ್ತು ಫಲಿತಾಂಶಗಳನ್ನು ಬರೆದುಕೊಳ್ಳಿ. ನಿಮಗೆ ಏನಾದರೂ ಸಂದೇಹ ಬಂದರೆ, ಅದನ್ನೂ ಗುರುತು ಹಾಕಿಕೊಳ್ಳಿ. ಗಣಿತದಂಥ ವಿಷಯಗಳಲ್ಲಿ ಶಿಕ್ಷಕರು ಬಿಡಿಸಿದ ಸಮಸ್ಯೆಗಳ ಜೊತೆಗೆ ಅದೇ ರೀತಿಯ ಇನ್ನಷ್ಟು ಸಮಸ್ಯೆಗಳನ್ನು ಬಿಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ಗುಂಪು ಚಟುವಟಿಕೆಗಳಲ್ಲಿ ಮತ್ತು ಪ್ರಾಜೆಕ್ಟ್‌ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ನೀಡುವ ಸೂಚನೆಗಳನ್ನು ಯಥಾವತ್ತಾಗಿ ಪಾಲಿಸಿ ನಿಮ್ಮ ಸಾಮರ್ಥ್ಯ ಹಾಗೂ ಪ್ರತಿಭೆಗೆ ಅನುಗುಣವಾಗಿ ಶಿಕ್ಷಕರು ತೆಗೆದುಕೊಂಡ ನಿರ್ಧಾರಗಳನ್ನು ಗೌರವಿಸಿ. ಯಾವುದೇ ಚಟುವಟಿಕೆಯ ಎಲ್ಲ ಹಂತಗಳಲ್ಲಿ ನಿಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳಿ.

ನಿಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಿ
ತರಗತಿಯಲ್ಲಾಗಲೀ ಅಥವಾ ಮನೆಯಲ್ಲಿನ ನಿಮ್ಮ ಅಧ್ಯಯನದ ಸಮಯದಲ್ಲಾಗಲೀ ಯಾವುದೇ ವಿಷಯದಲ್ಲಿ ನೀವು ಪಟ್ಟಿ ಮಾಡಿಕೊಂಡಿರುವ ಸಂದೇಹಗಳನ್ನು ಹಾಗೂ ಸಮಸ್ಯೆಗಳನ್ನು ಸಂಬಂಧಿಸಿದ ಶಿಕ್ಷಕರ ಜೊತೆಗೆ ಮುಕ್ತವಾಗಿ ಚರ್ಚಿಸಿ. ಶಾಲೆಯಲ್ಲಿ ಬಿಡುವಿನ ವೇಳೆಯಲ್ಲಿ ಶಿಕ್ಷಕರನ್ನು ಭೇಟಿ ಮಾಡಿ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಲು ಶಿಕ್ಷಕರು ಸದಾ ಸಿದ್ಧವಿರುತ್ತಾರೆ. ಶಿಕ್ಷಕರಿಂದ ನೇರವಾಗಿ ಉತ್ತರ ಪಡೆಯುವ ಬದಲಿಗೆ, ನಿಮ್ಮ ಪ್ರಶ್ನೆಗಳಿಗೆ ಅವರ ಪ್ರತಿಕ್ರಿಯೆ ಏನು ಎಂಬುದನ್ನು ಗಮನಿಸಿ. ನಿಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಸೂಕ್ತ ಸಮಾಧಾನವನ್ನು ನೀಡುವ ನಿಟ್ಟಿನಲ್ಲಿ ಅವರು ಖಂಡಿತ ನೆರವಾಗುತ್ತಾರೆ.

ಪರೀಕ್ಷೆಗೆ ಸಿದ್ಧವಾಗುವ ಬಗೆ, ಅದಕ್ಕಾಗಿ ನೀವು ಹಾಕಿಕೊಳ್ಳಬೇಕಾದ ವೇಳಾಪಟ್ಟಿ ಮುಂತಾದ ವಿಷಯಗಳ ಬಗ್ಗೆಯೂ ನೀವು ನಿಮ್ಮ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ, ಅವರಿಂದ ಸೂಕ್ತ ಮಾರ್ಗದರ್ಶನ ಪಡೆದು ಅದರಂತೆ ಕಾರ್ಯ ನಿರ್ವಹಿಸಿದಲ್ಲಿ ನಿಮ್ಮ ಗುರಿಯನ್ನು ತಲುಪುವುದು ನಿಮಗೆ ಸುಲಭವಾಗುತ್ತದೆ. ಇದರ ಜೊತೆಗೆ, ಈ ಮುಂದಿನ ಕೆಲವು ವಾರಗಳಲ್ಲಿ ನಿಮ್ಮ ಶಿಕ್ಷಕರು ಪಾಠಗಳ ಪುನರ್ಮನನ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳಗೆ ನಿಮ್ಮನ್ನು ಅಣಿಗೊಳಿಸುವ ಸಂಬಂಧ ಹಲವು ಬಗೆಯ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಪೂರ್ವಸಿದ್ಧತಾ ಪರೀಕ್ಷೆಯ ನಂತರ ವಿವಿಧ ವಿಷಯಗಳಲ್ಲಿನ ನಿಮ್ಮ ಉತ್ತರ ಪತ್ರಿಕೆಗಳನ್ನು ಸಂಬಂಧಿಸಿದ ಶಿಕ್ಷಕರು ಮೌಲ್ಯಮಾಪನ ಮಾಡಿ ನಿಮಗೆ ಹಿಂದಿರುಗಿಸುತ್ತಾರಲ್ಲವೇ? ಈ ಉತ್ತರ ಪತ್ರಿಕೆಗಳನ್ನು ನೀವು ಸರಿಯಾಗಿ ಪರಿಶೀಲಿಸಿದಾಗ ನೀವು ಮಾಡಿರಬಹುದಾದ ತಪ್ಪುಗಳು ನಿಮಗೆ ತಿಳಿಯುತ್ತವೆ. ಇಂಥ ಅಂಶಗಳನ್ನು ನಿಮ್ಮ ವಿಷಯ ಶಿಕ್ಷಕರ ಜೊತೆಗೆ ಚರ್ಚಿಸುವ ಮೂಲಕ ಅಂತಿಮ ಪರೀಕ್ಷೆಯಲ್ಲಿ ಈ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬಹುದು. ಈ ರೀತಿಯ ಕ್ರಮಗಳಿಂದ ಅಂಕಗಳು ಕಡಿಮೆಯಾಗುವುದನ್ನು ತಪ್ಪಿಸಬಹುದು.

ಈಗ ನಮ್ಮಲ್ಲಿ ಚಾಲನೆಯಲ್ಲಿರುವ ವಿದ್ಯಾಭ್ಯಾಸ ಪದ್ಧತಿಯಲ್ಲಿ ನಿಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಗಮನಿಸುತ್ತ ನಿಮ್ಮ ಜ್ಞಾನವನ್ನು ನೀವೇ ಕಟ್ಟಿಕೊಳ್ಳಬೆಕಾಗಿದೆ. ಈ ಒಂದು ಪ್ರಕ್ರಿಯೆಯಲ್ಲಿ ನಿಮ್ಮ ಶಿಕ್ಷಕರು ನಿಮಗೆ ನೆರವಾಗುತ್ತಾರೆ. ಹೀಗಾಗಿ, ಈಗ ಶಿಕ್ಷಕರನ್ನು ಕಲಿಕೆಯ ಪ್ರಕ್ರಿಯೆಗೆ ‘ಅನುಕೂಲಿಸುವವರು’ ಅಥವಾ ‘ಸುಗಮಕಾರರು’ ಎಂದು ಕರೆಯಲಾಗುತ್ತದೆ. ಅವರು ನಿಮಗೆ ಕಲಿಯುವುದನ್ನು ಕಲಿಸುತ್ತಾರೆ. ನಿಮ್ಮ ಶಿಕ್ಷಕರ ಜ್ಞಾನ ಸಂಪತ್ತನ್ನು ಹಾಗೂ ಅನುಭವವನ್ನು ಸೂಕ್ತವಾಗಿ ಬಳಸಿಕೊಂಡು ನಿಮ್ಮ ವೈಯುಕ್ತಿಕ ಬೆಳವಣಿಗೆಯನ್ನು ಸಾಧಿಸುವುದು ನಿಮ್ಮ ಕೈನಲ್ಲೇ ಇದೆ.

