ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಗ್ಗಿ ಸುಗ್ಗಿ’ ಈ ಶಾಲೆಯ ವಿಶೇಷ!

ಖಾಸಗಿ ಶಾಲೆಗಳಿಗೂ ಪೈಪೋಟಿ; ಶಿಕ್ಷಕರು– ಗ್ರಾಮಸ್ಥರ ಸಹಭಾಗಿತ್ವ
ಅಕ್ಷರ ಗಾತ್ರ

ನರೇಗಲ್: ಕನ್ನಡದ ಪ್ರಸಿದ್ಧ ಕವಿ ಚಾಮರಸನ ಹುಟ್ಟೂರು ಗದಗ ತಾಲ್ಲೂಕಿನ ನಾರಾಯಣಪುರ ಗ್ರಾಮ. ಈ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯು, ಕಲಿಕಾ ಗುಣಮಟ್ಟದಲ್ಲಿ ಖಾಸಗಿ ಶಾಲೆಗಳಿಗೆ ಪ್ರಬಲ ಸ್ಪರ್ಧೆ ನೀಡುತ್ತಿದೆ. ಶತಮಾನದ ಸಂಭ್ರಮದಲ್ಲಿರುವ ಈ ಶಾಲೆಯಲ್ಲಿ, ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಪೈಪೋಟಿ ಇದೆ.

ಶಾಲೆ ಸ್ಥಾಪನೆಯಾಗಿದ್ದು 1918ರಲ್ಲಿ. ಸದ್ಯ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯಾಗಿದೆ. ಇಲ್ಲಿ 1ರಿಂದ 8ನೇ ತರಗತಿವರೆಗೆ 111 ವಿದ್ಯಾರ್ಥಿಗಳಿದ್ದಾರೆ. ಗ್ರಾಮಸ್ಥರು ಮತ್ತು ಶಿಕ್ಷಕರ ಸಹಭಾಗಿತ್ವದಲ್ಲಿ ಇದು ಮಾದರಿ ಸರ್ಕಾರಿ ಶಾಲೆಯಾಗಿ ಅಭಿವೃದ್ಧಿಗೊಂಡಿದೆ. ಈ ಶಾಲೆಯಲ್ಲಿನ ಕಲಿಕಾ ಗುಣಮಟ್ಟ ಅರಿತ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಬಿಡಿಸಿ, ಈ ಶಾಲೆಗೆ ತಂದು ಸೇರಿಸುವಷ್ಟರ ಮಟ್ಟಿಗೆ ಶಾಲೆಯ ಜನಪ್ರಿಯತೆ ವರ್ಧಿಸಿದೆ. ವರ್ಷದಿಂದ ವರ್ಷಕ್ಕೆ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ.

ಈ ಶಾಲೆಯ ಮತ್ತೊಂದು ವಿಶೇಷವೆಂದರೆ ‘ಮಗ್ಗಿ ಸುಗ್ಗಿ’. ಹೌದು ಈ ಶಾಲೆಯ ಮಕ್ಕಳು 1ರಿಂದ 50 ಹಾಗೂ 50 ರಿಂದ 1 ರವರೆಗೆ ಮಗ್ಗಿಗಳನ್ನು ಸರಾಗವಾಗಿ ಹೇಳುತ್ತಾರೆ. ಕಲಿಕೆಯಲ್ಲಿ ಸ್ವಲ್ಪ ಹಿಂದುಳಿದಿರುವ ಮಕ್ಕಳು ಸಹ ಕನಿಷ್ಠ 15ರವರೆಗೆ, ಒಂದೂ ತಪ್ಪದಂತೆ ಮಗ್ಗಿ
ಹೇಳುತ್ತಾರೆ.

ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಜನಪ್ರತಿನಿಧಿಗಳು, ಅಧಿಕಾರಿಗಳು ಶಾಲಾ ಆವರಣದಲ್ಲಿದ್ದ ಪಾಳು ಬಾವಿ ಮುಚ್ಚಿ, ಅದರ ಮೇಲೆ ‘ಎಲ್’ ಆಕಾರದಲ್ಲಿ ಸುಂದರವಾದ ಶಾಲಾ ಕಟ್ಟಡ ಕಟ್ಟಿದ್ದಾರೆ. ಶಾಲಾ ಗೋಡೆಯ ಮೇಲೆ ವಿಜ್ಞಾನದ ಪಾಠಗಳು ಕುಂಚದಲ್ಲಿ ಅರಳಿವೆ. ಪ್ರತಿ ತರಗತಿಗೆ ಕೋಣೆಯ ಬಾಗಿಲ ಅಂಚಿಗೆ ಕನ್ನಡ ಹಿರಿಮೆ ಹೆಚ್ಚಿಸಿದ ಸಾಹಿತಿಗಳ ಹೆಸರಿನಲ್ಲಿ ನಾಮಫಲಕ ಅಳವಡಿಸಲಾಗಿದೆ.

ಶಾಲೆಯ ಎಂಟೂ ತರಗತಿ ಕೋಣೆಗಳಿಗೆ ಟೈಲ್ಸ್‌ ಅಳವಡಿಸಲಾಗಿದೆ. ಪ್ರತಿ ಕೋಣೆಗೆ ಎರಡು ಫ್ಯಾನ್‌ಗಳನ್ನು ಹಾಗೂ ಗೋಡೆ ಗಡಿಯಾರ ಅಳವಡಿಸಲಾಗಿದೆ. ಶಾಲಾ ಆವರಣದಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಮುಖ್ಯ ಶಿಕ್ಷಕರ ಕೊಠಡಿಯಿಂದ ಎಲ್ಲಾ ತರಗತಿ ಕೋಣೆಗಳಿಗೆ ‘ಕರೆಗಂಟೆ’ ಸೌಲಭ್ಯ ಅಳವಡಿಸಲಾಗಿದೆ. ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್,ಪ್ರೊಜೆಕ್ಟರ್, ಸ್ಪೀಕರ್ ಸಹಾಯದಿಂದ ಪಾಠ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಒದಗಿಸಿರುವ ಸೌಲಭ್ಯದಲ್ಲಿ ಈ ಸರ್ಕಾರಿ ಶಾಲೆಯು ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ.

‘ಶಾಲೆಯ ಕೆಲಸ ಇದ್ದರೆ, ಎಸ್‌ಡಿಎಂಸಿ ಸದಸ್ಯರು, ಪಾಲಕರು ತಾವೇ ಖುದ್ದಾಗಿ ನಿಂತು ಕೆಲಸಗಾರರೊಂದಿಗೆ ಬೆರೆತು ಕೆಲಸ ಮಾಡಿಸುತ್ತಾರೆ. ಇದಕ್ಕೆ ಗ್ರಾಮ, ತಾಲ್ಲೂಕು ಪಂಚಾಯ್ತಿ ಸಹಕಾರವೂ ಇದೆ’ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಮಮತಾ ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT