ಮಂಗಳವಾರ, ಜುಲೈ 5, 2022
21 °C

PV Web Exclusive: ಬದಲಾಗಲಿದೆ ಬಿ.ಇಡಿ ಕೋರ್ಸ್‌ನ ಸ್ವರೂಪ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗುಣಮಟ್ಟ ಹಾಗೂ ಕೌಶಲದಿಂದ ಕೂಡಿರುವ ಶಿಕ್ಷಕರನ್ನು ರೂಪಿಸುವ ಉದ್ದೇಶದಿಂದ ಬಿ.ಇಡಿ ಕೋರ್ಸ್‌ನ ಸಮಗ್ರ ಬದಲಾವಣೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಮುಂದಾಗಿದೆ.

ಈ ಮೊದಲು 10 ತಿಂಗಳಿಗಷ್ಟೇ ಸೀಮಿತವಾಗಿದ್ದ ಬಿ.ಇಡಿ ಕೋರ್ಸ್‌ 2015ರಲ್ಲಿ ನಾಲ್ಕು ಸೆಮಿಸ್ಟರ್‌ ಒಳಗೊಂಡಂತೆ ಎರಡು ವರ್ಷಗಳ ಅವಧಿಗೆ ವಿಸ್ತರಿಸಲ್ಪಟ್ಟಿತ್ತು. ಈ ಕೋರ್ಸ್‌ನ ಅವಧಿಯನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ. ಅಂದರೆ, ಒಟ್ಟು 8 ಸೆಮಿಸ್ಟರ್‌ಗಳು ಒಳಗೊಂಡಂತೆ ನಾಲ್ಕು ವರ್ಷಗಳ ಪದವಿಯಾಗಿ ಬಿ.ಇಡಿ ರೂಪಾಂತರವಾಗಲಿದೆ.

ಹೌದು, ನಾಲ್ಕು ವರ್ಷಗಳ ‘ಇಂಟಿಗ್ರೇಟೆಡ್‌ ಕೋರ್ಸ್‌’ ಆಗಿ ಬಿ.ಇಡಿ ಪರಿವರ್ತನೆಯಾಗಲಿದೆ. ಇದರಲ್ಲಿಯೇ ‘ಬಿ.ಎ– ಬಿ.ಇಡಿ’ ಮತ್ತು ‘ಬಿ.ಎಸ್ಸಿ– ಬಿ.ಇಡಿ’ ಕೋರ್ಸ್‌ಗಳು ಚಾಲ್ತಿಗೆ ಬರಲಿವೆ.

ಈ ಮೊದಲು ಬಿ.ಇಡಿ ಪ್ರವೇಶಿಸಲು ಯಾವುದಾದರೂ ಪದವಿ ಪಡೆದವರು ಅರ್ಹರಾಗಿದ್ದರು. ಆದರೆ ‘ಬಿ.ಇಡಿ ಇಂಟಿಗ್ರೇಟೆಡ್‌ ಕೋರ್ಸ್‌’ ಪ್ರವೇಶಕ್ಕೆ ದ್ವಿತೀಯ ಪಿ.ಯು ಅಥವಾ 12ನೇ ತರಗತಿಯನ್ನು ನಿಗದಿತ ಅಂಕಗಳೊಂದಿಗೆ ಪಾಸಾಗಿರಬೇಕು.

ಪ್ರಸ್ತುತ ವಿದ್ಯಾರ್ಥಿಗಳಿಗೆ ಪದವಿ (ಮೂರು ವರ್ಷ) ಹಾಗೂ ಬಿ.ಇಡಿ ಕೋರ್ಸ್‌ (ಎರಡು ವರ್ಷ) ಎರಡನ್ನೂ ಪೂರ್ಣಗೊಳಿಸಲು ಐದು ವರ್ಷಗಳು ತಗಲುತ್ತಿವೆ. ಆದರೆ ಇಂಟಿಗ್ರೇಟೆಡ್‌ ಕೋರ್ಸ್‌ನಿಂದ ವಿದ್ಯಾರ್ಥಿಗಳಿಗೆ ಒಂದು ವರ್ಷ ಉಳಿಯುತ್ತದೆ. ಐದು ವರ್ಷಗಳ ಬದಲಿಗೆ ನಾಲ್ಕೇ ವರ್ಷಗಳಲ್ಲಿ ‘ಡಬ್ಬಲ್‌ ಪದವಿ’ ಪಡೆಯಲು ಅವಕಾಶ ದೊರೆತಂತಾಗುತ್ತದೆ.

ಪ್ರಾಥಮಿಕ ಶಾಲೆಗಳಲ್ಲಿ ಪದವೀಧರ ಶಿಕ್ಷಕರಾಗಲು, ಪ್ರೌಢಶಾಲಾ ಶಿಕ್ಷಕರಾಗಲು, ಪಿಯು ಉಪನ್ಯಾಸಕರಾಗಲು ಈಗ ಬಿ.ಇಡಿ ಕಡ್ಡಾಯವಾಗಿದೆ. ಅಲ್ಲದೆ ನೂತನ ಶಿಕ್ಷಣ ನೀತಿಯು (ಎನ್‌ಇಪಿ) 2030ರ ಬಳಿಕ ಶಿಕ್ಷಕ ಹುದ್ದೆಗೆ ಬಿ.ಇಡಿ ಇಂಟಿಗ್ರೇಟೆಡ್‌ ಕೋರ್ಸ್‌ ಆಗಿರುವ ಅಭ್ಯರ್ಥಿಗಳನ್ನೇ ಪರಿಗಣಿಸಬೇಕು ಎಂದು ಹೇಳಿರುವ ಕಾರಣ ಈ ಕೋರ್ಸ್‌ಗೆ ಬೇಡಿಕೆಯೂ ಹೆಚ್ಚಲಿದೆ.

ಆರ್‌ಐಇಗಳಲ್ಲಿ ಮಾತ್ರ ಇತ್ತು:

ರಾಷ್ಟ್ರೀಯ ಶಿಕ್ಷಕರ ಶೈಕ್ಷಣಿಕ ಪರಿಷತ್ತು (ಎನ್‌ಸಿಟಿಇ) ನಡೆಸುತ್ತಿರುವ ಅಜ್ಮೀರ್‌, ಮೈಸೂರು, ಭುವನೇಶ್ವರ ಮತ್ತು ಭೋಪಾಲ್‌ ಪ್ರಾದೇಶಿಕ ಶಿಕ್ಷಣ ಕೇಂದ್ರಗಳಲ್ಲಿ (ಆರ್‌ಇಐ) ಮಾತ್ರ ನಾಲ್ಕು ವರ್ಷಗಳ ಇಂಟಿಗ್ರೇಟೆಡ್‌ ಬಿ.ಇಡಿ ಕೋರ್ಸ್‌ ಚಾಲ್ತಿಯಲ್ಲಿತ್ತು. ಇದೇ ಮಾದರಿಯ ಕೋರ್ಸ್‌ ಅನ್ನು ದೇಶದಾದ್ಯಂತ ವಿಸ್ತರಿಸಲು ಎನ್‌ಸಿಟಿಇ ನಿರ್ಧರಿಸಿದೆ. ಅದಕ್ಕೆ ಪೂರಕವಾಗಿ 2017–18ರಲ್ಲಿ ಕರ್ನಾಟಕದಲ್ಲಿನ ಬೆಂಗಳೂರಿನ ಎನ್‌ಎಂಕೆಆರ್‌ವಿ ಮತ್ತು ಮೌಂಟ್‌ಕಾರ್ಮೆಲ್‌ ಖಾಸಗಿ ಕಾಲೇಜುಗಳು ಎನ್‌ಸಿಟಿಇಯಿಂದ ಅನುಮತಿ ಪಡೆದು ಈ ಮಾದರಿಯ ಇಂಟಿಗ್ರೇಟೆಡ್‌ ಕೋರ್ಸ್‌ ಅನ್ನು ಆರಂಭಿಸಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿವೆ.