ಚರ್ಚೆಗೆ ಹಿಂಜರಿಕೆ ಬೇಡ
ನಿಮ್ಮ ಯಾವುದೇ ರೀತಿಯ ಶೈಕ್ಷಣಿಕ ಸಮಸ್ಯೆಗಳನ್ನು ನಿಮ್ಮ ಶಿಕ್ಷಕರ ಗಮನಕ್ಕೆ ತನ್ನಿ. ಅವರು ನಿಮಗೆ ಸೂಕ್ತ ಪರಿಹಾರವನ್ನು ಸೂಚಿಸುತ್ತಾರೆ. ಅವರ ಸಲಹೆಗಳನ್ನು ಕಾರ್ಯಗತಗೊಳಿಸುವ ಮೂಲಕ ನಿಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ. ಶಿಕ್ಷಕರ ಜೊತೆ ಚರ್ಚಿಸಲು ಯಾವುದೇ ರೀತಿಯ ಹಿಂಜರಿಕೆಯಾಗಲೀ ಹೆದರಿಕೆಯಾಗಲೀ ಬೇಡ. ನಿಮ್ಮ ಶಿಕ್ಷಕರ ಜೊತೆ ನಿಮಗೆ ಸದಾ ಸಂಪರ್ಕವಿರಲಿ. ನಿಮ್ಮ ಮೇಲೆ ಶಿಕ್ಷಕರು ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಿ.

ಶಿಕ್ಷಕರ ಬಗ್ಗೆ ಗೌರವ ಬೆಳೆಸಿಕೊಳ್ಳಿ
ವಿದ್ಯಾರ್ಥಿಗಳಾಗಿ ನಿಮ್ಮ ಮೊದಲ ಕರ್ತವ್ಯವೆಂದರೆ ಶಿಕ್ಷಕರ ಬಗ್ಗೆ ಗೌರವ ಬೆಳೆಸಿಕೊಳ್ಳುವುದು. ಪಠ್ಯವಸ್ತುವಿನಲ್ಲಿರುವ ವಿವಿಧ ವಿಷಯಗಳನ್ನು ಬೋಧಿಸಲು ತರಗತಿಗೆ ಬರುವ ಎಲ್ಲ ಶಿಕ್ಷಕರನ್ನು ಸಮಾನವಾಗಿ ಗೌರವಿಸಿ. ಯಾವುದೇ ಭೇದಭಾವ ಬೇಡ. ಯಾವ ಶಿಕ್ಷಕರ ಬಗ್ಗೆಯೂ ಪೂರ್ವಗ್ರಹ ಇಟ್ಟುಕೊಳ್ಳಬೇಡಿ. ಎಲ್ಲ ಶಿಕ್ಷಕರ ಬಳಿ ನಡವಳಿಕೆ ಒಂದೇ ರೀತಿ ಇರಲಿ. ಅನುಭವದಿಂದ ಕೂಡಿರುವ ಅವರ ಬೋಧನೆಯಿಂದ ನಿಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳುವುದಷ್ಟೇ ನಿಮ್ಮ ಜವಾಬ್ದಾರಿ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಗುರು-ಶಿಷ್ಯರ ಸಂಬಂಧ ಪರಸ್ಪರ ಪೂರಕವಾಗಿರುತ್ತದೆ. ನೀವು ನಿಮ್ಮ ಶಿಕ್ಷಕರ ಬಗ್ಗೆ ಎಷ್ಟು ವಿಶ್ವಾಸ ತೋರಿಸುತ್ತೀರೋ ಅಷ್ಟೇ ವಿಶ್ವಾಸವನ್ನು ನಿಮ್ಮ ಶಿಕ್ಷಕರು ನಿಮ್ಮ ಬಗ್ಗೆ ತೋರುತ್ತಾರೆ. ನಿಮ್ಮ ಮತ್ತು ನಿಮ್ಮ ಶಿಕ್ಷಕರ ನಡುವೆ ಬೆಳೆದುಬಂದಿರುವ ವಿಶ್ವಾಸವನ್ನು ಶಿಕ್ಷಕರು ತಮ್ಮ ಜೀವನವಿಡೀ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ನೀವು ಶಾಲೆ ಬಿಟ್ಟ ನಂತರವೂ ನಿಮ್ಮ ಶಿಕ್ಷಕರ ಬಗ್ಗೆ ಅದೇ ವಿಶ್ವಾಸ ಮತ್ತು ಗೌರವವನ್ನು ಉಳಿಸಿಕೊಳ್ಳಿ.

ಪ್ರತಿಕ್ರಿಯಿಸಿ (+)