ಗುರುವಾರ , ಸೆಪ್ಟೆಂಬರ್ 16, 2021
29 °C
ನಗರದಲ್ಲಿ ಖ್ಯಾತ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ. ಯಾಚಾ

‘ಮಕ್ಕಳ ಆಹಾರ, ಆರೈಕೆಗೆ ಗಮನಕೊಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ 30 ವರ್ಷಗಳ ವ್ಯಾಪಕ ಅನುಭವ ಹೊಂದಿರುವ ಡಾ. ಸುರೇಂದ್ರ ಕೆ ಯಾಚಾ ಗ್ಯಾಸ್ಟ್ರೋ ಎಂಟರಾಲಜಿ ಕ್ಷೇತ್ರದಲ್ಲಿ ಪ್ರಮುಖ ವೈದ್ಯರು. ಭಾರತದಲ್ಲಿ ಮಕ್ಕಳ ಗ್ಯಾಸ್ಟ್ರೋಎಂಟರಾಲಜಿ ವಿಭಾಗವನ್ನು ಪರಿಚಯಿಸಿದ ಮೊದಲಿಗರು. ಇವರು ಭಾರತೀಯ ಸೊಸೈಟಿ ಆಫ್ ಪೀಡಿಯಾಟ್ರಿಕ್ ಗ್ಯಾಸ್ಟ್ರೋ ಎಂಟರಾಲಜಿ, ಹೆಪಟೋಲಜಿ ಮತ್ತು ನ್ಯೂಟ್ರಿಷನ್ ರಾಷ್ಟ್ರೀಯ ಅಧ್ಯಕ್ಷರು ಕೂಡ.

2000 ನೇ ಇಸವಿಯಲ್ಲಿ ಪೀಡಿಯಾಟ್ರಿಷಿಯನ್ (ಪೋಸ್ಟ್ ಎಮ್‍ಡಿ) ಪೀಡಿಯಾಟ್ರಿಕ್ ಗ್ಯಾಸ್ಟ್ರೋ ಎಂಟರಾಲಜಿಗಾಗಿ ಮೊದಲ ಪೋಸ್ಟ್ ಡಾಕ್ಟರೇಟ್ ಸರ್ಟಿಫಿಕೇಟ್ ಕೋರ್ಸ್‌ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 30ಕ್ಕೂ ಅಧಿಕ ಅಂತರರಾಷ್ಟ್ರೀಯ ಸಂಶೋಧನಾ ಪ್ರಕಾಶನಗಳು ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿನ ಸೇವೆಗಾಗಿ ಈತನಕ 94 ಪ್ರತಿಷ್ಠಿತ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

ಇತ್ತೀಚೆಗಷ್ಟೇ ಸಕ್ರ ವಲ್ಡ್ ಆಸ್ಪತ್ರೆಯಲ್ಲಿ ಮಕ್ಕಳ ರೋಗಕ್ಕೆ ಸಂಬಂಧಿಸಿದ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಒಳಗೊಂಡ ಇನ್‍ಸ್ಟಿಟ್ಯೂಟ್ ಆಫ್ ಪೀಡಿಯಾಟ್ರಿಕ್ ಕೇಂದ್ರವನ್ನು ಅವರು ರೂಪಿಸಿದ್ದಾರೆ. ಆಸ್ಪತ್ರೆಯ ಭಾಗವಾಗಿ ನಗರದಲ್ಲಿ ಅವರು ಸೇವೆ ಸಲ್ಲಿಸಲಿದ್ದಾರೆ. ಡಾ. ಸುರೆಂದ್ರ ಕೆ ಯಾಚಾ ‘ಮೆಟ್ರೊ’ ಜೊತೆಗೆ ಮಾತಿಗೆ ಸಿಕ್ಕರು.

ಶಿಶುಗಳ ಜಠರಗರುಗಳಿನೊಳಗೆ ದೋಷಗಳು ಹೇಗೆ ಬರುತ್ತವೆ ಡಾಕ್ಟರ್‌?

ಪ್ರತಿವರ್ಷ ಅತಿಸಾರದಿಂದ ಮಿಲಿಯನ್‍ಗಟ್ಟಲೆ ಶಿಶುಗಳು ಸಾಯುತ್ತಿವೆ. ಕೆಟ್ಟ ಹಾಲು, ಆಹಾರ, ಕಲುಷಿತ ನೀರು, ಪಾತ್ರೆಗಳು ಇತ್ಯಾದಿಯಿಂದಾಗಿ ಈ ದೋಷ ಕಂಡುಬರುತ್ತಿದೆ. ಇದು ಮಕ್ಕಳು ಮತ್ತು ವಯಸ್ಕರಿಬ್ಬರಲ್ಲಿಯೂ ಕಂಡುಬರುವಂಥದು

ಮಳೆಗಾಲ ಹತ್ತಿರವಾಗುತ್ತಿದೆ. ಮಕ್ಕಳನ್ನು ಮಳೆಗಾಲದಲ್ಲಿ ಪೋಷಿಸುವ ಬಗೆ ಹೇಗೆ?

ಮಳೆಗಾಲದಲ್ಲಿ ಮಾತ್ರವಲ್ಲ. ಇದು ಎಲ್ಲಾ ಸಮಯದಲ್ಲೂ ಹೇಳಬೇಕಾದಂತಹ ವಿಷಯ. ಮಕ್ಕಳಿಗೆ ಪೋಷ್ಠಿಕಾಂಶ ಆಹಾರ ನೀಡಬೇಕು. ಶುಚಿಯಾಗಿರುವುದನ್ನು ಕಲಿಸಿಕೊಡಬೇಕು. ಮುಖ್ಯವಾಗಿ ಶೌಚಾಲಯದ ಬಳಕೆ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು. ಮಕ್ಕಳ ಆರೋಗ್ಯ ತುಂಬ ಮಹತ್ವದ್ದು. 

ಯಾವ ವಯಸಿನ ಮಕ್ಕಳಿಗೆ ಸೋಂಕುಗಳು ಕಾಣಿಸಿಕೊಳ್ಳಬಹುದು?

ಸಾಮಾನ್ಯವಾಗಿ ಆಗತಾನೆ ಜನಿಸಿದ ಮಗುವಿಗೆ ಆಸ್ಪತ್ರೆಗಳಲ್ಲಿ ಹಾಗೂ ಮನೆಯಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಆ ಸಮಯದಲ್ಲಿ ಮಗುವನ್ನು ಸುರಕ್ಷಿತ ಮತ್ತು ಶುಚಿಗೊಳಿಸಿದ ಸ್ಥಳದಲ್ಲಿಯೇ ಇರಿಸಬೇಕು. ವೈದ್ಯರ ಸಲಹೆಗಳನ್ನು ಪಾಲಿಸಬೇಕು. ಆಟವಾಡುವ ಮಕ್ಕಳಿಗೂ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಿವೆ. ಮಾಲಿನ್ಯಕಾರಿ ಪರಿಸರದಿಂದ ಮಕ್ಕಳನ್ನು ಆದಷ್ಟು ದೂರವಿರಿಸಬೇಕು. ಹುಟ್ಟಿದ ಶಿಶುವಿನಿಂದ ಹಿಡಿದು 5 ವರ್ಷದ ಮಕ್ಕಳವರೆಗೆ ಸುರಕ್ಷಿತವಾಗಿ ನೋಡಿಕೊಳ್ಳಬೇಕು.

ಮಕ್ಕಳ ಗ್ಯಾಸ್ಟ್ರೋ ಎಂಟರಾಲಜಿ ಸಂಬಂಧಿ ಸಮಸ್ಯೆ ತಡೆಗಟ್ಟುವ ಸಲಹೆಗಳೇನು?

ಪೌಷ್ಠಿಕ ಆಹಾರ ಕೊಡಬೇಕು. ತರಕಾರಿಗಳನ್ನು ನೀಡಬೇಕು. ರಸ್ತೆ ಬದಿಯ ಆಹಾರ ಸೇವನೆ ಮಕ್ಕಳಿಗೆ ಒಳ್ಳೆಯದಲ್ಲ. ಇದರಿಂದ ವಿಷಕಾರಿ ಆಹಾರ ಮಕ್ಕಳ ಊಟದಲ್ಲಿ ಸೇರಬಹುದು. ಊಟ ಸೇವಿಸುವ ಮೊದಲು ಕೈತೊಳೆದಿರಬೇಕು. ಮಕ್ಕಳು ಮಾತ್ರವಲ್ಲ ಪೋಷಕರೂ ಸಹ ತಮ್ಮ ಮಗುವಿನ ಆರೋಗ್ಯಕ್ಕೆ ಒತ್ತು ನೀಡಬೇಕು. ಮಕ್ಕಳಿಗೆ ಹಳದಿ ಮೂತ್ರವಾದರೆ ನಿರ್ಲಕ್ಷ್ಯ ಮಾಡುವ ಜನರಿದ್ದಾರೆ. ವಾಂತಿ, ಬೇಧಿ, ಜ್ವರ, ಹೊಟ್ಟೆಯುರಿ, ಊದಿಕೊಳ್ಳುವುದು ಯಾವುದೇ ಸಮಸ್ಯೆಯಿದ್ದರೂ ಮೊದಲಿಗೆ ವೈದ್ಯರ ಬಳಿ ಹೋಗಬೇಕು.

ಮಕ್ಕಳಿಗೆ ವ್ಯಾಕ್ಸಿನೇಶನ್‌ ಅಗತ್ಯ ಎಷ್ಟರಮಟ್ಟಿಗೆ ಇದೆ?

ಜನಿಸಿದ ಶಿಶುವಿನಿಂದ ಹಿಡಿದು 5 ವರ್ಷದ ಮಕ್ಕಳ ವರೆಗೆ ವ್ಯಾಕ್ಸಿನೇಶನ್‌ ಎಂಬುದು ತುಂಬಾ ಅಗತ್ಯ. ಕಾಲಕಾಲಕ್ಕೆ ಮಕ್ಕಳಿಗೆ ಚುಚ್ಚುಮದ್ದು ಹಾಕಿಸುವುದರಿಂದ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಮಕ್ಕಳ ಬೆಳವಣಿಗೆಯನ್ನು ಪೋಷಿಸುತ್ತದೆ. ಅದರಲ್ಲಿಯೂ ಪೋಲಿಯೋ ಲಸಿಕೆ ಮಕ್ಕಳಿಗೆ ಕಡ್ಡಾಯ. ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವುದು ಅಗತ್ಯವಿದೆ. 

ನಿಮ್ಮ ಸಾಧನೆಗೆ ಸ್ಪೂರ್ತಿ ಏನು?

ಸೇವೆ ಎನ್ನುವುದು ಮಾನವೀಯತೆ. ನಾವು ರಾಜ ಮಹಾರಾಜರಲ್ಲ. ಬರಿಯ ಸೇವಕರು. ಇದು ನಾನು ನಂಬಿರುವಂತಹ ತತ್ವ. ಸಮಾಜಕ್ಕೆ ಅನುಕೂಲವಾಗುವ ಸೇವೆ ಮಾಡಬೇಕು ಎಂಬುದು ಧ್ಯೇಯ. ನಾನು 3 ವರ್ಷಗಳ ಹಿಂದಷ್ಟೇ ಮಾರುತಿ ಕಾರು ಖರೀದಿಸಿದ್ದೆ. ನನ್ನ ಬಳಿ ಟಿವಿ ಇಲ್ಲ, ಯಾವುದೇ ಬೆಲೆಬಾಳುವ ವಸ್ತುವಿಲ್ಲ. ಇದು ನನ್ನ ಕೆಲಸದ ಬದ್ಧತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.