ಎನ್‌ಸಿಟಿಇ 2019ರಲ್ಲಿ ದೇಶದಾದ್ಯಂತ ಪದವಿ ಕಾಲೇಜುಗಳು ನಾಲ್ಕು ವರ್ಷಗಳ ಬಿ.ಇಡಿ ಇಂಟಿಗ್ರೇಟೆಡ್‌ ಕೋರ್ಸ್‌ ಆರಂಭಿಸಬಹುದು ಎಂದು ತಿಳಿಸಿ, ಅನುಮತಿಗಾಗಿ ತನ್ನ ಪೋರ್ಟಲ್‌ ಮೂಲಕ ಅರ್ಜಿ ಆಹ್ವಾನಿಸಿತು. ಆಗ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಹಲವು ರಾಜ್ಯಗಳ ಪದವಿ ಕಾಲೇಜುಗಳು ಅರ್ಜಿ ಸಲ್ಲಿಸಿ, ಎನ್‌ಸಿಟಿಇ ಅನುಮತಿಗಾಗಿ ಕಾದು ಕುಳಿತಿವೆ.

34 ಸರ್ಕಾರಿ ಪದವಿ ಕಾಲೇಜುಗಳಿಂದಲೂ ಪ್ರಸ್ತಾವನೆ:

ರಾಜ್ಯದಲ್ಲಿ ಒಟ್ಟಾರೆ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 321 ಅನುದಾನಿತ ಪದವಿ ಕಾಲೇಜುಗಳು ಹಾಗೂ 840 ಅನುದಾನ ರಹಿತ ಪದವಿ ಕಾಲೇಜುಗಳಿವೆ. ಇದರಲ್ಲಿ ಕಾಲೇಜು ಶಿಕ್ಷಣ ಇಲಾಖೆಯು ರಾಜ್ಯದ 34 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಿ.ಇಡಿ ಇಂಟಿಗ್ರೇಟೆಡ್‌ ಕೋರ್ಸ್‌ ಆರಂಭಿಸಲು ನಿರ್ಧರಿಸಿ ಈ ಕುರಿತು ಅನುಮತಿ ಕೋರಿ ಪ್ರಸ್ತಾವನೆಯನ್ನು ಎನ್‌ಸಿಟಿಇಗೆ ಕಳುಹಿಸಿದೆ. ಈ ಸಂಬಂಧ ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಅವರಿಗೆ ಪತ್ರ ಬರೆದಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಸರ್ಕಾರಿ ಪದವಿ ಕಾಲೇಜಿನಲ್ಲಿ ಈ ಕೋರ್ಸ್‌ ಇರಬೇಕು ಎಂಬುದು ಸರ್ಕಾರದ ಅಪೇಕ್ಷೆಯಾಗಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ. ಪ್ರದೀಪ್‌ ಮಾಹಿತಿ ನೀಡಿದರು.

ಇದಲ್ಲದೆ ಬೆಂಗಳೂರಿನ 26ಕ್ಕೂ ಹೆಚ್ಚು ಖಾಸಗಿ ಪದವಿ ಕಾಲೇಜುಗಳು ಸೇರಿದಂತೆ ರಾಜ್ಯದ ಹಲವು ಖಾಸಗಿ ಪದವಿ ಕಾಲೇಜುಗಳು ಈ ಕೋರ್ಸ್‌ಗಾಗಿ ಅನುಮತಿ ಕೋರಿವೆ ಎಂದು ಮೂಲಗಳು ತಿಳಿಸಿವೆ.

ಕಾಲೇಜುಗಳಲ್ಲಿನ ಮೂಲಸೌಕರ್ಯ, ಬೋಧಕರ ಲಭ್ಯತೆ ಸೇರಿದಂತೆ ವಿವಿಧ ವಿಷಯಗಳನ್ನು ಎನ್‌ಸಿಟಿಇ ಸಮಗ್ರವಾಗಿ ಪರಿಶೀಲಿಸಿದ ನಂತರವೇ ಕೋರ್ಸ್‌ಗೆ ಅನುಮತಿ ನೀಡುತ್ತದೆ. ಆ ಬಳಿಕ ಸಂಬಂಧಿಸಿದ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಎಲ್‌ಐಸಿ ಸಮಿತಿಗಳು ಸ್ಥಳ ಪರಿಶೀಲನೆ ನಡೆಸಿ, ನೀಡುವ ಶಿಫಾರಸ್ಸನ್ನು ಆಧರಿಸಿ ಈ ಕಾಲೇಜುಗಳಿಗೆ ಇಂಟಿಗ್ರೇಟೆಡ್‌ ಕೋರ್ಸ್‌ ಆರಂಭಿಸಲು ಅನುಮತಿ ದೊರೆಯುತ್ತದೆ. ಕೋವಿಡ್‌ ಕಾರಣದಿಂದ ಈ ಕಾರ್ಯಗಳು ವಿಳಂಬವಾಗುತ್ತಿರಬಹುದು ಎಂದು ಪ್ರತಿಕ್ರಿಯಿಸುತ್ತಾರೆ ಅಲ್‌ ಅಮೀನ್‌ ಶಿಕ್ಷಕ ಕಾಲೇಜಿನ ಪ್ರಾಂಶುಪಾಲರೂ ಆಗಿರುವ ಕರ್ನಾಟಕ ಅನುದಾನಿತ ಬಿ.ಇಡಿ ಕಾಲೇಜುಗಳ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ರಮೇಶ್‌.

ಕೆಲ ಕಾಲೇಜುಗಳಿಗೆ ಸಂಕಷ್ಟ:

ರಾಜ್ಯದಲ್ಲಿ ಒಟ್ಟು 372 ಬಿ.ಇಡಿ ಕಾಲೇಜುಗಳಿವೆ. ಇವುಗಳಲ್ಲಿ 8 ಸರ್ಕಾರಿ, 54 ಅನುದಾನಿತ ಕಾಲೇಜುಗಳಾಗಿವೆ. ಬಹುತೇಕ ಕಾಲೇಜುಗಳಲ್ಲಿ ಬಿ.ಇಡಿ ಏಕಮಾತ್ರ ಕೋರ್ಸ್‌ ಇದೆ. ಕೆಲ ಕಾಲೇಜುಗಳ ಶೈಕ್ಷಣಿಕ ಸಮೂಹ ಸಂಸ್ಥೆಗಳಲ್ಲಿ ಪದವಿ ಕಾಲೇಜುಗಳೂ ಇವೆ. ಎನ್‌ಸಿಟಿಇ ನಿಯಮದ ಪ್ರಕಾರ ಪದವಿ ಕಾಲೇಜು ಹೊಂದಿರುವ ಶಿಕ್ಷಣ ಸಂಸ್ಥೆಗಳು ಮಾತ್ರ ಇಂಟಿಗ್ರೇಟೆಡ್‌ ಬಿ.ಇಡಿ ಕೋರ್ಸ್‌ ಆರಂಭಿಸಬಹುದು. ಆದರೆ ಬಿ.ಇಡಿ ಏಕಮಾತ್ರ ಕೋರ್ಸ್‌ ಹೊಂದಿರುವ ಶಿಕ್ಷಣ ಸಂಸ್ಥೆಗಳಿಗೆ ಆ ಅವಕಾಶ ಇಲ್ಲ. ಹೀಗಾದಾಗ ಬಹುತೇಕ ಇಂಥ ಕಾಲೇಜುಗಳಿಗೆ ಉಳಿಗಾಲವಿಲ್ಲ. ಅವು ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

54 ಬಿ.ಇಡಿ ಅನುದಾನಿತ ಕಾಲೇಜುಗಳ ಪೈಕಿ ಶೇ 50ರಷ್ಟರಲ್ಲಿ ಪದವಿ ಕಾಲೇಜುಗಳು ಇಲ್ಲ. ಹೊಸ ಕೋರ್ಸ್‌ ಜಾರಿಯಾದ ಬಳಿಕ ಕ್ರಮೇಣ ಈ ಬಿ.ಇಡಿ ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ. ಈ ಕಾಲೇಜುಗಳ ಬೋಧಕರನ್ನು ಸರ್ಕಾರವೇ ತನ್ನ ಬಿ.ಇಡಿ ಕಾಲೇಜುಗಳಿಗೆ ಅಥವಾ ಇತರೆ ಅನುದಾನಿತ ಕಾಲೇಜುಗಳಿಗೆ ನಿಯೋಜನೆ ಮಾಡಬಹುದು. ಆದರೆ ಬಾಗಿಲು ಹಾಕುವ ಅನುದಾನರಹಿತ ಕಾಲೇಜುಗಳ ಬೋಧಕ ಮತ್ತು ಬೋಧಕೇತರರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು